ಬಿಜೆಪಿಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರಂತೆ ಕೆ.ಎಸ್. ಈಶ್ವರಪ್ಪ ಅವರಿಗೂ ಬೆಳೆಯುವ ಎಲ್ಲಾ ಅವಕಾಶಗಳಿದ್ದವು. ಇಬ್ಬರೂ ಶಿವಮೊಗ್ಗ ಜಿಲ್ಲೆಯಿಂದ ರಾಜಕಾರಣ ಶುರುಮಾಡಿದವರು. ಇಬ್ಬರೂ ಆರ್ ಎಸ್ಎಸ್ ಮೂಲದವರು. ಇಬ್ಬರೂ ರಾಜ್ಯದ ನಿರ್ಣಾಯಕ ಸಮುದಾಯವೊಂದನ್ನು ಪ್ರತಿನಿಧಿಸುವವರು. ಆದರೂ ಯಡಿಯೂರಪ್ಪ ಏರಿದ ಮಟ್ಟಕ್ಕೆ ಈಶ್ವರಪ್ಪ ಏರಲಾಗಲಿಲ್ಲ. ಅಧಿಕಾರ, ಸ್ಥಾನಮಾನದ ವಿಷಯಗಳನ್ನು ಬಿಡಿ ಆಯಾ ಸಮುದಾಯದ ಪ್ರೀತಿ-ಔದಾರ್ಯಗಳನ್ನಾದರೂ ಗಳಿಸಿದರೆ ಈಶ್ವರಪ್ಪ. ಅದೂ ಇಲ್ಲ. ಈಶ್ವರಪ್ಪ ಅವರ ರಾಜಕೀಯ ಪಯಣ ಈಗ ಮುಗಿದಾಗಿದೆ. ಆದರೆ ಮುಂದಿನ ಪೀಳಿಗೆಯ ರಾಜಕಾರಣಿಗಳಿಗೆ ಈಶ್ವರಪ್ಪ ಅವರ ದುರಂತಕತೆ ಮಾದರಿಯಾದುದು.
ಒಂದೊಮ್ಮೆ ಯಡಿಯೂರಪ್ಪ ಲಿಂಗಾಯತರ ನಾಯಕರಾಗಿ ಹೊರಹೊಮ್ಮದೇ ಇದ್ದರೆ ಅವರು ಬಿಜೆಪಿಯಲ್ಲಿ ಬಾಳಲು ಸಾಧ್ಯವಿತ್ತೆ? ಅನಂತಕುಮಾರ್ ಮತ್ತು ಬಿ.ಎಲ್. ಸಂತೋಷ್ ಅವರಂತಹವರು ಯಡಿಯೂರಪ್ಪ ಅವರನ್ನು ಎಷ್ಟು ತುಚ್ಛವಾಗಿ ಕಾಣಲಿದ್ದರು ಎಂದು ಯಾರಾದರೂ ಊಹಿಸಿಕೊಳ್ಳಬಹುದು. ಮೊದಲಿಗೆ ಯಡಿಯೂರಪ್ಪ ಕೂಡ ಲಿಂಗಾಯತ ನಾಯಕರಾಗುವ ಪ್ರಯತ್ನ ಮಾಡಿರಲಿಲ್ಲ. ಎಚ್.ಡಿ. ಕುಮಾರಸ್ವಾಮಿ ಕೊಟ್ಟ ಮಾತಿನಂತೆ ಅಧಿಕಾರ ನೀಡದೇ ಇದ್ದಾಗ ಜಾತಿಯ ಮೊರೆಹೋದರು. ಅಂದು ಜಾತಿಯಂಬ ಮರದ ನೆರಳಲ್ಲಿ ಆಶ್ರಯ ಪಡೆದ ಯಡಿಯೂರಪ್ಪ ಇಂದಿಗೂ ಅಲ್ಲೇ ವಿರಮಿಸುತ್ತಿದ್ದಾರೆ.
ಬಿಜೆಪಿ ಬಿಟ್ಟುಹೋಗಿದ್ದ ಯಡಿಯೂರಪ್ಪ ಅವರನ್ನು ಮತ್ತೆ ಪಕ್ಷಕ್ಕೆ ಕರತರಲು, ಮತ್ತೆ ರಾಜ್ಯಾಧ್ಯಕ್ಷ ಹುದ್ದೆ ನೀಡಲು, ಮತ್ತೆ ಮುಖ್ಯಮಂತ್ರಿ ಪದವಿ ಕೊಡಲು, ಮತ್ತೆ ಆಪರೇಷನ್ ಕಮಲ ಮಾಡುವುದಕ್ಕೆ ಅನುಮತಿ ಕರುಣಿಸಲು, ಮತ್ತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಸೂಚಿಸುವುದಕ್ಕೆ ಹತ್ತು-ಹಲವು ಸಲ ಯೋಚಿಸಲು ನೆರವಾಗಿದ್ದು ಒಂದೇ ಅಂಶ. ಅದು ಯಡಿಯೂರಪ್ಪ ಲಿಂಗಾಯತರ ನಾಯಕ ಅಂತಾ. ಇದೇ ರೀತಿ ಕೆ.ಎಸ್. ಈಶ್ವರಪ್ಪ ಹಿಂದುಳಿದ ವರ್ಗಗಳ ನಾಯಕ ಆಗಿ ಹೊರಹೊಮ್ಮಿದ್ದರೆ, ಕಡೆಪಕ್ಷ ಕುರುಬರ ನಾಯಕ ಅನಿಸಿಕೊಂಡಿದ್ದರೂ ಬಿಜೆಪಿಯಲ್ಲಿ ಇನ್ನಷ್ಟು ಉನ್ನತ ಹುದ್ದೆ ಗಿಟ್ಟಿಸಿಕೊಳ್ಳಬಹುದಿತ್ತು.
ಉನ್ನತ ಹುದ್ದೆಗಳನ್ನು ಗಿಟ್ಟಿಸಿಕೊಳ್ಳುವುದು ಮಾತ್ರವಲ್ಲ, ಧಕ್ಕಿಸಿಕೊಳ್ಳಲೂ ಬಹುದಿತ್ತು. ಆದರೆ ಈಶ್ವರಪ್ಪ ತಮ್ಮ ರಾಜಕೀಯ ಜೀವನದುದ್ದಕ್ಕೂ ಆರ್ ಎಸ್ಎಸ್ ನಾಯಕರು ಕಾಲಿನಲ್ಲಿ ತೋರಿದ್ದನ್ನು ಶಿರಸಾವಹಿಸಿ ಮಾಡಿದರೇ ವಿನಃ ಎಂದೂ ಸ್ವಂತ ಆಲೋಚನೆ ಮಾಡಲಿಲ್ಲ. ನಿರಂತರವಾಗಿ ಆರ್ ಎಸ್ಎಸ್ ನಾಯಕರ ಮನೋಲ್ಲಾಸಕ್ಕಾಗಿ ಕಡಿ, ಕೊಚ್ಚು, ರಕ್ತ ಎಂಬ ರಾಜಾರೋಷದ ಮಾತುಗಳನ್ನಾಡಿದರೇ ವಿನಃ ಸಮುದಾಯ, ಸಂಘಟನೆ, ಸಂಬಂಧ ಎಂಬುವವನ್ನು ಪರಿಗಣಿಸಲೇ ಇಲ್ಲ. ಆರ್ ಎಸ್ಎಸ್ ಅನ್ನು ಮೆಚ್ಚಿಸಲು ಮುಸ್ಲಿಮರ ವಿರುದ್ಧ ದ್ವೇಷ ಕಾರಿದರೆ ವಿನಃ ಎಂದೂ ಯಾರೊಬ್ಬರ ಬಗೆಗೂ ಪ್ರೀತಿ ಪೊರೆದವರಲ್ಲ.
ಆರ್ ಎಸ್ಎಸ್ ಮತ್ತು ಕುರುಬ ಸಮುದಾಯ ಎನ್ನುವವು ಈಶ್ವರಪ್ಪ ಪಾಲಿಗೆ ಬಹಳ ನಿರ್ಣಾಯಕವಾಗಿದ್ದವು. ಈಶ್ವರಪ್ಪ ಕುರುಬ ಸಮುದಾಯವನ್ನು ಕಡೆಗಣಿಸಿ ಆರ್ ಎಸ್ಎಸ್ ಅನ್ನು ಅಪ್ಪಿಕೊಂಡರು. ಒಂದೊಮ್ಮೆ ಈಶ್ವರಪ್ಪ ಸಮುದಾಯದ ಜೊತೆಗೆ ನಿಂತಿದ್ದರೆ ತನ್ನಿಂದತಾನೇ ಆರ್ ಎಸ್ಎಸ್ ಈಶ್ವರಪ್ಪ ಅವರ ಬೆಂಬಲಕ್ಕೆ ಬರುತ್ತಿತ್ತು. ಏಕೆಂದರೆ ಇಂದು ರಾಜ್ಯದಲ್ಲಿ ಆರ್ ಎಸ್ಎಸ್ ಗೆ ಮೊದಲ ಶತ್ರು ಕುರುಬರ ಆರಾಧ್ಯ ದೈವ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ.
ಒಮ್ಮೆ ಯೋಚಿಸಿ ಸುಮಾರು 40 ವರ್ಷಗಳ ತಮ್ಮ ರಾಜಕೀಯ ಜೀವನದಲ್ಲಿ ಕೆ.ಎಸ್. ಈಶ್ವರಪ್ಪ ಎಂದಾದರೂ ಕುರುಬ ಸಮುದಾಯದ ಹಿತಕ್ಕಾಗಿ ಕಿಂಚಿತ್ತಾದರೂ ಕೆಲಸ ಮಾಡಿದ್ದಾರಾ? ಇಂದು ರಾಜ್ಯದಲ್ಲಿ ಕುರುಬ ಸಮುದಾಯ ಬಹಳ ನಿರ್ಣಾಯಕವಾಗಿರಲು ಕುರುಬರ ಹಾಸ್ಟೆಲ್ ಗಳ ಪಾತ್ರ ಬಹಳ ದೊಡ್ಡದು. ಅಂತಹ ಕುರುಬರ ಹಾಸ್ಟೆಲ್ ಗಳಿಗೆ ಈಶ್ವರಪ್ಪ ಏನನ್ನಾದರೂ ಮಾಡಿದ್ದಾರಾ? ಕುರುಬ ಸಮುದಾಯದ ಕನಕಪೀಠ ಕೂಡ ಇತ್ತೀಚೆಗೆ ರೂಪುಗೊಂಡದ್ದು. ಅದರ ರಚನೆ ಅಥವಾ ಬೆಳವಣಿಗೆಯಲ್ಲಿ ಈಶ್ವರಪ್ಪ ಅವರ ಪಾತ್ರ ಇದೆಯಾ?
ಈಶ್ವರಪ್ಪ ಕುರುಬ ಸಮುದಾಯವನ್ನು ಬಳಸಿಕೊಳ್ಳದೇ ಇದ್ದರೂ ಇಷ್ಟೊಂದು ಅನಾಹುತ ಆಗುತ್ತಿರಲಿಲ್ಲವೇನೋ? ಆದರವರು ದುರುಪಯೋಗ ಮಾಡಿಕೊಳ್ಳಲು ಪ್ರಯತ್ನಿಸಿದರು. ಪ್ರತ್ಯಕ್ಷವಾಗಿ ಎರಡು ಬಾರಿ ಇಂತಹ ದುಸ್ಸಾಹಸ ಮಾಡಿದ್ದಾರೆ. ಯಡಿಯೂರಪ್ಪ ವಿರುದ್ಧ ಆರ್ ಎಸ್ಎಸ್ ಹೂಡಿದ ತಂತ್ರದ ಭಾಗವಾಗಿ ಈಶ್ವರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟಲೊರಟರು. ಉದ್ದೇಶ ಈಡೇರಿದ ಮೇಲೆ ಬ್ರಿಗೇಡ್ ಅನ್ನು ಬೀದಿಪಾಲು ಮಾಡಿದರು. ಮುಕುಟಪ್ಪ ಅವರಂತಹವರು ಮೂಲೆಗುಂಪಾಗುವಂತೆ ಮಾಡಿದರು.
ತೀರಾ ಇತ್ತೀಚೆಗೆ ಕುರುಬರನ್ನು ಸಿದ್ದರಾಮಯ್ಯ ಎತ್ತಿಕಟ್ಟಲು ಮತ್ತದೆ ಆರ್ ಎಸ್ಎಸ್ ರೂಪಿಸಿದ ಕುತಂತ್ರದ ಭಾಗವಾಗಿ ‘ಕುರುಬರನ್ನು ಎಸ್ ಟಿ ಸಮುದಾಯಕ್ಕೆ ಸೇರಿಸುವ’ ಹೋರಾಟಕ್ಕಿಳಿದರು. ಸಮುದಾಯದ ಮಠಾಧಿಪತಿಗಳನ್ನು ದೂರದ ದೆಹಲಿಗೆ ಕೊಂಡೊಯ್ದರಲ್ಲದೆ ಆರ್ ಎಸ್ ಎಸ್ ನಾಯಕ ಸಂತೋಷ್ ಮನೆ ಬಾಗಿಲು ಕಾಯುವಂತೆ ಮಾಡಿದರು. ಹೋರಾಟದ ಭಾಗವಾಗಿ ಆಯೋಜಿಸಿದ್ದ ಸಮಾವೇಶ ಒಂದರ್ಥದಲ್ಲಿ ಸಿದ್ದರಾಮಯ್ಯ ವಿರುದ್ಧ ರೂಪಿಸಿದ್ದ ಸಮಾವೇಶದಂತಿತ್ತು. ಸಮಾವೇಶದಲ್ಲಿ ಪಾಲ್ಗೊಳ್ಳಲೇಬೇಕು ಎನ್ನುವ ರೀತಿಯಲ್ಲಿ ಸಮುದಾಯದಿಂದ ಒತ್ತಡ ಏರಿಸಿ ಆರ್ ಎಸ್ಎಸ್ ತೋಡಿದ ಹಳ್ಳಕ್ಕೆ ಸಿದ್ದರಾಮಯ್ಯ ಅವರನ್ನು ಕೆಡವುವ ಪ್ರಯತ್ನ ಮಾಡಿದರು. ಆದರೆ ಆರ್ ಎಸ್ಎಸ್ ಮೋಸವನ್ನು ಚೆನ್ನಾಗಿ ಅರಿತಿರುವ ಸಿದ್ದರಾಮಯ್ಯ ಸಮಾವೇಶಕ್ಕೆ ಬಾರದೇ ಸರಿಯಾದ ರೀತಿಯಲ್ಲಿ ತಿರುಗೇಟು ನೀಡಿದರು. ಸಮಾವೇಶಕ್ಕೆ ರಾಜ್ಯದ ಉದ್ದಗಲದಿಂದ ಬಂದಿದ್ದ ಲಕ್ಷಾಂತರ ಕುರುಬ ಜನ ಸಿದ್ದರಾಮಯ್ಯ ಹೆಸರೇಳುತ್ತಿದ್ದಂತೆ ಹರ್ಷೋದ್ಗಾರ ಮಾಡಿ ಈಶ್ವರಪ್ಪ ಮತ್ತು ಆರ್ ಎಸ್ಎಸ್ ನಾಯಕರ ಮುಖಕ್ಕೆ ಮಂಗಳಾರತಿ ಎತ್ತಿದರು. ಅಲ್ಲಿಗೆ ಕುರುಬ ಸಮುದಾಯವನ್ನು ಒಡೆಯುವ ಆರ್ ಎಸ್ಎಸ್ ಯೋಚನೆ ಹಳ್ಳಹಿಡಿಯಿತು. ಈಶ್ವರಪ್ಪ ಮುಂದೆಂದೂ ಮೇಲೇಳದಂತಾದರು.
ಈಶ್ವರಪ್ಪ ಇದಕ್ಕೂ ಮೀರಿದ ಮತ್ತೊಂದು ತಪ್ಪನ್ನು ಮಾಡಿದ್ದಾರೆ. ಸಮುದಾಯದಲ್ಲಿ ತಾನು ಬೆಳೆದು ದೊಡ್ಡವನಾಗುವ ಬದಲು ಅದಾಗಲೇ ಹೆಮ್ಮರವಾಗಿ ಬೆಳದಿದ್ದ ಸಿದ್ದರಾಮಯ್ಯ ಅವರನ್ನು ತುಚ್ಛವಾಗಿ ಕಂಡಿದ್ದಾರೆ. ‘ಸಿದ್ದರಾಮಯ್ಯ ಅವರನ್ನು ಚಿಕ್ಕವರನ್ನಾಗಿ ಮಾಡಿ ತಾವು ದೊಡ್ಡವರಾಗಿ ನೋಡಲು’ ಪ್ರಯತ್ನಿಸಿದ್ದಾರೆ. ಅದಕ್ಕಾಗಿ ತೀರಾ ಅಸಹ್ಯವಾಗಿ, ಅಸಭ್ಯವಾಗಿ, ಅಪ್ರಬುದ್ದರಾಗಿ, ಅಮಾನವೀಯವಾಗಿ ವರ್ತಿಸಿದ್ದಾರೆ. ಸಂಬಂಧವೇ ಇಲ್ಲದ ವಿಚಾರಗಳಲ್ಲೂ ಸಿದ್ದರಾಮಯ್ಯರ ಹೆಸರನ್ನು ತಳುಕು ಹಾಕಿದ್ದಾರೆ. ಯಾವುದೋ ರೇಪ್ ವಿಚಾರ ಮಾತನಾಡುತ್ತಾ ‘ರೇಪ್ ಗೆ ಒಳಗಾದವಳು ಸಿದ್ದರಾಮಯ್ಯ ಮಗಳಾಗಿದ್ದರೆ…’ ಎಂದು ನಾಲಿಗೆ ಹರಿಯ ಬಿಟ್ಟಿದ್ದಾರೆ. ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಸಾವಿನ ಬಗ್ಗೆಯೂ ಅಸಹನೀಯ ಮಾತುಗಳನ್ನಾಡಿದ್ದಾರೆ.
ಇನ್ನೊಂದೆಡೆ ಸಿದ್ದರಾಮಯ್ಯ ಅವರು ‘ಈಶ್ವರಪ್ಪ ದಡ್ಡ ಅವರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಹೇಳುತ್ತಾ ಸದಾ ವಿವಾದಗಳನ್ನು ಮೊಟಕುಗೊಳಿಸಲು ಪ್ರಯತ್ನಿಸಿದ್ದಾರೆ. ಸಿದ್ದರಾಮಯ್ಯ ಎಂದೂ ಈಶ್ವರಪ್ಪ ವಿರುದ್ಧ ದ್ವೇಷ ಸಾಧಿಸಿದ ಪ್ರಸಂಗಗಳಿಲ್ಲ. ಹೀಗೆ ಈಶ್ವರಪ್ಪ ಅನಗತ್ಯವಾಗಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡಾಗಲೆಲ್ಲಾ ಕುರುಬ ಸಮುದಾಯ ಅವರಿಂದ ದೂರವಾಗಿದೆ. ಈಗಲೂ ಅಷ್ಟೇ ಈಶ್ವರಪ್ಪ ರಾಜೀನಾಮೆ ನೀಡಿದ ಬಗ್ಗೆ ಅವರ ಸಮುದಾಯದ ಯಾವೊಬ್ಬ ಸ್ವಾಮೀಜಿಯೂ ಮಾತನಾಡಿಲ್ಲ. ಯಡಿಯೂರಪ್ಪ ರಾಜೀನಾಮೆ ನೀಡುವಾಗ ಲಿಂಗಾಯತ ಸ್ವಾಮೀಜಿಗಳು ಹೇಗೆ ವರ್ತಿಸಿದರೆಂದು ನೆನಪಿಸಿಕೊಳ್ಳಿ. ಕುರುಬ ಸಮುದಾಯವನ್ನು ನಿರ್ಲಕ್ಷ್ಯ ಮಾಡಿದ ಕಾರಣಕ್ಕಾಗಿ ಅಂದಿಗೂ-ಇಂದಿಗೂ ಈಶ್ವರಪ್ಪ ಒಂಟಿಯೇ. ಮುಖ್ಯಮಂತ್ರಿ ಹುದ್ದೆಗೇರಬೇಕಾಗಿದ್ದ ಈಶ್ವರಪ್ಪ ಅರ್ಧ ದಾರಿಯಲ್ಲೇ ಆಟ ಮುಗಿಸಬೇಕಾದಾಗ ಯಾವ ಆರ್ ಎಸ್ಎಸ್ ನಾಯಕನೂ ಬೆಂಬಲ ನೀಡಲಿಲ್ಲ.