ಪಂಚರಾಜ್ಯ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳ ಫಲಿತಾಂಶ ಹೊರಬಿದ್ದಿದೆ. ಮುಂಬರುವ ಲೋಕಸಭಾ ಚುನವಣೆಗೆ ಈ ನಾಲ್ಕು ಛತ್ತೀಸ್ ಗಢ್, ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಚುನಾವಣೆ ಫಲಿತಾಂಶ ಪ್ರಮುಖ ಪಾತ್ರ ವಹಿಸುತ್ತದೆ ಎಂದೇ ಬಿಂಬಿತವಾಗಿತ್ತು. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಬಹುತೇಕ ಅಂತ್ಯವಾಗಿದೆ.
ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ನೇರ ಸ್ಪರ್ಧೆ ಏರ್ಪಟ್ಟರೆ, ತೆಲಂಗಾಣದಲ್ಲಿ BRS ಮತ್ತು ಕಾಂಗ್ರೆಸ್ ನಡುವೆ ಸ್ಪರ್ಧೆ ಇತ್ತು. ಛತ್ತೀಸ್ಗಢ ಹೊರತುಪಡಿಸಿ ಮೂರು ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆದಿದೆ. ಚುನಾವಣೆ ಹಿನ್ನಲೆ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ವಿವಿಧ ಪ್ರಾದೇಶಿಕ ಪಕ್ಷಗಳು ಭರ್ಜರಿ ಪ್ರಚಾರ ನಡೆಸಿದ್ದವು. ಈ ನಾಲ್ಕು ರಾಜ್ಯಗಳಲ್ಲಿ ನವೆಂಬರ್ 7ರಿಂದ 30ರವರೆಗೆ ಮತದಾನ ನಡೆದಿತ್ತು. ಡಿಸೆಂಬರ್ 3 ರಂದು ಫಲಿತಾಂಶ ಹೊರಬಿದ್ದಿದೆ.
ನಾಲ್ಕು ರಾಜ್ಯಗಳಲ್ಲಿ 2018ರ ವಿಧಾನಸಭೆ ಚುನಾವಣೆಯ ಫಲಿತಾಂಶ ಏನಾಗಿತ್ತು? 2023 ಫಲಿತಾಂಶದಲ್ಲಿ ಏನಾಗಿದೆ? ಇಲ್ಲಿದೆ ವಿವರ:-
ರಾಜಸ್ಥಾನ ವಿಧಾನಸಭಾ ಚುನಾವಣೆ ಫಲಿತಾಂಶ – 2018 ಹಾಗೂ 2023
200 ವಿಧಾನಸಭಾ ಕ್ಷೇತ್ರಗಳ ರಾಜಸ್ಥಾನದಲ್ಲಿ ಕಳೆದ 2018ರ ಚುನಾವಣೆಯಲ್ಲಿ, ಯಾವುದೇ ಪಕ್ಷ ಅಧಿಕಾರಕ್ಕೆ ಬರಲು 101 ಸ್ಥಾನ ಪಡೆಯಬೇಕಿತ್ತು. ಆದರೆ ಕಾಂಗ್ರೆಸ್ ಸ್ಪಷ್ಟ ಬಹುಮತಕ್ಕೆ ಒಂದು ಕಡಿಮೆ ಅಂದರೆ 100 ಸ್ಥಾನಗನ್ನು ಮಾತ್ರ ಗೆದ್ದ ಕಾಂಗ್ರೆಸ್ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಬಿಜೆಪಿ 73 ಸ್ಥಾನಗಳನ್ನು ಗೆದ್ದುಕೊಂಡು ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. BSP ಪಕ್ಷದ ಸಹಕಾರದೊಂದಿಗೆ ಕಾಂಗ್ರೆಸ್ ರಾಜಸ್ಥಾನದಲ್ಲಿ ಸರ್ಕಾರ ರಚಿಸಿ, ಅಶೋಕ್ ಗೆಹ್ಲೋಟ್ ಅವರು ಮುಖ್ಯಮಂತ್ರಿ ಆಗಿದ್ದರು. ಈ ಚುನಾವಣೆಯೂ 2018ರ ಡಿಸೆಂಬರ್ 7ರಂದು ನಡೆದಿತ್ತು.
2023ರ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಚುನಾವಣೋತ್ತರ ಸಮೀಕ್ಷೆಯಂತೆ ಬಿಜೆಪಿ ನೂರರ ಗಡಿ ದಾಟಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ 115 ಸ್ಥಾನಗಳಲ್ಲಿ ಗೆದ್ದು ಸ್ಪಷ್ಟ ಬಹುಮತ ಪಡೆದಿದೆ. ಕಾಂಗ್ರೆಸ್ 68 ಸ್ಥಾನಗಳನ್ನು ಗೆಲ್ಲುವ ಮೂಲಕ ಎರಡನೇ ಸ್ಥಾನಕ್ಕೆ ಇಳಿಯಿತು. ಇದಲ್ಲದೆ ಪಕ್ಷೇತರರು 8 ಕ್ಷೇತ್ರಗಳು, ಬಿಎಸ್‌ಪಿ 2, ಆರ್‌ಎಲ್‌ಟಿಪಿ 2, ಇತರರು 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಛತ್ತೀಸ್ಗಢ ವಿಧಾನಸಭಾ ಚುನಾವಣೆ ಫಲಿತಾಂಶ – 2018 ಹಾಗೂ 2023
90 ಕ್ಷೇತ್ರಗಳ ಛತ್ತೀಸ್ಗಢ ರಾಜ್ಯದಲ್ಲಿ 2018ರಲ್ಲಿ ಎರಡು ಹಂತದಲ್ಲಿ ಮತದಾನ ನಡೆದಿತ್ತು. ಯಾವುದೇ ಪಕ್ಷ ಅಧಿಕಾರಕ್ಕೆ ಬರಲು 46 ಸ್ಥಾನ ಪಡೆಯಬೇಕಿತ್ತು. ಆದರೆ 68 ಕ್ಷೇತ್ರಗಳನ್ನು ಗೆದ್ದ ಕಾಂಗ್ರೆಸ್ ಸ್ಪಷ್ಟ ಬಹುಮತವನ್ನು ಗಳಿಸಿತು. ಆಡಳಿತದಲ್ಲಿದ್ದ ಬಿಜೆಪಿ ಕೇವಲ 15 ಸೀಟು ಪಡೆದು ಮುಖಭಂಗ ಅನುಭವಿಸಿತ್ತು. 15 ವರ್ಷಗಳ ಕಾಲ ವಿಪಕ್ಷದಲ್ಲಿ ಕುಳಿತಿದ್ದ ಕಾಂಗ್ರೆಸ್ ಮತ್ತೆ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಯಿತು, ಭೂಪೇಶ್ ಬಾಘೇಲ್ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಈ ಚುನಾವಣೆಯೂ 2018ರ ನವೆಂಬರ್ 12 ಮತ್ತು 20ರಂದು ನಡೆದಿತ್ತು.
2023ರ ಛತ್ತೀಸ್ಗಢ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತದಾರ ಬಹುಮತ ನೀಡಿದ್ದಾರೆ. ಛತ್ತೀಸ್ಗಢದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಆದರೆ ಸಮೀಕ್ಷೆ ತಲೆಕೆಳಗಾಗಿ ಬಿಜೆಪಿ ಗೆಲುವಿನ ನಗೆ ಬೀರಿದೆ. ಛತ್ತೀಸ್ಗಢದ 90 ವಿಧಾನಸಭಾ ಕ್ಷೇತ್ರಗಳ ಪೈಕಿ, ಬಿಜೆಪಿ 54 ಸ್ಥಾನ, ಕಾಂಗ್ರೆಸ್ 35 ಸ್ಥಾನ ಮತ್ತು ಇತರರು 1 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಈ ಚುನಾವಣೆಯಲ್ಲಿ ಸೋಲುವ ಮೂಲಕ ಕಾಂಗ್ರೆಸ್ ಎರಡು ರಾಜ್ಯಗಳಲ್ಲಿ ತನ್ನ ಅಧಿಕಾರವನ್ನು ಕಳೆದುಕೊಂಡಿದೆ.
ಮಧ್ಯಪ್ರದೇಶ ವಿಧಾನಸಭಾ ಚುನಾವಣೆ ಫಲಿತಾಂಶ – 2018 ಹಾಗೂ 2023
230 ಕ್ಷೇತ್ರಗಳ ಮಧ್ಯ ಪ್ರದೇಶ ವಿಧಾನಸಭೆಗೆ 2018ರ ನವೆಂಬರ್ 28ರಂದು ಮತದಾನ ನಡೆದಿತ್ತು. 116 ಮ್ಯಾಜಿಕ್ ನಂಬರ್ ನ ಮಧ್ಯಪ್ರದೇಶದಲ್ಲಿ 114 ಸ್ಥಾನ ಗೆದ್ದ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಮೂಡಿತ್ತು. ನಾಲ್ಕನೇ ಬಾರಿಗೆ ಗೆಲುವಿನ ಪ್ರಯತ್ನದಲ್ಲಿದ್ದ ಶಿವರಾಜ್ ಸಿಂಗ್ ಚೌಹಾಣ್ ಆಘಾತ ಉಂಟಾಗಿತ್ತು. ಆದರೆ 2020ರ ಮಾರ್ಚ್ ನಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದಲ್ಲಿ ಶಾಸಕರ ಗುಂಪು ಬಿಜೆಪಿಗೆ ವಲಸೆ ಬಂದ ಕಾರಣ ಸರ್ಕಾರ ಪತನವಾಗಿತ್ತು. ಹೀಗಾಗಿ ಶಿವರಾಜ್ ಸಿಂಗ್ ಚೌಹಾಣ್ ಮತ್ತೆ ಸಿಎಂ ಆಗಿದ್ದರು.

2023ರ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 230 ವಿಧಾನಸಭಾ ಕ್ಷೇತ್ರಗಳಲ್ಲಿ 163 ಕ್ಷೇತ್ರಗಳನ್ನು ಬಿಜೆಪಿ ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದುಕೊಂಡಿದೆ. ಕಾಂಗ್ರೆಸ್ 66 ಸ್ಥಾನಗಳಲ್ಲಿ ಗೆದ್ದರೆ, ಇತರರು 1 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಘಡದಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿದ್ದು, ಲೋಕಸಭೆ ಚುನಾವಣೆಗೆ ಭದ್ರ ಬುನಾದಿಯನ್ನು ಹಾಕಿದೆ ಎಂದು ಪಕ್ಷದ ನಾಯಕರು ಹೇಳಿದ್ದಾರೆ.
ತೆಲಂಗಾಣ ವಿಧಾನಸಭಾ ಚುನಾವಣೆ ಫಲಿತಾಂಶ – 2018 ಹಾಗೂ 2023
2018ರ ಡಿಸೆಂಬರ್ 7ರಂದು ಎರಡನೇ ವಿಧಾನಸಭಾ ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ ಟಿಆರ್ ಎಸ್ (ಬಿಆರ್ ಎಸ್) 88 ಸ್ಥಾನ ಗೆದ್ದು ಅಧಿಕಾರ ಹಿಡಿಯಿತು. ಪ್ರಜಾ ಕುಟಮಿ ಒಕ್ಕೂಟ 21 ಸ್ಥಾನ ಮಾತ್ರ ಪಡೆದಿತ್ತು. (ಇದರಲ್ಲಿ ಕಾಂಗ್ರೆಸ್ 19 ಸ್ಥಾನ ಗೆದ್ದಿತ್ತು) ಓವೈಸಿ ಅವರ ಎಐಎಂಇಎಂ ಪಕ್ಷವು ಎಳು ಸ್ಥಾನ ಗೆದ್ದಿದ್ದರೆ, ಬಿಜೆಪಿ ಒಂದು ಸ್ಥಾನಕ್ಕೆ ತೃಪ್ತಿಪಟ್ಟಿತ್ತು. BRC ಪಕ್ಷವನ್ನು ಸೋಲಿಸಲು ಕಾಂಗ್ರೆಸ್, ತೆಲುಗು ದೇಶಂ, ತೆಲಂಗಾಣ ಜನ ಸಮಿತಿ ಮತ್ತು ಸಿಪಿಐ ಪಕ್ಷಗಳು ಒಂದಾಗಿ ಪ್ರಜಾ ಕುಟಮಿ ಎಂಬ ಒಕ್ಕೂಟ ರಚಿಸಿತ್ತು.
ತೆಲಂಗಾಣದಲ್ಲಿ ಆಡಳಿತಾರೂಢ ಬಿಆರ್ಎಸ್ (ಭಾರತ್ ರಾಷ್ಟ್ರ ಸಮಿತಿ)ನ್ನು ಸೋಲಿಸಿ ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿದಿದೆ. ಕಳೆದ ಎರಡು ಅವಧಿಗೆ ಆಡಳಿತ ನಡೆಸಿದ ಕೆಸಿಆರ್ ನೇತೃತ್ವದ ಬಿಆರ್ಎಸ್ ಪಕ್ಷ ಈ ಬಾರಿ ಅಧಿಕಾರವನ್ನು ಕಳೆದುಕೊಂಡಿದೆ. 119 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 64 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಬಿಆರ್ಎಸ್ 39 ಸ್ಥಾನ, ಬಿಜೆಪಿ 8 ಸ್ಥಾನ, ಎಐಎಂಐಎಂ 7 ಸ್ಥಾನ, ಇತರರು 1 ಸ್ಥಾನದಲ್ಲಿ ಗೆಲುವು ದಾಖಲಿಸಿದ್ದಾರೆ.






