ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿದೆ. ಹೀಗಿರುವಾಗಲೇ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯರಿಗೆ ಹೊಸದೊಂದು ಕಾನೂನು ಸಂಕಷ್ಟ ಎದುರಾಗಿದೆ. ನೀತಿ ಸಂಹಿತಿ ಜಾರಿ ಇರುವಾಗಲೇ ಸಭೆ ನಡೆಸಿದ್ದಕ್ಕೆ ಚುನಾವಣಾಧಿಕಾರಿ ಶಾಸಕ ರೇಣುಕಾಚಾರ್ಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ನೀತಿ ಸಂಹಿತ ಜಾರಿಯಾದ ಬಳಿಕ ಶಾಸಕ ರೇಣುಕಾಚಾರ್ಯ ಏಪ್ರಿಲ್ 2ರಂದು ಬೆಂಗಳೂರಿನ ಗುರುರಾಜ್ ಕಲ್ಯಾಣ ಮಂಟಪದಲ್ಲಿ ಕ್ಷೇತ್ರದ ಕಾರ್ಯಕರ್ತರ ಜೊತೆಯಲ್ಲಿ ಸಭೆ ನಡೆಸಿದ್ದರು. ಮೈಕ್ ಹಿಡಿದು ಶಾಸಕ ರೇಣುಕಾಚಾರ್ಯ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ ಚುನಾವಣಾಧಿಕಾರಿಗಳು ಸಂಪೂರ್ಣ ಸಭೆಯ ವಿಡಿಯೋ ಮಾಡಿಕೊಂಡು ಬಳಿಕ ಮೈಕ್ ಕಸಿದುಕೊಂಡು ಕಾರ್ಯಕ್ರಮವನ್ನು ರದ್ದುಗೊಳಿಸಿದ್ದರು. ಈ ಪ್ರಕರಣ ಸಂಬಂಧ ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಚುನಾವಣಾಧಿಕಾರಿಗಳು ಎಫ್ಐಆರ್ ದಾಖಲಿಸಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಆರೋಪ ಎದುರಿಸುತ್ತಿರುವ ಶಾಸಕ ರೇಣುಕಾಚಾರ್ತ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ದೂರು ಹಾಗೂ ದಾವಣಗೆರೆಯ ವಿಶೇಷ ಲೋಕಾಯುಕ್ತ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ಇವೆರಡನ್ನೂ ರದ್ದುಗೊಳಿಸಬೇಕೆಂದು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ನಲ್ಲಿ ರೇಣುಕಾಚಾರ್ಯಗೆ ಹಿನ್ನಡೆ ಉಂಟಾಗಿದ್ದು ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿತ್ತು. ಈ ಬೆನ್ನಲ್ಲೇ ಇದೀಗ ಹೊನ್ನಾಳಿ ಶಾಸಕ ರೇಣುಕಾಚಾರ್ಯಗೆ ಹೊಸ ಕಾನೂನು ಸಂಕಷ್ಟ ಎದುರಾದಂತಾಗಿದೆ.