ಬೆಳಗಾವಿ: ಯುವಕರು ಸ್ವಯಂ ಉದ್ಯೋಗದಾತರಾಗಲು ನಡೆಸುತ್ತಿರುವ `ಉದ್ಯಮಿಯಾಗು—ಉದ್ಯೋಗ ನೀಡು’ ಕಾರ್ಯಾಗಾರ ವಿಶೇಷ ಕಾರ್ಯಕ್ರಮವೂ ಮುಂದುವರೆಯಲಿದ್ದು, ಆಯಾ ಜಿಲ್ಲಾ ಕೇಂದ್ರಗಳಲ್ಲಿ ಆಯೋಜಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ಮಂಗಳವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಡಿ.ಎಸ್.ಅರುಣ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ತರಬೇತಿ, ಮಾರ್ಗದರ್ಶನ ನೀಡಲಾಗುತ್ತದೆ. ಅದಕ್ಕಾಗಿ ಪ್ರತಿ ಜಿಲ್ಲೆಯ 3-4 ಕೇಂದ್ರಗಳಲ್ಲಿ ಒಂದು ದಿನದ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಉದ್ಯೋಗ ಹುಡುಕುವ ಬದಲು ಉದ್ಯಮ ಸ್ಥಾಪಿಸಿ ಉದ್ಯೋಗ ಕೊಡುವಂತಾಗಬೇಕು ಎನ್ನುವ ಉದ್ದೇಶದಿಂದ ಕಾರ್ಯಾಗಾರವನ್ನು ನಡೆಸಿ, ಅವಕಾಶಗಳ ಬಗ್ಗೆ ಮತ್ತು ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು ತಿಳಿಸಲಾಗುತ್ತಿದೆ ಎಂದು ನಿರಾಣಿ ತಿಳಿಸಿದರು. ಇದರಲ್ಲಿ 50 ಸಾವಿರ ಮಂದಿ ಭಾಗಿಯಾಗುವ ನಿರೀಕ್ಷೆ ಇದೆ. ನಂತರ 40-50 ತಾಸಿನ ಆನ್ಲೈನ್ ಕಾರ್ಯಕ್ರಮಕ್ಕೆ ನೋಂದಣಿ ಮಾಡಿಸಲಾಗುತ್ತದೆ ಎಂದ ಅವರು, ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮ ಮುಂದುವರೆಯಲಿದೆ ಎಂದು ವಿವರಿಸಿದರು.
ಸಕ್ಕರೆ ಕಾರ್ಖಾನೆಗಳ ಮಾಲೀಕರು ಕಬ್ಬು ತೂಕ ಮಾಡುವಾಗ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ವಿರೋಧ ಪಕ್ಷಗಳ ಸದಸ್ಯರಿಗೆ ಸಚಿವ ನಿರಾಣಿ ಎಥೆನಾಲ್ ಹಾಗೂ ಸಕ್ಕರೆ ಉತ್ಪಾದನೆ ಬೆಲೆ, ಆದಾಯಲ್ಲಿ ಅಲ್ಪಸ್ವಲ್ಪ ಬದಲಾವಣೆ ಇದೆ, ಹಾಗೇ ಕಬ್ಬು ತೂಕದಲ್ಲಿ ಯಾವುದೇ ಮೋಸ ಆಗುತ್ತಿಲ್ಲ. ಏಕೆಂದರೆ ಬೆಳೆಗಾರರು ಖಾಸಗಿಯಾಗಿಯೂ ತೂಕ ಮಾಡಿಸುತ್ತಾರೆ. ಹಾಗಾಗಿ, ಟನ್ ಗಟ್ಟಲೇ ಮೋಸ ಆಗುವುದಿಲ್ಲ ಎಂದು ಸ್ವತಃ ಸಕ್ಕರೆ ಕಾರ್ಖಾನೆಗಳ ಮಾಲೀಕರೂ ಆಗಿರುವ ಸಚಿವ ಮುರುಗೇಶ ನಿರಾಣಿ ಅವರು ಸದನಕ್ಕೆ ತಿಳಿಸಿದರು.