~ಡಾ. ಜೆ ಎಸ್ ಪಾಟೀಲ.
ಗಮನ ಸೆಳೆಯುವಂತಹ ವರ್ತಮಾನ ಆಗುಹೋಗುಗಳ ಕುರಿತು ಆರೋಗ್ಯಪೂರ್ಣ ಮತ್ತು ಪಕ್ಷಪಾತರಹಿತ ಚರ್ಚೆಗೆ ನಮ್ಮ ಮಾದ್ಯಮಗಳು ನೈಜ ವೇದಿಕೆಯಾಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಪ್ರಮುಖ ಅಂಗವೆನ್ನಿಸಿಕೊಳ್ಳುವ ಮಾದ್ಯಮ ಮೊದಲಿನ ಮೂರು ಅಂಗಗಳ ಕಾರ್ಯವೈಖರಿಯನ್ನು ಪರಾಮರ್ಶಿಸುವುದರ ಜೊತೆಗೆ ಜನಪರ ಹೋರಾಟಗಳಿಗೆ ಕಣ್ಣು ˌ ಕಿವಿˌ ಹಾಗು ಬಾಯಿಯಾಗಬೇಕು. ದುರಂತದ ಸಂಗತಿ ಏನೆಂದರೆ ಇಂದು ಮಾಧ್ಯಮಗಳು ವರ್ತಿಸುತ್ತಿರುವುದು ಇದಕ್ಕೆ ತದ್ವಿರುದ್ಧವಾಗಿ. ನಮ್ಮ ಮಾದ್ಯಮಗಳು ಪೂರ್ವಾಗ್ರಹ ಪೀಡಿತವಾಗಿದ್ದನ್ನು ನಾವು ಅನೇಕ ವೇಳೆ ಸ್ಪಷ್ಟವಾಗಿ ಗಮನಿಸಬಹುದಾಗಿದೆ. ನಮ್ಮ ದೃಶ್ಯ ವಾಹಿನಿಗಳ ನಿರೂಪಕರಂತು ವಿಷಯಗಳನ್ನು ಅಪೂರ್ಣವಾಗಿ ತಿಳಿದುಕೊಂಡು ಕೂಗುಮಾರಿಗಳ ಹಾಗೆ ಗಂಟಲು ಹರಿಯುವಂತೆ ಕಿರುಚಾಡುವ ವರ್ತನೆಗಳು ದೃಶ್ಯ ವಾಹಿನಿಗಳ ನಿರೂಪರಕ ಅತಿಕೇರವನ್ನು ಸಾಂಕೇತಿಸುತ್ತದೆ. ಇಂದಿನ ಸುದ್ದಿ ವಾಹಿನಿಗಳು ಮಾಧ್ಯಮ ಕ್ಷೇತ್ರದ ಕಪ್ಪು ಚುಕ್ಕೆಗಳಂತೆ ಬದಲಾಗಿವೆ.
ವಾಹಿನಿಗಳ ನಿರೂಪಕರು ತಾವೇ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳೆಂಬಂತೆ ತಮ್ಮ ಅಸಂಬಧ್ಧ ತೀರ್ಪುಗಳನ್ನು ವಾಹಿನಿಯ ಚರ್ಚೆಗಳಲ್ಲಿ ಭಾಗವಹಿಸುವ ವಿಷಯ ತಜ್ಞರ ಮೇಲೆ ಹೇರುವ ಮುಖಾಂತರ ಜನತೆಗೆ ತಪ್ಪು ಸಂದೇಶಗಳನ್ನು ಮುಟ್ಟಿಸುತ್ತಾರೆ. ಈ ಸಂಗತಿಯನ್ನು ಕಳೆದ ಆರೇಳು ವರ್ಷಗಳಿಂದ ಗಮನಿಸುತ್ತಿದ್ದೇವೆ. ರಾಜ್ಯದಲ್ಲಿ ನಡೆಯುತ್ತಿದ್ದ ಲಿಂಗಾಯತ ಸ್ವತಂತ್ರ ಧರ್ಮ ಬೇಡಿಕೆ ಹೋರಾಟದ ಸಂದರ್ಭದಲ್ಲಿ ಇದನ್ನು ನಾವು ಹೇರಳವಾಗಿ ಗಮನಿಸಿದ್ದೇವೆ. ಕನ್ನಡದ ಮಾದ್ಯಮಗಳ ಅದರಲ್ಲೂ ವಿದ್ಯುನ್ಮಾನ ದೃಶ್ಯ ಮಾದ್ಯಮಗಳಲ್ಲಿ ಕಾರ್ಯ ನಿರ್ವಹಿಸುವ ನಿರೂಪಕರು ಹಾಗು ಸಂಪಾದಕರಿಗೆ ವಸ್ತುನಿಷ್ಠವಾಗಿˌ ವೈಜ್ಞಾನಿಕವಾಗಿˌ ಮತ್ತು ಪಕ್ಷಪಾತರಹಿತವಾಗಿ ಪ್ರಚಲಿತ ಸಂಗತಿಗಳ ಮೇಲಿನ ಚರ್ಚೆಗಳಲ್ಲಿ ಮಂಡಿಸಲು ಅಗತ್ಯವಿರುವ ವಿಷಯಗಳ ಕುರಿತ ಅಧ್ಯಯನಶೀಲತೆಯ ಕೊರತೆ ಎದ್ದುಕಾಣುತ್ತದೆ. ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸುವ ಜಾಣ್ಮೆ ˌ ಹಾಗೂ ಚರ್ಚೆಯಲ್ಲಿ ಭಾಗವಹಿಸುವ ವಿಷಯ ತಜ್ಞರ ಆಯ್ಕೆಯ ಮಾನದಂಡಗಳುˌ ಮುಂತಾದ ಸಂಗತಿಗಳಿಗೆ ಸಂಬಂಧಿಸಿದಂತೆ ಇಂದಿನ ಪತ್ರಕರ್ತರಿಗೆ ಸೂಕ್ತ ಅನುಭವ ಹಾಗೂ ವೃತ್ತಿ ನೈಪುಣ್ಯತೆಯ ಕೊರತೆ ಸ್ಪಷ್ಟವಾಗಿ ಎದ್ದುಕಾಣುತ್ತದೆ.
ನಮ್ಮ ಕನ್ನಡದ ದೃಶ್ಯ ವಾಹಿನಿಗಳ ಬಹುತೇಕ ನಿರೂಪಕರು ಚರ್ಚೆಯ ದಿಕ್ಕನ್ನು ತಮಗೆ ಬೇಕಾದ ದಿಕ್ಕಿಲ್ಲಿ ತಿರುಗಿಸಲು ಪಡುವ ಪರದಾಟˌ ಮತ್ತು ಅದು ಅವರು ಅಂದುಕೊಂಡಂತೆ ಆಗದಿದ್ದಾಗ ಪ್ರಸ್ತುತ ವಿಷಯಗಳನ್ನು ಬೇರೆಕಡೆಗೆ ತಿರುಗಿಸುವುದು ಇಲ್ಲವೆ ವಾಣಿಜ್ಯ ಜಾಹಿರಾತು ಹಾಕಿ ಆ ಪ್ರಸಂಗದಿಂದ ತಪ್ಪಿಸಿಕೊಳ್ಳುವುದನ್ನು ನಾವು ಗಮನಿಸುತ್ತಿದ್ದೇವೆ. ಇದು ನಮ್ಮ ದೃಶ್ಯ ಮಾದ್ಯಮಗಳ ನಿರೂಪಕರ ಬೌದ್ದಿಕ ದಿವಾಳಿತನವನ್ನು ಬೆತ್ತಲೆಗೊಳಿಸಿ ನಗೆ ತರಿಸುವ ಸಂಗತಿಯಾಗಿದೆ. ಇಂದು ಪತ್ರಿಕೋದ್ಯಮದಲ್ಲಿ ರಾಜಕೀಯˌ ಪೂರ್ವಾಗ್ರಹˌ ಜಾತೀಯತೆˌ ಭ್ರಷ್ಟಾಚಾರಗಳು ಒಳನುಸುಳಿ ಸ್ಥೂಲವಾಗಿ ಆವರಿಸಿದರ ಪರಿಣಾಮದಿಂದ ಒಟ್ಟಾರೆ ಮಾದ್ಯಮ ಲೋಕವು ತನ್ನ ಮೂಲ ಆಶಯಗಳಿಂದ ವಿಮುಖವಾಗಿˌ ಜನತೆಯ ಅವಗಣನೆಗೆ ಪಾತ್ರವಾಗುವ ಸ್ಥಿತಿಗೆ ಬಂದು ತಲುಪಿದೆ. ಕನ್ನಡದ ಬಹುತೇಕ ಮಾಧ್ಯಮ ಮುಖ್ಯಸ್ಥರು ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದು ಅವರು ಸೃಷ್ಟಿಸುತ್ತಿರುವ ಸುದ್ಧಿ ಅರಾಜಕತೆ ಮತ್ತು ಅಕ್ಷರ ಹಾದರ ಇಂದು ಮಾಧ್ಯಮ ಕ್ಷೇತ್ರವನ್ನು ಕಳಂಕಿತಗೊಳಿಸಿದೆ.
ಸುದ್ದಿ ಮನೆಗಳಲ್ಲಿ ಈ ಸಂಪಾದಕರುಗಳು ಮಾಡುತ್ತಿರುವ ಜಾತಿಯಾಧಾರಿತ ವೇತನ ಹಾಗು ಇತರ ಬಗೆಯ ತಾರತಮ್ಯಗಳಂತೂ ಹೇಸಿಗೆ ಹುಟ್ಟಿಸುತ್ತದೆ. ಪ್ರಜಾಪ್ರಭುತ್ವದ ಕಾವಲುಗಾರರಾಗಿರಬೇಕಾದ ಪತ್ರಕರ್ತರೇ ಅನೇಕ ಧಾರ್ಮಿಕˌ ರಾಜಕೀಯˌ ಆರ್ಥಿಕ ಒಳಸುಳಿಗಳಿಗೆ ಸಿಲುಕಿರುವುದು ಪರಿಸ್ಥಿತಿಯ ವ್ಯಂಗ್ಯವೆಂದೇ ಹೇಳಬೇಕಾಗಿದೆ. ಈ ಲೇಖನದಲ್ಲಿ ನಾನು ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಯ ಹೋರಾಟದ ಸಂದರ್ಭದಲ್ಲಿ ನಮ್ಮ ಮಾಧ್ಯಮಗಳು ನಡೆದುಕೊಂಡ ಬಗೆಯನ್ನು ವಿಮರ್ಶಿಸುತ್ತಿದ್ದೇನೆ. ಲಿಂಗಾಯತ ಧರ್ಮವು ಒಂಬೈನೂರು ವರ್ಷಗಳ ಹಿಂದೆ ಬಸವಾದಿ ಶರಣರಿಂದ ಪ್ರತಿಪಾದಿಸಲ್ಪಟ್ಟಿದೆ. ಅದು ಆನಂತರˌ ಮೈಸೂರು ಅರಸರ ಕಾಲದಿಂದ ಇತ್ತೀಚಿನ ಸ್ವಾತಂತ್ರಪೂರ್ವ ಬ್ರಿಟೀಷರ ಕಾಲದವರೆಗೆ ಒಂದು ಪರಿಪೂರ್ಣ ಸ್ವತಂತ್ರ ಧರ್ಮವೆಂದು ಸರಕಾರಿ ದಾಖಲೆ ಮತ್ತು ಜನಗಣತಿ ದಾಖಲೆಗಳಲ್ಲಿ ನಮೂದಿಸಲ್ಪಟ್ಟಿದೆ. ಲಿಂಗಾಯತ ಧರ್ಮವು ಯಾವತ್ತೂ ಹಿಂದೂ ಎಂದು ತಪ್ಪಾಗಿ ಕರೆಯಲ್ಪಡುವ ವೈದಿಕ ಧರ್ಮದ ಭಾಗವಾಗಿರಲಿಲ್ಲವೆಂಬುದು ಕೂಡ ಅಷ್ಟೆ ಸತ್ಯ.
ವೀರಶೈವವೆನ್ನುವುದು ಹಿಂದೂ ಸಪ್ತಶೈವ ಪಂಥಗಳಲ್ಲಿ ಒಂದಾಗಿದ್ದು ˌ ಅದು ಹದಿನಾರನೇ ಶತಮಾನದಿಂದೀಚೆಗೆ ಲಿಂಗಾಯತದಲ್ಲಿ ಸಂಕರಗೊಂಡಿರುವುದು ಕೂಡ ಅಷ್ಟೆ ಸತ್ಯ ಸಂಗತಿ. ಈ ಅಸಲಿ ಸಂಗತಿಗಳನ್ನು ಮರೆಮಾಚಿ ನಮ್ಮ ಮಾಧ್ಯಮಗಳು ನಮ್ಮೊಳಗಿನ ಒಡಕು ಧ್ವನಿಯಾಗಿರುವ ಬೆರಳೆಣಿಕೆಯ ಸಾಂಪ್ರದಾಯವಾದಿ ವೀರಶೈವರನ್ನು ಪ್ರಚೋದಿಸಿ ಲಿಂಗಾಯತ ಧರ್ಮವನ್ನು ಬ್ರಾಹ್ಮಣೀಕರಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದುದ್ದನ್ನು ನಾವು ಗಮನಿಸಿದ್ದೇವೆ. ಲಿಂಗಾಯತ ಧರ್ಮವು ತಾಂತ್ರಿಕವಾಗಿ ಸರಕಾರದ ಮಾನ್ಯತೆಯೊಂದನ್ನು ಹೊರತುಪಡಿಸಿ ಬೇರೆ ಎಲ್ಲದರಲ್ಲೂ ಹಿಂದೂ ಎಂದು ತಪ್ಪಾಗಿ ಕರೆಯಲ್ಪಡುವ ವೈದಿಕ ಧರ್ಮದ ಆಚರಣೆಗಳಿಗಿಂತ ತಾತ್ವಿಕವಾಗಿ ಸಂಪೂರ್ಣವಾಗಿ ಭಿನ್ನ ಎನ್ನುವ ವಿಷಯ ಗೊತ್ತಿದ್ದೂ ನಮ್ಮ ಮಾದ್ಯಮಗಳು ಲಿಂಗಾಯತರೊಳಗಿನ ಮತ್ತು ಅವುಗಳಿಗೆ ಉತ್ತೇಜನ ಕೊಡುತ್ತಿರುವ ಲಿಂಗಾಯತದ ಹೊರಗಿನ ಅಪಸ್ವರಗಳಿಗೆ ಧ್ವನಿಯಾಗಿ ಕೆಲಸ ಮಾಡುವ ಮೂಲಕ ಎರಡು ಹುನ್ನಾರಗಳನ್ನು ಸಾದಿಸಲು ಹವಣಿಸುತ್ತಿವೆ.
ವೈದಿಕವ್ಯಾಧಿ ಮಾಧ್ಯಮಗಳ ಈ ಹುನ್ನಾರಗಳನ್ನು ಈ ಕೆಳಗಿನಂತೆ ವಿವರಿಸಬಹುದಾಗಿದೆ. ಒಂದು; ಇಂದಿನ ಕನ್ನಡದ ಎಲ್ಲಾ ಬಗೆಯ ಮಾದ್ಯಮ ಕ್ಷೇತ್ರವನ್ನು ಆವರಿಸಿರುವ ಜನರು ಬಹುತೇಕರು ವೈದಿಕ ಹಿನ್ನೆಲೆಯುಳ್ಳವರಾಗಿದ್ದು ಅವರ ಅಂತರಾತ್ಮ ಬಯಸುವ ಹಾಗು ಅವರ ಹಿತಾಸಕ್ತಿಯ ರಾಜಕೀಯ ಮತ್ತು ಧಾರ್ಮಿಕ ವ್ಯವಸ್ಥೆಗೆ ಬಹುದೊಡ್ಡ ಅಘಾತ ನೀಡಬಲ್ಲ ಪ್ರಗತಿಪರˌ ಅವೈದಿಕ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸಂವಿಧಾನ ಮಾನ್ಯತೆ ಸಿಗುವುದನ್ನು ಹೇಗಾದರೂ ಮಾಡಿ ತಪ್ಪಿಸುವುದುˌ ಹಾಗು ಲಿಂಗಾಯತ ಧರ್ಮ ಮಾನ್ಯತೆಯ ಹೋರಾಟವನ್ನು ಆದಷ್ಟು ವಿವಾದಾತ್ಮಕಗೊಳಿಸಿ ಅದನ್ನು ದಿಕ್ಕು ತಪ್ಪಿಸುವುದು. ಎರಡು; ಹಸಿ ಹಸಿ ಸುಳ್ಳನ್ನು ಸತ್ಯವೆಂದು ಬಿಂಬಿಸಲು ಲಿಂಗಾಯತರೊಳಗಿನ ಹಾಗೂ ಹೊರಗಿನ ಅರೆಬೆಂದ ಕೂಗೂಮಾರಿ ಒಡಕಿನ ಧ್ವನಿಗಳಿಗೆ ಹೆಚ್ಚಿನ ಮಟ್ಟದ ಉತ್ತೇಜನನ್ನು ನೀಡುವುದು. ಈ ರೀತಿಯಾಗಿ ಅತ್ಯಲ್ಪವಾಗಿದ್ದ ಭಿನ್ನ ಧನಿಗಳನ್ನು ಅಘಾದವಾಗಿಸುತ್ತ ತಮ್ಮ ವಾಹಿನಿಗಳ ಟಿಆರ್ಪಿಯನ್ನು ಹೆಚ್ಚಿಸಿಕೊಳ್ಳುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಶೈಕ್ಷಣಿಕ ವಿದ್ವತ್ ಮತ್ತು ಸಂಶೋಧನಾತ್ಮಕ ಹಿನ್ನೆಲೆಯುಳ್ಳ ನಾಡಿನ ಅನೇಕ ಸಂಶೋಧಕರುˌ ಲೇಖಕರುˌ ಚಿಂತಕರುˌ ಮಠಾಧೀಶರುˌ ರಾಜಕಾರಣಿಗಳುˌ ಪ್ರಾಜ್ಞರನ್ನು ತಮ್ಮ ವಾಹಿನಿಗಳಲ್ಲಿ ನಡೆಯುವ ಚರ್ಚೆಗಳಿಗೆ ಅವ್ಹಾನಿಸದೆˌ ವಿಷಯ ಜ್ಞಾನವೇ ಇಲ್ಲದˌ ಪೂರ್ವಾಗ್ರಹಪೀಡಿತ ದೊಡ್ಡ ಗಂಟಲಿನ ಕೂಗುಮಾರಿಗಳನ್ನು ವಾಹಿನಿಯಲ್ಲಿ ಕೂರಿಸಿಕೊಂಡು ಗಹನವಾದ ಚರ್ಚೆಯ ವಿಷಯವನ್ನು ನಗೆಪಾಟಲಿಗೀಡುಮಾಡುವ ಪರಿ ಬಹುಶಃ ಪ್ರಚಲಿತ ದ್ರಶ್ಯ ಮಾದ್ಯಮದ ಬದಲಾದ ಕಾಲಘಟ್ಟದ ಬದುಕುವ ಕಲೆ ಹಾಗು ವೈದಿಕ ಹಿತಾಸಕ್ತಿಯ ಹುನ್ನಾರವೆಂದೇ ವ್ಯಾಖ್ಯಾನಿಸಬೇಕಾಗಿರುವುದು ಅನಿವಾರ್ಯ. ಲಿಂಗಾಯತವು ಈಗ ಹೊಸದಾಗಿ ಸ್ವತಂತ್ರ ಧರ್ಮವಾಗಬೇಕಾಗಿಲ್ಲ. ಅದು ವೈದಿಕ ವ್ಯವಸ್ಥೆಯನ್ನು ಪ್ರಭಲವಾಗಿ ದಿಕ್ಕರಿಸಿˌ ಶೂದ್ರ ಮತ್ತು ನಿಮ್ನ ಸಮುದಾಯಗಳನ್ನು ಸಂಘಟಿಸಿˌ ಕಲ್ಯಾಣದ ಕಾಂತ್ರಿಯ ಮೂಲಕ ಅಸಂಖ್ಯಾತ ನೆಲಮೂಲದ ಬಸವಾದಿ ಶರಣರು ಪ್ರತಿಪಾದಿಸಿದ ಅವೈದಿಕ ಧರ್ಮವೆಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.
ಅವೈದಿಕ ಲಿಂಗಾಯತ ಧರ್ಮವು ಆಂದ್ರ ಮೂಲದ ವೀರಶೈವವೆಂಬ ಆಗಮಿಕ ಲಿಂಗಿ ಬ್ರಾಹ್ಮಣರಿಂದ ಸಂಕರಗೊಂಡಿದ್ದು ˌ ಸತತ ಮುವತ್ತು ವರ್ಷಗಳ ಡಾ. ಎಂ ಎಂ ಕಲಬುರಗಿಯವರ ಸಂಶೋಧನೆ ಮತ್ತು ಫ ಗು ಹಳಕಟ್ಟಿಯವರ ಪ್ರಯತ್ನದಿಂದ ತನ್ನ ಶುದ್ಧೀಕರಣ ಮತ್ತು ಪ್ರತ್ಯೇಕತೆಗೆ ತುಡಿಯುತ್ತಿದೆ. ಈಗ ಲಿಂಗಾಯತಕ್ಕೆ ಬೇಕಾಗಿರುವುದು ಸರಕಾರದಿಂದ ಕೇವಲ ತಾಂತ್ರಿಕವಾದ ಸಂವಿಧಾನಿಕ ಮಾನ್ಯತೆಯ ನವೀಕರಣವಷ್ಟೇ. ನಮ್ಮ ಮಾದ್ಯಮಗಳೇಕೆ ಲಿಂಗಾಯತರ ಬೇಡಿಕೆಯಿಂದ ಕೆಲವು ರಾಜಕೀಯ ಪಕ್ಷ ಮತ್ತು ಧಾರ್ಮಿಕ ಸಂಘಟನೆಗಳಂತೆ ಬೆದರಿ ನಿಂತಿವೆ ಎನ್ನುವ ಸಂಗತಿ ಗುಟ್ಟಿನದೇನಲ್ಲ. ಕಲ್ಯಾಣದ ಶರಣರ ವೈಚಾರಿಕ ಕ್ರಾಂತಿಯನ್ನು ಹತ್ತಿಕ್ಕಿದವರ ವಾರಸುದಾರರೇ ಇಂದಿನ ಮಾದ್ಯಮಗಳನ್ನು ಆವರಿಸಿರುವುದರಿಂದ ಲಿಂಗಾಯತ ಸ್ವತಂತ್ರ ಧರ್ಮದ ವಿರುದ್ಧ ಧ್ವನಿಯಾಗಿ ಕೆಲಸ ಮಾಡುತ್ತಿವೆ. ಅಂದು ಬಸವಣ್ಣನವರ ಕಾಲದಲ್ಲಿ ವಚನ ಚಳುವಳಿಯನ್ನು ವಿರೋಧಿಸಿದ ಕೇಶವ ಭಟ್ಟನ ಸಂತತಿಯೆ ಈ ಮಾಧ್ಯಮಗಳು.
ವಾಹಿನಿಯೊಂದರ ಸಂಪಾದಕನು ಚರ್ಚೆಯೊಂದರಲ್ಲಿ ಶರಣರು ಶಿವನನ್ನು ಆರಾಧಿಸುತ್ತಾರೆˌ ಶಿವ ಹಿಂದೂಗಳ ದೈವವಾದ್ದರಿಂದ ಲಿಂಗಾಯತವು ಹೇಗೆ ಅವೈದಿಕ ಧರ್ಮ ಎಂದು ಚರ್ಚೆಯನ್ನು ತನ್ನ ಮೂಗಿನ ನೇರಕ್ಕೆ ಕೊಂಡೊಯ್ಯುತ್ತಾನೆ. ಶರಣರು ಬಹುದೇವೋಪಾಸನೆಯನ್ನು ದಿಕ್ಕರಿಸಿ ಇಷ್ಠ ಲಿಂಗವೆಂಬ ವಿಶ್ವದಾಕಾರದ ಅರಿವಿನ ಕುರುಹನ್ನು ಅಂಗೀಕರಿಸುವ ಮುನ್ನ ಸ್ಥಾವರ ಶಿವನ ಆರಾಧಕರೇ ಆಗಿದ್ದರು. ಆನಂತರದಲ್ಲಿ ಅರಿವಿನ ಕುರುಹಾಗಿ ಅಂಗೀಕರಿಸಿದ ಇಷ್ಟಲಿಂಗವನ್ನು ತಮ್ಮ ಪೂರ್ವಾಶ್ರಮದ ಸ್ಥಾವರದ ಹೆಸರಿನಿಂದ ಗುರುತಿಸಿದ್ದರ ಕಾರಣ ವಿವಿಧ ಶರಣರು ತಾವು ಬರೆದ ವಚನಗಳನ್ನು ಅಂಕಿತನಾಮಗಳಿಂದ ಗುರುತಿಸಲೆಂದು ಬಳಸಿದರೆ ಹೊರತು ಸ್ಥಾವರ ಶಿವನ ಆರಾಧನೆಗಲ್ಲ ಎನ್ನುವುದು ವಚನ ಸಾಹಿತ್ಯವನ್ನು ಒಂದಷ್ಟು ಓದಿಕೊಂಡರೂ ತಿಳಿಯುವ ಸರಳ ಸಂಗತಿ. ಆದರೂ ಇವರದ್ದು ವಿತಂಡವಾದ. ಇನ್ನೊಂದು ವಾಹಿನಿಯ ನಿರೂಪಕ ಸ್ವತಂತ್ರ ಧರ್ಮದ ಪ್ರಮುಖ ಹೋರಾಟಗಾರರೊಬ್ಬರನ್ನು ಈ ರೀತಿ ಪ್ರಶ್ನಿಸುತ್ತಾನೆ:
ರಾಜಕೀಯˌ ಹಾಗು ಆರ್ಥಿಕವಾಗಿ ಬಲಾಢ್ಯವಾಗಿರುವ ನಾಡಿನ ಎರಡು ಬಸವ ಪರಂಪರೆಯ ವಿರಕ್ತ ಮಠಗಳು ಸ್ವತಂತ್ರ ಧರ್ಮದ ಬಗ್ಗೆ ಮೌನತಾಳಿವೆ ಎಂದ ಮೇಲೆ ನೀವು ಮಾತ್ರ ಏಕೆ ಲಿಂಗಾಯತವು ಸ್ವತಂತ್ರ ಧರ್ಮವೆಂದು ಸಾಧಿಸುತ್ತೀರಿ ಎಂದು ಆ ಸಂಪಾದಕ ಪ್ರಶ್ನಿಸುತ್ತಾನೆ. ಆಗ ಚರ್ಚೆಯಲ್ಲಿ ಭಾಗವಸಿದ ಹೊರಾಟಗಾರರು ಹೀಗೆ ಉತ್ತರಿಸುತ್ತಾರೆ: ಅಸಲಿಗೆ ಸ್ವತಂತ್ರ ಧರ್ಮದ ಬಗ್ಗೆ ಧನಿ ಎತ್ತಬೇಕಾಗಿದ್ದೇ ಆ ಎರಡು ಬಲಾಢ್ಯ ಮಠಗಳು. ಅವರೇಕೆ ಮೌನವಿರುವರೆಂದು ನೀವು ಅವರನ್ನು ಕೇಳುಬೇಕೆ ಹೊರತು ನನ್ನನ್ನಲ್ಲ. ಅದಕ್ಕೆ ನಿರೂಪಕ ಆ ಹೋರಾಟಗಾರರ ಬಾಯಿಯಿಂದ ಆ ಇಬ್ಬರು ಬಲಾಢ್ಯ ಮಠಾಧೀಶರ ವಿರುದ್ಧ ಹೇಳಿಕೆ ಹೊರಹಾಕಿಸಲು ಅನೇಕ ಬಗೆಯಲ್ಲಿ ಪ್ರಚೋದಿಸುತ್ತಾನೆ. ತಾಳ್ಮೆ ಕಳೆದುಕೊಂಡ ಆ ಲಿಂಗಾಯತ ಮುಂಚೂಣಿ ಹೊರಾಟಗಾರರು ಆ ಇಬ್ಬರು ಮಠಾಧೀಶರು ತಮ್ಮ ಸ್ವಹಿತಾಸಕ್ತಿಯಿಂದ ಮೌನತಾಳಿರಬೇಕೆಂದು ಉತ್ತರಿಸುತ್ತಾರೆ. ಕೂಡಲೇ ಆ ನಿರೂಪಕನ ಮುಖದ ಮೇಲೆ ಸಂತೋಷದ ಗೆರೆಗಳು ಗರಿಗೆದರುತ್ತವೆ. ಆತ ಬಹಳ ಖುಷಿಯಿಂದˌ ತಾನು ಬಯಸಿದ ಉತ್ತರ ಪಡೆದೆ ಎಂದು ಹಿಗ್ಗುತ್ತಾನೆ.
ಅದೇ ಹುಮ್ಮಸ್ಸಿನಲ್ಲಿ ಆ ನಿರೂಪಕನು ಚರ್ಚೆಯಲ್ಲಿ ಭಾಗವಸಿದ ಆ ವಿಷಯ ತಜ್ಞರನ್ನು ಹೆದರಿಸುವ ದಾಟಿಯಲ್ಲಿ ಮಾತಮಾಡಲು ಆರಂಭಿಸುತ್ತಾನೆ. ನೀವು ಬಹಳ ದೊಡ್ಡವರ ವಿರುದ್ಧ ಗುರುತರ ಆರೋಪ ಮಾಡುತ್ತಿರುವಿರಿ ಎಂದೆನ್ನುತ್ತ ಸಾಂದರ್ಭಿಕ ಟೀಕೆಯನ್ನು ವಿವಾದದ ವಿಷಯವನ್ನಾಗಿ ಬಿಂಬಿಸಲೆತ್ನಿಸುತ್ತಾನೆ. ಲಿಂಗಾಯತ ಹೋರಾಟಗಾರರು ನಾಡಿನ ದೊಡ್ಡ ಮಠಾಧೀಶರನ್ನು ಟೀಕಿಸಿದರು ಎನ್ನುವಂತೆ ಗಂಟಲು ಹರಿಯುವ ರೀತಿಯಲ್ಲಿ ಚೀರಾಡುವ ನಿರೂಪಕರನ್ನು ನೋಡಿದ್ದೇವೆ. ಇವು ಕೇವಲ ಒಂದೆರಡು ಸ್ಯಾಂಪಲ್ ಘಟನಾವಳಿಗಳನ್ನು ಮಾತ್ರ ನಾನು ಇಲ್ಲಿ ಉಲ್ಲೇಖಿಸಿದ್ದು ಇಷ್ಟು ದಿನ ದೃಶ್ಯ ಮಾಧ್ಯಮಗಳಲ್ಲಿ ನಡೆದ ಪ್ರತಿಯೊಂದು ಚರ್ಚೆಗಳು ಇಂತಹ ಅನೇಕ ದ್ವಂದ್ವ ˌ ಹಾರಾಟˌ ಕಿರುಚಾಟˌ ಪೂರ್ವಾಗ್ರಹˌ ಹಾಗೂ ಅಭಾಸಗಳಿಂದ ಕೂಡಿದ್ದು ನಮ್ಮ ಮಾದ್ಯಮಗಳಲ್ಲಿರುವ ವೈದಿಕ ಮನಸ್ಥಿತಿಗಳ ಒಳ ಹುನ್ನಾರಗಳನ್ನು ಎಳೆ ಎಳೆಯಾಗಿ ಅನಾವರಣಗೊಳಿಸಿದಂತೂ ನಗ್ನ ಸತ್ಯ ಎನ್ನಬಹುದಾಗಿದೆ.
ಕರಾವಳಿಯಲ್ಲಿ ಬೀದಿ ರೌಡಿಯೊಬ್ಬ ವೈಯಕ್ತಿಕ ಕಾರಣಗಳಿಗೆ ಕೊಲೆಯಾದಾಗ ಧಾರ್ಮಿಕ ಮತ್ತು ಕೋಮುವಾದದ ಬಣ್ಣಕಟ್ಟಿ ನಿರಂತರ ಪ್ರಚಾರ ಕೊಡುವ ನಮ್ಮ ಮಾದ್ಯಮಗಳು ನಾಡಿನ ಅನೇಕ ಸಂಶೋಧಕರುˌ ಲೇಖಕರುˌ ಚಿಂತಕರುˌ ಪ್ರಗತಿಪರ ಮಠಾಧೀಶರುˌ ರಾಜಕಾರಣಿಗಳು ಮತ್ತು ಲಕ್ಷಾಂತರ ಬಸವಾನುಯಾಯಿಗಳು ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದ ಭಾಗವಾಗಿ ರಾಜ್ಯಾದ್ಯಂತ ನಡೆಸಿದ ಬ್ರಹತ್ ಸಮಾವೇಷಗಳ ವರದಿಗಳನ್ನು ವಾಹಿನಿಗಳಲ್ಲಿ ಪ್ರಸಾರ ಮಾಡದೇ ಉಪೇಕ್ಷಿಸಿವೆ. ಸಮಾವೇಷಗಳಲ್ಲಿ ಲಕ್ಷಾಂತರ ಜನ ಸೇರಿ ಸ್ವತಂರ್ತ ಧರ್ಮ ಮಾನ್ಯತೆಗೆ ಘೋಷಣೆ ಕೂಗುವ ವರದಿಗಳು ಯಥಾವತ್ ಪ್ರಚಾರದ ವಸ್ತುವಾಗಿಸಲಿಲ್ಲ. ವಸ್ತುಸ್ಥಿತಿಯನ್ನು ಮುಚ್ಚಿಟ್ಟು ಎಲ್ಲಿ ವಿವಾದಗಳು ಹುಟ್ಟಿಸಬೇಕುˌ ಯಾವ ಭಿನ್ನ ರಾಗಗಳನ್ನು ಉತ್ತೇಜಿಸಬೇಕುˌ ಯಾವ ವಾಸ್ತವಗಳನ್ನು ಉಪೇಕ್ಷಿಸಬೇಕು ಮುಂತಾಗಿ ಯೋಚಿಸಿ ಕಾರ್ಯತತ್ಪರವಾಗಿರುವ ವಾಹಿನಿಗಳು ತಾವು ಸ್ವತಃ ಕ್ಷೋಭೆಗೊಳಗಾಗಿರುವಂತೆ ವರ್ತಿಸಿವೆ.
ನಮ್ಮ ಬಹುತೇಕ ದೃಶ್ಯ ಮಾದ್ಯಮಗಳು ತೆರೆಯ ಮರೆಯಲ್ಲಿ ಕುಳಿತಿರುವ ಲಿಂಗಾಯತ ಧರ್ಮವಿರೋಧಿ ಕಾಣದ ಕೈಗಳ ಪರವಾಗಿ ಕೆಲಸ ಮಾಡುತ್ತಿರುವುದನ್ನು ದೃಢಪಡಿಸಿದೆ. ಮಾದ್ಯಮಗಳ ಈ ರೀತಿಯ ಅಹಸ್ಯ ಹಾಗು ಪಕ್ಷಪಾತದ ವರ್ತನೆ ಕೇವಲ ಲಿಂಗಾಯತ ಧರ್ಮ ಹೋರಾಟದ ವಿಷಯದಲ್ಲಿ ಮಾತ್ರವಲ್ಲದೆ ˌ ಅದು ರಾಜ್ಯದ ಪ್ರತಿಯೊಂದು ಘಟನಾವಳಿಗಳುˌ ಹಾಗೂ ಜನಪರ ಹೋರಾಟಗಳ ವಿಷಯದಲ್ಲಿಯೂ ನಿರಂತರವಾಗಿ ಇಂಥದ್ದೇ ನಿಲುವುಗಳನ್ನು ಪ್ರದರ್ಶಿಸುತ್ತ ಬಂದಿವೆ. ಶ್ರೀಮಂತ ರಾಜಕಾರಣಿಗಳˌ ವಂಚಕ ಉದ್ಯಮಿಗಳˌ ನಟ-ನಟಿಯರ ಖಾಸಗಿ ಮದುವೆ ಸಮಾರಂಭಗಳನ್ನು ಬಹಳ ಉತ್ಸಾಹದಿಂದ ಜನರಿಗೆ ಭಾರೀ ಪ್ರಯೋಜನಕಾರಿ ಎಂಬಂತೆ ಇಂಚಿಂಚು ಬಿಡದೆ ನೇರ ಪ್ರಸಾರ ಮಾಡುವ ನಮ್ಮ ವಾಹಿನಿಗಳು ಜನಪರ ಚಳುವಳಿಗಳುˌ ನೆಜ-ಜಲ ಕುರಿತ ಹೋರಾಟದ ಘಟನೆಗಳನ್ನು ಕಾಟಾಚಾರಕೆ ತೋರಿಸಿ ಸುಮ್ಮನಾಗುವ ಮೂಲಕ ತಮ್ಮ ಆದ್ಯತೆ ಏನೆಂದು ಸ್ಪಷ್ಟಪಡಿಸುತ್ತಲೇಯಿವೆ.
ಮಾದ್ಯಮಗಳ ಈ ಪಕ್ಷಪಾತದ ನಡುವಳಿಕೆ ಸಾಮಾನ್ಯ ಜನರಲ್ಲಿ ಹೇಸಿಗೆ ಹುಟ್ಟಿಸುತ್ತಿರುವುದರಿಂದ ಸಮಾಜಿಕ ಜಾಲತಾಣಗಳೇ ಮಾದ್ಯಮಗಳಿಗಿಂತ ವಸ್ತುನಿಷ್ಠವಾಗಿ ವರ್ತಿಸುತ್ತ ಜನಪ್ರೀಯಗೊಳ್ಳುತ್ತಿರುವುದು ಅಲ್ಲಗಳೆಯಲಾಗದು. ಇದೇ ರೀತಿ ಮುಂದುವರೆದರೆ ಮುಂದೊಂದು ದಿನ ಜನರು ವಾಹಿನಿಗಳಲ್ಲಿ ಪ್ರಸಾರವಾಗುವ ಕೇವಲ ಮನರಂಜನೆˌ ಹಾಸ್ಯ ಕಾರ್ಯಕ್ರಮಗಳನ್ನು ಬಿಟ್ಟು ಸುದ್ದಿಗಳನ್ನು ನೋಡುವುದು ನಿಲ್ಲಿಸಿಬಿಡುವ ಕಾಲ ದೂರವಿಲ್ಲವೆನ್ನಿಸುತ್ತಿದೆ.