ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಕರೆದಿದ್ದ ಪ್ರಗತಿಪರಿಶೀಲನಾ ಸಭೆಯಲ್ಲಿ ಯಡಿಯೂರಪ್ಪ ಆಪ್ತ ವಿಧಾನಪರಿಷತ್ ಸದಸ್ಯರು ಸಭೆಗೆ ತಮಗೆ ಆಹ್ವಾನ ನೀಡದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಸೋಮವಾರ ಶಿವಮೊಗ್ಗದಲ್ಲಿ ನಡೆದಿದೆ.ಶಿವಮೊಗ್ಗ ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ನೆರೆ ಪರಿಹಾರ ಕಾರ್ಯ ಪ್ರಗತಿ ಸಭೆಯಲ್ಲಿ ಈ ಘಟನೆ ನಡೆದಿದೆ.
ಸಚಿವ ಕೆ.ಎಸ್ ಈಶ್ವರಪ್ಪ ಸಮ್ಮುಖದಲ್ಲೇ ಬಿಜೆಪಿ ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್ ಮತ್ತು ಎಸ್ ರುದ್ರೇಗೌಡ ಅವರು ಸಭೆಗೆ ತಮಗೆ ಅಧಿಕೃತ ಆಹ್ವಾನ ನೀಡದ ಜಿಲ್ಲಾಧಿಕಾರಿಯ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.”ಪ್ರೋಟೋಕಾಲ್ ಪ್ರಕಾರ ತಮಗೆ ಸಭೆಗೆ ಅಧಿಕೃತ ಆಹ್ವಾನ ನೀಡಬೇಕು. ಆದರೆ ಹಾಗಾಗುತ್ತಿಲ್ಲ. ಇದು ಕಳೆದ ಎರಡು ವರ್ಷಗಳಿಂದ ಆಗುತ್ತಿರುವ ಬೆಳವಣಿಗೆ. ಈ ಬಗ್ಗೆ ಈಗಾಗಲೇ ಹಲವು ಬಾರಿ ಗಮನ ಸೆಳೆದರೂ ಮತ್ತೆ ಮತ್ತೆ ಪರಿಷತ್ ಸದಸ್ಯರನ್ನು ಅವಮಾನಿಸಲಾಗುತ್ತಿದೆ. ನೀವೇನು ಆಡಳಿತ ನಡೆಸುತ್ತಿದ್ದೀರೋ ಇಲ್ಲ, ಮಷ್ಕಿರಿ ಮಾಡ್ತಿದ್ದೀರೊ” ಎಂದು ಜಿಲ್ಲಾಧಿಕಾರಿಯನ್ನು ಆಯನೂರು ತರಾಟೆಗೆ ತೆಗೆದುಕೊಂಡರು. ಹಾಗೇ ಪ್ರತಿಭಟನೆ ವ್ಯಕ್ತಪಡಿಸುತ್ತಾ ಸಭೆಯಿಂದ ಹೊರನಡೆದರು.
ಅವರೊಂದಿಗೆ ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ ಹಾಗೂ ಕಾಂಗ್ರೆಸ್ ಸದಸ್ಯ ಆರ್.ಪ್ರಸನ್ನಕುಮಾರ್ ಕೂಡ ಸಭೆಯಿಂದ ಹೊರ ನಡೆದರು.“ನಾವೂ ಶಾಸಕರಲ್ಲವೇನು? ಅಲ್ಲ ಅಂದರೆ, ಯಾರು ನಾವು? ಮಷ್ಕಿರಿ ಮಾಡ್ತೀರಾ? ಜನರನ್ನು ಕರೆದುಕೊಂಡು ನಿಮ್ಮ ಕಚೇರಿಗೆ ಬಂದು ಗಲಾಟೆ ಮಾಡಿದರೆ ಗೊತ್ತಾಗುತ್ತದೆ ನಾವೇನು ಅಂತ. ನಾವು ಶಾಸಕರಲ್ಲವೋ, ಹೌದೋ ಎಂದು ಈ ಸಭೆಗೆ ಹೇಳಿ ಜಿಲ್ಲಾಧಿಕಾರಿಗಳೇ.. ನಾವು ಮೂರು ಜನರು ಶಾಸಕರಲ್ಲವೋ ? ಪ್ರೋಟೋಕಾಲ್ ಪಾಲನೆ ಮಾಡಬೇಕಾಗಿದ್ದು ಯಾರು? ಯಾಕೆ ನೀವು ಪ್ರೋಟೋ ಕಾಲ್ ಪಾಲನೆ ಮಾಡಲ್ಲ? ಏನು ಕಾರಣ? ಹೇಳಿ” ಎಂದು ಆಯನೂರು ಮಂಜುನಾಥ್ ಜಿಲ್ಲಾಧಿಕಾರಿ ವಿರುದ್ಧ ಕಿಡಿಕಾರಿದರು.
ಬಳಿಕ ಸಚಿವ ಈಶ್ವರಪ್ಪ ಆಯನೂರು ಸೇರಿದಂತೆ ಮೂವರು ವಿಧಾನಪರಿಷತ್ ಸದಸ್ಯರನ್ನು ಸಮಾಧಾನ ಪಡಿಸಿ, ಇನ್ನು ಮುಂದೆ ಹೀಗಾಗದಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗುವುದು ಎಂದು ಭರವಸೆ ನೀಡಿದರು.
ವಾಸ್ತವವಾಗಿ ಸಭೆಗೆ ಆಹ್ವಾನ ನೀಡಿಲ್ಲ ಎಂಬುದು ತತಕ್ಷಣದ ಕಾರಣವಾದರೂ ಯಡಿಯೂರಪ್ಪ ಆಪ್ತರಾದ ಆಯನೂರು ಮಂಜುನಾಥ್ ಅವರು ಸಚಿವ ಈಶ್ವರಪ್ಪ ಎದುರೇ ಹೀಗೆ ಆಕ್ರೋಶ ವ್ಯಕ್ತಪಡಿಸಿದ್ದರ ಹಿಂದೆ ವಿಧಾನಸಭೆ, ವಿಧಾನಪರಿಷತ್, ರಾಜ್ಯ ಸಭೆ, ಲೋಕಸಭೆ ಸೇರಿ ನಾಲ್ಕು ಸದನಗಳಲ್ಲೂ ಸದಸ್ಯರಾಗಿ ಅನುಭವಿಯಾಗಿರುವ ಮತ್ತು ಮೂರು ದಶಕಕ್ಕೂ ಹೆಚ್ಚು ಕಾಲದಿಂದ ಬಿಜೆಪಿಯ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದರೂ ತಮಗೆ ಪ್ರತಿ ಬಾರಿ ಸಂಪುಟದ ಅವಕಾಶ ಬಂದಾಗೆಲ್ಲಾ ಅಡ್ಡಗಾಲಾಗುತ್ತಿರುವ ಈಶ್ವರಪ್ಪ ವಿರುದ್ಧದ ಆಕ್ರೋಶ ಹೀಗೆ ಸ್ಫೋಟಗೊಂಡಿದೆ ಎಂದೇ ಈ ಘಟನೆಯನ್ನು ವ್ಯಾಖ್ಯಾನಿಸಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಯಡಿಯೂರಪ್ಪ ತವರು ಜಿಲ್ಲೆಯಲ್ಲಿ ಕಿಡಿ ಹೊತ್ತಿರುವ ಈ ಅಸಮಾಧಾನ ಮುಂದಿನ ದಿನಗಳಲ್ಲಿ ಪಡೆಯುವ ಸ್ವರೂಪ ಕುತೂಹಲ ಕೆರಳಿಸಿದೆ.