ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಕೇಳಿ ಬಂದಿರುವ ಆರೋಪಗಳ ವಿರುದ್ಧ ವಿಚಾರಣೆ ನಡೆಸುತ್ತಿರುವ ಸಂಸದೀಯ ನೈತಿಕ ಸಮಿತಿಯು ಗುರುವಾರ ತನ್ನ ವಿಚಾರಣೆಯನ್ನು ಆರಂಭಿಸಿದ್ದು, ಮಹುವಾ ಮೊಯಿತ್ರಾ ಅವರ ಲಾಗಿನ್ ಮತ್ತು ಪ್ರಯಾಣದ ವಿವರಗಳನ್ನು ಕೇಳಿದೆ.
ಲೋಕಸಭೆಯಲ್ಲಿ ಅದಾನಿ ಹಾಗೂ ಸರ್ಕಾರದ ವಿರುದ್ಧ ಪ್ರಶ್ನೆಗಳನ್ನು ಕೇಳಲು ಮಹುವಾ ಮೊಯಿತ್ರಾ ಅವರು ಉದ್ಯಮಿ ದರ್ಶನ್ ಹಿರಾನಂದ ಅವರಿಂದ ಲಂಚದ ರೂಪದಲ್ಲಿ ದುಬಾರಿ ಉಡುಗೊರೆಗಳನ್ನು ಪಡೆದುಕೊಂಡಿದ್ದಾರೆ ಎಂಬ ಆರೋಪ ಮಹುವಾ ಮೊಯಿತ್ರಾ ವಿರುದ್ಧ ಕೇಳಿಬಂದಿದ್ದು, ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಲೋಕಸಭೆಯಲ್ಲಿ ನೇರವಾಗಿ ಪ್ರಶ್ನೆಗಳನ್ನು ಪೋಸ್ಟ್ ಮಾಡಲು ಉದ್ಯಮಿ ದರ್ಶನ್ ಹಿರಾನಂದನಿಗೆ ಸಂಸದೀಯ ಲಾಗಿನ್ ಅನ್ನು ನೀಡಿದ್ದಾರೆ ಎಂಬ ಆರೋಪವನ್ನು ಪರಿಶೀಲಿಸಲು ಮಹುವಾ ಮೊಯಿತ್ರಾ ಅವರ ಲಾಗಿನ್ ಮತ್ತು ಪ್ರಯಾಣದ ವಿವರಗಳಿಗಾಗಿ ಸಮಿತಿಯು ಕೇಂದ್ರ ಐಟಿ ಮತ್ತು ಗೃಹ ಸಚಿವಾಲಯಗಳಿಗೆ ಪತ್ರ ಬರೆದಿದೆ.
ದುಬೈನಲ್ಲಿ ನೆಲೆಸಿರುವ ದರ್ಶನ್ ಹಿರಾನಂದನಿ ಅವರ ಅಫಿಡವಿಟ್ ಅನ್ನು ಅನುಮೋದಿಸಲಾಗಿದೆಯೇ ಎಂದು ಪರಿಶೀಲಿಸಲು ಸಮಿತಿಯು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿದೆ.
ಅಫಿಡವಿಟ್ನಲ್ಲಿ, ಮಹುವಾ ಮೊಯಿತ್ರಾ ಅವರು ತಮ್ಮ ಲೋಕಸಭೆಯ ಇ-ಮೇಲ್ ಐಡಿಯನ್ನು ಹಂಚಿಕೊಂಡಿದ್ದಾರೆ, ಆದ್ದರಿಂದ ತಾನು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಬಹುದು ಎಂದು ಹಿರಾನಂದಾನಿ ಹೇಳಿದ್ದಾರೆ ಎನ್ನಲಾಗಿದೆ.
ಮಹುವಾ ಮೊಯಿತ್ರಾ ಅವರ ವಿಚಾರಣೆಯನ್ನು ಪೂರ್ಣಗೊಳಿಸಿ ನವೆಂಬರ್ ಆರಂಭದಲ್ಲಿ ತನ್ನ ವರದಿಯನ್ನು ಸಲ್ಲಿಸಲು ಸಮಿತಿಯು ಸಜ್ಜಾಗಿದೆ.