—-ನಾ ದಿವಾಕರ—-
ಪ್ರಜಾತಂತ್ರದ ಚೌಕಟ್ಟಿನ ಒಳಗೇ ಆಳ್ವಿಕೆಯನ್ನು ಬಿಗಿಗೊಳಿಸುವ ಒಂದು ಆಡಳಿತದ Template
(ತುರ್ತುಪರಿಸ್ಥಿತಿ – ಕಲಿತಿರುವುದೇನು ಕಲಿಯಬೇಕಾದ್ದು ಏನು ? ಮಂದುವರೆದ ಭಾಗ)

ವಿಶ್ವದ ಯಾವುದೇ ದೇಶದ ಸಮಕಾಲೀನ ಇತಿಹಾಸವನ್ನು ನೋಡಿದರೂ ಸಮಾನವಾಗಿ ಕಾಣುವ ಒಂದು ಅಂಶ ಎಂದರೆ, ಅಲ್ಲಿನ ಆಳ್ವಿಕೆಯ ಮಾದರಿಗಳು ಒಂದು ನಿರ್ದಿಷ್ಟ ಕಾಲಘಟ್ಟದಲ್ಲಿ ನಿರ್ಣಾಯಕ ತಿರುವು ಪಡೆದುಕೊಳ್ಳುತ್ತದೆ. ಊಳಿಗಮಾನ್ಯ ವ್ಯವಸ್ಥೆಯಿಂದ ರಾಜಪ್ರಭುತ್ವಗಳನ್ನು ದಾಟಿ ಪ್ರಜಾಪ್ರಭುತ್ವದೆಡೆಗೆ ಸಾಗಿ ಬಂದಿರುವ ಭೌಗೋಳಿಕ ಚರಿತ್ರೆಯಲ್ಲಿ ಇದನ್ನು ವಿಭಿನ್ನ ಕಾಲಘಟ್ಟಗಳಲ್ಲಿ, ವಿಭಿನ್ನ ಆಯಾಮಗಳಲ್ಲಿ ಗುರುತಿಸಬಹುದು. ಇಂದಿಗೂ ರಾಜಪ್ರಭುತ್ವದ ಛಾಯೆಯಲ್ಲಿ ನಿರಂಕುಶಾಧಿಕಾರವನ್ನು ಉಳಿಸಿಕೊಂಡು ಬಂದಿರುವ ಕೆಲವೇ ದೇಶಗಳನ್ನು ಹೊರತುಪಡಿಸಿ ನೋಡಿದಾಗ, ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿರುವ ಎಲ್ಲ ದೇಶಗಳಲ್ಲೂ ಈ ಪರಿವರ್ತನೆಯನ್ನು ಗುರುತಿಸಬಹುದು. ಈ ಆಳ್ವಿಕೆಯ ಮಾದರಿಗಳ ಬದಲಾವಣೆಗೆ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಪ್ರಾದೇಶಿಕ ವ್ಯತ್ಯಯ ಮತ್ತು ವೈರುಧ್ಯಗಳೂ ಸಹ ಕಾರಣವಾಗುತ್ತವೆ.
ವಸಾಹತೋತ್ತರ ಕಾಲದಲ್ಲಿ ವಿಶ್ವದಾದ್ಯಂತ ಹೆಚ್ಚು ಸ್ವೀಕೃತವೂ, ಜನಪ್ರಿಯವೂ ಆಗಿರುವುದು ಪ್ರಜಾಪ್ರಭುತ್ವದ ಆಳ್ವಿಕೆಯ ಮಾದರಿ. ಭಾರತವು ವಸಾಹತು ದಾಸ್ಯದಿಂದ ವಿಮೋಚನೆ ಪಡೆದು, ಸ್ವತಂತ್ರ-ಸಾರ್ವಭೌಮ-ಗಣತಂತ್ರ ದೇಶವಾಗಿ ರೂಪುಗೊಂಡಾಗ ಅದಕ್ಕೆ ಪ್ರಜಾಸತ್ತಾತ್ಮಕ-ಸಾಂವಿಧಾನಿಕ ಮೌಲ್ಯಗಳ ಸುಭದ್ರ ಬುನಾದಿಯನ್ನು ಒದಗಿಸಿದ್ದು ಭಾರತದ ಸಂವಿಧಾನ ಮತ್ತು ಅದರ ಮೂಲ ಆಶಯಗಳು. ಆರ್ಥಿಕಾಭಿವೃದ್ಧಿಯ ಮತ್ತು ಆಡಳಿತ ನಿರ್ವಹಣೆಯ ಮಾದರಿಗಳನ್ನು ಅಳವಡಿಸುವಾಗ ಭಾರತ ಎದುರಿಸಿದ ಬಡತನ, ಹಸಿವೆ, ನಿರ್ಗತಿಕತೆ, ಅನಕ್ಷರತೆ ಮತ್ತು ಸಾಮಾಜಿಕ ತಾರತಮ್ಯಗಳ ನಿವಾರಣೆಗೆ ಕಾನೂನಾತ್ಮಕವಾದ ನಿರ್ದೇಶನಗಳನ್ನೂ, ದೂರಗಾಮಿ ಮಾರ್ಗದರ್ಶನವನ್ನೂ ಒದಗಿಸಿರುವ ಸಂವಿಧಾನವನ್ನು, ಸಂಸದೀಯ ಪ್ರಜಾತಂತ್ರವು ನಿರ್ವಹಿಸಿದ ರೀತಿಯೇ ಮೊದಲ ಎರಡು ದಶಕಕ್ಕೂ ಹೆಚ್ಚು ಕಾಲ ಭಾರತವನ್ನು ಪ್ರಗತಿಯ ಹಾದಿಯಲ್ಲಿ ಕೊಂಡೊಯ್ದಿತ್ತು.
ಸಾಮಾಜಿಕ-ಆರ್ಥಿಕ ಮಾದರಿಗಳು
ಮೇಲ್ ಸ್ತರದ ಆರ್ಥಿಕ ನೀತಿಗಳು ಭಾರತವನ್ನು ಅರೆ-ಸಮಾಜವಾದಿ ಮಾರ್ಗದಲ್ಲಿ ಮುನ್ನಡೆಸಿದರೆ, ತಳಸಮಾಜದ ಸಬಲೀಕರಣ ಮತ್ತು ದುರ್ಬಲ ವರ್ಗಗಳ ಉನ್ನತೀಕರಣದ ಹಾದಿಯಲ್ಲಿ ಅಗತ್ಯವಾದ ಕಲ್ಯಾಣ ಆರ್ಥಿಕತೆಯ (Welfare Economics) ನೀತಿಗಳು ಪ್ರಧಾನವಾಗಿ ಕಂಡರೆ, ಕೃಷಿ ಆಧಾರಿತ ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಕೈಗಾರಿಕೀಕರಣವನ್ನು ಅವಲಂಬಿಸಿದ ನೆಹರೂ ಆರ್ಥಿಕತೆ, ಎರಡು ದಶಕಗಳ ಕಾಲ ಸಮತೋಲಿತ ಆಳ್ವಿಕೆಯನ್ನು ನೀಡುವಲ್ಲಿ ಯಶಸ್ವಿಯಾಗಿತ್ತು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡಿಕೊಂಡೇ, ತಳಸಮಾಜದ ನಿರೀಕ್ಷೆಗಳಿಗೆ ಭಂಗ ಉಂಟಾಗದ ರೀತಿಯಲ್ಲಿ ಆರ್ಥಿಕ ನೀತಿಗಳನ್ನು ಅನುಸರಿಸಿ, ಈ ಸಮಾಜಗಳ ಅಸಮಾಧಾನಗಳನ್ನು ನಿವಾರಿಸುವ ನಿಟ್ಟಿನಲ್ಲಿ ನೆಹರೂ ಆರ್ಥಿಕತೆ ಬಹುಮಟ್ಟಿಗೆ ಯಶಸ್ವಿಯಾಗಿತ್ತು. ಹಾಗಾಗಿ ಆರಂಭದ ಎರಡು ದಶಕಗಳಲ್ಲಿ ಭಾರತದ ದುಡಿಯುವ ಜನತೆಯ ನಡುವೆ ಕ್ಷೋಭೆಯಾಗಲಿ, ಆತಂಕಗಳಾಗಲೀ ವ್ಯಕ್ತವಾಗಲಿಲ್ಲ. ಹಾಗೊಮ್ಮೆ ಕೆಲವು ಸಂದರ್ಭಗಳಲ್ಲಿ ಅಸಮಾನತೆಗಳ ನಡುವೆ ಹುಟ್ಟಿಕೊಂಡ ಜನಾಕ್ರೋಶವನ್ನು ಪ್ರಜಾಸತ್ತಾತ್ಮಕವಾಗಿ ನಿವಾರಿಸಲು ನೆಹರೂ ಆಳ್ವಿಕೆ ಯಶಸ್ವಿಯಾಗಿತ್ತು.

ಹಾಗಾಗಿಯೇ ಈ ಅವಧಿಯಲ್ಲಿ ವಸಾಹತೋತ್ತರ ಕಾಲದ ಉನ್ನತ ಆದರ್ಶಗಳಾಗಿ ಹೊರಹೊಮ್ಮಿದ ಮಾನವ ಹಕ್ಕುಗಳು, ನಾಗರಿಕ ಹಕ್ಕುಗಳು, ವ್ಯಕ್ತಿ-ಅಭಿವ್ಯಕ್ತಿ-ಮಾಧ್ಯಮ ಸ್ವಾತಂತ್ರ್ಯ ಹಾಗೂ ಪ್ರತಿರೋಧವನ್ನು ದಾಖಲಿಸುವ ತಳಸಮಾಜದ ಸಾಂವಿಧಾನಿಕ ಹಕ್ಕುಗಳು ರಕ್ಷಿಸಲ್ಪಟ್ಟವು. ಶ್ರಮಿಕ ಜಗತ್ತಿನ ನೋವು ಸಂಕಟಗಳನ್ನು ಸಂಪೂರ್ಣವಾಗಿ ಪರಿಹರಿಸಲಾಗದಿದ್ದರೂ, ಇದರಿಂದ ಉದ್ಭವಿಸುವ ಜನಾಕ್ರೋಶವನ್ನು ತಣ್ಣಗಾಗಿಸುವ ಸಂಯಮಪೂರ್ಣ-ವಿವೇಕಯುತ ಸಾಂವಿಧಾನಿಕ ಮಾರ್ಗಗಳನ್ನು ಅನುಸರಿಸಲಾಗಿತ್ತು. ನೆಹರೂ ಆರ್ಥಿಕತೆ ಮತ್ತು ಆಳ್ವಿಕೆಯ ಇತರ ಲೋಪಗಳು ಏನೇ ಇದ್ದರೂ, ತೆಲಂಗಾಣ-ತೇಭಾಗ ಮುಂತಾದೆಡೆ ರೈತ ದಂಗೆಗಳನ್ನು ಕ್ರೂರವಾಗಿ ಹತ್ತಿಕ್ಕುವ ಕ್ರಮಗಳ ಹೊರತಾಗಿಯೂ, ಒಂದು ಸಮತೋಲಿತ ಪ್ರಜಾತಂತ್ರವನ್ನು ಕಾಪಾಡಿಕೊಂಡು ಬಂದಿದ್ದು ಚಾರಿತ್ರಿಕ ಸತ್ಯ. ತಳಸಮಾಜದ ಶೋಷಿತ-ಅವಕಾಶವಂಚಿತ-ನಿರ್ಲಕ್ಷಿತ ಜನಸಮುದಾಯಗಳ ನೋವು-ಸಂಕಷ್ಟಗಳಿಗೆ ಸ್ಪಂದಿಸುವ ಒಂದು ರಾಜಕೀಯ ವಾತಾವರಣವನ್ನು ಮೊದಲೆರಡು ದಶಕಗಳಲ್ಲಿ ಕಾಣಬಹುದಿತ್ತು.
ಆದರೆ ಸ್ವತಂತ್ರ ಭಾರತದ ಜನಸಾಮಾನ್ಯರ ನಿರೀಕ್ಷೆಗಳಿಗೂ, ನೆಹರೂ ಆರ್ಥಿಕತೆ-ಭಾರತೀಯ ಸಮಾಜದಲ್ಲಿನ ಆಂತರಿಕ ಲಕ್ಷಣಗಳು ಸ್ಪಂದಿಸಿದ ರೀತಿಗೂ ನಡುವೆ ಅಪಾರ ಅಂತರ ಇದ್ದುದು ಕಂಡುಬಂದಿದ್ದು 1965ರ ಅನಂತರದಲ್ಲಿ. ಅತ್ಯಂತ ತಳಮಟ್ಟದ ಸಮಾಜವನ್ನು ಪ್ರತಿನಿಧಿಸುತ್ತಿದ್ದ ಉತ್ಪಾದಕೀಯ ಶಕ್ತಿಗಳು, ಅಂದರೆ ತಳಸಮುದಾಯಗಳು, ಸಾಂವಿಧಾನಿಕ ಆಶಯಗಳ ಹೊರತಾಗಿಯೂ ತಮ್ಮ ಜೀವನ-ಜೀವನೋಪಾಯದ ಹಾದಿ ದುರ್ಗಮವಾಗಿರುವುದನ್ನು ಗುರುತಿಸಲಾರಂಭಿಸಿದ್ದು ಈ ಕಾಲಾನಂತರದಲ್ಲಿ. ಇದಕ್ಕೆ ಸಮಾನಾಂತರವಾಗಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಬರಹ-ಭಾಷಣಗಳು, ಮಾರ್ಕ್ಸ್‌ವಾದದ ಚಿಂತನಾಧಾರೆಗಳು, ಜಗತ್ತಿನಾದ್ಯಂತ ವಿಸ್ತರಿಸುತ್ತಿದ್ದ ಸ್ತ್ರೀವಾದಿ-ಮಹಿಳಾ ಸಮಾನತೆಯ ಕೂಗು ಹಾಗೂ ವಿಶ್ವಸಂಸ್ಥೆಯ ಮಾನ್ಯತೆ ಪಡೆದ ಮಾನವ-ನಾಗರಿಕ ಹಕ್ಕುಗಳ ಪರಿಕಲ್ಪನೆಗಳು, ಭಾರತದ ಸುಶಿಕ್ಷಿತ ಜನರನ್ನು ಮಾತ್ರವೇ ಅಲ್ಲದೆ, ತಳಸಮಾಜದ ಅನಕ್ಷರಸ್ಥರನ್ನೂ ತಲುಪಿದ್ದರಿಂದ, ಸಾಮಾಜಿಕ ಪಿರಮಡ್ಡಿನ ತಳಸ್ತರದಲ್ಲಿದ್ದ ಜನಸಮುದಾಯಗಳು ತಮ್ಮ ಸುಸ್ಥಿರ ಬದುಕು ಮತ್ತು ಉಜ್ವಲ ಭವಿಷ್ಯದ ಕನಸು ಸಾಕಾರಗೊಳ್ಳುವ ಸಾಧ್ಯತೆಗಳು ಕ್ಷೀಣಿಸುತ್ತಿರುವುದನ್ನು ಗುರುತಿಸಿದ್ದವು.

ಹಾಗಾಗಿಯೇ 1960ರ ದಶಕದ ಉತ್ತರಾರ್ಧದಲ್ಲಿ ಮತ್ತು 70ರ ದಶಕದ ಆರಂಭದಲ್ಲಿ ತಲೆದೋರಿದ ಆಹಾರದ ಕೊರತೆ, ಕ್ಷಾಮ, ನಿರುದ್ಯೋಗ, ಮತ್ತು ತಳಸಮುದಾಯಗಳಲ್ಲಿ ಮಡುಗಟ್ಟಿದ್ದ ಅವಕಾಶವಂಚಿತರಾದ ಭಾವನೆಗಳು ಒಮ್ಮೆಲೆ ಸ್ಫೋಟಿಸಿದ್ದವು. ಮತ್ತೊಂದೆಡೆ ಭೂಮಿಗಾಗಿ ಹೋರಾಟಗಳು ಮತ್ತೊಮ್ಮೆ ಸಕ್ರಿಯವಾಗಿದ್ದವು . ರೈತರು, ಕಾರ್ಮಿಕರು, ವಿದ್ಯಾರ್ಥಿ ಯುವಸಮೂಹ ಮತ್ತು ಮಹಿಳಾ ಸಮೂಹಗಳು ತಮ್ಮ ಸಾಂವಿಧಾನಿಕ ಹಕ್ಕೊತ್ತಾಯಗಳಿಗಾಗಿ ಜನಾಂದೋಲನಗಳಿಗೆ ಮುಂದಾಗಿದ್ದವು. ಈ ಆರ್ಥಿಕ ಬಿಕ್ಕಟ್ಟುಗಳ ನಡುವೆಯೇ ಸಾಮಾಜಿಕವಾಗಿ ಭಾರತೀಯ ಸಮಾಜದ ಊಳಿಗಮಾನ್ಯ ವ್ಯವಸ್ಥೆ ಮತ್ತು ಜಾತಿ ವ್ಯವಸ್ಥೆಯ ಶೋಷಣೆಗಳು ಉಚ್ಛ್ರಾಯ ಮಟ್ಟತಲುಪಿದ್ದವು. 20 ವರ್ಷಗಳ ಅಭಿವೃದ್ಧಿಯ ಫಲಾನುಭವಿಗಳಿಗೂ – ಇದರಿಂದ ವಂಚಿತರಾದ ಅಪಾರ ಸಂಖ್ಯೆಯ ತಳಸ್ತರದ ಸಮಾಜಗಳಿಗೂ ನಡುವೆ ಅಂತರ ಹೆಚ್ಚಾಗುತ್ತಲೇ ಹೋಗಿತ್ತು. ವಿಶೇಷವಾಗಿ ದಲಿತ-ಬುಡಕಟ್ಟು ಸಮುದಾಯಗಳು ತಮ್ಮ ಸಾಂವಿಧಾನಿಕ ಹಕ್ಕುಗಳ ಬಗ್ಗೆ ಅರಿವು ಮೂಡಿಸಿಕೊಂಡಿದ್ದರಿಂದ, ಸಂವಿಧಾನ ಕೊಡಮಾಡುವ ಹಕ್ಕು, ಸವಲತ್ತು, ಸೌಲಭ್ಯಗಳನ್ನು ಸಮಾನವಾಗಿ ಎಲ್ಲರಿಗೂ ತಲುಪಿಸಬೇಕೆಂಬ ಸಾಮೂಹಿಕ ಪ್ರಜ್ಞೆ ಎಲ್ಲೆಡೆ ಆವರಿಸಿತ್ತು.
ರಾಜಕೀಯ ವೈರುಧ್ಯಗಳ ನಡುವೆ
ಈ ಎಲ್ಲ ಬೆಳವಣಿಗೆಗಳೇ ಈ ದಶಕದ ಜನಾಂದೋಲನಗಳಿಗೆ ಕಾರಣವಾದವು. ದಲಿತ ಚಳುವಳಿ, ಮಹಿಳಾ ಆಂದೋಲನ, ರೈತ ಕಾರ್ಮಿಕರ ಚಳುವಳಿಗಳು, ಶೈಕ್ಷಣಿಕ ವ್ಯವಸ್ಥೆಯ ಕೊರತೆಗಳಿಂದ ಎಚ್ಚೆತ್ತಿದ್ದ ವಿದ್ಯಾರ್ಥಿ ಸಮೂಹ, ಉದ್ಯೋಗಾವಕಾಶಕ್ಕಾಗಿ ಹಂಬಲಿಸುತ್ತಿದ್ದ ಯುವ ಸಮೂಹ, ಹೀಗೆ ಸಮಾಜದ ಎಲ್ಲ ಸ್ತರಗಳಲ್ಲೂ, ಎಲ್ಲ ಮಗ್ಗುಲುಗಳಲ್ಲೂ ಅಸಮಾಧಾನ ತಾಂಡವಾಡತೊಡಗಿತ್ತು. ಕೆಲವೊಮ್ಮೆ ಹೋರಾಟಗಳು ಹಿಂಸಾತ್ಮಕ ಸ್ವರೂಪ ಪಡೆದಿದ್ದನ್ನೂ ಈ ಕಾಲಘಟ್ಟದಲ್ಲಿ ಗುರುತಿಸಬಹುದು. ಭಾರತ ಅನುಸರಿಸುತ್ತಿದ್ದ ಆರ್ಥಿಕ ಅಭಿವೃದ್ಧಿ ಮಾದರಿಯನ್ನು ಸರಿಪಡಿಸುವ, ಜನಸ್ನೇಹಿ ಮಾಡುವ ಮತ್ತು ಬಂಡವಾಳಿಗರ ಶೋಷಣೆಯಿಂದ ತಳಸಮಾಜದ ದುಡಿಯುವ ವರ್ಗಗಳನ್ನು ರಕ್ಷಿಸುವ ನೈತಿಕ ಜವಾಬ್ದಾರಿ ಸರ್ಕಾರಗಳ ಮೇಲಿತ್ತು. ಇದರ ರಾಜಕೀಯ ಪರಿಣಾಮವಾಗಿ ಕಾಂಗ್ರೆಸ್ ತನ್ನ ಏಕಾಧಿಪತ್ಯದ ನೆಲೆಗಳನ್ನು ಕಳೆದುಕೊಳ್ಳಲಾರಂಭಿಸಿ, ಪ್ರಾದೇಶಿಕ ಪಕ್ಷಗಳು, ಎಡಪಕ್ಷಗಳು ಅಧಿಕಾರ ರಾಜಕಾರಣದಲ್ಲಿ ಮೇಲುಗೈ ಸಾಧಿಸಿದ್ದವು.

ಆದ್ದರಿಂದಲೇ ಬ್ಯಾಂಕ್-ವಿಮಾ ರಾಷ್ಟ್ರೀಕರಣವನ್ನೂ ಸೇರಿದಂತೆ, ಜನಸ್ನೇಹಿ ಆರ್ಥಿಕ ನೀತಿಗಳನ್ನು ಜಾರಿಗೊಳಿಸುವುದು ಪ್ರಭುತ್ವಕ್ಕೆ ಅನಿವಾರ್ಯವಾಗಿತ್ತು. ಇದರ ಜೊತೆಗೆ ಸಮಾಜದಲ್ಲಿದ್ದ ಜಾತಿ-ಮತ-ಧರ್ಮಗಳ ಬಿರುಕುಗಳನ್ನು ಸಾಂವಿಧಾನಿಕ ನೆಲೆಯಲ್ಲಿ ನಿವಾರಿಸಿ, ಸಂವಿಧಾನದ ಅಪೇಕ್ಷೆಯಂತೆ ಬಹುತ್ವ, ಬಂಧುತ್ವವನ್ನು ಮರಳಿ ಸ್ಥಾಪಿಸುವ ನೈತಿಕ ಹೊಣೆಯೂ ಸರ್ಕಾರಗಳ ಮೇಲಿತ್ತು. ಈ ದೃಷ್ಟಿಯಿಂದಲೇ ಇಂದಿರಾಗಾಂಧಿ ಸರ್ಕಾರ ತಳಸಮಾಜದ ನೋವು ಸಂಕಷ್ಟಗಳನ್ನು ನಿವಾರಿಸುವ ಮತ್ತು ಜನಾಕ್ರೋಶವನ್ನು ತಣ್ಣಗಾಗಿಸುವ ತಂತ್ರಗಾರಿಕೆಯನ್ನು ಬಳಸಿ ಅನೇಕ ಜನಕಲ್ಯಾಣ ಆರ್ಥಿಕ (Welfare Economic) ಯೋಜನೆಗಳನ್ನು ಜಾರಿಗೊಳಿಸಲಾಗಿತ್ತು. ಇದಕ್ಕೆ ಸಮಾನಾಂತರವಾಗಿ ಉಗ್ರ ಸ್ವರೂಪ ಪಡೆಯುತ್ತಿದ್ದ ಜನಾಂದೋಲನಗಳನ್ನು ನಿಯಂತ್ರಿಸುವ ಸಲುವಾಗಿ ಕಠಿಣ ಕಾನೂನುಗಳಿಗೆ ನಾಂದಿ ಹಾಡಿದ್ದೂ ಇದೇ ಅವಧಿಯಲ್ಲಿ ಎನ್ನುವುದು ಗಮನಾರ್ಹ ಅಂಶ.
ಈ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ತನ್ನ ವಿರೋಧಿಗಳನ್ನು ಹತ್ತಿಕ್ಕುವ, ಸರ್ಕಾರವನ್ನು ಅಸ್ಥಿರಗೊಳಿಸುವ ರಾಜಕೀಯ-ಸಾಮಾಜಿಕ ಶಕ್ತಿಗಳನ್ನು ಮಟ್ಟ ಹಾಕುವ ಒಂದು ಆಡಳಿತಾತ್ಮಕ ವಿಧಾನವಾಗಿ ವ್ಯಕ್ತವಾಗಿದ್ದು 1975ರ ತುರ್ತುಪರಿಸ್ಥಿತಿ. ವ್ಯಕ್ತಿ-ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ಸೇರಿದಂತೆ ಸಂವಿಧಾನದ ಮೂಲ ತಳಹದಿಯನ್ನೇ ಶಿಥಿಲಗೊಳಿಸುವ ನಿಟ್ಟಿನಲ್ಲಿ ಮೂಲಭೂತ ಹಕ್ಕುಗಳನ್ನೂ ಜನರಿಂದ ಕಸಿದುಕೊಳ್ಳಲಾಗಿದ್ದು ತುರ್ತುಪರಿಸ್ಥಿತಿಯ ಕರಾಳ ಸ್ವರೂಪಕ್ಕೆ ಸಾಕ್ಷಿ. ಅಷ್ಟೇ ಅಲ್ಲದೆ ವಿರೋಧಿ ಧ್ವನಿಗಳನ್ನು ಸಂಪೂರ್ಣವಾಗಿ ಹತ್ತಿಕ್ಕುವ ಸಲುವಾಗಿ ವಿರೋಧ ಪಕ್ಷಗಳ ನಾಯಕರನ್ನು ಜೈಲಿಗಟ್ಟಿ, ಮಾಧ್ಯಮ ಸ್ವಾತಂತ್ರ್ಯವನ್ನೂ ನಿರ್ಬಂಧಿಸಿ ಇಡೀ ಭಾರತೀಯ ಸಮಾಜವನ್ನು ಪ್ರಜಾಪ್ರಭುತ್ವದಿಂದ ನಿರಂಕುಶ ಪ್ರಭುತ್ವದತ್ತ ಕೊಂಡೊಯ್ಯುವ ಒಂದು ರಾಜಕೀಯ ಆಯಾಮವನ್ನು ತುರ್ತುಪರಿಸ್ಥಿತಿಯಲ್ಲಿ ಗುರುತಿಸಲೇಬೇಕು. ಆದರೆ ಈ ಕಠಿಣ ಕಾನೂನು ಮತ್ತು ಪ್ರತಿಬಂಧಕ ಕಾಯ್ದೆಗಳ ನಡುವೆಯೂ, ಭಾರತದ ಶೋಷಿತ ತಳಸಮುದಾಯಗಳಿಗೆ, ಅವಕಾಶವಂಚಿತರಿಗೆ ಬದುಕು ಹಸನುಗೊಳಿಸುವ ಅನೇಕ ಜನಪರ ಕಲ್ಯಾಣ ಯೋಜನೆಗಳು ಜಾರಿಯಾಗಿದ್ದನ್ನೂ ಗಮನಿಸಬೇಕಿದೆ.

ಇಂದಿರಾಗಾಂಧಿ ಸರ್ಕಾರ ಜಾರಿಗೊಳಿಸಿದ 20 ಅಂಶಗಳ ಕಾರ್ಯಕ್ರಮದ ಮೂಲ ಅಂಶಗಳೇ ಇಂದಿಗೂ ರೂಪಾಂತರಗೊಂಡು ಎಲ್ಲ ಸರ್ಕಾರಗಳ ಆರ್ಥಿಕ ನೀತಿಗಳಲ್ಲೂ ಒಂದು ಭಾಗವಾಗಿರುವುದನ್ನು ಅಲ್ಲಗಳೆಯಳಾಗುವುದಿಲ್ಲ. ಈ ಉಪಕ್ರಮಗಳು ತಳಸಮಾಜದಲ್ಲಿನ ಅಸಮಾನತೆಗಳನ್ನು ಶಾಶ್ವತವಾಗಿ ಹೋಗಲಾಡಿಸದಿದ್ದರೂ, ದುಡಿಯುವ ವರ್ಗಗಳು, ತಳಸ್ತರದ ಶ್ರಮಜೀವಿಗಳು ತಮ್ಮ ಜೀವನೋಪಾಯದ ಮಾರ್ಗಗಳನ್ನು ಸುಲಭವಾಗಿ ಪಡೆಯಬಹುದಾದ ಸನ್ನಿವೇಶವನ್ನು ಸೃಷ್ಟಿಸಲಾಗಿತ್ತು. ಬಹುಶಃ ಇಂದಿರಾ ಯುಗದ ಬ್ಯಾಂಕ್ ರಾಷ್ಟ್ರೀಕರಣ, ಸಾರ್ವಜನಿಕ ಉದ್ದಿಮೆಗಳ ಉತ್ತೇಜನ ಮತ್ತು ಆಪ್ತ ಬಂಡವಾಳಶಾಹಿಯಿಂದ ಮುಕ್ತವಾದ ಜನಸ್ನೇಹಿ ಆರ್ಥಿಕ ಯೋಜನೆಗಳು , ಕಟ್ಟಿದ ಅಡಿಪಾಯವೇ ಡಿಜಿಟಲ್ ಯುಗದ ನವ ಉದಾರವಾದಿ ಆಕ್ರಮಣವನ್ನು ತಡೆದುಕೊಳ್ಳುವ ಧಾರಣಾ ಶಕ್ತಿಯನ್ನು ನೀಡಿರುವುದನ್ನು ಒಪ್ಪದೆ ವಿಧಿಯಿಲ್ಲ.
ವರ್ತಮಾನದ ಆಶಯಗಳ ನಡುವೆ
ಆದರೆ ವರ್ತಮಾನದ ಸಾಮಾಜಿಕ-ರಾಜಕೀಯ ಸಂಕಥನದಲ್ಲಿ ಬೌದ್ಧಿಕ ವಲಯದ ಒಂದು ವರ್ಗವು ತಳಸಮಾಜದ ದೃಷ್ಟಿಯಿಂದ ತುರ್ತುಪರಿಸ್ಥಿತಿಯಲ್ಲಿ ಹೇರಲಾದ ನಿರ್ಬಂಧಗಳು, ಕಡಿವಾಣಗಳು ಸ್ವೀಕಾರಾರ್ಹ ಎಂದು ವಾದಿಸುತ್ತಿದೆ. ಈ ಎರಡು ವರ್ಷಗಳಲ್ಲಿ ಇಂದಿರಾ ನಿರಂಕುಶಾಧಿಕಾರದಲ್ಲಿ ಸಂಪನ್ಮೂಲಗಳ ಮತ್ತು ಉತ್ಪಾದನೆಯ ವಿತರಣೆಯು ತಳಸಮಾಜವನ್ನೂ ಸುಲಭವಾಗಿ ತಲುಪಲು ಸಾಧ್ಯವಾಗಿದ್ದು, ಮೂಲತಃ ಸರ್ಕಾರವು ಅಧಿಕಾರಶಾಹಿಯ ಮೇಲೆ ನಿಯಂತ್ರಣ ಸಾಧಿಸಿದ ಕಾರಣದಿಂದ. ಆಡಳಿತ ಶಿಸ್ತು, ಸಮಯಪಾಲನೆ, ಸರಕು-ಸೇವೆಗಳ ಸಕಾಲಿಕ ಸಮಾನ ವಿತರಣೆ ಮತ್ತು ಶೋಷಿತ ಸಮುದಾಯಗಳನ್ನು ತಲುಪಲೇಬೇಕಾದ ಸಾಂವಿಧಾನಿಕ ಸವಲತ್ತುಗಳನ್ನು ಈ ಜನರಿಗೆ ತಲುಪಿಸಿದ್ದು ಈ ಅವಧಿಯಲ್ಲಿ ಗುರುತಿಸಬೇಕಾದ ಸಂಗತಿ. ಆದರೆ ಇದು ಸಾಮಾಜಿಕ ಪಿರಮಿಡ್ಡಿನ ತಳಸ್ತರದ ಜನರಲ್ಲಿದ್ದ ಬಡತನವನ್ನು, ನಿರ್ಗತಿಕತೆಯನ್ನು, ಭೂ ಹೀನ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಸರಿಪಡಿಸಲಿಲ್ಲ. ಎನ್ನುವುದೂ ಗಮನಾರ್ಹ ಸಂಗತಿ.

ಆದಾಗ್ಯೂ ತುರ್ತುಪರಿಸ್ಥಿತಿಯಲ್ಲಿ ವಿಶಾಲ ಸಮಾಜವು, ವಿಶೇಷವಾಗಿ ಸಂವಿಧಾನದ ಫಲಾನುಭವಿ ಮೇಲ್ವರ್ಗ ಮತ್ತು ಹಿತವಲಯದ ಸಮಾಜವು ಕಳೆದುಕೊಂಡ ಹಕ್ಕು- ಸ್ವಾತಂತ್ರ್ಯವನ್ನು, ನಿರ್ಮಾಣವಾಗಿದ್ದ ಸರ್ವಾಧಿಕಾರಿ ಆಡಳಿತ ಧೋರಣೆಯನ್ನು, ವರ್ತಮಾನದಲ್ಲಿ ನಿಂತು ಸಮರ್ಥಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಗೆ ವಸ್ತುನಿಷ್ಠ ಉತ್ತರ ಶೋಧಿಸಬೇಕಿದೆ. ಸಮಾಜದ ಏಳಿಗೆಗಾಗಿ, ಸರ್ವತೋಮುಖ ಅಭಿವೃದ್ಧಿ ಅಥವಾ ಸಬಲೀಕರಣಕ್ಕಾಗಿ, ಪ್ರಜಾಪ್ರಭುತ್ವವನ್ನೇ ಬಲಿಕೊಟ್ಟು ನಿರಂಕುಶಾಧಿಕಾರವನ್ನು ಸ್ವಾಗತಿಸುವುದು ತಾತ್ವಿಕವಾಗಿ ಎಷ್ಟು ಸರಿ ? ಇದಕ್ಕೆ ಬ್ರಿಟೀಷ್ ವಸಾಹತು ಆಳ್ವಿಕೆಯನ್ನೇ ನಿದರ್ಶನವಾಗಿ ನೋಡಿದರೆ, ಭಾರತದ ತಳಸಮಾಜದ ಶಿಕ್ಷಣ, ಆರೋಗ್ಯ ಮತ್ತು ಜೀವನ ಕೌಶಲಗಳ ಅಭಿವೃದ್ಧಿಗೆ ಪೂರಕವಾದ ಆಡಳಿತ ನೀತಿಗಳನ್ನು ಜಾರಿಗೊಳಿಸಿದ ವಸಾಹತು ಆಳ್ವಿಕೆಯ 1900-47ರ ಅವಧಿಯಲ್ಲೇ, ದೇಶದ ಜಿಡಿಪಿ ( ಒಟ್ಟು ದೇಶೀಯ ಉತ್ಪನ್ನ) 0.07ರಷ್ಟಿತ್ತು. ಅಂದರೆ ದೇಶದ ಉತ್ಪಾದನೆ, ಸಂಪನ್ಮೂಲ ಹಾಗೂ ಸಂಪತ್ತು ಲೂಟಿಯಾಗಿತ್ತು. ಇದು ಸಾಧ್ಯವಾಗಿದ್ದು ಬ್ರಿಟೀಷ್ ಸಾಮ್ರಾಜ್ಯದ ನಿರಂಕುಶಾಧಿಕಾರದಿಂದ.
ಹಾಗಾಗಿ ಇಂದಿಗೂ ತಮ್ಮ ಜೀವನ-ಜೀವನೋಪಾಯದ ಮಾರ್ಗಗಳಿಗಾಗಿ, ಶಿಕ್ಷಣ-ಆರೋಗ್ಯ-ನಾಗರಿಕ ಸೌಲಭ್ಯಗಳಿಗಾಗಿ ಸರ್‌ಕಾರವನ್ನೇ ಅವಲಂಬಿಸುವ ಅಪಾರ ಜನಸ್ತೋಮದ ದೃಷ್ಟಿಯಿಂದ ಸರ್ಕಾರಗಳ ಸರ್ವಾಧಿಕಾರಿ ಕಾನೂನುಗಳನ್ನಾಗಲೀ, ವಿಶಾಲ ಸಮಾಜದ ವ್ಯಕ್ತಿ-ಅಭಿವ್ಯಕ್ತಿ-ಸಂವಹನ ಸ್ವಾತಂತ್ರ್ಯವನ್ನು ನಿರ್ಬಂಧಿಸುವ, ಪ್ರತಿಬಂಧಿಸುವ ಅಥವಾ ಹತ್ತಿಕ್ಕುವ ಯಾವುದೇ ಕಠಿಣ ಕಾಯ್ದೆ ಕಾನೂನುಗಳನ್ನು ಸ್ವಾಗತಿಸುವುದು ತಪ್ಪಾಗುತ್ತದೆ. ಏಕೆಂದರೆ ಈ ಕಠಿಣ ಕಾಯ್ದೆಗಳೇ ಆಡಳಿತ ವ್ಯವಸ್ಥೆಯನ್ನು ಬಲಪಡಿಸಿ ತಳಸಮಾಜದ ಸುಸ್ಥಿರ ಬದುಕಿನ ಅಡಿಪಾಯವನ್ನು ಶಿಥಿಲಗೊಳಿಸುತ್ತಿರುತ್ತವೆ. ತಾತ್ಕಾಲಿಕವಾಗಿ ನಿತ್ಯ ಬದುಕಿನ ಸಂಕಟಗಳನ್ನು ನಿವಾರಿಸುವ ಜನಕಲ್ಯಾಣ ಯೋಜನೆಗಳು (Welfare Schemes) ಜನರ ಬಡತನ ಮತ್ತು ನಿರ್ಗತಿಕತೆಯನ್ನು ಯಥಾಸ್ಥಿತಿಯಲ್ಲಿರಿಸಿ, ಇದರಿಂದ ಸೃಷ್ಟಿಯಾಗಬಹುದಾದ ಕ್ಷೋಭೆ, ಆಕ್ರೋಶ ಅಥವಾ ಜನಾಂದೋಲನಗಳನ್ನು ತಡೆಗಟ್ಟುವ ಆಡಳಿತ ವಿಧಾನವಾಗಿ ಮಾತ್ರ ಕಾಣಲು ಸಾಧ್ಯ.
ಹೊಸ ರಾಜಕೀಯ ಮಾದರಿ
ಆದರೆ ದುರದೃಷ್ಟವಶಾತ್, ತುರ್ತುಪರಿಸ್ಥಿತಿಯ ಆಳ್ವಿಕೆಯ ಮಾದರಿಯು, ಭವಿಷ್ಯ ಭಾರತಕ್ಕೆ ಚಿನ್ನದ ತಟ್ಟೆಯಲ್ಲಿಟ್ಟು ರವಾನಿಸಿದ ಒಂದು ಆಡಳಿತ ನಿರ್ವಹಣಾ ಮಾದರಿ, ಡಿಜಿಟಲ್ ಪರಿಭಾಷೆಯ Template, ತದನಂತರದ ರಾಜಕೀಯವನ್ನು ಸಂಪೂರ್ಣವಾಗಿ ಆವರಿಸಿಕೊಂಡಿರುವುದನ್ನು ಗಮನಿಸಬೇಕಿದೆ. ಸಂವಿಧಾನದಲ್ಲಿ ಸಮಾಜವಾದ ಮತ್ತು ಜಾತ್ಯತೀತತೆಯನ್ನು ಗ್ರಾಂಥಿಕವಾಗಿ ಅಳವಡಿಸಿದ ಹೊರತಾಗಿಯೂ, 1980ರ ನವ ಉದಾರವಾದಿ ಆರ್ಥಿಕತೆ ಮತ್ತು 1990ರ ಜಾಗತೀಕರಣದ ಪ್ರವೇಶದಿಂದ, ಈ ಎರಡೂ ಮೌಲ್ಯಗಳು ಅಧಿಕಾರ ರಾಜಕಾರಣದ ಅಸ್ತಿತ್ವವನ್ನು ಉಳಿಸುವ ಅಸ್ತ್ರಗಳಾಗಿ ಪರಿಣಮಿಸಿರುವುದನ್ನು ಗಂಭೀರವಾಗಿ ಮರುವಿಮರ್ಶೆಗೊಳಪಡಿಸಬೇಕಿದೆ. 1980ರ ದಶಕದಿಂದಾಚೆಗೆ ಹುಟ್ಟಿಕೊಂಡ ಪ್ರಾದೇಶಿಕ ರಾಜಕೀಯ ಪಕ್ಷಗಳಾಗಲೀ, ಬಿಜೆಪಿ-ಕಾಂಗ್ರೆಸ್‌ನಂತಹ ಪರಿಣತ ಪಕ್ಷಗಳಾಗಲೀ ಇದೇ ಮಾದರಿಯನ್ನೇ ಅನುಸರಿಸುತ್ತಿರುವುದನ್ನು 21ನೆ ಶತಮಾನದ ರಾಜಕಾರಣದಲ್ಲಿ ಸ್ಪಷ್ಟವಾಗಿ ಗುರುತಿಸಬಹುದು.
ಇಂದಿಗೂ ಜನಾಂದೋಲನಗಳನ್ನು ಅನುಮಾನದಿಂದ ನೋಡುವ ಅಥವಾ ಕ್ರೂರವಾಗಿ ಹತ್ತಿಕ್ಕುವ ಪ್ರಯತ್ನಗಳು ನಮ್ಮ ನಡುವೆ ಸರ್ಕಾರಗಳಿಂದ ನಡೆಯುತ್ತಲೇ ಇವೆ. ಇದಕ್ಕೆ ಪೂರಕವಾಗಿ ವಸಾಹತು ಕಾಲದ ಕಠಿಣ ಕಾನೂನುಗಳ ರೂಪಾಂತರಿ ಮಾದರಿಗಳು ಜಾರಿಯಲ್ಲಿವೆ. ಪ್ರತಿರೋಧದ ದನಿಗಳನ್ನು ಹತ್ತಿಕ್ಕುವ ವಿಧಾನಗಳು ಬದಲಾಗಿವೆಯೆ ಹೊರತು, ಮೂಲ ಮಾದರಿಯಲ್ಲಿ ಹೆಚ್ಚಿನ ಬದಲಾವಣೆ ಕಾಣಲಾಗುವುದಿಲ್ಲ. 1980ರ ದಶಕದಿಂದೀಚೆಗೆ ಯಾವುದೇ ಜನಪರ ಹೋರಾಟಗಳೂ ತಾರ್ಕಿಕ ಅಂತ್ಯ ಕಾಣದ ರೀತಿಯಲ್ಲಿ ಸರ್ಕಾರಗಳು, ಚಳುವಳಿಗಳನ್ನು, ಹೋರಾಟಗಳನ್ನು ವಿಘಟಿಸುವ , ರಾಜಕೀಯ ಓಲೈಕೆಯ ಮೂಲಕ ನಿಷ್ಫಲಗೊಳಿಸುವ, ಅಧಿಕಾರ ರಾಜಕಾರಣದ ಭಾಗಿದಾರಿಕೆಯ ಮೂಲಕ ನಿಷ್ಕ್ರಿಯಗೊಳಿಸುವ ವಿಧಾನಗಳನ್ನು ಅನುಸರಿಸುತ್ತಲೇ ಬಂದಿವೆ. ಕರಾಳ ಶಾಸನಗಳ ವ್ಯಾಪ್ತಿಯೂ ವಿಸ್ತಾರವಾಗಿದ್ದು, ಸರ್ಕಾರ ಅಥವಾ ಆಡಳಿತ ವಿರೋಧಿ ದನಿಯನ್ನು ದೇಶದ್ರೋಹಕ್ಕೆ ಸಮೀಕರಿಸುವ ಒಂದು ವಿದ್ಯಮಾನಕ್ಕೂ ಡಿಜಿಟಲ್ ಯುಗ ಸಾಕ್ಷಿಯಾಗಿದೆ. ಈ ರಾಜಕೀಯ ತಂತ್ರಗಾರಿಕೆಗೆ ಜನಪರ ಹೋರಾಟಗಳೂ ಸಹ, ತಮ್ಮ ಹಕ್ಕೊತ್ತಾಯಗಳನ್ನು ರಾಜಿ ಮಾಡಿಕೊಳ್ಳುವ ವಾತಾವರಣವನ್ನೂ ಗುರುತಿಸಬಹುದು.

ಬಹುತೇಕ ಹೋರಾಟಗಳು ಅಸ್ತಿತ್ವವಾದಿ ನೆಲೆಯಲ್ಲಿ ಉಚ್ಛಸ್ಥಾಯಿಯನ್ನು ತಲುಪಿ ಅಷ್ಟೇ ವೇಗವಾಗಿ ಮರೆಯಾಗುವ ಪ್ರಕ್ರಿಯೆಯನ್ನು ಈ ದೃಷ್ಟಿಯಿಂದಲೇ ಗುರುತಿಸಬೇಕಿದೆ. ರೈತ ಹೋರಾಟಗಳು ಇರುವ ಭೂಮಿಯ ಉಳಿಯುವಿಕೆಗಾಗಿ, ಕಾರ್ಮಿಕ ಹೋರಾಟಗಳು ಇರುವ ಉದ್ಯೋಗದ-ಸವಲತ್ತುಗಳ ರಕ್ಷಣೆ-ಭದ್ರತೆಗಾಗಿ ರೂಪುಗೊಳ್ಳುವುದರಿಂದ, ಸಾಂವಿಧಾನಿಕ ಚೌಕಟ್ಟಿನಲ್ಲಿ ಭೂಮಿಯ ಹಕ್ಕು, ಉದ್ಯೋಗದ ಹಕ್ಕು, ವಸತಿಯ ಹಕ್ಕು, ಉಚಿತ-ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣದ ಹಕ್ಕು ಇದಾವುದೂ ಹೋರಾಟಗಳ ಮುಖ್ಯ ಪ್ರಣಾಳಿಕೆಗಳಾಗಿಲ್ಲ. ಕರ್ನಾಟಕವನ್ನು ಸೇರಿದಂತೆ ಎಲ್ಲ ರಾಜ್ಯಗಳಲ್ಲಿ, ಕೇಂದ್ರದಲ್ಲೂ ಸಹ ಅನುಸರಿಸಲಾಗುತ್ತಿರುವ ಗ್ಯಾರಂಟಿ ಯೋಜನೆಗಳು, ಸಮಾಜದ ಭೌತಿಕ ಅಸ್ತಿತ್ವ-ಭವಿಷ್ಯದ ಪ್ರಶ್ನೆಯನ್ನು ಬದಿಗೊತ್ತಿ, ಆ ಕ್ಷಣದ ಅಗತ್ಯತೆಗಳನ್ನು ಈಡೇರಿಸುವ ಒತ್ತಾಸೆಗಳೊಡನೆ ರೂಪುಗೊಳ್ಳುವಂತೆ ಮಾಡುತ್ತಿವೆ. ಇದನ್ನೇ ʼಸಮಾಜವಾದʼ ಎಂದು ಬಿಂಬಿಸುವ ಚಾರಿತ್ರಿಕ ಚೋದ್ಯವನ್ನು ಇಲ್ಲಿ ಪುನರ್ ವಿಮರ್ಶೆಗೊಳಪಡಿಸಬೇಕಿದೆ.
ನವ ಉದಾರವಾದದ ಕರಿ ನೆರಳಿನಲ್ಲಿ
ಈ ವಾತಾವರಣದಲ್ಲೇ ನವ ಉದಾರವಾದ-ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕತೆ ಮತ್ತು ಅದಕ್ಕೆ ಪೂರಕವಾದ ಬಹುಸಂಖ್ಯಾವಾದ-ಮತೀಯವಾದವು ತಳಸ್ತರದ ಸಾಮಾಜಿಕ ಅಸಮಾನತೆಗಳನ್ನು, ಸಾಂಸ್ಕೃತಿಕ ತಾರತಮ್ಯಗಳನ್ನು, ಜಾತೀಯ-ಧಾರ್ಮಿಕ ದೌರ್ಜನ್ಯಗಳನ್ನು ಸಹಿಸಿಕೊಳ್ಳುವ ಒಂದು ಮೇಲ್ಪದರದ ಸಮಾಜವನ್ನೂ ಸೃಷ್ಟಿಸಿದೆ. ಈ ಸಮಾಜವೇ ದೇಶದ ಸಂವಹನ ಮಾಧ್ಯಮಗಳನ್ನು, ಉತ್ಪಾದನೆಯ ಮೂಲಗಳನ್ನು ಮತ್ತು ಸಂಪನ್ಮೂಲ ವಿತರಣೆಯ ಸಾಧನಗಳನ್ನೂ, ಜೊತೆಗೆ ಅಧಿಕಾರ ರಾಜಕಾರಣ ಮತ್ತು ಅಧಿಕಾರಶಾಹಿಯನ್ನೂ, ನಿಯಂತ್ರಿಸುವುದರಿಂದ ತಳಸಮಾಜದ ನೋವು ಸಂಕಟಗಳು ಅವ್ಯಕ್ತವಾಗಿ ಪರ್ಯವಸಾನ ಹೊಂದುತ್ತಿವೆ. ಹೆಚ್ಚುತ್ತಿರುವ ಆರ್ಥಿಕ ಅಸಮಾನತೆ ಮತ್ತು ಜಾತಿ ದೌರ್ಜನ್ಯ-ಮಹಿಳಾ ದೌರ್ಜನ್ಯ-ಧಾರ್ಮಿಕ ಆಧಿಪತ್ಯ , ವಿಶಾಲ ಸಮಾಜದಲ್ಲಿ ಸಹಿಸಬಹುದಾದ ವಿದ್ಯಮಾನಗಳಾಗಿ ಪರಿಣಮಿಸುತ್ತಿವೆ. ಆದರೆ ಈ ವಾತಾವರಣ ಮತ್ತು ಸ್ವೀಕೃತ ಮೌಲ್ಯಗಳು ನವ ಭಾರತದ ಮುಂದಿನ ತಲೆಮಾರಿನ ಬದುಕನ್ನು ಆರೋಗ್ಯಕರ ಸಮಾಜವಾಗಿ ಸ್ಥಾಪಿಸಲು ಪೂರಕವಾಗಲು ಸಾಧ್ಯವೇ ?
ತನ್ನ ಮೂಲಾರ್ಥದಲ್ಲಿ ನೋಡಿದಾಗ ಪ್ರಜಾಪ್ರಭುತ್ವ ಮತ್ತು ಭಾರತದ ಸಾಂವಿಧಾನಿಕ ಕನಸುಗಳು, ಈ ಅಸಮಾನತೆಯ ಜಗತ್ತಿನಲ್ಲಿ ನೆಲೆಯೂರುವುದು ಅತ್ಯವಶ್ಯವಲ್ಲವೇ ? ಭವಿಷ್ಯ ಭಾರತದ ನಿರ್ಮಾತೃಗಳಾಗಿ ರೂಪುಗೊಳ್ಳುವ ಮಿಲೆನಿಯಂ ಸಮಾಜ, ಅಂದರೆ 35 ವರ್ಷಗಳೊಳಗಿನ ಯುವ ಸಮೂಹ, ಈ ಮೌಲ್ಯಗಳನ್ನು ಉಳಿಸಿಕೊಂಡು, ಭಾರತವನ್ನು ನೈಜ ಪ್ರಜಾಪ್ರಭುತ್ವದ ನೆಲೆಯಲ್ಲಿ, ಸಮಾನತೆ, ಸೌಹಾರ್ದತೆ, ಬಂಧುತ್ವ, ಸಮನ್ವಯತೆ ಮತ್ತು ಎಲ್ಲರನ್ನು ಒಳಗೊಳ್ಳುವ ಉಜ್ವಲ ಸಮಾಜವನ್ನು ಕಟ್ಟಲು ನೆರವಾಗುವುದು ವರ್ತಮಾನದ ರಾಜಕೀಯ-ಸಾಮಾಜಿಕ-ಸಾಂಸ್ಕೃತಿಕ ಹೋರಾಟಗಳ ಉದ್ದೇಶವಾಗಬೇಕಿದೆ. ಕಾಲಕಾಲಕ್ಕೆ ನಡೆಯುವ ಚುನಾವಣೆಗಳು ಪ್ರಜಾಪ್ರಭುತ್ವವನ್ನು ರಕ್ಷಿಸಲು ನೆರವಾಗುವ ಸಾಧನವಷ್ಟೇ. ಇಲ್ಲಿ ಚುನಾಯಿತರಾಗುವ ಜನಪ್ರತಿನಿಧಿಗಳ ಹಾಗೂ ರಾಜಕೀಯ ಪಕ್ಷಗಳ ಆಡಳಿತ ನೀತಿಗಳು ನೈಜ ಪ್ರಜಾಪ್ರಭುತ್ವವನ್ನು ಸ್ಥಾಪಿಸಲು ಮುಂದಾಗಬೇಕಲ್ಲವೇ ?

ಮುಂದಿನ ಹಾದಿ ?????
ರಾಜಕೀಯ ಪಕ್ಷಗಳು ತಮ್ಮ ಅಸ್ತಿತ್ವ ಮತ್ತು ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಬಳಸುವ ಜಾತಿ-ಮತ-ಭಾಷೆ-ಪ್ರಾದೇಶಿಕ ಅಸ್ಮಿತೆಗಳೇ ಪ್ರಜಾಪ್ರಭುತ್ವವನ್ನು ಶಿಥಿಲಗೊಳಿಸುವ ಸಾಧನಗಳು ಎಂಬ ವಾಸ್ತವವನ್ನು ಹೊಸ ತಲೆಮಾರಿಗೆ ಮುಟ್ಟಿಸಬೇಕಿದೆ. ಇದನ್ನು ದಾಟಿ ಒಂದು ಸರ್ವಸಮಾನತೆಯ ಸಮನ್ವಯ ಸಂಸ್ಕೃತಿಯನ್ನು ಸಾಧಿಸುವ ಮೂಲಕ ಭಾರತವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ನಿರ್ಮಿಸಲು, ಮಾನವ ಸಮಾಜವನ್ನು ವಿಶ್ವಮಾನವತೆಯತ್ತ ಕರೆದೊಯ್ಯಲು ಅಗತ್ಯವಾಗಿ ಬೇಕಿರುವುದು ಪ್ರಜಾಪ್ರಭುತ್ವ ಮತ್ತು ಭಾರತದ ಸಂವಿಧಾನ. ಇದನ್ನು ರಕ್ಷಿಸುವುದು ನಮ್ಮ ಆದ್ಯತೆಯಾಗಬೇಕು. ಇದು ವರ್ತಮಾನದ ಭಾರತ ತುರ್ತುಪರಿಸ್ಥಿತಿಯಿಂದ ಕಲಿಯಬೇಕಾದ ಪಾಠ. ಆದರೆ ಕಲಿತಿದ್ದೇವೆಯೇ ? ಕಲಿತಿದ್ದರೆ ಹೋರಾಟಗಳು ವಿಘಟಿತವಾಗುತ್ತಿರಲಿಲ್ಲ , ಜಾತಿ-ಮತದ ಪ್ರಜ್ಞೆ ನಮ್ಮ ಸಾಮಾಜಿಕ ಸೂಕ್ಷ್ಮ ಪ್ರಜ್ಞೆಯನ್ನು ಆಕ್ರಮಿಸುತ್ತಿರಲಿಲ್ಲ. ಮಹಿಳಾ ದೌರ್ಜನ್ಯದ ಬುನಾದಿಯಾಗಿರುವ ಪಿತೃಪ್ರಧಾನತೆ ನಮ್ಮ ನಡುವೆ ಇರುತ್ತಿರಲಿಲ್ಲ.
ಈ ದೃಷ್ಟಿಯಿಂದ 21ನೆ ಶತಮಾನದ ಆದಿ ಭಾಗವನ್ನು ಕಲಿಕೆಯ ಯುಗ, ಅರಿವಿನ ಯುಗ ಎಂದು ಭಾವಿಸಿ, ತಾತ್ವಿಕ ನೆಲೆಗಟ್ಟಿನಲ್ಲಿ ಬುದ್ಧನ ಚಿಂತನೆಗಳು ಮತ್ತು 12ನೆ ಶತಮಾನದಿಂದ 20ನೆ ಶತಮಾನದವರೆಗೆ ವಿಸ್ತರಿಸಿದ ದಾರ್ಶನಿಕರ ಮೂಲ ಆಶಯಗಳನ್ನು ಸಾಕಾರಗೊಳಿಸುವ ಹಾದಿಯಲ್ಲಿ ನವ ಭಾರತ ಸಾಗಬೇಕಿದೆ. ಆಗ ಮಾತ್ರ 2047ರ ವಿಕಸಿತ ಭಾರತ ನಿಜಾರ್ಥದಲ್ಲಿ ವಿಕಸಿತವಾಗಿರುತ್ತದೆ.
-೦-೦-೦-೦-