ರಾಜ್ಯ ಬಿಜೆಪಿಯಲ್ಲಿ ಶಿಸ್ತು ಇಲ್ಲ, ಬಾಯಿಗೆ ಬಂದಂತೆ ಮಾತನಾಡಿದರೂ ಏನೂ ಕ್ರಮ ತೆಗೆದುಕೊಳ್ಳೋದಿಲ್ಲ ಎನ್ನುವ ಮಾತಿತ್ತು. ಇದೀಗ ಪಕ್ಷದ ಸೋಲಿನ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮುರುಗೇಶ್ ನಿರಾಣಿ, ಎಂಪಿ ರೇಣುಕಾಚಾರ್ಯ, ಎ ಎಸ್ ಪಾಟೀಲ್ ನಡಹಳ್ಳಿ, ಪ್ರತಾಪ್ ಸಿಂಹ, ತಮ್ಮೇಶ್ ಗೌಡ, ಮುನಿರಾಜು, ಸಿಪಿ ಯೋಗೇಶ್ವರ್, ವೀರಣ್ಣ ಚರಂತಿಮಠ, ಭಗವಂತ ಕೂಬಾ ಮಾತನಾಡಿದ್ರಿಂದ ಎಲ್ಲರಿಗೂ ನೋಟಿಸ್ ಕೊಟ್ಟು ಸ್ಪಷ್ಟನೆ ಪಡೆಯುವ ಕೆಲಸವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾಡಿದ್ದಾರೆ. ಇಂದು ರಾಜ್ಯ ಬಿಜೆಪಿ ಕಚೇರಿಗೆ ಆಗಮಿಸಿದ್ದ 7 ಮಂದಿ ತಮ್ಮ ಹೇಳಿಕೆ ಬಗ್ಗೆ ಪಕ್ಷದ ನಾಯಕರ ಎದುರು ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ. ಆದರೆ ಸ್ಪಷ್ಟನೆ ಕೊಡಲು ಬಾರದ ಮಾಜಿ ಶಾಸಕ ರೇಣುಕಾಚಾರ್ಯ, ಸುದ್ದಿಗೋಷ್ಠಿ ನಡೆಸಿದ್ದಾರೆ. ಬಿಜೆಪಿಯಲ್ಲಿ ಆಗುತ್ತಿರುವ ಅನಾಚಾರದ ಬಗ್ಗೆ ಬಹಿರಂಗವಾಗಿ ವಾಗ್ದಾಳಿ ಮಾಡಿದ್ದಾರೆ.
‘ಬಿಜೆಪಿಯಲ್ಲೂ ಶಿಸ್ತು ಸಮಿತಿ ಇದೆ’ ಈಗ ಗೊತ್ತಾಯ್ತು..
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ, ನನಗೆ ನೋಟಿಸ್ ಕೊಟ್ಟಿದ್ದಾರೆ, ನಿನ್ನೆ ನೋಟಿಸ್ ಬಂದಿದ್ದು, ಉತ್ತರ ಕೊಡಲು ಒಂದು ವಾರ ಸಮಯಾವಕಾಶ ಇದೆ. ಪಕ್ಷ ಕೊಟ್ಟ ಅನೇಕ ಹುದ್ದೆಗಳನ್ನು ನಾನು ನಿರ್ವಹಿಸಿದ್ದೇನೆ. ನಾಡಿನ ಕಾರ್ಯಕರ್ತರ ಭಾವನೆಯನ್ನ ಅನಿವಾರ್ಯವಾಗಿ ನಾನು ಮಾತಾಡಿದ್ದೇನೆ ಅಷ್ಟೇ. ನನಗೂ ಸಂಸ್ಕೃತಿ ಇದೆ. ಕಳೆದ ನಾಲ್ಕು ವರ್ಷದಿಂದ ದೆಹಲಿಗೆ ತೆರಳಿ ಪಕ್ಷದ ಸ್ಥಿತಿಗತಿ ಬಗ್ಗೆ ಮಾತಾಡಿದ್ದೇನೆ. ಇದೇ ರೀತಿ ಆದರೆ ಪಕ್ಷ ಅಧಿಕಾರಕ್ಕೆ ಬರಲ್ಲ ಅಂತ ಮೊದಲೇ ಹೇಳಿದ್ದೇನೆ. ನೋಟಿಸ್ ಕೊಟ್ಟ ಮೇಲೆ ಗೊತ್ತಾಗಿದ್ದು ಅಂದ್ರೆ ಬಿಜೆಪಿಯಲ್ಲಿ ಶಿಸ್ತು ಸಮಿತಿ ಇದೆ ಎಂದು. ರೇಣುಕಾಚಾರ್ಯ ಮಾತಾಡಿದರೆ ಮಾತ್ರ ನೋಟಿಸ್ ಕೊಟ್ಟಿದ್ದಾರೆ. ಕಳೆದ ನಾಲ್ಕು ವರ್ಷದಿಂದ ಬಹಿರಂಗವಾಗಿ ಮಾತಾಡಿದ ಅನೇಕ ನಾಯಕರಿಗೆ , ಶಾಸಕರಿಗೆ ಯಾಕೆ ನೋಟಿಸ್ ಕೊಟ್ಟಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಯಡಿಯೂರಪ್ಪಗೆ ಅಪಮಾನ ಮಾಡಿದ್ರು, ತುಳಿದುಬಿಟ್ರು..!
ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನ ಕಟ್ಟಿ ಹಾಕೋ ಪ್ರಯತ್ನ ಮಾಡ್ತಿದ್ದಾರೆ. ಸೈಕಲ್ ತುಳಿದು ಪಕ್ಷ ಕಟ್ಟಿದವರನ್ನ ತುಳೀತಿದ್ದಾರೆ. ಈ ಬಗ್ಗೆ ನಾಲ್ಕು ಗೋಡೆ ಮಧ್ಯೆ ಹೇಳಿದೆ. ಕೇಳಿಕೊಂಡ್ರು, ಕಾರ್ಯಗತ ಮಾಡಲಿಲ್ಲ. ಬದಲಾಗಿ ಬಿ. ಎಸ್ ಯಡಿಯೂರಪ್ಪಗೆ ಅಪಮಾನ , ಅವಮಾನ ಮಾಡಿದ್ರು. ಯಡಿಯೂರಪ್ಪ ಸಿಎಂ ಆಗಿದ್ದಾಗ ಒತ್ತಡ ಹಾಕಿ ರಾಜೀನಾಮೆ ಕೊಡಿಸಿದ್ರು. ವೀರಶೈವ ಮಠಾಧೀಶರು ಒತ್ತಡ ಹಾಕಿದ್ರು ಬಿಜೆಪಿ ಹೈಕಮಾಂಡ್ ಬೆಲೆ ಕೊಡಲಿಲ್ಲ. ಯಡಿಯೂರಪ್ಪ ರಾಜೀನಾಮೆ ನೀಡುವಾಗ ಕಣ್ಣೀರು ಹಾಕಿದರು. ಆ ಕಣ್ಣೀರಿನಲ್ಲಿ ಬಿಜೆಪಿ ಕೊಚ್ಚಿ ಹೋಯ್ತು ಎಂದು ನೋಟಿಸ್ ಬಳಿಕ ರೇಣುಕಾಚಾರ್ಯ ಮತ್ತೆ ಬಹಿರಂಗ ವಾಗ್ದಾಳಿ ಮುಂದುವರಿಸಿದ್ದಾರೆ. ಅಂದರೆ ಯಡಿಯೂರಪ್ಪ ಅವರನ್ನು ಒತ್ತಾಯ ಪೂರ್ವಕವಾಗಿ ಅಧಿಕಾರದಿಂದ ಇಳಿಸಿದ್ದು, ಯಡಿಯೂರಪ್ಪ ಕಣ್ಣೀರು ಹಾಕಿದ್ದು ಸತ್ಯ ಎನ್ನುವ ಮೂಲಕ ಕಾಂಗ್ರೆಸ್ ಆರೋಪವನ್ನು ಒಪ್ಪಿಕೊಂಡಿದ್ದಾರೆ.
ಬಿಜೆಪಿ ಬೆನ್ನುತಟ್ಟಲಿಲ್ಲ.. ಸಿದ್ದರಾಮಯ್ಯ, ಡಿಕೆಶಿ ಗುರ್ತಿಸಿದ್ರು..
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹೊಸಮುಖಗಳಿಗೆ ಅವಕಾಶ ಕೊಟ್ಟರಲ್ಲ ಎಷ್ಟು ಜನ ಗೆದ್ದರು..? ಎಂದು ಪ್ರಶ್ನೆ ಮಾಡಿರುವ ರೇಣುಕಾಚಾರ್ಯ, ಒಳಮೀಸಲಾತಿ, NPS ಜಾರಿಯಿಂದ ರೇಣುಕಾಚಾರ್ಯ ಸೇರಿದಂತೆ 45 ಜನ ಸೋತಿದ್ದೇವೆ. ನಾನು ಬಿಜೆಪಿ ವಿರುದ್ಧ ಮಾತಾಡಿಲ್ಲ. ಸಮಾನಮನಸ್ಕರ ಜೊತೆ ಮಾತನಾಡಿ, ಕರ್ನಾಟಕ ವಿದ್ಯಮಾನಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯುತ್ತೇನೆ. ಬಿಜೆಪಿ ಉಳಿಸಿ ಅಭಿಯಾನ ಮಾಡ್ತೀನಿ. ಸತ್ಯ ಕಹಿ ಆಗುತ್ತೇ ಅಂತ ನೋಟಿಸ್ ಕೊಡ್ತೀರಾ..? ಸರ್ಕಾರ ಪತನವಾಗಲು ಕಾರಣರಾದವರ ಮೇಲೆ ನೋಟಿಸ್ ಹಾಗೂ ಶಿಸ್ತುಕ್ರಮ ಯಾಕಿಲ್ಲ..?ರೇಣುಕಾಚಾರ್ಯ ಮಾತಾಡಿದ್ರೆ ಮಾತ್ರ ನೋಟಿಸ್ ಕೊಡ್ತಾರೆ. ಕೋವಿಡ್ ಸಮಯದಲ್ಲಿ ಕೆಲಸ ಮಾಡಿದಾಗ ನಮ್ಮವರು ನನ್ನ ಬಗ್ಗೆ ಒಳ್ಳೆ ಮಾತಾಡಲಿಲ್ಲ. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಒಳ್ಳೆ ಕೆಲಸ ಮಾಡ್ತಿದ್ದೀಯ ಅಂದ್ರು.
ರೇಣುಕಾಚಾರ್ಯ ಬಿಜೆಪಿ ಮನುಷ್ಯ, ತಳ್ಳಿದ್ರೆ ಏನು ಮಾಡೋಕೆ ಆಗಲ್ಲ..!
ಬಿಜೆಪಿ ಪಕ್ಷ ಬಿಟ್ಟು ಕಾಂಗ್ರೆಸ್ ಸೇರ್ತಾರ ಅನ್ನೋ ಅನುಮಾನಕ್ಕೆ ಈ ಹೇಳಿಕೆ ಸ್ಪಷ್ಟನೆ ನೀಡಿದೆ. ರೇಣುಕಾಚಾರ್ಯ ಹೆಗಲ ಮೇಲೆ ಯಾರು ಬಂದೂಕು ಇಟ್ಟು ಹೊಡಿತಿಲ್ಲ. ನಾನು ಪ್ರಾಕ್ಟಿಕಲ್ ರಾಜಕಾರಣಿ. ರೇಣುಕಾಚಾರ್ಯ ಯಾವತ್ತಿದ್ರೂ ಬಿಜೆಪಿ ಮನುಷ್ಯ. ಕಾಂಗ್ರೆಸ್ಸಿಗೆ ನಾನು ಹೋಗಲ್ಲ, ಅವರಾಗೇ ಹೊರಗೆ ಕಳಿಸಿದ್ರೆ ನಾನೇನು ಮಾಡೋಕ್ಕಾಗಲ್ಲ ಎಂದಿದ್ದಾರೆ. ಇನ್ನು ಸಮಾನ ಮನಸ್ಕರ ಜೊತೆ ಚರ್ಚೆ ಮಾಡಿ ಬಿಜೆಪಿ ಉಳಿಸಿ ಅಭಿಯಾನ ಮಾಡುತ್ತೇನೆ ಎಂದಿರುವ ರೇಣುಕಾಚಾರ್ಯ, ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಭೇಟಿ ಮಾಡಿದೆ, ಯಾವುದೇ ರಾಜಕಾರಣ ಮಾತಾಡಿಲ್ಲ. ಎರಡು ಬಾರಿ ಹಿಜಾಬ್ ವಿರುದ್ದ ಮಾತಾಡಿದಾಗ ನನಗೆ ದುಬೈನಿಂದ ಅನಾಮಧೇಯ ಕರೆ ಬಂತು. ಒಂದು ಸೌಜನ್ಯಕ್ಕಾದರೂ ರಾಜ್ಯಾಧ್ಯಕ್ಷರು ಕರೆ ಮಾಡಲಿಲ್ಲ. ವ್ಯವಸ್ಥೆ ಸರಿಪಡಿಸೋ ಕಾರಣಕ್ಕಾಗಿ ಮಾತಾಡ್ತೀನಿ. ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಿಸಿದ್ದು ಷಡ್ಯಂತ್ರ. ಅಪಮಾನ, ಅವಮಾನ ಮಾಡಿ ಕೆಳಗಿಳಿಸಿದ್ರು, ನಾವೆಲ್ಲರೂ ಅಧಿಕಾರದಿಂದ ಕೆಳಗಿಳಿಸಬೇಡಿ ಎಂದು ಅಭಿಪ್ರಾಯ ತಿಳಿಸಿದ್ರು ಕೆಳಗಿಳಿಸಿದ್ರು. ಬಿ.ಎಲ್ ಸಂತೋಷ್ರನ್ನ ಎರಡು ಬಾರಿ ಭೇಟಿಯಾಗಿ ಎಲ್ಲವನ್ನೂ ತಿಳಿಸಿದ್ದೆ. ಆದರೂ ನಮ್ಮ ಮಾತನ್ನು ಕೇಳಲಿಲ್ಲ ಎಂದು ಕಟುವಾಗಿ ಟೀಕಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಬಾಗಿಲು ತಟ್ಟಿದ್ದೇನೆ ಎನ್ನುವುದನ್ನು ಬಹಿರಂಗ ಮಾಡಿದ್ದಾರೆ.
ಕೃಷ್ಣಮಣಿ