ಸದ್ಯದ ರಾಜಕಾರಣದಲ್ಲಿ ಮುಸ್ಲಿಂ ಜನಾಂಗದ ರಾಜಕಾರಣಿಗಳ ಅಥವಾ ಜನಪ್ರತಿನಿಧಿಗಳ ಪ್ರಾತಿನಿಧ್ಯ ತುಂಬ ಕಡಿಮೆಯಿದೆ. ಇಂತಹ ಹೊತ್ತಿನಲ್ಲಿ ಜೆಡಿಎಸ್ನ ಕುಮಾರಸ್ವಾಮಿ ಅವರು ಅಕ್ಟೋಬರ್ 30ರಂದು ನಡೆಯಲಿರುವ ಹಾನಗಲ್ ಮತ್ತು ಸಿಂದಗಿ ಉಪಚುನಾವಣೆಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದಾರೆ.
ಹಾನಗಲ್ನಲ್ಲಿ ನಿಯಾಜ್ ಶೇಖ್ ಮತ್ತು ಸಿಂದಹಿಯಲ್ಲಿ ನಾಜಿಯಾ ಶಕೀಲ್ ಅಂಗಡಿಯವರನ್ನು ಕಣಕ್ಕೆ ಇಳಿಸಿದ್ದಾರೆ. ಇವರಿಬ್ಬರೂ ರಾಜಕೀಯವಾಗಿ ಗಮನಾರ್ಹ ಚಟುವಟಿಕೆ ಮಾಡಿದವರಲ್ಲ.
ಮೇಲುನೋಟಕ್ಕೆ ಈ ಆಯ್ಕೆ ಸ್ವಾಗತಾರ್ಹವಾದರೂ, ಇದರ ಹಿಂದೆ ಮುಸ್ಲಿಮರ ಬಗ್ಗೆ ಯಾವ ಕಾಳಜಿಯೂ ಕಂಡು ಬರುತ್ತಿಲ್ಲ ಎಂಬ ಅಭಿಪ್ರಾಯಗಳಿವೆ.
ಹಾವೇರಿ ಜಿಲ್ಲೆ ಹಾನಗಲ್ನಲ್ಲಿ ಜೆಡಿಎಸ್ ಸಂಘಟನೆಯೇ ಇಲ್ಲ. ಅಲ್ಲಿ ನಿಯಾಜ್ ಶೇಖ್ ಎಂಬ ಅಪರಿಚಿತ ಅಭ್ಯರ್ಥಿಯನ್ನು ಜೆಡಿಎಸ್ ಕಣಕ್ಕೆ ಇಳಿಸಿದೆ. ಬಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ನಾಜಿಯಾ ಶಕೀಲ್ ಅಂಗಡಿಯವರನ್ನು ಅಭ್ಯರ್ಥಿಯಾಗಿ ಮಾಡಿದೆ. ಮೇಲುನೋಟಕ್ಕೆ, ಅಲ್ಪಸಂಖ್ಯಾತರಿಗೆ ಜೆಡಿಎಸ್ ಟಿಕೆಟ್ ನೀಡುತ್ತಿದೆ ಎಂಬ ಭಾವ ಮೂಡಬಹುದು. ಆದರೆ ಇದರ ಹಿಂದೆ ಬಿಜೆಪಿಗೆ ಅನುಕೂಲ ಮಾಡುವ ತಂತ್ರವೇ ಅಡಗಿದೆ. ಅದರಲ್ಲಿ ‘ವ್ಯವಹಾರ’ವೂ ಇದೆ ಎನ್ನಲಾಗಿದೆ. ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಜೆಡಿಎಸ್ ಮೂಲತಃ ಕಾಂಗ್ರೆಸ್ನವರಾದ ಒಬ್ಬ ಮುಸ್ಲಿಂ ಕ್ಯಾಂಡಿಡೇಟ್ ಹಾಕಿತ್ತು. ಆತ 11 ಸಾವಿರ ಮತ ಗಳಿಸಿ ಬಿಜೆಪಿ ಗೆಲುವಿಗೆ ಸಹಕಾರ ನೀಡಿದ್ದ.
ಈ ಕುರಿತು ‘ಪ್ರತಿಧ್ವನಿ’ ಜೊತೆ ಮಾತನಾಡಿದ ರಾಜಕೀಯ ಬರಹಗಾರ ಮತ್ತು ಸಾಹಿತಿ ಕೆ.ಪಿ ಸುರೇಶ್, ‘ಇಲ್ಲಿ ಚರ್ಚೆಯ ಅಗತ್ಯವೇ ಇಲ್ಲ. ಬಿಜೆಪಿಗೆ ನೆರವಾಗಲು ಜೆಡಿಎಸ್ ಈ ತಂತ್ರ ಅನುಸರಿಸುತ್ತಿದೆ. ಇದರ ಹಿಂದೆ ವ್ಯವಹಾರವೂ ಇದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಮುಸ್ಲಿಮರು ಇಂತಹ ಆಟಕ್ಕೆ ಮರುಳಾಗಿಲ್ಲ. ಆದರೆ ಜೆಡಿಎಸ್ ಅಭ್ಯರ್ಥಿ ಗಳಿಸುವ 2-5 ಸಾವಿರ ಮತಗಳು ಕಾಂಗ್ರೆಸ್ ಸೋಲಿಗೆ ಮತ್ತು ಬಿಜೆಪಿ ಗೆಲುವಿಗೆ ನೆರವಾಗುತ್ತವೆ’ ಎಂದರು.
‘ಪ್ರತಿಧ್ವನಿ’ ಜೊತೆ ಮಾತನಾಡಿದ ರಾಜಕೀಯ ವಿಶ್ಲೇಷಕ ರವೀಂದ್ರ ರೇಶ್ಮೆ, ‘ ಕಾಂಗ್ರೆಸ್ ಮತ್ತು ಜೆಡಿಎಸ್ ಮುಸ್ಲಿಂರನ್ನು ನ್ಯಾಯವಂತ ಆದರೆ ಅಸಹಾಕರಾದ ಸಮುದಾಯ ಎಂದು ಪರಿಗಣಿಸಿಲ್ಲ. ಅವುಗಳ ಪಾಲಿಗೆ ಮುಸ್ಲಿಮರು ಕೇವಲ ವೋಟ್ ಬ್ಯಾಂಕ್. ಕಾಟಾಚಾರಕ್ಕೆ ಅವರಿಗೆ ಸೋಲುವ ಕ್ಷೇತ್ರಗಳಲ್ಲಿ ಟಿಕೆಟ್ ಕೊಡುತ್ತಿದ್ದಾರೆ’ ಎಂದರು.
ಈಗ ವಿಷಯಕ್ಕೆ ಬರೋಣ: ಮೈಸೂರು, ಹಾಸನ ಮತ್ತು ಮಂಡ್ಯ ಸೇರಿದಂತೆ ಒಕ್ಕಲಿಗ ಪ್ರಾಬಲ್ಯದ ಬೆಲ್ಟ್ನಲ್ಲಿ ಜೆಡಿಎಸ್ ಎಂದೂ ಮುಸ್ಲಿಮರಿಗೆ ಟಿಕೆಟ್ ನೀಡಿಲ್ಲ. ಅಂದರೆ ಗೆಲ್ಲುವ ಕ್ಷೇತ್ರಗಳಲ್ಲಿ ಅದಕ್ಕೆ ಒಕ್ಕಲಿಗ ಕ್ಯಾಂಡಿಡೇಟೇ ಬೇಕು. ಮೀಸಲು ಕ್ಷೇತ್ರ ಹೊರತುಪಡಿಸಿ ಅಲ್ಲೆಲ್ಲ ಒಕ್ಕಲಿಗರಷ್ಟೇ ಅಭ್ಯರ್ಥಿಗಳು ಎಂಬ ಸತ್ಯ ನಮ್ಮ ,ಮುಂದಿದೆ.
ಇದು ಕೇವಲ ಜೆಡಿಎಸ್ ವಿಚಾರವಲ್ಲ. ಬಹುತೇಕ ಪ್ರಾದೇಶಿಕ ಪಕ್ಷಗಳಿಗೆ ಕಾಂಗ್ರೆಸ್ಸೇ ಮೊದಲ ಶತ್ರು. ಜೆಡಿಎಸ್ನಂತೆ ಈ ಪಕ್ಷಗಳೂ ಕೂಡ ಮುಸ್ಲಿಮರನ್ನು ಕಾಟಾಚಾರಕ್ಕೆ ಬಳಸಿಕೊಂಡಿವೆ. ಇನ್ನೊಂದು ಕಡೆ ಕಾಂಗ್ರೆಸ್ ಕೂಡ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡುವ ಪ್ರಮಾಣವನ್ನು ತಗ್ಗಿಸುತ್ತ ಬಂದಿದೆ.
ಈ ಎಲ್ಲದರ ಹಿನ್ನೆಲೆಯೇನು? ಭಾರತದ ರಾಜಕಾರಣದಲ್ಲಿ ಮುಸ್ಲಿಮರ ಪ್ರಾತಿನಿಧ್ಯ ನಶಿಸುತ್ತ ಹೋಗಿದ್ದೇಕೆ? ಒಂದು ಗಂತದಲ್ಲಿ 18-19 ಮುಸ್ಲಿಮ ಶಾಸಕರು ಇರುತ್ತಿದ್ದ ಕರ್ನಾಟಕ ವಿಧಾನಸಭೆಯಲ್ಲಿ ಈಗ ಕೇವಲ 7 ಮುಸ್ಲಿಂ ಶಾಸಕರಿದ್ದಾರೆ.
ಇದು ಭಾರತದಾದ್ಯಂತ ಸಂಭವಿಸುತ್ತಿರುವ ದುರಂತ. ಶೇ. 14 ರಷ್ಟು ಜನಸಂಖ್ಯೆ ಹೊಂದಿರುವ ಒಂದು ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯವೇ ಕಡಿಮೆ ಆಗುತ್ತಿದೆ. ಇದರಿಂದ ಆ ಸಮುದಾಯದ ಸಂಕಷ್ಟಗಳು ಇನ್ನಷ್ಟು ಹೆಚ್ಚುತ್ತಿವೆ. ಇದು ಭಾರತದ ಪ್ರಚಲಿತ ರಾಜಕೀಯ ಮತ್ತು ಸಾಮಾಜಿಕ ದುರಂತ.
ಹಿಂದೂತ್ವದ ಉತ್ಕರ್ಷ ಕಾರಣವೇ? ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ 2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದ ಪಕ್ಷವು (ಬಿಜೆಪಿ) ಲೋಕಸಭೆಯಲ್ಲಿ ತನ್ನ ಸಂಸದೀಯ ಗುಂಪಿನಲ್ಲಿ ಒಬ್ಬ ಮುಸ್ಲಿಮರನ್ನೂ ಹೊಂದಿರಲಿಲ್ಲ!
ಈಗ ಸದ್ಯ ಕರ್ನಾಟಕದಲ್ಲಿ ನಡೆಯುತ್ತಿರುವ ಎರಡು ಉಪ ಚುನಾವಣೆಗಳಲ್ಲಿ ಜೆಡಿಎಸ್ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಸಿಂದಗಿಯಲ್ಲಿ ಮತದಾರರ ಸಂಖ್ಯೆಯಲ್ಲಿ 2ನೆ ಸ್ಥಾನದಲ್ಲಿರುವ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಿರುವುದು ಸ್ವಾಗತಾರ್ಹ ಕ್ರಮವೇ, ಅದರಲ್ಲೂ ಮಹಿಳೆಗೆ ನೀಡಿದ್ದೂ ಸ್ವಾಗತಾರ್ಹವೇ. ಆದರೆ ಒಟ್ಟೂ ಜೆಡಿಎಸ್ ನಡವಳಿಕೆ ನೋಡಿದಾಗ ಈ ಕ್ರಮದ ಹಿಂದೆ ಬಿಜೆಪಿಗೆ ಲಾಭ ಮಾಡಿಕೊಡುವ ಆಶಯವೇ ಎದ್ದು ಕಾಣುತ್ತದೆ.
ಸುಮಾರು 3 ದಶಕಗಳ ಹಿಂದೆ ಕರ್ನಾಟಕದಿಂದ ಕನಿಷ್ಠ ಮೂವರು ಮುಸ್ಲಿಂ ಸಂಸದರು ಆಯ್ಕೆಯಾಗುತ್ತಿದ್ದರು. ಆದರೆ, 1990ರ ನಂತರ ಇಲ್ಲಿಂದ ಒಬ್ಬರೂ ಮುಸ್ಲಿಂ ಸಂಸದರಿಲ್ಲ. ಕರ್ನಾಟಕದಲ್ಲಿ ಹಿಂದೆಲ್ಲ 18 ಮುಸ್ಲಿಂ ಶಾಸಕರು ಇರುವುದು ಸಾಮಾನ್ಯವಾಗಿತ್ತು. ಒಮ್ಮೆ ಇದು 24 ರವರೆಗೂ ತಲುಪಿತ್ತು. ಆದರೆ ಈಗ ಕೇವಲ 7 ಮುಸ್ಲಿಂ ಶಾಸಕರಿದ್ದಾರೆ ಮತ್ತು ಅವರೆಲ್ಲ ಕಾಂಗ್ರೆಸ್ನವರು. ಬೆಂಗಳೂರಿನ ಶಿವಾಜಿನಗರ, ಕಲಬುರ್ಗಿ ಉತ್ತರ, ಬೀದರರ್ ಉತ್ತರ- ಈಕ್ಷೇತ್ರಗಳಲ್ಲಿ ಮುಸ್ಲಿಮರೇ ಬಹುಸಂಖ್ಯಾತರಾದ ಕಾರಣಕ್ಕೆ ಅಲ್ಲಿ ಮುಸ್ಲಿಂ ಅಭ್ಯರ್ಥಿಗಳು ಗೆದ್ದಿದ್ದಾರೆ.
ಈ ಅವಧಿಯಲ್ಲೇ ಬಿಜೆಪಿ ಪ್ರತಿಪಾದಿಸುವ ಹಿಂದೂತ್ವ ರಾಷ್ಟ್ರೀಯತೆಯು ಇಲ್ಲಿ ಉತ್ಕರ್ಷಕ್ಕೆ ಏರಿತು. ಹಾಗಾದರೆ ಇವೆರಡರ ನಡುವೆ ಸಂಬAಧವಿದೆಯೇ?
ಇದು ಕೇವಲ ಕರ್ನಾಟಕದ ವಿದ್ಯಮಾನವಲ್ಲ, ಇದು ರಾಷ್ಟ್ರೀಯ ವಿದ್ಯಮಾನವೂ ಹೌದು. ಬಿಜೆಪಿಯಂತೂ ಇತ್ತೀಚೆಗೆ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದಿಲ್ಲ ಎಂದು ಹಲವಾರು ಸಲ ಬಹಿರಂಗವಾಗಿಯೇ ಹೇಳಿದೆ. ಅದನ್ನು ಬಿಡಿ, ಉಳಿದ ಪ್ರಮುಖ ಪಕ್ಷಗಳು ಕೂಡ ಮುಸ್ಲಿಮರಿಗೆ ಮೊದಲಿಗೆ ನೀಡುತ್ತಿದ್ದ ಅವಕಾಶವನ್ನು ಕಡಿತ ಮಾಡುತ್ತ ಬಂದಿವೆ. ಮುಸ್ಲಿಂ ಅಭ್ಯರ್ಥಿಗಳನ್ನು ಹಾಕಿದರೆ ಬಿಜೆಪಿ ಧ್ರುವೀಕರಣ ಮಾಡಿ ಸುಲಭವಾಗಿ ಗೆಲ್ಲುತ್ತದೆ ಎಂಬ ಗುಮ್ಮ ಅವನ್ನು ಕಾಡುತ್ತಿದೆ.
ಈ ಕುರಿತು ‘’ಪ್ರತಿಧ್ವನಿ’ ಹಿರಿಯ ರಾಜಕಾರಣಿ, ಎರಡು ಸಲ ಲೋಕಸಭಾ ಸದಸ್ಯರಾಗಿದ್ದ, ಒಮ್ಮೆ ಎಂಎಎಲ್ಎ ಆಗಿದ್ದ ಮತ್ತು ಒಮ್ಮೆ ರಾಜ್ಯಸಭೆ ಸದಸ್ಯರಾಗಿದ್ದ ಹುಬ್ಬಳ್ಳಿಯ ಐ.ಜಿ. ಸನದಿಯವರನ್ನು ಕೇಳಿದಾಗ, ‘ಅಲ್ರೀ, ಧರ್ಮದ ಭಾವ ಉತ್ಕರ್ಷದ ಸಮಯವಿದು. ನಿಜಕ್ಕೂ ಆತಂಕಕಾರಿ. ಹಿಂದೆಲ್ಲ ನಮ್ಮ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು, ಕೆಲವೊಮ್ಮೆ ಬಿಜೆಪಿ ಕೂಡ ಮುಸ್ಲಿಂರಿಗೆ ಟಿಕೆಟ್ ಕೊಡುವಾಗ ಹಿಂದಮುಂದ ನೋಢ್ತಾ ಇರಲಿಲ್ಲ. ಆದ್ರ ಈಗ ಪರಿಸ್ಥಿತಿ ಬದ್ಲಾಗೈತಿ’ ಎಂದರು.
‘ಪರಿಸ್ಥಿತಿ ಬದ್ಲು ಅಂದ್ರ ಅದಕ್ಕ ಹೀಂದೂತ್ವದ ರಾಷ್ಟ್ರೀಯತೆಯ ಅಬ್ದರವಷ್ಟೇ ಕಾರಣ ಅಲ್ಲವಲ್ಲ, ನಿಮ್ಮ ಪಾರ್ಟಿ ಸೇರಿ ಇತರ ಪಾರ್ಟಿಗಳೂ ಕೂಡ ಈ ಅಬ್ಬರಕ್ಕೆ ಬೆಚ್ಚಿಬಿದ್ದು ಮುಸ್ಲಿಮರನ್ನು ಕಡೆಗಣಿಸಿಬಿಟ್ಟಿವೆ ಅನಿಸುತ್ತದೆ’ ಎಂದು ಪ್ರತಿಧ್ವನಿ ಪ್ರಶ್ನಿಸಿದಾಗ, ‘ಹೌದು ನಮ್ ಪಾರ್ಟಿ ಸೇರಿದಂಗ ಇತರ ಪಾರ್ಟಿಯ ಒಳಗಿನ ಕೆಲವು ಮುಸ್ಲಿಂ ನಾಯಕರೇ ಸಾಮಾನ್ಯ ಮುಸ್ಲಿಂ ಜನರ ಆಶಯದ ವಿರುದ್ಧ ಇದ್ದಾರೆ. ಆದರೆ ನಮ್ಮ ಹೈಕಮಾಂಡ್ ಮಾತ್ರ ಎಲ್ಲ ಧರ್ಮಗಳಿಗೆ ಗೌರವ ಕೊಡುತ್ತ ಬಂದಿದೆ. ‘ಸಾಬರು ನಿಂತ್ರ ಗೆಲ್ಲಂಗಿಲ್ಲ ಎಂಬ ಅಭಿಪ್ರಾಯವನ್ನು ಬಿಂಬಿಸಲಾಗಿದೆ’ ಎಂದರು.
‘ಧಾರವಾಡ ದಕ್ಷಿಣ ಎಂಪಿ ಕ್ಷೇತ್ರದಿಂದ ನಾನೇ ಎರಡು ಸಲ ಗೆದ್ದೀನಿ. ಹುಬ್ದಳ್ಳಿ ಸಿಟಿಯಿಂದ ಎಂಎಲ್ಎ ಆಗೈನಿ. ಆಗೆಲ್ಲ ಯಾರೂ ನನ್ನ ಸಾಬರವ ಅಂತಾ ನೋಡಲಿಲ್ಲ. ನಿಜ ಅಲ್ಲಿ ಮುಸ್ಲಿಮರ ಓಟ್ ಜಾಸ್ತಿ ಇದ್ದವು, ಹಂಗಂತ ಅಷ್ಟರ ಮ್ಯಾಲ ನಾವು ಗೆಲ್ಲಾಕ್ ಆಗಲ್ಲ. ಅಲ್ಲಿ ಎಲ್ಲ ಧರ್ಮ ಮತ್ತು ಜಾತಿಯ ಜನರ ಮತ ನಮ್ಮನ್ನು ಗೆಲ್ಲಿಸಿದವು’ ಎನ್ನುತ್ತಾರೆ ಬುದ್ಧಿಜೀವಿಯೂ ಆದ ಸನದಿಯವರು.
ಡೀ-ಲಿಮೇಟಷನ್ ಎಂಬ ಅಸ್ತ್ರ?
ಡಿಲಿಮಿಟೇಷಮ್ ಅಂದರೆ ಕ್ಷೇತ್ರ ಮರು ವಿಂಗಡಣೆ ಪ್ರಜಾಪ್ರಭುತ್ವದಲ್ಲಿ ನಡೆಯುವ ಆಗಾಗಿನ ಸಾಮಾನ್ಯ ಪ್ರಕ್ರಿಯೆ. ಆದರೆ, ಇತ್ತೀಚಿನ ದಶಕಗಳಲ್ಲಿ ಈ ಪ್ರಕ್ರಿಯೆ ಹಿಂದೂತ್ವ ದೇಶದ ಭಾಗವಾಗಿಯೇ ರೂಪುಗೊಂಡಿತೆ? ಆರ್ಎಸ್ಎಸ್ ಇದರ ಹಿಂದೆ ಇದೆಯೇ? ಇಲ್ಲಿ ನೋಡಿ ಯುಪಿಎ ಸರ್ಕಾರವೋ. ಇಲ್ಲಾ ಎನ್ಡಿಎ ಸರ್ಕಾರವೊ, ಒಟ್ಟಿನಲ್ಲಿ ಆಡಳಿತಾತ್ಮಕ ನೆಪ ಒಡ್ಡಿ ಡೀ-ಲಿಮಿಟೇಷನ್ ( ಪುನರ್ ವಿಂಗಡನೆ) ಎಂಬ ಒಂದು (ಅಕ್ರಮ?) ಪ್ರಕ್ರಿಯೆ ನಡೆಯುತ್ತಲೇ ಇದೆ. ಅಲ್ಲಿ ಮುಸ್ಲಿಂ ಬಾಹುಳ್ಯದ ಪ್ರದೇಶಗಳನ್ನು ಒಡೆದು ಪಕ್ಕದ ಕ್ಷೇತ್ರಗಳಿಗೆ ಹಂಚುನ ಮುಲಕ, ಅಲ್ಲಿ ಸಹಜವಾಗಿ ಗೆಲ್ಲುತ್ತಿದ್ದ ಮುಸ್ಲಿಂ ಅಭ್ಯರ್ಥಿಗಳನ್ನು ತುಳಿಯುವ ಹುನ್ನಾರ ನಡೆದಿದೆ ಎಂದು ಬರೀ ಮುಸ್ಲಿಂ ಯುವಕರಷ್ಟೇ ಅಲ್ಲ, ನಮ್ಮ ಹಿರಿಯ ಗೌರವಾನ್ವಿತ ಕಾಂಗ್ರೆಸ್ ಸದಸ್ಯ ಸನದಿ ಮತ್ತು ರಾಜಕೀಯ ಚಿಂತಕ ಮುಜಾಫರ್ ಅಸ್ಸಾದಿ ಕೂಡ ಅಪಾದನೆ ಮಾಡುತ್ತಿದ್ದಾರೆ.
ಏನಾಗಿದೆ ಇಲ್ಲಿ ಅಂದರೆ, ಇದು ಕೇವಲ ಒಂದು ಪಕ್ಷದ ಉನ್ನತಿಯ ಸಮಸ್ಯೆಯಲ್ಲ, ಅದರ ಸಾಂಸ್ಕೃತಿಕ ರಾಷ್ಟಿçಯತೆ ಎಂದು ಹೆಸರಿಸಲಾದ ಹಿಂದೂತ್ವವು ಇಡೀ ಸಮಾಜವನ್ನೇ ಒಡೆದು ಹಾಕುತ್ತಿದೆ. ಅದಕ್ಕೆ ಪ್ರತಿರೋಧ ತೋರಬೇಕಿದ್ದ ವಿರೋಧ ಪಕ್ಷಗಳು ಮಾತ್ರ ಸುಮ್ಮನಿವೆ.
1980 ಮತ್ತು 2914 ರ ನಡುವೆ, ಭಾರತೀಯ ಸಂಸತ್ತಿನ ಕೆಳಮನೆಯಲ್ಲಿ ಮುಸ್ಲಿಂ ಸಂಸದರ ಸಂಖ್ಯೆ ಅರ್ಧಕ್ಕಿಂತಲೂ ಕಡಿಮೆಯಾಗಿದೆ. ಇದೇ ಅವಧಿಯಲ್ಲಿ ಭಾರತೀಯ ಜನಸಂಖ್ಯೆಯಲ್ಲಿ ಮುಸ್ಲಿಮರ ಪಾಲು ಏರಿದ ಕಾರಣ ಈ ಬೆಳವಣಿಗೆಯು ಹೆಚ್ಚು ಮಹತ್ವದ್ದಾಗಿದೆ ಮತ್ತು ಅಪಾಯಕಾರಿ ಆಗಿದೆ ಕೂಡ. ಈ ಅವಧುಯಲ್ಲಿ , ಅವರ ಜನಸಂಖ್ಯೆಯ ಅನುಪಾತ (11.1 ರಿಂದ 14.2% ಕ್ಕೆ ಏರಿತು) ಮತ್ತು ಲೋಕಸಭೆಯಲ್ಲಿ ಅವರ ಚುನಾಯಿತ ಪ್ರತಿನಿಧಿಗಳ ನಡುವಿನ ಅಂತರವು (ಇದು ಶೇ. 9 ರಿಂದ ಶೆ. 3.7ಗೆ ಇಳಿದಿದೆ) ಸಾಮಾಜಿಕ ಅಸಮಾನತೆಗೆ ನಿದರ್ಶನವಾಗಿದೆ.
2009 ರಲ್ಲಿ, ಬಿಜೆಪಿ 4 ಮುಸ್ಲಿಂ ಅಭ್ಯರ್ಥಿಗಳನ್ನು (ಅಥವಾ ಒಟ್ಟು ೦.೪೮%) ಕಣಕ್ಕಿಳಿಸಿತು. ಅದರಲ್ಲಿ ಒಬ್ಬರು ಮಾತ್ರ ಗೆದ್ದರು. 2014ರಲ್ಲಿ, ಇದು 428 ಸೀಟುಗಳಲ್ಲಿ 7 ಮುಸ್ಲಿಂ ಅಭ್ಯರ್ಥಿಗಳನ್ನು (ಅಥವಾ ೨% ಕ್ಕಿಂತ ಕಡಿಮೆ) ಕಣಕ್ಕಿಳಿಸಿತು ಆಗ ಯಾರೂ ಆಯ್ಕೆ ಆಗಲಿಲ್ಲ. ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ, ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದ ಪಕ್ಷವು ಲೋಕಸಭೆಯಲ್ಲಿ ತನ್ನ ಸಂಸದೀಯ ಗುಂಪಿನಲ್ಲಿ ಮುಸ್ಲಿಮರನ್ನು ಹೊಂದಿರಲಿಲ್ಲ!
ಅದರ ಪ್ರತಿಫಲನವಮ್ಮು ಅಥವಾ ಅದರ ಪ್ರಭಾವವನ್ನು ನೀವು ಉತ್ತರಪ್ರದೇಶದ ರಾಜಕೀಯದಲ್ಲಿ ಆಗಲೇ ನೋಡಬಹುದು. ಭಾರತದ ಅತಿದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಮುಸ್ಲಿಮರು 18% ಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದಾರೆ ಮತ್ತು ಆಗ 80 ಸ್ಥಾನಗಳಲ್ಲಿ 71 ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು., ಅದರಲ್ಲಿ ಒಬ್ಬನೂ ಮುಸ್ಲಿಂ ಇರಲಿಲ್ಲ! 2009ರಲ್ಲಿ 6 ಮತ್ತು 2004ರಲ್ಲಿ 10 ಸ್ಥಾನಗಳಲ್ಲಿ ಮುಸ್ಲಿಮ್ ಅಭ್ಯರ್ಥಿಗಳು ಗೆದ್ದಿದ್ದರು ಎಂಬುದನ್ನು ಗಮನಿಸಿ.
ಇದರಿಂದ ಉತ್ತೇಜನಗೊಂಡ ಬಿಜೆಪಿ 2017 ರ ಉತ್ತರಪ್ರದೇಶ ಅಸೆಂಬ್ಲಿ ಚುನಾವಣೆಯಲ್ಲಿ ಒಬ್ಬ ಮುಸ್ಲಿಮರಿಗೂ ಟಿಕೆಟ್ ನೀಡಲಿಲ್ಲ ಮತ್ತು ಅದನ್ನು ಜೋರಾಗಿ ಹೇಳಿಕೊಂಡು ಧ್ರುವೀಕರಣ ಮಾಡಲು ಯತ್ನಿಸಿತು. ಅದು ಯಶಸ್ವಿಯೂ ಆಗಿತು.
ಈ ಎಲ್ಲದರ ಪರಿಣಾಮ ಈಗ ಇತರ ಪಾರ್ಟಿಗಳೂ ಕೂಡ ಮುಸ್ಲಿಮರಿಗೆ ಕೊಡುವ ಟಿಕೆಟ್ಗಳಲ್ಲಿ ಕಡಿತ ಮಾಡುತ್ತ ತಾವು ‘ಮುಸ್ಲಿಮರ ಓಲೈಕೆ’ ಮಾಡುತ್ತಿಲ್ಲ ಎಂದು ಪರೋಕ್ಷವಾಗಿ ಹೇಳಲು ಹೊರಟಿವೆ.
ಆದರೆ ಅದರ ಸಾಮಾಜಿಕ ಪರಿಣಾಮ ಭಿಕರವಾಗಲಿದೆ. ಶೇ. 14 ರಷ್ಟು ಜನಸಂಖ್ಯೆ ಹೊಂದಿರುವ ಸಮುದಾಯವೊಂದು ಸೂಕ್ತ ಪ್ರಾತಿನಿಧ್ಯ ಪಡೆಯದೇ ಹೋದರೆ ಅದು ಒಟ್ಟೂ ಸಮಾಜದ ಮೇಲೆ ನೆಗೆಟಿವ್ ಪರಿಣಾಮ ಉಂಟು ಮಾಡಲಿದೆ.
2009 ರಲ್ಲಿ, ಕಾಂಗ್ರೆಸ್ ತನ್ನ ಸಾಂಪ್ರದಾಯಿಕ ಜಾತ್ಯತೀತತೆಯನ್ನು ಸ್ವೀಕರಿಸಲು ಇಷ್ಟಪಡಲಿಲ್ಲ. ಕೇವಲ 31 ಮುಸ್ಲಿಂ ಅಭ್ಯರ್ಥಿಗಳನ್ನು (ಅಥವಾ ಒಟ್ಟು ಶೇ. 3.7) ಕಣಕ್ಕೆ ಇಳಿಸಿತು, ಅದರಲ್ಲಿ ಕೇವಲ 11 ಸ್ಥಾನಗಳನ್ನು ಗೆದ್ದಿತು. ಆ ವರ್ಷ, ಬಹು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅವರನ್ನು ಚುನಾಯಿಸಿದ ಪಕ್ಷಗಳು ಪ್ರಾದೇಶಿಕ ಪಕ್ಷಗಳೇ ಆಗಿದ್ದವು.
ಐದು ವರ್ಷಗಳ ನಂತರ, ಕಾಂಗ್ರೆಸ್ 462 ರಲ್ಲಿ 27 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತು (ಒಟ್ಟು ಶೇ. 6 ಕ್ಕಿಂತ ಕಡಿಮೆ). ಮುಸ್ಲಿಮೇತರ ಪಕ್ಷಗಳಲ್ಲಿ, ರಾಷ್ಟ್ರೀಯ ಜನತಾದಳ-ಆರ್ಜೆಡಿ, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್ ಮತ್ತು ಸಿಪಿಐ (ಎಂ) ಮಾತ್ರ ಜನಸಂಖ್ಯೆಯಲ್ಲಿ ಮುಸ್ಲಿಮರ ಪಾಲಿಗಿಂತ ಹೆಚ್ಚಿನ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದವು.
ಇವು ಕೆಲವು ಅಂಕಿಅಣಶ ಅಷ್ಟೇ. ಕರ್ನಾಟಕ್ದದ ಸ್ಥಿತಿ ಋನು?
ಕರ್ನಾಟಕದಲ್ಲಿ ಒಂದು ಹಂತದಲ್ಲಿ 24 ಮುಸ್ಲಿಂ ಶಾಸಕರು ಇರುತ್ತಿದ್ದರು. ನಂತರ ಕನಿಷ್ಠ 18 ಮುಸ್ಲಿಂ ಶಾಸಕರು ಇರುತ್ತಿದ್ದರು. ಈಗ ಚುನಾವಣೆಯ ಮೂಲಕ ವಿಧಾನಸಭೆ ಪ್ರವೇಶ ಮಾಡಿರುವುದು ಕೇಚಲ 7 ಮುಸ್ಲಿಂ ಶಾಸಕರಷ್ಟೇ.
ಬೀದರ್ ಉತ್ತರದಿಂದ ರಹೀಂ ಖಾನ್, ಕಲಬುರ್ಗಿ ಉತ್ತರದಿಂದ ಖನೀಜ್ ಫಾತೀಮಾ, ಬೆಂಗಳೂರಿನ ಶಾಂತಿನಗರದಿಂದ ಹ್ಯಾರಿಸ್, ಶಿವಾಜಿ ನಗರದಿಂದ ರಿಜ್ವಾನ್ ಅರ್ಷಾದ್, ಚಾಮರಾಜಪೇಟೆಯಿಂದ ಜಮೀರ್ ಅಹ್ನದ್, ಮೈಸೂರಿನ ನರಸಿಣಹರಾಜ ನಗರದಿಂದ ತನ್ವೀರ್ ಸೇಠ್ ಮತ್ತು ಮಂಗಳೂರಿನ ಉಳ್ಳಾಲದಿಂದ ಯು.ಟಿ. ಖಾದರ್. ಇವರೆಲ್ಲರೂ ಕಾಂಗ್ರೆಸ್ನಿAದ ಗೆದ್ದವರು.
ಶೇ. 14ರಷ್ಟು ಜನಸಂಖ್ಯೆ ಹೊಂದಿರುವ ಸಮುದಾಯದಿಂದ 7 ಶಾಸಕರು ಮಾತ್ರ. ಒಬ್ಬರೇ ಒಬ್ಬರೂ ಎಂಪಿ ಕೂಡ ಇಲ್ಲ. ಆದರೆ ಶೇ.3 ಜನಸಂಖ್ಯೆ ಹೊಂದಿರುವ ಬ್ರಾಹ್ಮಣ ಸಮುದಾಯದಿಂದ ಮೂವರು ಎಂಪಿಗಳಿದ್ದಾರೆ. ಕಳೆದ 30 ವರ್ಷಗಳಿಂದ ಕನಿಷ್ಠ ಮೂವರು ಬ್ರಾಹ್ಮಣ ಎಂಪಿಗಳು ಗೆಲ್ಲುತ್ತಲೇ ಇದ್ದಾರೆ.
ಹಿಂದೂತ್ವದ ಉತ್ಕರ್ಷದ ಲಾಭ ಯಾರಿಗೆ ದಕ್ಕುತ್ತದೆ ಮತ್ತು ಯಾರನ್ನು ನಾಶ ಮಾಡಿ ಮೇಲೇರುತ್ತದೆ ಎಂಬುದಕ್ಕೆ ಕರ್ನಾಟಕದ ಈ ಅಂಕಿಅಂಶಗಳೇ ಸಾಕ್ಷಿ.
ಕುಮಾರಸ್ವಾಮಿಯ ಜೆಡಿಎಸ್ ಮತ್ತು ಒವೈಸಿಯವರ ಎಐಎಂಐಎಂ ಪಕ್ಷಗಳು ಮುಸ್ಲಿಮರಿಗೆ ಟಿಕೆಟ್ ನೀಡುತ್ತಲೇ ಬಿಜೆಪಿಗೆ ನೆರವಾಗುತ್ತಿರುವುದು ಈಗಿನ ರಾಜಕೀಯ ದುರಂತ.