ಪರಿಸರ ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಘಟ್ಟದಲ್ಲಿ ‘ಸಮುದ್ರಕ್ಕೆ ಹರಿಯುವ ನೀರನ್ನು ಹಿಡಿದಿಡಲು’ 1,400 ಚೆಕ್ ಡ್ಯಾಂಗಳನ್ನು ನಿರ್ಮಿಸುವುದು ಪರಿಸರಕ್ಕೆ ತೀವ್ರ ಹಾನಿಯನ್ನು ಉಂಟುಮಾಡಲಿದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಅಣೆಕಟ್ಟುಗಳಿಗಾಗಿ ನೀರಾವರಿ ಸಚಿವಾಲಯದಿಂದ ಹಣವನ್ನು ಕೋರಿ ಸಣ್ಣ ನೀರಾವರಿ ಇಲಾಖೆಯು ಈ ಪ್ರಸ್ತಾಪವನ್ನು ಇತ್ತೀಚೆಗೆ ಮಂಡಿಸಿತ್ತು. ಪಶ್ಚಿಮ ಘಟ್ಟಗಳಲ್ಲಿ ವರದಿಯಾಗಿರುವ ಭೂಕುಸಿತಕ್ಕೆ ಇಂತಹ ಯೋಜನೆಗಳು ಒಂದು ಪ್ರಮುಖ ಕಾರಣವಾಗಿದೆ ಎಂದು ಪರಿಸರ ತಜ್ಞರು ದಶಕಗಳಿಂದಲೂ ಪ್ರತಿಪಾದಿಸುತ್ತಾ ಬಂದಿದ್ದಾರೆ. ‘ಸಮುದ್ರಕ್ಕೆ ನೀರಿನ ಹರಿವನ್ನು ತಡೆಯುವುದು’ ಎಂಬ ಪರಿಕಲ್ಪನೆಯು ಸಮುದ್ರ ಜೀವಿಗಳ ಮೇಲೂ ಪರಿಣಾಮ ಬೀರಲಿದೆ.
ಡೆಕ್ಕನ್ ಹೆರಾಲ್ಡ್ ಜೊತೆ ಮಾತನಾಡಿದ ಪರಿಸರವಾದಿ ಎ ಎನ್ ಯಲ್ಲಪ್ಪ ರೆಡ್ಡಿ, ಪಶ್ಚಿಮ ಘಟ್ಟಗಳ ದುರ್ಬಲವಾದ ಪರಿಸರ ವ್ಯವಸ್ಥೆಯಲ್ಲಿ ಮಧ್ಯಪ್ರವೇಶಿಸುವುದು ಆ ಪ್ರದೇಶಗಳಿಗೆ ಸಮಸ್ಯಾತ್ಮಕವಾಗಲಿದೆ ಎಂದಿದ್ದಾರೆ.
“ಈಗಾಗಲೇ ಈ ಪ್ರದೇಶದಲ್ಲಿ ಅಸ್ತಿತ್ವದಲ್ಲಿರುವ ಮಿನಿ-ಹೈಡಲ್ ಯೋಜನೆಗಳು ಹಲವಾರು ಸಮಸ್ಯೆಗಳನ್ನು ಉಂಟುಮಾಡುತ್ತಿವೆ. ಈ ಚೆಕ್ ಡ್ಯಾಂಗಳನ್ನು ನಿರ್ಮಿಸುವುದು ಅಲ್ಲಿನ ಪರಿಸರವನ್ನು ಇನ್ನಷ್ಟು ಹದಗೆಡಿಸುತ್ತದೆ ” ಎಂದು ಅವರು ಹೇಳಿದ್ದಾರೆ. ಅಂತಹ ಯೋಜನೆಗಳ ಸುತ್ತಲಿನ ಪ್ರದೇಶಗಳು ಅರಣ್ಯಗಳಂತೆ ನೀರನ್ನು ಹಿಡಿದಿಡಲು ಸಾಧ್ಯವಿಲ್ಲ ಮತ್ತು ಭೂಕುಸಿತ ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ. ಮೇಲಾಗಿ, ನದಿ ನೀರು ಸಮುದ್ರಕ್ಕೆ ಹರಿಯುವುದನ್ನು ತಡೆಯುವ ಇಂತಹ ಯೋಜನೆಗಳು ನದೀಮುಖ ಜಲವನ್ನು ಒಣಗಿಸುತ್ತವೆ ಮತ್ತು ಹಲವಾರು ಜಾತಿಯ ಸಮುದ್ರ ಜೀವಿಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಈ ಚೆಕ್ ಡ್ಯಾಂಗಳನ್ನು ‘ನೀರನ್ನು ಟ್ಯಾಪ್ ಮಾಡಲು’ ಸರ್ಕಾರವು ನಿರ್ಮಿಸಬಹುದು ಎಂದು ಹೇಳುವ ಇನ್ನೊಬ್ಬ ಪರಿಸರವಾದಿ ಶಿವಾನಂದ್ ಕಳವೆ ಅಂತಹ ರಚನೆಗಳು ಅಪಾಯಕಾರಿ ಎಂದು ಎಚ್ಚರಿಸಿದ್ದಾರೆ. ಯಾವುದೇ ಅಣೆಕಟ್ಟುಗಳು ಅಥವಾ ಚೆಕ್ ಡ್ಯಾಂಗಳನ್ನು ನಿರ್ಮಿಸಲು ಅಡಿಪಾಯಕ್ಕೆ ಬಲವಾದ ರಾಕ್ ಬೇಸ್ ಅಗತ್ಯವಿರುತ್ತದೆ, ಆದರೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಇಂತಹ ಬೇಸ್ ಇರುವುದು ಕಷ್ಟ ಎಂದು ಹೇಳಿರುವ ಅವರು “ಅಂತಹ ರಚನೆಗಳನ್ನು ನಿರ್ಮಿಸಿದರೂ ಸಹ, ಮಳೆ ನೀರನ್ನು ಸಂಗ್ರಹಿಸುವ ಮರಗಳು ಮತ್ತು ಇತರ ಅಂಶಗಳು ಅವನ್ನು ಛಿದ್ರವಾಗಿಸಬಹುದು ಅಥವಾ ಒಂದೆರಡು ವರ್ಷಗಳ ಹಿಂದೆ ಪ್ರವಾಹದ ಸಮಯದಲ್ಲಿ ನೋಡಿದಂತೆ ಅವುಗಳು ಕುಸಿದು ಬೀಳಬಹುದು” ಎಂದು ಅವರು ಹೇಳಿದರು.
ಅವರ ಪ್ರಕಾರ, ಸಮುದ್ರಕ್ಕೆ ಸೇರುವ ನದಿ ನೀರನ್ನು ಟ್ಯಾಪ್ ಮಾಡುವ ಬದಲು, ಸರ್ಕಾರವು ಕೃಷ್ಣಾ ಮತ್ತು ಇತರ ಪ್ರಮುಖ ನದಿಗಳ ಪ್ರವಾಹದ ನೀರನ್ನು ಸರೋವರಗಳಿಗೆ ತಿರುಗಿಸುವತ್ತ ಗಮನ ಹರಿಸಬೇಕು.
ಈ ಬಗ್ಗೆ ಸಣ್ಣ ನೀರಾವರಿ ಸಚಿವ ಜೆ ಸಿ ಮಾಧುಸ್ವಾಮಿಯನ್ನು ಡೆಕ್ಕನ್ ಹೆರಾಲ್ಡ್ ಸಂಪರ್ಕಿಸಿದಾಗ, ಚೆಕ್ ಡ್ಯಾಂಗಳನ್ನು 50-60 ಎಕರೆ ಅಳತೆಯ ಸಣ್ಣ ಭೂಮಿಗಳಿಗೆ ನೀರುಣಿಸಲು ಮತ್ತು ಕುಡಿಯುವ ನೀರಿನ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುವುದು ಎಂದು ಹೇಳಿದ್ದಾರೆ.

“ಕೊಡಗು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಚೆಕ್ ಡ್ಯಾಂಗಳು ಬರಲಿವೆ” ಎಂದ ಅವರು ಅಣೆಕಟ್ಟುಗಳಿಂದ ಯಾವುದೇ ಅರಣ್ಯ ಭೂಮಿ ಮುಳುಗುವುದಿಲ್ಲ ಎಂದೂ ಭರವಸೆ ಕೊಟ್ಟಿದ್ದಾರೆ.
ಹೊಳೆಗಳಿಗೆ ಅಡ್ಡಲಾಗಿ ನಿರ್ಮಿಸಲಾಗುವ ಚೆಕ್ ಡ್ಯಾಂಗಳು ಕೇವಲ ಐದರಿಂದ ಆರು ಅಡಿಗಳಷ್ಟು ಎತ್ತರದಲ್ಲಿರುತ್ತವೆ ಮತ್ತು ಯಾವುದೇ ಪರಿಸರ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ.