ಚುನಾವಣೆಯ ಸೋಲಿನ ನಂತರ ಕೋಲಾರದಲ್ಲಿ (Kolar) ಮೊದಲ ಬಾರಿಗೆ ಮಾಜಿ ಸ್ಪೀಕರ್ ರಮೇಶ್ (Ramesh Kumar) ಕುಮಾರ್ ಭಾಷಣ ಮಾಡಿದ್ದಾರೆ. ಈ ವೇಳೆ ನನ್ನ ಸೋಲು ಜನರ ತೀರ್ಮಾನ. ಅವರ ತೀರ್ಮಾನ ಪ್ರಶ್ನೆ ಮಾಡುವುದಿಲ್ಲ ಎಂದಿದ್ದಾರೆ.
ಇದೇ ವೇಳೆ ಪರೋಕ್ಷವಾಗಿ ರಮೇಶ್ ಕುಮಾರ್ ಚುನಾವಣೆ ರಾಜಕಾರಣದ ನಿವೃತ್ತಿ ಸುಳಿವು ನೀಡಿದಂತೆ ಮಾತನಾಡಿದ್ದಾರೆ. ಬುಜ ಕುಣಿಸಿಕೊಂಡು ಬಿಳಿಬಟ್ಟೆ ಹಾಕಿಕೊಂಡು ಬೆರಬೇಕಾದ್ರೆ ಮತ್ತೊಂದು ಚುನಾವಣೆ ನಿಲ್ಲುವ ಆಸೆ ಇದ್ರೆ ಆಗುತ್ತದೆ. ಜೀವನದಲ್ಲಿ ಸೋತುಬಿಟ್ಟೆ,ಚುನಾವಣೆಯಲ್ಲಿ ಸೋತಿದ್ದರೆ ನಾನು ಹೆದರುತ್ತಿರಲಿಲ್ಲ. ನಾಲ್ಕು ಸೋಲಿನಜೊತೆ ಇದು ಐದನೇದು ಎಂದುಕೊಳ್ಳುತ್ತಿದ್ದೆ, ಆದ್ರೆ ನಂಬಿಕೆ ದ್ರೋಹದಿಂದ ಬದುಕಿನಲ್ಲಿ ಸೋತೆ ಎಂದಿದ್ದಾರೆ.

ನನ್ನ ಜೊತೆಯಲ್ಲಿ ಇದ್ದವರು, ನನ್ನ ಒಟ್ಟಿಗೆ ಕೆಲಸಮಾಡಿದವರು ನನಗೆ ಮೋಸ ಮಾಡಿದ್ರು.ವೋಟ್ ಕೌಂಟಿಂಗ್ ಆದ ಕೆಲದಿನಗಳ ನಂತರ ಈ ವಿಚಾರ ಗೊತ್ತಾಯಿತು. ನನ್ನನ್ನು ಊಟಕ್ಕೆ ಕರೆದು ವಿಷ ಹಾಕಿದ್ರು.ಬುಜದ ಮೇಲೆ ಕೈ ಇಟ್ಟು ಬೆನ್ನಿಗೆ ತಿವಿಯೋರು ಇವರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ಇನ್ನು ನನಗೆ ಸಾರ್ವಜನಿಕ ವಾಗಿ ಕಾಣಿಸಿಕೊಳ್ಳುವ ಆಸೆ ಇಲ್ಲ. ಕೋಲಾರ ಜಿಲ್ಲೆಯ ಅಭಿವೃದ್ಧಿ ಕುರಿತು ನನಗೆ ಸ್ವಪ್ನ ಗಳು ಬಿದ್ದಿದ್ದವು.೨೦೨೩ರ ಮೇ ಇಪ್ಪತ್ತನಾಲ್ಕು ರಂದು ನಾನು ಮತ ಎಣಿಕೆ ಯಲ್ಲಿ ಸೋತಾಗ ಅದು ದುಸ್ವಪ್ನಗಳು ಎಂದು ತಿಳಿಯಿತು.ಹಾಗಾಗಿ ನಾನು ಹೆಚ್ಚಾಗಿ ಎಲ್ಲಿಯೂ ಕಾಣುತ್ತಿಲ್ಲ,ನನಗೀಗ ಹೆಚ್ಚಿನ ವಯಸ್ಸು ಕೂಡ ಆಗಿದೆ.ಜನರು ಕೊಟ್ಟ ತೀರ್ಪು ಪ್ರಶ್ನೆ ಮಾಡುವ ಅಧಿಕಾರ ನಮಗಿರೋದಿಲ್ಲ ಎಂದು ಹೇಳಿದ್ದಾರೆ.