ಮುಡಾ ಹಗರಣದಲ್ಲಿ ಇಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ನಿನ್ನೆಯಿಂದ ತೀವ್ರ ಪರಿಶೀಲನೆ ಬಳಿಕ ಮಾಜಿ ಆಯುಕ್ತ ನಟೇಶ್‌ರನ್ನ ಜಾರಿ ನಿರ್ದೇಶನಾಲಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ನಿನ್ನೆ ಮಲ್ಲೇಶ್ವರಂನ 10ನೇ ಕ್ರಾಸ್‌ನಲ್ಲಿರೋ ನಟೇಶ್ ಮನೆ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ರು. ನಾಲ್ಕು ಜನ ಇಡಿ ಅಧಿಕಾರಿಗಳಿಂದ 20 ಗಂಟೆಗಳ ಕಾಲ ಪರಿಶೀಲನೆ ಬಳಿಕ ದಾಖಲೆಗಳನ್ನ ಜಪ್ತಿ ಮಾಡಿ ನಟೇಶ್‌ರನ್ನ ವಶಕ್ಕೆ ಪಡೆದು ಕಚೇರಿಗೆ ಕರೆದೋಗಿದ್ದಾರೆ.
ಮೈಸೂರಿನಲ್ಲಿ ಇಡಿ ಕಾರ್ಯಾಚರಣೆ ನಡೆದಿದ್ದು, ಮುಡಾ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಪರಮಾಪ್ತ ಎಂ.ಎಂ.ಜಿ. ಕನ್‌ಸ್ಟ್ರಕ್ಷನ್ ಜಯರಾಮ್ ಕಚೇರಿ ಹಾಗೂ ನಿವಾಸದ ಮೇಲೆ ದಾಳಿ ಮಾಡಲಾಗಿದೆ. ಕುವೆಂಪು ನಗರದಲ್ಲಿರೋ ಕಚೇರಿ ಹಾಗೂ ನಿವಾಸದ ಮೇಲೆ ದಾಳಿ ಮಾಡಿ, 50-50 ಅನುಪಾತದ ಅಡಿ ನಿವೇಶನ ಮಂಜೂರು ಮಾಡಿಸುತ್ತಿದ್ದ ಮೀಡಿಯೇಟರ್ ಎನ್ನಲಾಗಿದೆ.
ಮೈಸೂರಿನ ರಾಕೇಶ್ ಪಾಪಣ್ಣ ನಿವಾಸದಲ್ಲೂ ಇಡಿ ದಾಳಿ ನಡೆಸಿದ್ದು, ನಿನ್ನೆ ಬೆಳಗ್ಗೆಯಿಂದಲೂ ರಾಕೇಶ್ ನಿವಾಸದಲ್ಲೇ ಪರಿಶೀಲನೆ ನಡೆಸಿರುವ ಇಡಿ ಅಧಿಕಾರಿಗಳು, ದಾಖಲೆಗಳನ್ನು ಕೊಂಡೊಯ್ದಿದ್ದಾರೆ. ಇದೀಗ ಮಾಜಿ ಆಯುಕ್ತರನ್ನು ವಶಕ್ಕೆ ಪಡೆದಿದ್ದು, ಸಿಎಂ ಸಿದ್ದರಾಮಯ್ಯ ಸೇರಿದಂತೆ ಉಳಿದ ಅಧಿಕಾರಿಗಳಿಗೆ ಟೆನ್ಷನ್ ಹೆಚ್ಚಾಗುವಂತೆ ಮಾಡಿದೆ.