ಮೇಲ್ವರ್ಗದ ಬಡ ಕುಟುಂಬಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10 ರಷ್ಟು ಮೀಸಲಾತಿಯನ್ನು ಕಲ್ಪಿಸಲು ಅವಕಾಶವಾಗುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಕಾಯ್ದೆಗೆ ತಿದ್ದಪಡಿ ತಂದಿದೆ. ಇದು ಸ್ವಾಗತಾರ್ಹ ಕ್ರಮವಾಗಿದ್ದರೂ, ಇದಕ್ಕೆ ಸಂಬಂಧಿಸಿದಂತೆ ತಿದ್ದುಪಡಿ ಮಸೂದೆ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅನುಮೋದನೆಯನ್ನು ಪಡೆಯದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ನರೇಂದ್ರ ಮೋದಿ ಸರ್ಕಾರ ಈ ಮೀಸಲಾತಿಗೆ ಸಂಬಂಧಪಟ್ಟಂತೆ ಕಾನೂನು ಮತ್ತು ಸಾಮಾಜಿಕ ನ್ಯಾಯ ಇಲಾಖೆಯ ಹೊರತಾಗಿ ಇನ್ನಿತರೆ ಯಾವುದೇ ಇಲಾಖೆಯ ಅನುಮೋದನೆ ಪಡೆದಿಲ್ಲ. ಆಂಗ್ಲ ಆನ್ ಲೈನ್ ಸುದ್ದಿವಾಹಿನಿಯಾದ `ದಿ ವೈರ್’ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದಿರುವ ಮಾಹಿತಿಯಿಂದ ಈ ಅಂಶ ಬಯಲಾಗಿದೆ.
ಈ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಆರ್ಥಿಕವಾಗಿ ಹಿಂದುಳಿದ ವರ್ಗದ ಮತಗಳ ಮೇಲೆ ಕಣ್ಣು ಇಟ್ಟಿರುವುದು ಸ್ಪಷ್ಟವಾಗಿದೆ. ಇಂತಹ ಮಹತ್ವಪೂರ್ಣವಾದ ಕಾಯ್ದೆಗೆ ತಿದ್ದುಪಡಿ ಪ್ರಕ್ರಿಯೆಯನ್ನು ಸರ್ಕಾರ ಕೇವಲ 20 ದಿನಗಳಲ್ಲಿ ಮುಗಿಸಿದೆ. ಈ ತಿದ್ದುಪಡಿ ಕಾಯ್ದೆಗೆ ಸಂಸತ್ತಿನ ಉಭಯ ಸದನಗಳು 2019 ರ ಜನವರಿಯಲ್ಲಿ ಅಂಗೀಕಾರ ನೀಡಿವೆ.
ಈ ಮೀಸಲಾತಿ ನೀಡುವ ಸಂಬಂಧ ಸಾಮಾಜಿಕ ನ್ಯಾಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸದೇ ಕೇವಲ ಇಲಾಖೆಯ ಸಚಿವರಿಂದ ಫೋನ್ ಮೂಲಕವೇ ಅನುಮೋದನೆ ಪಡೆಯಲಾಗಿದೆ. ಇಷ್ಟೇ ಅಲ್ಲ. ಸಂಪುಟ ಸಭೆಯಲ್ಲಿಯೂ ಚರ್ಚೆ ಮಾಡಿ ಅನುಮೋದನೆಯನ್ನು ಪಡೆದಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಸ್ವತಃ ಆಸ್ಥೆ ವಹಿಸಿ ಈ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದರು ಮತ್ತು ಲೋಕಸಭೆ ಸ್ಪೀಕರ್ ಆದ್ಯತೆ ಮೇಲೆ ಮಸೂದೆಯನ್ನು ಮಂಡನೆ ಮಾಡುವಂತೆ ನೋಡಿಕೊಂಡು ಅಂಗೀಕಾರವನ್ನು ಕೊಡಿಸುವಲ್ಲಿಯೂ ಯಶಸ್ವಿಯಾಗಿದ್ದರು.
ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಮೋದಿ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಅನುಕೂಲವಾಗು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು, ಬುಡಕಟ್ಟು ಪಂಗಡಗಳ (ಕಿರುಕುಳ ತಡೆ) ಕಾಯ್ದೆಗೆ ತಿದ್ದುಪಡಿ ತರುವ ವಿಚಾರದಲ್ಲಿ ಆಸಕ್ತಿಯನ್ನೇ ತೋರಿಸಲಿಲ್ಲ. ಆದರೆ, ಬಿಜೆಪಿಯ ಪ್ರಮುಖ ವೋಟ್ ಬ್ಯಾಂಕ್ ಎನಿಸಿರುವ ಮೇಲ್ವರ್ಗದ ಜಾತಿಗಳಿಗೆ ಮೀಸಲಾತಿ ತಂದುಕೊಡಲು ಅವಸರ ಮಾಡಿತ್ತು.
ಪ್ರಮುಖ ಪಾತ್ರ ವಹಿಸಿದ ಪ್ರಧಾನಿ ಕಚೇರಿ
ಮಸೂದೆಯ ಕಡತಗಳ ಪ್ರಕಾರ ಈ ಮೀಸಲಾತಿ ತರುವ ವಿಚಾರದಲ್ಲಿ ಪ್ರಧಾನಮಂತ್ರಿಯವರ ಕಚೇರಿ ಪ್ರಮುಖ ಪಾತ್ರ ವಹಿಸಿದೆ. ಪ್ರಧಾನಮಂತ್ರಿಯವರ ಕಚೇರಿಯ ಜಂಟಿ ಕಾರ್ಯದರ್ಶಿ ಬಿ.ಎಲ್.ಮೀನಾ ಮತ್ತು ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆಯ ಕಾರ್ಯದರ್ಶಿ ನೀಲಂ ಸಾಹ್ನಿ ಅವರು ಡಿಸೆಂಬರ್ 20, 2018 ರಂದು ಸಭೆ ನಡೆಸಿದ ನಂತರ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾದ ಜೆ.ಕೆ.ಬಜಾಜ್ ಅವರೊಂದಿಗೆ ಸಭೆ ನಡೆಸಿದರು. ಇದಾದ ಬಳಿಕ ಲೋಕಸಭೆ ಚುನಾವಣೆಗಳಿಗೆ ಕೆಲವೇ ವಾರಗಳು ಇರುವಾಗ ಈ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು.
ಆ ಸಂದರ್ಭದಲ್ಲಿ ಪ್ರತಿಪಕ್ಷಗಳ ಸದಸ್ಯರು ಯಾವ ಆಧಾರದಲ್ಲಿ ಮೀಸಲಾತಿ ನೀಡಲಾಗುತ್ತಿದೆಯೇ? ಇದಕ್ಕೆ ಸಂಬಂಧಿಸಿದಂತೆ ಸಮೀಕ್ಷೆಗಳನ್ನು ನಡೆಸಲಾಗಿದೆಯೇ? ಯಾವ ಆಧಾರದಲ್ಲಿ ಈ ವರ್ಗಗಳಿಗೆ ವಾರ್ಷಿಕ 8 ಲಕ್ಷ ರೂಪಾಯಿಯ ಮಿತಿಯನ್ನು ಹಾಕಲಾಗಿದೆ? ಎಂಬಿತ್ಯಾದಿ ಪ್ರಶ್ನೆಗಳನ್ನು ಸರ್ಕಾರಕ್ಕೆ ಕೇಳಿದ್ದರು. ಆದರೆ, ಇದಕ್ಕೆ ಸರ್ಕಾರದಿಂದ ಯಾವುದೇ ಉತ್ತರ ಬರಲಿಲ್ಲ. ಏಕೆಂದರೆ, ಈ ವರ್ಗದ ಮತಗಳ ಮೇಲೆ ಬಿಜೆಪಿ ಕಣ್ಣಿಟ್ಟಿತ್ತು ಮತ್ತು ಅವಸರವಸರವಾಗಿ ಮಸೂದೆಯನ್ನು ಅಂಗೀಕರಿಸಿಕೊಳ್ಳಬೇಕಿತ್ತು. ಈ ಮೂಲಕ ಸರ್ಕಾರ ಕೇವಲ 20 ದಿನಗಳಲ್ಲಿ ಮಸೂದೆಯನ್ನು ಅಂಗೀಕರಿಸಿಕೊಂಡು ಕಾಯ್ದೆಯನ್ನಾಗಿಯೂ ಜಾರಿಗೆ ತರುವಲ್ಲಿ ಯಶಸ್ವಿಯಾಗಿತ್ತು.
ತರಾತುರಿಯಲ್ಲಿ ಸಿದ್ಧಪಡಿಸಲಾದ ಮಸೂದೆಯಲ್ಲಿ ಹಲವಾರು ಲೋಪಗಳು ಇರುವುದು ಪತ್ತೆಯಾಗಿದೆ. ಅದರಲ್ಲಿ ಪ್ರಮುಖವಾಗಿ ಕಚೇರಿ ಒಪ್ಪಂದದಲ್ಲಿ ಈ ಮೀಸಲಾತಿಗೆ ಅರ್ಹತೆ ಪಡೆಯುವ ಕುಟುಂಬದ ಜಮೀನನ್ನು ಯಾರ್ಡ್ ನಲ್ಲಿ ನಮೂದಿಸಲಾಗಿದ್ದರೆ, ಮಸೂದೆಯಲ್ಲಿ ಸ್ಕ್ವೇರ್ ಯಾರ್ಡ್ ನಲ್ಲಿ ನಮೂದಿಸಲಾಗಿದೆ.
ಕಾನೂನು ಇಲಾಖೆಯೊಂದಿಗೆ ಚರ್ಚಿಸಿರುವುದನ್ನು ಹೊರತುಪಡಿಸಿ ಇತರೆ ಸಂಬಂಧಪಟ್ಟ ಯಾವುದೇ ಇಲಾಖೆಯೊಂದಿಗೆ ಈ ಕುರಿತು ಚರ್ಚೆ ಮಾಡಿಲ್ಲ ಎಂಬುದು ದಿ ವೈರ್ ಗೆ ಸಿಕ್ಕಿರುವ ಸಂಪುಟ ಸಭೆಯ ನಡಾವಳಿಯ ಪ್ರತಿ ಸ್ಪಷ್ಟಪಡಿಸುತ್ತದೆ.
2019 ರ ಜನವರಿ 6 ರಂದು ಹೊರಡಿಸಲಾಗಿದ್ದ ಸಂಪುಟ ಸಭೆ ಪ್ರತಿಯ ಪ್ರಕಾರ ತಿದ್ದುಪಡಿ ಮಸೂದೆಯ ಪ್ರತಿಗೆ ಕಾನೂನು ಮತ್ತು ನ್ಯಾಯ ಇಲಾಖೆ ಸಮ್ಮತಿ ಸೂಚಿಸಿದೆ. ಇನ್ನುಳಿದ ಇಲಾಖೆಗಳು ಸಂಪುಟ ಸಭೆಯ ಮತ್ತು ತಮ್ಮ ಅಭಿಪ್ರಾಯಗಳನ್ನು ಮುಂದಿಡಲಿವೆ ಎಂದು ತಿಳಿಸಲಾಗಿತ್ತು. ಆದರೆ, ಇದಕ್ಕೆ ಸಂಬಂಧಿಸಿದಂತೆ ಯಾವುದೇ ಇಲಾಖೆಯಿಂದ ಅಭಿಪ್ರಾಯ ವ್ಯಕ್ತಪಡಿಸಿದ ದಾಖಲೆಗಳನ್ನು ಸಂಪುಟ ಸಭೆಯ ಮುಂದಿಟ್ಟಿರಲಿಲ್ಲ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಸಂಪುಟ ಸಚಿವಾಲಯಕ್ಕೆ ಆರ್ ಟಿಐನಡಿ ಅರ್ಜಿ ಸಲ್ಲಿಸಿ ಮಾಹಿತಿಯನ್ನು ಕೋರಲಾಗಿತ್ತು. ಆದರೆ, ಈ ಅರ್ಜಿಯನ್ನು ಸಚಿವಾಲಯವು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಗೆ ವರ್ಗಾಯಿಸಿತ್ತಾದರೂ, ಅಲ್ಲಿಂದ ಕಾನೂನು ಇಲಾಖೆಯ ಅಭಿಪ್ರಾಯಗಳು ಹೊರತಾಗಿ ಬೇರೆ ಯಾವುದೇ ಇಲಾಖೆಗಳು ಅಭಿಪ್ರಾಯ ನೀಡಿರುವ ದಾಖಲೆಗಳು ಇಲ್ಲ ಎಂದು ಸ್ಪಷ್ಟಪಡಿಸಿತ್ತು.
ಇದಲ್ಲದೇ, ಮಸೂದೆ ತಿದ್ದುಪಡಿಗೆ ಸಂಬಂಧಿಸಿದಂತೆ ಮಾನವ ಸಂಪನ್ಮೂಲ ಅಭಿವೃದ್ಧಿ, ನೇಮಕಾತಿ ಮತ್ತು ತರಬೇತಿ, ಗೃಹ ಸೇರಿದಂತೆ ಇನ್ನಿತರೆ ಇಲಾಖೆಗಳಿಗೆ ಅಭಿಪ್ರಾಯಗಳನ್ನು ನೀಡಬೇಕೆಂದು ಸೂಚಿಸಲಾಗಿತ್ತಾದರೂ, ಯಾವೊಂದು ಇಲಾಖೆಯೂ ಅಭಿಪ್ರಾಯಗಳನ್ನು ನೀಡಿದ ಕುರುಹು ಇಲ್ಲ.
ಹೀಗೆ ಸರ್ಕಾರ ತರಾತುರಿಯಲ್ಲಿ ಮಸೂದೆಯನ್ನು ತಿದ್ದುಪಡಿ ಮಾಡಿ ಅಂಗೀಕಾರ ಪಡೆದುಕೊಂಡಿದೆ. ಲೋಕಸಭೆ ಮತ್ತು ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಮೇಲ್ವರ್ಗದ ಮತದಾರರ ಮೇಲೆ ಕಣ್ಣಿಟ್ಟು ತರಾತುರಿಯಲ್ಲಿ ಕಾಯ್ದೆಯನ್ನು ತಂದಿರುವುದರಲ್ಲಿ ಯಾವುದೇ ಅನುಮಾನವಿಲ್ಲ.
ಸಂಸತ್ತಿನಲ್ಲಿ ಪ್ರತಿಪಕ್ಷಗಳ ಯಾವುದೇ ಪ್ರಶ್ನೆಗಳಿಗೆ ಉತ್ತರ ಕೊಡದಿದ್ದ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಥಾವರ್ ಚಂದ್ ಗೆಹ್ಲೋಟ್ ಅವರು ಈ ಕಾನೂನಿನ ಹರಿಕಾರ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು. ಅವರೇ ಹೆಚ್ಚು ಆಸಕ್ತಿ ವಹಿಸಿದ್ದರಿಂದಲೇ ಈ ವರ್ಗದ ಜನರಿಗೆ ಅನುಕೂಲವಾಗಲಿದೆ ಎಂದು ಸಾರಿ ಹೇಳಿದ್ದರು.
ಈ ಮೂಲಕ ಕಾಯ್ದೆಯ ಹಿಂದಿನ ಶಕ್ತಿ ಮೋದಿ ಎಂಬ ಹೇಳಿಕೆ ದಾಖಲೆಯಾಗಿ ಉಳಿಯಿತು.
ಇದೊಂದು ರೀತಿಯಲ್ಲಿ ವಿಚಿತ್ರವಾದ ಮಸೂದೆ. ಸಾಮಾನ್ಯ ವರ್ಗದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಖಾಸಗಿ ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ನೀಡಲಾಗುತ್ತದೆ ಎಂದು ಮಸೂದೆಯಲ್ಲಿ ಹೇಳಿದ್ದರೆ, ಆಫೀಸ್ ಮೆಮೊರೆಂಡಂನಲ್ಲಿ ಕೇವಲ ಕೇಂದ್ರ ಸರ್ಕಾರಿ ಸ್ವಾಮ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರ ಮೀಸಲಾತಿ ನೀಡಲಾಗುತ್ತದೆ ಎಂದು ಹೇಳಲಾಗಿದೆ. ಹಾಗಾದರೆ ಯಾವುದು ಸತ್ಯ, ಯಾವುದು ಮಿಥ್ಯ ಎಂಬುದೇ ತಿಳಿಯದೇ ಜನತೆ ಗೊಂದಲದಲ್ಲಿ ಬೀಳುವಂತೆ ಮಾಡಿದೆ ಕೇಂದ್ರ ಸರ್ಕಾರ.
ಕೃಪೆ: ದಿ ವೈರ್