ವಿಜಯನಗರ : ಪ್ರೀತಿಸಿದವಳು ಇನ್ನೊಬ್ಬನನ್ನು ಮದುವೆಯಾಗಿ ಸುಖವಾಗಿದ್ದಾಳೆಂದು ಕೋಪಗೊಂಡ ಪಾಗಲ್ ಪ್ರೇಮಿಯು ನಡುರಸ್ತೆಯಲ್ಲಿ ಗೃಹಿಣಿಗೆ ಚಾಕುವಿನಿಂದ ಇರಿದು ಅಮಾನುಷವಾಗಿ ಕೊಲೆಗೈದ ಘಟನೆಯು ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದಲ್ಲಿ ಸಂಭವಿಸಿದೆ. ಕೊಲೆಯಾದ ಮಹಿಳೆಯನ್ನು ಪ್ರತಿಭಾ ನಾಗರಾಜ್ (27) ಎಂದು ಗುರುತಿಸಲಾಗಿದೆ. ಮೂಕಪ್ಪನವರ ಹನುಮಂತ(27) ಕೊಲೆ ಮಾಡಿದ ಪಾಗಲ್ ಪ್ರೇಮಿ ಎನ್ನಲಾಗಿದೆ.
ದುಗ್ಗಾವರಿ ಗ್ರಾಮದಲ್ಲಿ ಜಾತ್ರೆ ನಡೆಯುತ್ತಿತ್ತು. ದುಗ್ಗಾವರಿ ಗ್ರಾಮವು ಕೊಲೆಯಾದ ಪ್ರತಿಭಾಳ ಚಿಕ್ಕಮ್ಮನ ಊರಾಗಿದ್ದರಿಂದ ಜಾತ್ರೆಗೆಂದು ಪ್ರತಿಭಾ ಚಿಕ್ಕಮ್ಮನ ಮನೆಗೆ ಆಗಮಿಸಿದ್ದರು. ಚಿಕ್ಕಮ್ಮನ ಊರಿನಿಂದ ಇನ್ನೇನು ತನ್ನೂರಿಗೆ ತೆರಳಬೇಕು ಅನ್ನೋವಷ್ಟರಲ್ಲಿ ಪ್ರತಿಭಾಳಿಗೆ ಚಾಕುವಿನಿಂದ ಕಂಡ ಕಂಡಲ್ಲಿ ಇರಿದು ಮೂಕಪ್ಪನವರ್ ಹನುಮಂತ ಕೊಲೆ ಮಾಡಿದ್ದಾನೆ.
ತೀವ್ರವಾಗಿ ಗಾಯಗೊಂಡಿದ್ದ ಪ್ರತಿಭಾಳನ್ನು ಹರಿಹರದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದ್ದರೂ ತೀವ್ರ ರಕ್ತಸ್ರಾವದಿಂದ ಪ್ರತಿಭಾ ಸಾವನ್ನಪ್ಪಿದ್ದಾಳೆ. ಆರೋಪಿ ಹನುಮಂತ ದುಗ್ಗಾವತಿ ಪಕ್ಕದ ಚಿರಸ್ತಹಳ್ಳಿ ಗ್ರಾಮದ ನಿವಾಸಿಯಾಗಿದ್ದು ಇದೇ ಗ್ರಾಮದ ಪ್ರತಿಭಾಳನ್ನು ನಾನು ಪ್ರೀತಿಸುತ್ತಿದ್ದೆ ಎಂದು ಎಲ್ಲೆಂದರಲ್ಲಿ ಹೇಳಿಕೊಂಡು ತಿರುಗುತ್ತಿದ್ದ ಎನ್ನಲಾಗಿದೆ. ಇಂದು ದುಗ್ಗಾವತಿ ಜಾತ್ರೆಯಲ್ಲಿ ಪ್ರತಿಭಾಳನ್ನು ನೋಡಿ ಹುಚ್ಚನಂತಾದ ಹನುಮಂತ ಈ ಕೃತ್ಯ ಎಸಗಿದ್ದಾನೆ. ಪರಾರಿಯಾಗಿದ್ದ ಆರೋಪಿ ಹನುಮಂತನನ್ನು ಹಲವಾಗಲು ಪೊಲೀಸರು ಬಂಧಿಸಿದ್ದಾರೆ.