ಕಳೆದ ಏಳೆಂಟು ವರ್ಷಗಳಲ್ಲಿ ಚುನಾಯಿತ ಸರಕಾರವೆ ಕುಳಿತು ದೇಶದ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳುತ್ತಿದ್ದು ಅವುಗಳಲ್ಲಿ ಚುನಾವಣಾ ಆಯೋಗದ ದುರ್ಬಳಕೆಯೂ ಮಿತಿ ಮೀರಿದೆ ಎನ್ನುವ ಸಂಶಯ ಜನರ ಮನಸ್ಸಿನಲ್ಲಿದೆ. ತಂತ್ರಜ್ಞಾನದ ಬಗ್ಗೆ ತನ್ನ ಅತಿಯಾದ ವ್ಯಾಮೋಹವನ್ನು ಪ್ರದರ್ಶಿಸುತ್ತಿರುವ ಚುನಾವಣಾ ಆಯೋಗವು ಕೇವಲ ಮಾಹಿತಿ ಹಕ್ಕುಗಳ ಅಡಿಯಲ್ಲಿನ ಪ್ರಶ್ನೆಗಳನ್ನು ಕಡೆಗಣಿಸಿದ್ದಲ್ಲದೆ ಇವಿಎಂಗಳ ಪಾವಿತ್ರ್ಯತೆ ಮತ್ತು ಮತದಾರರಿಗೆ ಅವುಗಳ ನ್ಯಾಯಯುತ ಕಾರ್ಯನಿರ್ವಹಣೆಯ ಖಾತರಿಯ ಬಗ್ಗೆ ಪದೇ ಪದೇ ಏಳುತ್ತಿರುವ ಪ್ರಶ್ನೆಗಳಿಗೆ ಉತ್ತರಿಸಬೇಕಿದೆ ಎನ್ನುತ್ತಾರೆ ಎಂ.ಜಿ. ದೇವಸಹಾಯಮ್ ಎಂಬ ಅಂಕಣಕಾರರುˌ ತಮ್ಮ ಜನವರಿ ೦೬, ೨೦೨೩ರ ‘ದಿ ವೈರ್’ ವೆಬ್ ಜರ್ನಲ್ ನಲ್ಲಿ ಲೇಖನದಲ್ಲಿ. ದೇವಸಹಾಯಮ್ ಅವರು ‘ಭಾರತದ ಚುನಾವಣಾ ಆಯೋಗವು ಪ್ರಜಾಪ್ರಭುತ್ವ ವ್ಯವಸ್ಥೆಗಿಂತ ಅಧುನಿಕ ತಂತ್ರಜ್ಞಾನದಲ್ಲಿ ಹೆಚ್ಚು ಆಸಕ್ತಿ ತೋರುತ್ತಿದೆ. ಭಾರತವು ಜಗತ್ತಿನ ಎಲ್ಲ ಪ್ರಜಾಪ್ರಭುತ್ವಗಳ ತಾಯಿ ಎಂದು ಪ್ರಧಾನಿ ನರೇಂದ್ರ ಮೋದಿಯವರು ಪದೇ ಪದೆ ಹೇಳುತ್ತಿರುವಾಗಲೂ ಅವರ ಆಶಯಕ್ಕೆ ಬದ್ಧರಾಗಿರಬೇಕಾದ ಆಯೋಗ ಅದನ್ನು ಲಘುವಾಗಿ ತೆಗೆದುಕೊಂಡಿದ್ದಾರೆ ಎಂದಿದ್ದಾರೆ
ಚುನಾವಣಾ ಆಯೋಗವು ಪ್ರಸ್ತುತ, ೨೦೨೩ ರ ಜನವರಿ ೨೩-೨೬ ರಂದು ‘ಚುನಾವಣೆಗಳಲ್ಲಿ ತಂತ್ರಜ್ಞಾನದ ಬಳಕೆಯ ಉಪಕ್ರಮಗಳು’ ಎಂಬ ವಿಷಯದ ಮೇಲೆ ಜಾಗತಿಕ ಸಮ್ಮೇಳನವನ್ನು ಆಯೋಜಿಸುವ ಸಿದ್ಧತೆಯಲ್ಲಿ ನಿರತವಾಗಿತ್ತು. ತಂತ್ರಜ್ಞಾನದ ಏಕೀಕರಣದ ಮೂಲತ ಚುನಾವಣೆಗಳಲ್ಲಿ ಮತದಾರರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಸಮ್ಮೇಳನ ಆಯೋಜಿಸಲು ಆಯೋಗ ಯೋಚಿಸಿತ್ತು. ಆದರೆ ಆಯೋಗವು ತಂತ್ರಜ್ಞಾನದ ಬಳಕೆಯ ಬಗ್ಗೆ ಅತಿಯಾದ ಉತ್ಸಾಹ ತೋರುತ್ತಿದೆಯೆ ಹೊರತು, ಇವಿಎಂ ಮತದಾನ ಮತ್ತು ಮತ ಎಣಿಕೆಯಲ್ಲಿನ ‘ಪ್ರಜಾಪ್ರಭುತ್ವ ತತ್ವ’ಗಳ ಅನುಸರಣೆಯನ್ನು ಆಯೋಗ ಕಡೆಗಣಿಸಿದೆ. ಆಯೋಗದ ಈ ಉಪೇಕ್ಷೆಯು ಭಾರತದ ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯತೆಯನ್ನು ನಾಶಪಡಿಸುತ್ತಿದೆ. ಪ್ರಜಾಪ್ರಭುತ್ವದ ತತ್ವಗಳು ಪ್ರತಿಯೊಬ್ಬ ಮತದಾರನು ತನ್ನ ಮತವನ್ನು ಚಲಾಯಿಸಿದ ಉದ್ದೇಶಿತ ಕಾರಣˌ ಆತ ಮತವನ್ನು ದಾಖಲಿಸಿದ ಹಾಗೆ ದಾಖಲೆಯಾಗಿದೆಯಾ ಮತ್ತು ದಾಖಲೆಯಲ್ಲಿರುವಂತೆಯೆ ಮತ ಎಣಿಕೆಯಾಗಿದೆಯಾ ಎನ್ನುವುದನ್ನ ಖಾತ್ರಿ ಪಡಿಸಿಕೊಳ್ಳುವ ಹಕ್ಕುಗಳನ್ನು ಪ್ರತಿಪಾದಿಸುತ್ತವೆ ಎನ್ನುವುದು ದೇವಸಹಾಯಮ್ ಅವರ ಅಭಿಮತವಾಗಿದೆ. ಚುನಾವಣಾ ಆಯೋಗದ ತಂತ್ರಜ್ಞಾನ ಬಳಕೆಯ ಅತಿಯಾದ ಗೀಳು ಭಾರತದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌಣವಾಗಿಸುತ್ತ ಯಂತ್ರಗಳ ಹುಚ್ಚಾಟಕ್ಕೆ ಹಾದಿ ಮಾಡಿಕೊಡುತ್ತಿದೆ ಎನ್ನುವದು ಲೇಖಕರ ಅಂಬೋಣವಾಗಿದೆ.
ಚುನಾವಣಾ ಆಯೋಗವು ದೇಶೀಯ ವಲಸಿಗರಿಗೆ ರಿಮೋಟ್ ಮತದಾನದ ಸೌಲಭ್ಯ ವಿಸ್ತರಿಸುವ ತನ್ನ ಯೋಜನೆಯನ್ನು ಪ್ರಕಟಿಸಿದೆ. ಆಯೋಗವ ಒಂದು ಮೂಲಮಾದರಿ ಬಹು-ಕ್ಷೇತ್ರದ ರಿಮೋಟ್ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (RVM) ಅನ್ನು ಅಭಿವೃದ್ಧಿಪಡಿಸಿದ್ದು ˌ ಅದು ಒಂದೇ ರಿಮೋಟ್ ಪೋಲಿಂಗ್ ಬೂತ್‌ನಿಂದ ಬಹು ಕ್ಷೇತ್ರಗಳನ್ನು ನಿರ್ವಹಿಸುತ್ತದೆ ಎನ್ನಲಾಗುತ್ತದೆ. ಚುನಾವಣಾ ಆಯೋಗವು ಕಾನೂನು, ಕಾರ್ಯಾಚರಣೆ, ಆಡಳಿತಾತ್ಮಕ ಮತ್ತು ತಾಂತ್ರಿಕ ಸವಾಲುಗಳ ಕುರಿತು ರಾಜಕೀಯ ಪಕ್ಷಗಳಿಂದ ಅಭಿಪ್ರಾಯಗಳನ್ನು ಕೇಳುವ ಪರಿಕಲ್ಪನೆಯ ಟಿಪ್ಪಣಿಯನ್ನು ತೇಲಿಸಿದೆ. ಇದು ಮತದಾರರನ್ನು ತಿರಸ್ಕಾರದಿಂದ ನಿರ್ಲಕ್ಷಿಸಿದೆ. ಆಯೋಗದ ಈ ನಡೆಯು ಚುನಾವಣೆಗಳು ಕೇವಲ ರಾಜಕೀಯ ಪಕ್ಷಗಳ ನಡುವೆ ಆಡುವ ಆಟದಂತ್ತಿದ್ದು ಅಲ್ಲಿ ಮತದಾರ ಪಾತ್ರವಿಲ್ಲ ಎನ್ನುವ ಧೋರಣೆ ಎದ್ದು ಕಾಣುತ್ತದೆ. ಇದು ಚುನಾವಣಾ ಪ್ರಜಾಪ್ರಭುತ್ವದ ಬಗ್ಗೆ ಆಯೋಗಕ್ಕಿರುವ ಅಜ್ಞಾನವನ್ನು ತೋರುತ್ತದೆ ಎನ್ನುತ್ತಾರೆ ಲೇಖಕರು. ಇದಕ್ಕೆ ಪೂರಕವಾಗಿ, ಆಯೋಗದ ಪತ್ರಿಕಾ ಪ್ರಕಟಣೆಯು ಹೀಗೆ ಹೇಳುತ್ತದೆ: “ತಾಂತ್ರಿಕ ಪ್ರಗತಿಯ ಯುಗದಲ್ಲಿ ವಲಸೆ ಆಧಾರಿತ ಅಮಾನ್ಯೀಕರಣವು ಒಂದು ಆಯ್ಕೆಯಾಗಿಲ್ಲ. ೨೦೧೯ ರ ಸಾರ್ವತ್ರಿಕ ಚುನಾವಣೆಗಳಲ್ಲಿ ೬೭.೪ % ಮತದಾನವಾಗಿದೆ ಮತ್ತು ವಿವಿಧ ರಾಜ್ಯ ಹಾಗು ಕೇಂದ್ರಾಡಳಿತ ಪ್ರದೇಶಕ್ಕೆ ಸೇರಿದ ೩೦ ಕೋಟಿಗೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಿಲ್ಲ.”
ಹಾಗಾಗಿˌ ಆಯೋಗವು ಮುಂದುವರೆದು: “ವಿಶ್ವಾಸಾರ್ಹ, ಪ್ರವೇಶಿಸಬಹುದಾದ ಮತ್ತು ಎಲ್ಲಾ ಮಧ್ಯಸ್ಥಗಾರರಿಗೆ ಸ್ವೀಕಾರಾರ್ಹವಾದ ತಾಂತ್ರಿಕ ಪರಿಹಾರವನ್ನು ಕಂಡುಹಿಡಿಯುವ ಉದ್ದೇಶದಿಂದ, ಆಯೋಗವು ಈಗ ಮತದಾನವನ್ನು ಸಕ್ರಿಯಗೊಳಿಸಲು ಸಮಯ-ಪರೀಕ್ಷಿತ ಎಮ್ ೩ ಇವ್ಹಿಎಂ ಗಳ ಮಾರ್ಪಡಿಸಿದ ಆವೃತ್ತಿಯನ್ನು ಬಳಸುವ ಆಯ್ಕೆಯನ್ನು ಅನ್ವೇಷಿಸಿದೆ. ದೇಶಿಯ ವಲಸಿಗರು ದೂರದ ಮತಗಟ್ಟೆಗಳು ಅಂದರೆ, ಸ್ವಕ್ಷೇತ್ರದ ಹೊರಗಿನ ಮತಗಟ್ಟೆಗಳಿಂದ ಮತದಾನ ಮಾಡುವ ಅವಕಾಶವನ್ನು ಕಲ್ಪಿಸಲಾಗುತ್ತದೆ” ಎಂದು ಆಯೋಗ ಹೇಳುತ್ತದೆ. ಈ ರಿಮೋಟ್ ವೋಟಿಂಗ್ ಸೌಲಭ್ಯವು ವಲಸಿಗ ಮತದಾರನು ತನ್ನ ಮತದಾನದ ಹಕ್ಕು ಚಲಾಯಿಸಲು ಅವನ/ಅವಳ ತವರು ಜಿಲ್ಲೆಗೆ ಹೋಗುವ ಅಗತ್ಯವಿಲ್ಲ ಎನ್ನುವುದು ಆಯೋಗದ ವಾದವಾಗಿದೆ. ಇವಿಎಂನ ಈ ಮಾರ್ಪಡಿಸಿದ ರೂಪದಿಂದ ಒಂದೇ ರಿಮೋಟ್ ಪೋಲಿಂಗ್ ಬೂತ್‌ನಿಂದ ೭೨ ಬಹು ಕ್ಷೇತ್ರಗಳನ್ನು ನಿರ್ವಹಿಸಬಹುದು ಎನ್ನುವುದು ಆಯೋಗದ ಪ್ರತಿಪಾದನೆಯಾಗಿದೆ. ಈ ಉಪಕ್ರಮವು ಕಾರ್ಯಗತಗೊಂಡರೆ, ಇದು ವಲಸಿಗರ ಸಾಮಾಜಿಕ ಪರಿವರ್ತನೆಗೆ ಕಾರಣವಾಗಬಹುದು ಮತ್ತು ಆಗಾಗ್ಗೆ ನಿವಾಸಗಳನ್ನು ಬದಲಾಯಿಸುವುದು, ಸಾಕಷ್ಟು ಸಾಮಾಜಿಕ ಮತ್ತು ಭಾವನಾತ್ಮಕ ಸಂಪರ್ಕವಿಲ್ಲದಂತಹ ವಿವಿಧ ಕಾರಣಗಳಿಗಾಗಿ ಅವರು ತಮ್ಮ ಕೆಲಸದ ಸ್ಥಳದಲ್ಲಿ ತಮ್ಮನ್ನು ತಾವು ನೋಂದಾಯಿಸಿಕೊಳ್ಳಲು ಹಿಂಜರಿಯುವಷ್ಟು ಅವರ ಊರಿನೊಂದಿಗೆ ಸಂಪರ್ಕ ಸಾಧಿಸಬಹುದು.
ವಲಸೆಯ ಪ್ರದೇಶದ ಸಮಸ್ಯೆಗಳೊಂದಿಗೆ, ಅವರು ಶಾಶ್ವತ ನಿವಾಸ/ಆಸ್ತಿ ಇತ್ಯಾದಿಗಳನ್ನು ಹೊಂದಿರುವುದರಿಂದ ಅವರ ಮನೆ/ಸ್ಥಳೀಯ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಅವರ ಹೆಸರನ್ನು ತೆಗೆದು ಹಾಕಲು ಅವರು ಇಚ್ಛಿಸುವುಲ್ಲ ಎನ್ನುವುದು ಆಯೋಗದ ಸಮಜಾಯಷಿಯಾಗಿದೆ. ಆಯೋಗದ ಪ್ರತಿಪಾದನೆಯೇನೊ ಚೆನ್ನಾಗಿದೆ. ಆದರೆ ಮೇ ೨, ೨೦೨೨ ರಲ್ಲಿ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರನ್ನು ಉದ್ದೇಶಿಸಿ ೧೧೨ ಜನ ತಾಂತ್ರಿಕ ವೃತ್ತಿಪರರು, ಶಿಕ್ಷಣ ತಜ್ಞರು ಮತ್ತು ಮಾಜಿ ಹಿರಿಯ ನಾಗರಿಕ ಸೇವೆಯ ನೌಕರರು ಸಹಿ ಮಾಡಿದ ಜ್ಞಾಪಕ ಪತ್ರದಲ್ಲಿ ಇವಿಎಂ ಮತದಾನ ಮತ್ತು ಮತ ಎಣಿಕೆಯ ಅತ್ಯಂತ ಸಮಗ್ರತೆ ಮತ್ತು ವಿಶ್ವಾಸಾರ್ಹತೆಯ ಕುರಿತು ಎತ್ತಲಾಗಿರುವ ಪ್ರಶ್ನೆಗಳ ಕುರಿತು ಚುನಾವಣಾ ಆಯೋಗ ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎನ್ನುವುದು ಲೇಖಕರ ವಾದವಾಗಿದೆ. ಈ ಜ್ಞಾಪಕ ಪತ್ರವು ಚುನಾವಣಾ ಪ್ರಜಾಪ್ರಭುತ್ವದ ತತ್ವಗಳ ಉಳಿವಿನಿಂದ ಭಾರತದ ಭವಿಷ್ಯವು ನಿಂತಿರುವುದರಿಂದ ಅದಕ್ಕೆ ಪೂರಕವಾಗಿರುವ ಕೆಲವು ಅಂಶಗಳು ಮತ್ತು ಸಮಸ್ಯೆಗಳನ್ನು ಎತ್ತಿದ್ದು ಅದು ಈ ಕೆಳಗಿನ ಅಂಶಗಳ ಬಗ್ಗೆ ಸ್ಪಷ್ಟೀಕರಣವನ್ನು ಕೋರಿರುವ ಕುರಿತು ಲೇಖಕರು ಬೆಳಕು ಚೆಲ್ಲಿದ್ದಾರೆ.