
ಬೆಂಗಳೂರಿನ ಜೆಪಿ ಭವನದಲ್ಲಿ ಮಾತನಾಡಿರುವ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಪಕ್ಷದ ಸಾಂಸ್ಥಿಕ ಚುನಾವಣೆ, ಸದಸ್ಯತ್ಯ ನೋಂದಣಿ ಮಾಡುವ ಬಗ್ಗೆ ಸಭೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಏಪ್ರಿಲ್ ಒಳಗೆ ರಾಜ್ಯದ ಘಟಕದ ಅಧ್ಯಕ್ಷ ಸ್ಥಾನವನ್ನು ಚುನಾವಣೆ ಮೂಲಕ ಆಯ್ಕೆ ಮಾಡುವ ಬಗ್ಗೆ ತೀರ್ಮಾನ ಮಾಡಲಾಗಿದೆ.
ಪಕ್ಷದ ಸಂಘಟನೆ ಬಗ್ಗೆ ಪಕ್ಷದ ನಾಯಕರಿಗೆ ಕಠಿಣವಾಗಿಯೇ ಹೇಳಿದ್ದೇನೆ. ಯಾರು ಪ್ರಾಮಾಣಿಕವಾಗಿ ಪಕ್ಷದ ಸಂಘಟನೆಗೆ ದುಡೀತಾರೋ ಅಂಥವರಿಗೆ ಆದ್ಯತೆ ಕೊಡ್ತೀವಿ. ವಾರದಲ್ಲಿ ನಾಲ್ಕು ದಿನ ದೆಹಲಿಗೆ ಸಚಿವಾಲಯದಲ್ಲಿ ಇಲಾಖೆ ಸಭೆ, ಇಲಾಖೆ ಕೆಲಸ ಮಾಡ್ತೇನೆ. ವಾರದಲ್ಲಿ ಒಂದು ದಿನ ಅಥವಾ ಎರಡು ದಿನ ದೇಶದ ಸ್ಟೀಲ್ ಇಂಡಸ್ಟ್ರಿಗಳಿಗೆ ಖುದ್ದು ಭೇಟಿ ಮಾಡ್ತೇನೆ. ಸ್ಟೀಲ್ ಇಂಡಸ್ಟ್ರಿಗಳು ಲಾಭ ತರಲ್ಲ ಅನ್ನುವ ಭಾವನೆ ಏನಿದೆ, ಅದನ್ನು ಹೋಗಲಾಡಿಸಬೇಕು ಎಂದು ತಮ್ಮ ಕೆಲಸ ಕಾರ್ಯದ ಬಗ್ಗೆ ತಿಳಿಸಿದ್ದಾರೆ.
ಇನ್ನು ವಾರದಲ್ಲಿ ಒಂದೆರಡು ದಿನ ಪಕ್ಷದ ಸಂಘಟನೆಗಾಗಿ ಸಭೆ, ಪ್ರವಾಸ, ಮಂಡ್ಯ ಭೇಟಿ ಮಾಡಬೇಕು ಅಂತ ಟೈಮ್‌ಟೇಬಲ್ ನಾನೇ ರೆಡಿ ಮಾಡ್ಕೊಂಡಿದ್ದೇನೆ ಎಂದಿರುವ ಹೆಚ್.ಡಿ ಕುಮಾರಸ್ವಾಮಿ, ಕಾಂಗ್ರೆಸ್ ನಮ್ಮ ಶಾಸಕರನ್ನು ಆಪರೇಷನ್ ಮಾಡ್ತಿದೆ, ಜೆಡಿಎಸ್‌ನಲ್ಲಿ ಗಡಗಡ, ಸಂಕ್ರಾಂತಿ ನಂತರ ಜೆಡಿಎಸ್ ಇರೋದೇ ಇಲ್ಲ… ಹೀಗೆ ಯಾರಾದ್ರೂ ನಿಮಗ ಹೇಳಿದರೆ ನಂಬಬೇಡಿ. ಮೊದಲು ಕಾಂಗ್ರೆಸ್‌ನವ್ರು ಅವರ ಪಕ್ಷದ ಬಗ್ಗೆ ನೋಡಿಕೊಳ್ಳಲಿ ಎಂದು ಚಾಟಿ ಬೀಸಿದ್ದಾರೆ.

ದೆಹಲಿಯಲ್ಲಿ ಏನಾಗಿದೆ, INDIA ಕೂಟದ ಒಳಗೆ ಏನಾಗ್ತಿದೆ ನೋಡಿಕೊಳ್ಳಲಿ ಎಂದಿರುವ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ನಿಮ್ಮ ಪಕ್ಷದ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ಎಂ.ಬಿ ಪಾಟೀಲರೇ ಅದನ್ನು ಮೊದಲು ನೋಡಿ, ಬೇರೆಯವರಿಗೂ ಇದು ಅನ್ವಯ ಎಂದು ತಿಳಿಸಿದ್ದಾರೆರ. ನಮಗೆ, ನಮ್ಮ ಕುಟುಂಬಕ್ಕೆ ಸೋಲು, ಗೆಲುವು ಹೊಸದೇನಲ್ಲ. ಸೋತಾಗ ಕುಗ್ಗಿಲ್ಲ. ಗೆದ್ದಾಗ ಹಿಗ್ಗಿಲ್ಲ. ಎಂ.ಬಿ ಪಾಟೀಲ್ ಅವರ ಪಕ್ಷದ ಪರಿಸ್ಥಿತಿ ನೋಡಿಕೊಳ್ಳಲಿ. ನಿಮ್ಮಲ್ಲಿ ಬಿದ್ದಿರುವ ಹೆಗ್ಗಣ ನೋಡಿ, ನಮ್ಮ ಪಕ್ಷದ ಬಗ್ಗೆ ಚಿಂತೆ ಬೇಡ. ಪ್ರಧಾನಿ ಆಗಿದ್ದ ದೇವೇಗೌಡರನ್ನೂ ಸೋಲಿಸಿದ್ದು ನೋಡಿದ್ದೇವೆ ಎಂದು ಟಾಂಗ್ ಕೊಟ್ಟಿದ್ದಾರೆ.







