ರಾಜ್ಯದಲ್ಲಿ ಸಾಕಷ್ಟು ಕೋಮು ವೈಷಮ್ಯದ ನಡುವೆಯೂ ಪ್ರತಿವರ್ಷದಂತೆ ಈ ಬಾರಿಯೂ ಕರಗ ಉತ್ಸವವು ಮಸ್ತಾನ್ ದರ್ಗಾಗೆ ಭೇಟಿ ನೀಡಿತು. ಪೋಲೀಸ್ ಬಂದೋಬಸ್ತ್ನಲ್ಲಿ ಕರಗ ಮೆರವಣಿಗೆ ಮೊದಲು ಕಬ್ಬನ್ ಪೇಟೆಯಿಂದ ಆರಂಭವಾಗಿ, ರಾಜ ಮಾರ್ಕೆಟ್ ಸರ್ಕಲ್, ಕೆಆರ್ ಮಾರ್ಕೆಟ್, ಅಂಜನೇಯ ದೇವಸ್ಥಾನ, ಗಣೇಶ ದೇವಸ್ಥಾನ ಮಾರ್ಗವಾಗಿ ಮಸ್ತಾನ್ ಸಾಬ್ ದರ್ಗಾ ತಲುಪಿತು. ಈ ವೇಳೆ ದರ್ಗಾದಲ್ಲಿ ದೂಪಾರತಿ ಮಾಡಲಾಯಿತು.ಬಳಿಕ ಅಣ್ಣಮ್ಮ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಧರ್ಮರಾಯಸ್ವಾಮಿ ದೇಗುಲಕ್ಕೆ ವಾಪಸ್ ಆಗಲಿದೆ.

ಮಧ್ಯರಾತ್ರಿ ಬೆಂಗಳೂರು ಕರಗ ಶಕ್ಕೋತ್ಸವವು ಅತ್ಯಂತ ಸಡಗರ, ಸಂಭ್ರಮದೊಂದಿಗೆ ಅದ್ದೂರಿಯಾಗಿ ಜರುಗಿತು. ಲಕ್ಷಾಂತರ ಮಂದಿ ಐತಿಹಾಸಿಕ ಹೂವಿನ ಕರಗವನ್ನು ಕಣ್ಣುಂಬಿಕೊಂಡರು. ದೇವಾಲಯದಲ್ಲಿ ಪರಿವಾರ ಸಹಿತ ಧರ್ಮರಾಯಸ್ವಾಮಿಗೆ ಪೂಜೆ ಸಲ್ಲಿಸಿದ ಬಳಿಕ ಕುಂಭದಲ್ಲಿ ದುರ್ಗೆಯನ್ನು ಆಹ್ವಾನಿಸಿ, ಪೂಜಿಸಿ ಹೂವಿನಿಂದ ಅಲಂಕಾರ ಮಾಡಲಾಯಿತು.

ಈ ವೇಳೆ ಹಳದಿ ಸೀರೆಯುಟ್ಟು, ಬಳೆ ತೊಟ್ಟಿದ್ದ ಧರ್ಮರಾಯ ದೇವಸ್ಥಾನದ ಅರ್ಚಕ ಜ್ಞಾನೇಂದ್ರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಹೂವಿನ ಕರಗ ಹೊತ್ತು ದೇವಸ್ಥಾನಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ, ಸಮೀಪದ ಶಕ್ತಿ ಗಣಪತಿ ಮತ್ತು ಮುತ್ಯಾಲಮ್ಮದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.