ಸತತ ಮಳೆಯಿಂದಾಗಿ ಕಂಗೆಟ್ಟಿರುವ ಬೆಂಗಳೂರು ಮಂದಿಗೆ ಮತ್ತೊಂದು ತಲೆನೋವು ಶುರುವಾಗಿದೆ. ಒತ್ತುವರಿ ಜಾಗ ಎಂದು ಗೊತ್ತಿಲ್ಲದೇ ಕೋಟಿ ಕೋಟಿ ಇನ್ವೆಸ್ಟ್ ಮಾಡಿ ಜಾಗಕೊಂಡಿರೋ ಜನರು ಇದೀಗ ಕಂಗಾಲಾಗಿ ಕೂತಿದ್ದಾರೆ. ಬಿಬಿಎಂಪಿ ಒತ್ತುವರಿ ಭೂತಕ್ಕೆ ಇದೀಗ ಜನರು ಬೇಸತಿದ್ದಾರೆ.
ಯಾರದ್ದೋ ತಪ್ಪು.. ಹಿಂದೆ ಮುಂದೆ ನೋಡದೆ ಹಣ ಸುರಿದವರ ಎದೆ ಢವ ಢವ
ಸದ್ಯ ಬೆಂಗಳೂರು ಮಳೆ ಹೊಡೆತದಿಂದ ಕ್ರಮೇಣವಾಗಿ ಚೇತರಿಸಿಕೊಳ್ಳುತ್ತಿದೆ. ಆದರೆ ಅದರ ಪರಿಣಾಮ ಮಾತ್ರ ಇನ್ನೂ ದಿನಗಳಿಗಾಗುವಷ್ಟು ಉಳಿದಿದೆ. ಇದರ ನಡುವೆ ಮತ್ತೆ ಒತ್ತುವರಿ ತೆರವು ವಿಚಾರ ಸದ್ದು ಮಾಡುತ್ತಿದ್ದು, ಅಕ್ರಮವಾಗಿ ನಿರ್ಮಿಸಲಾದ ಕಟ್ಟಡ, ಅಪಾರ್ಟ್ಮೆಂಟ್ ಎಲ್ಲವನ್ನೂ ನಿರ್ದಾಕ್ಷಿಣ್ಯವಾಗಿ ತೆರವು ಮಾಡುತ್ತೇವೆ ಎಂದು ಬಿಬಿಎಂಪಿ ಗುಡುಗಿದೆ. ಇದು ಈಗ ನಗರ ಜನರ ನೆಮ್ಮದಿ ಕೆಡಿಸುವಂತೆ ಮಾಡಿದೆ. ಮುಗ್ದ ಜನರು ಒತ್ತುವರಿ ಜಾಗ ಎಂದು ಗೊತ್ತಿಲ್ಲದೇ ಕೋಟಿ ಕೋಟಿ ಇನ್ವೆಸ್ಟ್ ಮಾಡಿ ಜಾಗಕೊಂಡು ಕೊಂಡಿದ್ದಾರೆ. ಅಕ್ರಮವಾಗಿ ಒತ್ತುವರಿ ಮಾಡಲಾದ ಜಾಗದಲ್ಲಿ ಅಪಾರ್ಟ್ಮೆಂಟ್, ವಿಲ್ಲಾ ಅಂತ ಸ್ವಂತ ಸೂರು ಮಾಡಿಕೊಂಡಿರೋ ಜನರಿಗೆ ಶಾಕ್ ಎದುರಾಗಿದೆ.
ಅಪಾರ್ಟ್ಮೆಂಟ್, ವಿಲ್ಲಾ ನಿರ್ಮಿಸಲು ಅನುಮತಿ ಕೊಟ್ಟಿದ್ದು ಬಿಬಿಎಂಪಿ ಅಲ್ಲವೇ ?
ಈಗ ನೆರೆ ಬಂದಿದ್ರಿಂದ ರಾಜಕಾಲುವೆ ಒತ್ತುವರಿ, ಕೆರೆ ನಾಲೆ ಒತ್ತುವರಿ ತೆರವಿಗೆ ಆಗ್ರಹ ಜೋರಾಗಿದೆ. ಸರ್ಕಾರವೂ ಮುಲಾಜಿಲ್ಲದೇ ಕ್ರಮಕೈಗೊಳ್ಳಲು ಸರ್ಕಾರ ಸೂಚನೆ ನೀಡಿದ್ದು ಬಿಬಿಎಂಪಿಯೂ ನೋಟೀಸ್ ನೀಡದೆ ತೆರವಿಗೆ ತೀರ್ಮಾನಿಸಿದೆ. ಹೀಗಾಗಿ ನೆರೆ ಇಳಿಯುತ್ತಿದ್ದಂತೆ ಸಂತ್ರಸ್ಥರಿಗೆ ಒತ್ತವರಿ ತೆರವು ಭೂತ ಕಾಡಲಿದೆ. ತಪ್ಪು ಮಾಡಿದ್ದು ಪಾಲಿಕೆ, ಬಿಡಿಎ ಆದರೆ ಶಿಕ್ಷೆ ಮಾತ್ರ ಮನೆ ಮಾಲಿಕರಿಗಾ ಎಂದು ಜನರ ಪ್ರಶ್ನೆ ಮಾಡುತ್ತಿದ್ದಾರೆ. ರೇರಾ, ಬ್ಯಾಂಕ್, ಬಿಡಿಎ, ಬಿಬಿಎಂಪಿ ಅಪ್ರೂವಲ್ ಫ್ಲಾಟ್ಗಳಿರೋ ಅಪಾರ್ಮ್ಮೆಂಟೇ ಅಕ್ರಮ ಎಂದಾದರೆ ಇಲ್ಲಿ ಅಕ್ರಮ ನಡೆಸಿರುವುದು ಬಿಬಿಎಂಪಿಯೇ ಹೊರತು ಜನರಲ್ಲ ಎನ್ನುತ್ತಾರೆ ರಾಜ್ಯ ಮನೆ ಖರೀದಿದಾರರ ಸಂಘ ಆರೋಪಿಸಿದೆ.

ಮಹಾದೇವಪುರ ವಲಯದಲ್ಲೇ ಅತಿ ಹೆಚ್ಚು ಒತ್ತುವರಿಯಾಗಿದ್ದು, 136 ಅಕ್ರಮ ಕಟ್ಟಡಗಳನ್ನು ಪಾಲಿಕೆ ಗುರುತಿಸಿದೆ. ಈ ಪೈಕಿ ಯಮಲೂರಿನ ದಿವ್ಯಶ್ರೀ ಟೆಕ್ ಪಾರ್ಕ್, ಎಫ್ಸಿಲಾನ್ ಪ್ರಾಪರ್ಟೀಸ್ ಕೂಡ ಸೇರಿದೆ. ಈ ಬಗ್ಗೆ ಎಫ್ಸಿಲಾನ್ ವಿಲ್ಲಾ ಮಾಲೀಕರಾದ ಅಗಸ್ತ್ಯ ಮಾತನಾಡಿದ್ದು, ಕಳೆದ 20 ವರ್ಷಗಳಿಂದ ಈ ಪ್ರಾಪರ್ಟಿ ಇಲ್ಲಿ ಇದೆ. ಈ ಬಾರಿ ನೆರೆ ಬಂದಿದೆ. ಈಗ ಬಂದು ಇದು ಒತ್ತುವರಿ ಜಾಗ ತೆರವು ಮಾಡುತ್ತೇವೆ ಎಂದರೆ ನಾವು ಎಲ್ಲಿಗೆ ಹೋಗಬೇಕು. ಇಲ್ಲಿ ಅಪ್ರೂವಲ್ ಕೊಡುವ ಮೊದಲೇ ಇದು ಒತ್ತುವರಿ ಎಂದು ಬಿಬಿಎಂಪಿ, ಬಿಡಿಎ ಅಧಿಕಾರಿಗಳಿಗೆ ಗೊತ್ತಾಗಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಒಟ್ಟಾರೆ ಈಗ ನಮ್ಮ ಮನೆ ಹೋಗುತ್ತಾ, ನಮ್ಮ ಜಾಗ ಹೋಗುತ್ತಾ ಅನ್ನೋ ಟೆನ್ಷನ್ ನಲ್ಲಿದ್ದಾರೆ ಬೆಂಗಳೂರಿನ ಜನ. ಈಗಾಗಲೇ ಮಹಾದೇವಪುರ ವಲಯದಲ್ಲೇ 136 ಬೃಹತ್ ಕಟ್ಟಡ ಗುರುತು ಮಾಡಿರೋ ಪಾಲಿಕೆ ಮಳೆಗಾಲದ ನಂತರ ಕಾಮಾಗರಿ ಕೈಗೆತ್ತಿಕೊಳ್ಳುವ ನಿರೀಕ್ಷೆ ಇದೆ. ರಾಜಕಾಲುವೆ ಒತ್ತುವರಿ ಲೀಸ್ಟ್ ನಲ್ಲಿರೋದು ಬಹುತೇಕ ಅಪಾರ್ಟ್ಮೆಂಟ್ ಹಾಗೂ ವಿಲ್ಲಾಗಳೇ. ಇವೆಲ್ಲಕ್ಕೂ ಜನರು ಕೋಟಿ ಕೋಟಿ ಕೊಟ್ಟು ಸಾಲ ಶೂಲ ಮಾಡಿ ಬಂಡವಾಳ ಹೂಡಿದವರೇ ಹೆಚ್ಚು. ಈಗ ನೆರೆಯಲ್ಲಿ ಬದುಕು ಮೂರಾಬಟ್ಟೆಯಾಗಿದೆ.. ಇದ್ದ ಸೂರು ಕೂಡ ಹೋಗುವ ಸ್ಥಿತಿ ಅವರದ್ದಾಗಿದೆ.