ಬಹುಸಂಖ್ಯೆಯ ಜನರನ್ನು ಬಾಧಿಸುವ ಸಾಮಾಜಿಕ ಆಶಯಗಳು ಪ್ರಭುತ್ವದ ಅಥವಾ ಆಡಳಿತಾರೂಡ ಸರ್ಕಾರದ ಅಥವಾ ಸ್ಥಾಪಿತ ವ್ಯವಸ್ಥೆಯ ಆಶಯಗಳಿಗೆ ಮುಖಾಮುಖಿಯಾದ ಸಂದರ್ಭದಲ್ಲೆಲ್ಲಾ ತಾತ್ವಿಕ ಸಂಘರ್ಷಗಳು ತಮ್ಮ ಮೂಲ ನೆಲೆಯನ್ನು ವಿಸ್ತರಿಸಿಕೊಳ್ಳುತ್ತವೆ. ಸಮಾಜದ ಮೇಲೆ ಹೇರಲ್ಪಡುವ ಸಾಂಸ್ಕೃತಿಕ ಚಿಂತನೆಗಳು ಮತ್ತು ಸಮಾಜದ ಆಂತರ್ಯದಿಂದ ಹೊರಹೊಮ್ಮುವ ಆಲೋಚನೆಗಳು ಪರಸ್ಪರ ಮುಖಾಮುಖಿಯಾದಾಗ ಪ್ರತಿರೋಧದ ದನಿಗಳಿಗೆ ಒಂದು ಹೊಸ ಆಯಾಮವೂ ದೊರೆಯುತ್ತದೆ. ಈ ಪ್ರತಿರೋಧದ ದನಿಗಳೇ ಭವಿಷ್ಯದ ಹಾದಿಗಳ ದೃಷ್ಟಿಯಿಂದ ನಿರ್ಣಾಯಕವಾಗುತ್ತದೆ. ಸಮಾಜಮುಖಿ ಆಲೋಚನೆಗಳನ್ನೊಳಗೊಂಡ ಈ ದನಿಗಳನ್ನು ಅಡಗಿಸಲು ಯತ್ನಿಸುವ ಸಮಾಜಘಾತುಕ ಚಿಂತನೆಗಳು ಸ್ಥಾಪಿತ ವ್ಯವಸ್ಥೆಯ ನೆರವಿನೊಂದಿಗೇ ಈ ಪ್ರತಿರೋಧವನ್ನು ಅಡಗಿಸುವ ಸಾಧನಗಳಾಗಿಬಿಡುತ್ತವೆ.
ಕರ್ನಾಟಕದ ಕುಂದಾಪುರ ಮತ್ತು ಉಡುಪಿಯ ಕಾಲೇಜುಗಳಲ್ಲಿ ಆರಂಭವಾದ ಹಿಜಾಬ್ ವಿವಾದ ಶಾಲೆಯ ಅಂಗಳವನ್ನು ದಾಟಿ ಸೈದ್ಧಾಂತಿಕ ರಾಜಕಾರಣದ ಅಂಗಳಕ್ಕೆ ಪ್ರವೇಶಿಸಿರುವ ಸಂದರ್ಭದಲ್ಲಿ ಈ ಸಂಘರ್ಷ ತಾರಕಕ್ಕೇರಿದೆ. ಬದಲಾಗುತ್ತಿರುವ ಭಾರತ ಮುಂದಿನ 25 ವರ್ಷಗಳ ಅವಧಿಯನ್ನು “ಅಮೃತ ಕಾಲ” ಎಂದು ಭಾವಿಸಿ ಮುನ್ನಡೆದಿದ್ದು, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶದ ಭವಿಷ್ಯದ ಪೀಳಿಗೆಗೆ ಒಂದು ಹೊಸ ಜಗತ್ತನ್ನು ನಿರ್ಮಿಸುವ ಆಶಯಗಳನ್ನು ಹೊಂದಿದೆ ಈ ಹೊಸ ಜಗತ್ತಿನಲ್ಲಿ ಸಮಾಜವನ್ನು ಮುನ್ನಡೆಸಬೇಕಾದ ಶಕ್ತಿ, ಸಾಮರ್ಥ್ಯ ಮತ್ತು ಇಚ್ಚಾಶಕ್ತಿಯನ್ನು ಕಂಡುಕೊಳ್ಳಬೇಕಿರುವುದು ಶಿಕ್ಷಣ ಕ್ಷೇತ್ರದ ಮೂಲಕ. ಒಂದು ಸ್ವಸ್ಥ ಸೌಹಾರ್ದಯುತ ಸಮಾಜಕ್ಕೆ ಸುಭದ್ರ ಅಡಿಪಾಯವನ್ನು ಒದಗಿಸುವ ಶೈಕ್ಷಣಿಕ ಪರಿಸರದಲ್ಲಿ ಉಂಟಾಗುವ ಯಾವುದೇ ವ್ಯತ್ಯಯಗಳು ಭವಿಷ್ಯದ ಹಾದಿಗಳಲ್ಲಿ ಉಂಟಾಗಬಹುದಾದ ಏರುಪೇರುಗಳಿಗೆ ಮೂಲ ಕಾರಣವಾಗಿಬಿಡುತ್ತವೆ.
ಶಾಲಾ ಕಾಲೇಜು ವ್ಯಾಸಂಗ ಮಾಡುವ ಮುಸ್ಲಿಂ ಹೆಣ್ಣು ಮಕ್ಕಳು ಧರಿಸುವ ಹಿಜಾಬ್ ಇಂದು ಎರಡು ನೆಲೆಗಳಲ್ಲಿ ಚರ್ಚೆಗೊಳಗಾಗಿದೆ. ಇದು ಅಲ್ಪಸಂಖ್ಯಾತ ಸಮುದಾಯವೊಂದರ ವಸ್ತ್ರ ಸ್ವಾತಂತ್ರ್ಯದ ಸಾಂವಿಧಾನಿಕ ಹಕ್ಕು ಎನ್ನುವುದು ಒಂದು ಅಂಶವಾದರೆ, ಈ ಧಾರ್ಮಿಕ ಸಂಕೇತಗಳು ಅಥವಾ ಚಿಹ್ನೆಗಳು ಶೈಕ್ಷಣಿಕ ವಲಯದಲ್ಲಿ ಪ್ರತ್ಯೇಕತೆಯನ್ನು ಮೂಡಿಸುತ್ತವೆಯೇ ಎನ್ನುವುದು ಮತ್ತೊಂದು ಪ್ರಶ್ನೆ. ಶಾಲಾ ಕಾಲೇಜುಗಳಿಗೆ ಬರುವ ಮಕ್ಕಳು ತಮ್ಮ ಎಲ್ಲ ಮತೀಯ, ಧಾರ್ಮಿಕ, ಜಾತೀಯ ಸಂಕೇತಗಳಿಂದ ಹೊರತಾಗಿ ಒಂದು ಸಮಾನ ಮನಸ್ಥಿತಿಯೊಂದಿಗೆ ಸೌಹಾರ್ದಯುತ ಸಮಾಜವನ್ನು ಪ್ರತಿನಿಧಿಸಬೇಕು ಎನ್ನುವುದು ಭಾರತದ ಸಂವಿಧಾನದಲ್ಲೇ ಅಡಕವಾಗಿರುವ ಆಶಯ. ಸಾಮಾಜಿಕ ನ್ಯಾಯ, ಭ್ರಾತೃತ್ವ ಮತ್ತು ಸಮಾನತೆಯ ಆಶಯಗಳನ್ನು ಸಾಕಾರಗೊಳಿಸಲು ದೇಶದ ಮಕ್ಕಳನ್ನು ತಯಾರು ಮಾಡುವ ಒಂದು ಬೌದ್ಧಿಕ ಪ್ರಯೋಗಾಲಯವಾಗಿ ಶಾಲೆಗಳು ಕಾರ್ಯ ನಿರ್ವಹಿಸಬೇಕು ಎನ್ನುವುದು ನಿರ್ವಿವಾದ ಅಂಶ.
ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರವನ್ನು ಕಡ್ಡಾಯಗೊಳಿಸಿರುವ ರಾಜ್ಯ ಸರ್ಕಾರ ತನ್ನ ಆದೇಶದಲ್ಲಿ ಶಾಲಾ ಕಾಲೇಜುಗಳಲ್ಲಿ ಯಾವುದೇ ಧಾರ್ಮಿಕ ಆಚರಣೆಗಳಿಗೆ ಅವಕಾಶ ಇರಕೂಡದು ಎಂದು ಹೇಳಲಾಗಿದೆ. ಸಮವಸ್ತ್ರ ಎಂದರೆ ಒಂದೇ ವಿನ್ಯಾಸದ, ಒಂದೇ ಬಣ್ಣದ, ಒಂದೇ ಗುಣಮಟ್ಟದ ಉಡುಪು ಎಂದೇ ಅರ್ಥೈಸಲಾಗುತ್ತದೆ. ವಿದ್ಯಾರ್ಥಿಗಳ ನಡುವೆ ಜಾತಿ, ಮತ, ಅಂತಸ್ತು ಮತ್ತು ಸಾಮಾಜಿಕ ಸ್ಥಾನಮಾನಗಳ ಕಂದರವನ್ನು ಇಲ್ಲವಾಗಿಸುವ ಒಂದು ಭೌತಿಕ ಸಾಧನವಾಗಿ ಸಮವಸ್ತ್ರದ ಪರಿಕಲ್ಪನೆಯನ್ನು ಗೌರವಿಸಲಾಗುತ್ತದೆ. ಇದೇ ವೇಳೆ ಭಾರತದ ಸಂವಿಧಾನದಲ್ಲಿ ಪ್ರತಿಯೊಬ್ಬ ಪ್ರಜೆಗೂ ತನ್ನ ಅಂತಸ್ಸಾಕ್ಷಿಗನುಗುಣವಾಗಿ ಯಾವುದೇ ಧಾರ್ಮಿಕ ನಂಬಿಕೆಗಳನ್ನು, ಆಚರಣೆಗಳನ್ನು ಅನುಸರಿಸುವ ಹಕ್ಕನ್ನು ಮಾನ್ಯ ಮಾಡಲಾಗಿದೆ. ಅಂದರೆ ಅಲ್ಪ ಸಂಖ್ಯಾತ ಸಮುದಾಯದ ಧಾರ್ಮಿಕ ಸಂಕೇತಗಳಾದ ಉಡುಪಿನ ಒಂದು ಭಾಗವೂ ಸಮವಸ್ತ್ರದ ಒಂದು ಭಾಗವಾಗಿಯೇ ಪರಿಗಣಿಸಲ್ಪಡುತ್ತದೆಯೇ ? ಈ ಜಿಜ್ಞಾಸೆ ಬಹುಶಃ ಮತ್ತೊಂದು ಚರ್ಚೆಗೆ ಎಡೆಮಾಡಿಕೊಡಬಹುದು.

ಆದರೆ ಇಲ್ಲಿ ಸಮಸ್ಯೆ ಇರುವುದು ಸಮವಸ್ತ್ರದಲ್ಲಿ ಅಲ್ಲ, ಸಮಾನತೆಯ ಆಶಯ ಮತ್ತು ಅದನ್ನು ಸಾಕಾರಗೊಳಿಸುವ ಮಾರ್ಗಗಳಲ್ಲಿ. “ಜಾಬ್‍ಗಾಗಿ ಶಾಲೆಗೆ ಬನ್ನಿ ಹಿಜಾಬ್‍ಗಾಗಿ ಬರಬೇಡಿ” ಎಂದು ಕರ್ನಾಟಕದ ಮಂತ್ರಿವರ್ಯರು ಆಜ್ಞಾಪಿಸಿದ್ದಾರೆ. ನಿಜ, ಹಿಜಾಬ್ ಧರಿಸಿ ಬರುವ ಮುಸ್ಲಿಂ ಹೆಣ್ಣುಮಕ್ಕಳು ತಮ್ಮ ಬದುಕು ರೂಪಿಸಿಕೊಳ್ಳಲೆಂದೇ ಶಾಲೆಗೆ ಬರುತ್ತಾರೆ. ಹಿಂದೂ ಹೆಣ್ಣುಮಕ್ಕಳೂ ತಮ್ಮ ಸಂಸ್ಕೃತಿ ಮತ್ತು ಧಾರ್ಮಿಕ ಆಲೋಚನೆಗನುಗುಣವಾಗಿ ಉಡುಪು ಧರಿಸಿ ಬರುತ್ತಾರೆ. ಈ ಎಲ್ಲ ಹೆಣ್ಣು ಮಕ್ಕಳ ಆಶಯ ಸಾಮಾಜಿಕ ಮೇಲ್ಮುಖ ಚಲನೆ, ಆರ್ಥಿಕ ಸದೃಢತೆ ಮತ್ತು ಸುಭದ್ರ ಭವಿಷ್ಯ ಇವಿಷ್ಟೇ ಆಗಿರುತ್ತದೆ. ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಮತ್ತು ವೈದಿಕಶಾಹಿಯ ಸಾಂಸ್ಕೃತಿಕ ಆಧಿಪತ್ಯದಲ್ಲಿ ಶತಮಾನಗಳ ಕಾಲ ಶಿಕ್ಷಣದಿಂದಲೇ ವಂಚಿತರಾಗಿದ್ದ ಹೆಣ್ಣು ಮಕ್ಕಳಿಗೆ ಶಿಕ್ಷಣದ ಹೆಬ್ಬಾಗಿಲು ತೆರೆಯಲು 19ನೆಯ ಶತಮಾನದ ಫುಲೆ ದಂಪತಿಗಳು ಬರಬೇಕಾಯಿತು.
ಈ ದಾರ್ಶನಿಕರ ಆಲೋಚನೆಗಳೇ ಭಾರತದ ಸಂವಿಧಾನದಲ್ಲಿ ಸಮಾನತೆಯ ಆಶಯಗಳ ಮೂಲಸೆಲೆ ಆಗಿರುವುದನ್ನೂ ಅಲ್ಲಗಳೆಯಲಾಗುವುದಿಲ್ಲ. ಶಾಲಾ ಮಕ್ಕಳಲ್ಲಿ ಸಮಾನತೆಯ ಭಾವನೆಯನ್ನು ಉದ್ದೀಪನಗೊಳಿಸಲು ಬೇಕಿರುವುದು ಒಂದು ಸೌಹಾರ್ದಯುತ ವಾತಾವರಣ, ಬೌದ್ಧಿಕ ಚಿಂತನೆಯ ಪರಿಸರ ಮತ್ತು ಭ್ರಾತೃತ್ವದ ಧೋರಣೆ. ಸಮವಸ್ತ್ರ ಭೌತಿಕವಾಗಿ ತರತಮಗಳನ್ನು ದೂರವಿರಿಸಲು ನೆರವಾಗುವ ಒಂದು ಸಾಧನ ಆದರೆ ಬೌದ್ಧಿಕವಾಗಿ ಈ ಮಕ್ಕಳ ಚಿಂತನೆಗಳು ಮೂಡುವುದು ತಮ್ಮ ಕುಟುಂಬದ ನೆಲೆಗಳಿಂದಲೇ ಅಲ್ಲವೇ ? ಈ ಕುಟುಂಬಗಳು ಒಂದು ಸಾಮಾಜಿಕ ವಾತಾವರಣದಲ್ಲಿ ಬದುಕುತ್ತವೆ. ನಿತ್ಯ ಜೀವನದಲ್ಲಿ ಈ ಕುಟುಂಬಗಳು ಅಸಮಾನತೆ, ಶೋಷಣೆ, ದೌರ್ಜನ್ಯ ಮತ್ತು ತಾರತಮ್ಯಗಳ ನಡುವೆಯೇ ಬದುಕು ಸವೆಸುತ್ತವೆ. ಈ ಕುಟುಂಬಗಳಿಂದ ವಿದ್ಯಾಭ್ಯಾಸಕ್ಕಾಗಿ ಶಾಲೆಗೆ ಬರುವ ಮಕ್ಕಳು ಈ ತರತಮಗಳ ಛಾಯೆಯಲ್ಲೇ ಒಂದು ಸಮಾನತೆಯ ವಾತಾವರಣವನ್ನು ಶಾಲೆಯಲ್ಲಿ ಕಂಡುಕೊಳ್ಳಬೇಕಾಗುತ್ತದೆ.
ಇಲ್ಲಿ ಉದ್ಭವಿಸುವ ಪ್ರಶ್ನೆ ಎಂದರೆ ನಮ್ಮ ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸಮಾನತೆಯ ಆಶಯಗಳು ಉಳಿದಿವೆಯೇ ? ಹಿಜಾಬ್ ತೆಗೆದಿಟ್ಟು ಜಾಬ್‍ಗಾಗಿಯೇ ಬರುವ ಹೆಣ್ಣುಮಕ್ಕಳಾಗಲಿ, ಹಿಜಾಬ್ ಅಗತ್ಯವಿಲ್ಲದ ಹಿಂದೂ ಹೆಣ್ಣುಮಕ್ಕಳಾಗಲೀ ಅಥವಾ ಗಂಡುಮಕ್ಕಳೇ ಆಗಲೀ ಬಾಹ್ಯ ಸಮಾಜದ ಅಸಮಾನತೆಯಿಂದ ಹೊರತಾದ ಸಮಾನತೆಯನ್ನು ಶಾಲೆಯಲ್ಲಿ ಗುರುತಿಸಲು ಸಾಧ್ಯವೇ ? ಒಕ್ಕೂಟ ಸರ್ಕಾರ ಜಾರಿಗೊಳಿಸಿರುವ ಹೊಸ ಶಿಕ್ಷಣ ನೀತಿ 2020 ಈ ಸಮಾನತೆಯನ್ನು ಸಾಕಾರಗೊಳಿಸಲು ಪೂರಕವಾಗಿದೆಯೇ ? ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ತಳಮಟ್ಟದಲ್ಲಿರುವ ಮಕ್ಕಳು, ಹಿತವಲಯದಲ್ಲಿರುವ ಮುಂದುವರೆದ ಮಕ್ಕಳೊಡನೆ ಬೆರೆತು ಸಮಾನ ಶಿಕ್ಷಣ ಪಡೆಯುವ ವಾತಾವರಣವನ್ನು ಸರ್ಕಾರಗಳು ನಿರ್ಮಿಸಿವೆಯೇ ? ಖಾಸಗಿ, ಸರ್ಕಾರಿ, ಅನುದಾನಿತ, ಕೇಂದ್ರ ಪಠ್ಯಕ್ರಮದ, ರಾಜ್ಯ ಪಠ್ಯಕ್ರಮದ, ಧಾರ್ಮಿಕ ಅಲ್ಪಸಂಖ್ಯಾತರ, ಕಾರ್ಪೋರೇಟ್ ನಿಯಂತ್ರಿತ ಹೀಗೆ ಹತ್ತು ಹಲವು ಸ್ವರೂಪಗಳಲ್ಲಿ ನೀಡಲಾಗುತ್ತಿರುವ ಶಿಕ್ಷಣದಲ್ಲಿ ಸಾಮಾಜಿಕ ಸಮಾನತೆ ಮತ್ತು ಸಾಂಸ್ಕೃತಿಕ ಸೌಹಾರ್ದತೆಯನ್ನು ಗುರುತಿಸಲು ಸಾಧ್ಯವೇ ?
ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಈ ಎಲ್ಲ ಶೈಕ್ಷಣಿಕ ಮಾರ್ಗಗಳು ಮಾರುಕಟ್ಟೆಗೆ ಪೂರಕವಾದ ಶಿಕ್ಷಣವನ್ನು ಮಾತ್ರವೇ ಒದಗಿಸುತ್ತವೆ. ಇದಕ್ಕೆ ಇತ್ತೀಚಿನ ಸೇರ್ಪಡೆಯಾಗಿರುವುದು ಶಿಕ್ಷಣವನ್ನು ಮತ್ತಷ್ಟು ಕಾರ್ಪೋರೇಟ್ ಹಿಡಿತಕ್ಕೆ ಸಿಲುಕಿಸುವ ಡಿಜಿಟಲ್ ಶಿಕ್ಷಣ ಅಥವಾ ಆನ್‍ಲೈನ್ ಬೋಧನಾ ಮಾದರಿಗಳು. ಹೊಸ ಶಿಕ್ಷಣ ನೀತಿಯ ಮೂಲಕ ಈ ವ್ಯವಸ್ಥೆಯೊಳಗಿನ ತಾರತಮ್ಯಗಳನ್ನು ಮತ್ತಷ್ಟು ಹಿಗ್ಗಿಸುವುದೇ ಅಲ್ಲದೆ, ಸಮಾಜದ ತಳಸಮುದಾಯದ ಮಕ್ಕಳಿಗೆ ಒದಗಿಸಲಾಗುತ್ತಿರುವ ಶಿಕ್ಷಣವೂ ಸಹ ಗಗನ ಕುಸುಮವಾಗಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಉತ್ತಮ ಶಿಕ್ಷಣ ಅಥವಾ ಗುಣಮಟ್ಟದ ಬೋಧನೆ ಎನ್ನುವುದು ಸಾರ್ವತ್ರಿಕ ಲಕ್ಷಣಗಳನ್ನು ಹೊಂದಿರಬೇಕಾದ ಸಂದರ್ಭದಲ್ಲಿ, ಉಳ್ಳವರಿಗೆ ಮಾತ್ರವೇ ಲಭ್ಯವಾಗುವ ಶೈಕ್ಷಣಿಕ ನೆಲೆಗಳನ್ನು ಮಾರುಕಟ್ಟೆಯ ನೆರವಿನೊಂದಿಗೆ ನಿರ್ಮಿಸಲಾಗುತ್ತಿದೆ. ಈ ವಾಣಿಜ್ಯೀಕರಣ ಪ್ರಕ್ರಿಯೆಯಲ್ಲೇ ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳೂ ಸಹ ವಿದ್ಯಾರ್ಥಿಗಳನ್ನು ಪ್ರಭಾವಿಸುತ್ತಿವೆ. ಸಮಾನ ಶಿಕ್ಷಣ ಎಂದರೆ ಒಂದೇ ಪಠ್ಯಕ್ರಮ ಬೋಧನೆ ಅಲ್ಲ, ಬದಲಾಗಿ ಎಲ್ಲ ಸ್ತರಗಳ ಜನತೆಗೂ ಸಮಾನ ಬೌದ್ಧಿಕ ಸರಕುಗಳನ್ನು ಒದಗಿಸುವ, ಸಮಾನ ಸೌಲಭ್ಯಗಳನ್ನು ಕಲ್ಪಿಸುವ, ಸಮಾನ ಜ್ಞಾನ ಶಾಖೆಗಳನ್ನು ಪರಿಚಯಿಸುವ ಮತ್ತು ವಿದ್ಯಾಭ್ಯಾಸದ ನಂತರ ಸಮಾಜದಲ್ಲಿ ಸಮಾನ ಅವಕಾಶಗಳನ್ನು ಕಲ್ಪಿಸುವಂತಹ ವ್ಯವಸ್ಥೆ ಮಾತ್ರವೇ ಸಮಾನ ಶಿಕ್ಷಣ ಎನಿಸಿಕೊಳ್ಳುತ್ತದೆ.

ಒಂದು ಶಾಲೆಯಲ್ಲಿ ಅಥವಾ ಒಂದು ಹಂತದ ಮಕ್ಕಳಲ್ಲಿ ಸಮವಸ್ತ್ರ ಸಂಹಿತೆಯನ್ನು ಅಳವಡಿಸುವುದರಿಂದ ಈ ತಾರತಮ್ಯಗಳನ್ನು, ವ್ಯತ್ಯಯಗಳನ್ನು ನಿವಾರಿಸಿ ಸಮಾನತೆಯನ್ನು ಸಾಧಿಸಲು ಸಾಧ್ಯವೇ ? ಅಥವಾ ಮುಸ್ಲಿಂ ಹೆಣ್ಣುಮಕ್ಕಳು ತಮ್ಮ ಧರಿಸುವ ಹಿಜಾಬ್ ಈ ಹಾದಿಗೆ ಅಡ್ಡಿಯಾಗುತ್ತದೆಯೇ ? ಹಿಜಾಬ್ ಧರಿಸುವುದು ಸಾಂವಿಧಾನಿಕ ಹಕ್ಕು ಹೌದಾದರೂ, ಶಾಲಾ ಮಕ್ಕಳಿಗೆ ಇದನ್ನು ಧರಿಸುವ ಅಥವಾ ನಿರಾಕರಿಸುವ ವ್ಯಕ್ತಿ ಸ್ವಾತಂತ್ರ್ಯ ಇರಬೇಕಲ್ಲವೇ ? ಹಿಜಾಬ್ ನಿರಾಕರಿಸಿದರೆ ತಮ್ಮ ಧಾರ್ಮಿಕ ಹಕ್ಕುಗಳನ್ನು ಕಸಿದುಕೊಂಡಂತೆ ಎಂದು ವಾದಿಸುವ ಮುಸ್ಲಿಂ ಪ್ರತಿನಿಧಿಗಳು ಈ ಪ್ರಶ್ನೆಯನ್ನು ವಿದ್ಯಾರ್ಥಿಗಳ ಕಣ್ಣಿಂದ ನೋಡಬೇಕೇ ಹೊರತು ತಮ್ಮ ಮತೀಯ-ಧಾರ್ಮಿಕ ದೃಷ್ಟಿಕೋನದಿಂದಲ್ಲ. ಹಿಜಾಬ್ ತೆಗೆದಿಟ್ಟು ಶಾಲೆಗೆ ಹೋಗಿ, ಸಂವಿಧಾನಬದ್ಧವಾಗಿ ತಮಗೆ ಸಿಗಬೇಕಾದ ಮೂಲಭೂತ ಶೈಕ್ಷಣಿಕ ಸೌಲಭ್ಯಗಳಿಗಾಗಿ ಆಗ್ರಹಿಸುವುದು ಸಮಾಜದ ಮುನ್ನಡೆಯ ದೃಷ್ಟಿಯಿಂದ ವಿವೇಕಯುತ ಎನಿಸುವುದಿಲ್ಲವೇ ?
ಹಿಜಾಬ್ ಧರಿಸುವ ಹಕ್ಕನ್ನು ನಿರಾಕರಿಸುವ ಏಕೈಕ ಉದ್ದೇಶದಿಂದ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಸಂಹಿತೆಯನ್ನು ಜಾರಿಗೊಳಿಸಲಿರುವ ರಾಜ್ಯ ಸರ್ಕಾರ, ಸಂವಿಧಾನದ ಸಮಾನ ಶಿಕ್ಷಣ ಮತ್ತು ಸಾಮಾಜಿಕ ಸಮಾನತೆ ಮತ್ತು ಸೌಹಾರ್ದತೆಯ ಆಶಯಗಳನ್ನು ಸಾಕಾರಗೊಳಿಸುವ ಉದ್ದೇಶ ಹೊಂದಿದ್ದರೆ, ವಿದ್ಯಾ ಕೇಂದ್ರಗಳಲ್ಲಿ ಎಲ್ಲ ರೀತಿಯ ಹಿಂದೂ ಧಾರ್ಮಿಕ ಚಟುವಟಿಕೆಗಳನ್ನು, ಆಚರಣೆಗಳನ್ನು ನಿರ್ಬಂಧಿಸಬೇಕು. ಮತಾಂಧತೆಯನ್ನು ಪೋಷಿಸುವ ಸಾಂಸ್ಕೃತಿಕ ರಾಜಕಾರಣದ ವಾರಸುದಾರರಿಂದ ಇದು ಸಾಧ್ಯವೇ ? ಹಿಜಾಬ್ ವಿವಾದವನ್ನು ಬಗೆಹರಿಸುವುದಕ್ಕಿಂತಲೂ ಸಮಾಜವನ್ನು ಇನ್ನೂ ಹೆಚ್ಚು ವಿಘಟನೆಗೊಳಪಡಿಸುವ ರೀತಿಯಲ್ಲಿ ಕಾಲೇಜುಗಳಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡುತ್ತಿರುವುದು ಏನನ್ನು ಸೂಚಿಸುತ್ತದೆ ? ಒಕ್ಕೊರಲಿನಿಂದ ಸಮಾಜದ ಒಳಿತಿಗಾಗಿ ದನಿಗೂಡಿಸಬೇಕಾದ ವಿದ್ಯಾರ್ಥಿಗಳನ್ನು ಹಿಜಾಬ್-ಕೇಸರಿ ಶಾಲುಗಳ ಮೂಲಕ ವಿಭಜಿಸುತ್ತಿರುವ ಮತಾಂಧ ರಾಜಕಾರಣ ಸಮಾಜವನ್ನು ಎತ್ತ ಕೊಂಡೊಯ್ಯುತ್ತದೆ ?
ವಿದ್ಯಾರ್ಥಿ ಸಮುದಾಯದಲ್ಲಿ ದೇಶದ ಭವಿಷ್ಯವನ್ನು ಕಾಣುವಂತಹ ಕಾಲಘಟ್ಟವನ್ನೂ ನಾವು ಹಾದು ಬಂದಿದ್ದೇವೆ. ಈ ದೇಶದ ಬಹುತ್ವ ಸಂಸ್ಕೃತಿಯನ್ನು, ಮಾನವೀಯ ಮೌಲ್ಯಗಳನ್ನು, ಸಾಂಸ್ಕೃತಿಕ ಸೌಹಾರ್ದತೆಯನ್ನು ಕಾಪಾಡಿಕೊಂಡು ಬರುವಲ್ಲಿ ವಿದ್ಯಾರ್ಥಿ ಸಮುದಾಯದ ಕೊಡುಗೆ ಚಾರಿತ್ರಿಕವಾಗಿ ಮಹತ್ವದ್ದಾಗಿದೆ. ಇಂದು ಇದೇ ಸಮುದಾಯದ ನಡುವೆ ಗೋಡೆಗಳನ್ನು ಕಟ್ಟಲು ಹಿಂದೂ-ಮುಸ್ಲಿಂ ಮತಾಂಧರು ಮುಂದಾಗಿದ್ದಾರೆ. ವಿದ್ಯಾರ್ಥಿಗಳು ತಮಗೆ ಅಗತ್ಯವಾದ ಸೌಹಾರ್ದಯುತ ವಾತಾವರಣವನ್ನು ನಿರ್ಮಿಸಿಕೊಳ್ಳಲು ಅನುಕೂಲ ಮಾಡಿಕೊಡಬೇಕಾಗಿರುವ ಸಂದರ್ಭದಲ್ಲಿ, ಅವರ ನಡುವೆ ಪ್ರತ್ಯೇಕತೆಯ ಭಾವನೆಗಳನ್ನು ವ್ಯವಸ್ಥಿತವಾಗಿ ಬಿತ್ತಲಾಗುತ್ತಿದೆ. ಇಲ್ಲಿ ಹಿಜಾಬ್ ಧರಿಸಲು ಮುಸ್ಲಿಂ ಹೆಣ್ಣುಮಕ್ಕಳ ಮೇಲೆ ಒತ್ತಡ ಹೇರುವ ಧಾರ್ಮಿಕ ನಾಯಕರಷ್ಟೇ ನೈತಿಕ ಹೊಣೆಯನ್ನು ಹಿಂದೂ ಯುವಕರಿಗೆ ಕೇಸರಿ ಶಾಲು ಹೇರುವ ಹಿಂದೂ ಧಾರ್ಮಿಕ ನಾಯಕರೂ ಹೊರಬೇಕಾಗಿದೆ. ಎರಡೂ ಬದಿಯಲ್ಲಿ ವಸ್ತ್ರ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗುತ್ತಿದೆ, ವ್ಯಕ್ತಿ ಸ್ವಾತಂತ್ರ್ಯವನ್ನು ನಿರಾಕರಿಸಲಾಗುತ್ತಿದೆ.
ಸಾಮಾಜಿಕ ನ್ಯಾಯ ಮತ್ತು ಸಾಂಸ್ಕೃತಿಕ ಸೌಹಾರ್ದತೆಯನ್ನು ಸಾಧಿಸಲು ವಸ್ತ್ರ ಧಾರಣೆ ನೆರವಾಗುವುದಿಲ್ಲ. ಆದರೆ ವಸ್ತ್ರ ಸಂಹಿತೆಗಳು, ನಿರ್ಬಂಧಗಳು ಸೌಹಾರ್ದತೆಯನ್ನು ಕದಡುವ ಅಸ್ತ್ರಗಳಾಗಿಬಿಡುತ್ತವೆ. ಇಂದು ನಾವು ಹೋರಾಡಬೇಕಿರುವುದು ಅಸ್ಪೃಶ್ಯತೆ, ಸಾಮಾಜಿಕ ತಾರತಮ್ಯಗಳು, ಮಹಿಳೆಯರ ಮೇಲಿನ ದೌರ್ಜನ್ಯಗಳು, ಅಸಮಾನತೆ, ಸಾಂಸ್ಕೃತಿಕ ಆಧಿಪತ್ಯ ಇವುಗಳ ವಿರುದ್ಧ ಸುದೀರ್ಘ ಹೋರಾಟಕ್ಕಾಗಿ ವಿದ್ಯಾರ್ಥಿ ಸಮುದಾಯವನ್ನು ಸಜ್ಜುಗೊಳಿಸಬೇಕಿದೆ. ಈ ಕಾರಣಕ್ಕಾಗಿಯೇ ಅವರ ನಡುವಿನ ಸಾಂಸ್ಕೃತಿಕ ಬೇಲಿಗಳನ್ನು ಕಿತ್ತೊಗೆಯಬೇಕಾಗುತ್ತದೆ. ಸಂವಿಧಾನದ ಆಶಯಗಳು ಸಾಕಾರಗೊಳ್ಳಬೇಕಾದರೆ ಮೊದಲು ವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಬೇಕು. ಅದು ಸಾಮಾಜಿಕ ನೆಲೆಯಲ್ಲಿದ್ದಷ್ಟೇ ಮುಖ್ಯವಾಗಿ ಧಾರ್ಮಿಕ ನೆಲೆಯಲ್ಲೂ ರಕ್ಷಣೆಗೊಳಗಾಗಬೇಕು. ವಿದ್ಯಾರ್ಥಿ ಸಮುದಾಯವನ್ನು ತಮ್ಮ ಮತೀಯ ರಾಜಕಾರಣದ, ಮತಾಂಧತೆಯ ದಾಳಗಳಂತೆ ಬಳಸುತ್ತಿರುವ ಹಿಂದೂ ಮತ್ತು ಮುಸ್ಲಿಂ ಮತಾಂಧರು, ಸಂವಿಧಾನ ಬಯಸುವ ವ್ಯಕ್ತಿಸ್ವಾತಂತ್ರ್ಯಕ್ಕೆ ಮಾನ್ಯತೆ ನೀಡಿದರೆ ಸಮಸ್ಯೆ ಸುಲಭವಾಗಿ ಬಗೆಹರಿಯಲು ಸಾಧ್ಯ.

ಅವಕಾಶ ವಂಚಿತ ಶೋಷಿತ ಸಮುದಾಯಗಳಿಗೆ ಶಿಕ್ಷಣವೇ ಮರೀಚಿಕೆಯಾಗುತ್ತಿರುವ ಈ ವಿಷಮ ಸನ್ನಿವೇಶದಲ್ಲಿ ಶೈಕ್ಷಣಿಕ ಸವಾಲುಗಳು ಸಾರ್ವಜನಿಕ ಚರ್ಚೆಗೊಳಗಾಗಬೇಕಿತ್ತು. ಇದು ಪ್ರಭುತ್ವಕ್ಕೆ ಅಪಥ್ಯ ಎನಿಸುವ ವಿಚಾರ. ಹಾಗಾಗಿ ವಸ್ತ್ರ ಸಂಹಿತೆ ಚರ್ಚೆಗೊಳಗಾಗುತ್ತಿದೆ. ಅರಿತೋ ಅರಿಯದೆಯೋ ಮುಗ್ಧ ಮಕ್ಕಳು ತಮ್ಮ ಭವಿಷ್ಯವನ್ನೂ ಒತ್ತೆಯಿಟ್ಟು ಕೋಮುವಾದಿ ರಾಜಕಾರಣದ ದಾಳಗಳಾಗುತ್ತಿದ್ದಾರೆ. ಸಾಮಾಜಿಕ ತಲ್ಲಣಗಳನ್ನು, ತುಮುಲಗಳನ್ನು ಸದಾ ಕುದಿಯುವ ಸ್ಥಿತಿಯಲ್ಲೇ ಇಡುವ ಮೂಲಕ ಆಳುವ ವರ್ಗಗಳು ತಮ್ಮ ಶೋಷಣೆಯ ಬಾಹುಗಳನ್ನು ವಿಸ್ತರಿಸಿಕೊಳ್ಳುತ್ತಿರುತ್ತವೆ. ಹಿಜಾಬ್-ಕೇಸರಿ ಶಾಲು ವಿವಾದ ಈ ವಿಸ್ತರಣೆಯ ಪ್ರಕ್ರಿಯೆಯಲ್ಲಿ ಹೆದ್ದಾರಿಗಳನ್ನೇ ನಿರ್ಮಿಸಿದೆ. ಈ ಪ್ರಕ್ರಿಯೆಯಲ್ಲೇ ಸಮಸ್ತ ವಿದ್ಯಾರ್ಥಿ ಸಮುದಾಯದ ಮುಂದಿರುವ ಶೈಕ್ಷಣಿಕ ಸವಾಲುಗಳು ನೇಪಥ್ಯಕ್ಕೆ ಸರಿಯುತ್ತಿವೆ.
ಸಮಾನತೆ ಎನ್ನುವುದು ಒಂದು ಬೌದ್ಧಿಕ ಮನಸ್ಥಿತಿ. ವಿದ್ಯಾರ್ಥಿಗಳ ಬೌದ್ಧಿಕ ಮನಸ್ಥಿತಿ ಇಂದು ಮತದ್ವೇಷ ಮತ್ತು ಮತಾಂಧತೆಯಿಂದ ಕಲುಷಿತವಾಗುತ್ತಿದೆ. ಸಮವಸ್ತ್ರ ಈ ಮಾಲಿನ್ಯವನ್ನು ಮರೆಮಾಚಬಹುದೇ ಹೊರತು ಹೋಗಲಾಡಿಸುವುದಿಲ್ಲ. ಈ ಬೌದ್ಧಿಕ ಮನಸ್ಥಿತಿಗೆ ಪೂರಕವಾದ ವಿಷಬೀಜಗಳನ್ನು ಬಿತ್ತುತ್ತಲೇ ಇರುವ ಸಾಂಸ್ಕೃತಿಕ ರಾಜಕಾರಣದ ವಾರಸುದಾರರನ್ನು, ಮತಾಂಧ ಶಕ್ತಿಗಳನ್ನು, ಮೂಲಭೂತವಾದವನ್ನು ತೊಡೆದುಹಾಕುವುದೊಂದೇ ಪ್ರಜ್ಞಾವಂತ ಸಮಾಜದ ಮುಂದಿರುವ ಆದ್ಯತೆಯಾಗಬೇಕಿದೆ. ಈ ಪ್ರಜ್ಞಾವಂತ ಸಮಾಜದ ದೃಷ್ಟಿಯನ್ನು ಮಸುಕಾಗಿಸಿರುವ ಹಿಜಾಬ್ ಮತ್ತು ಕೇಸರಿ ಶಾಲುಗಳನ್ನು ಕಿತ್ತೊಗೆಯುವುದು ನಮ್ಮ ಆಯ್ಕೆಯಾಗಬೇಕಿದೆ.