ನಾಮಪತ್ರ ಸಲ್ಲಿಕೆ ಹಾಗು ನಾಮಪತ್ರ ಪರಿಶೀಲನೆ ಕಾರ್ಯ ಮುಕ್ತಾಯವಾಗಿದೆ. ಇನ್ಮುಂದೆ ಎಲ್ಲಾ ರಾಜಕೀಯ ಪಕ್ಷಗಳು ಪ್ರಚಾರದ ಅಂಗಳಕ್ಕೆ ಧುಮುಕುತ್ತಿದ್ದು, ಬಿಜೆಪಿ ರಾಷ್ಟ್ರೀಯ ನಾಯಕರು ಈಗಾಗಲೇ ರಾಜ್ಯಕ್ಕೆ ದಂಡಯಾತ್ರೆ ಶುರು ಮಾಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಕರ್ನಾಟಕದಲ್ಲಿ ಬೀಡು ಬಿಟ್ಟಿದ್ದು, ಮತ ಸೆಳೆಯುವ ತಂತ್ರಗಾರಿಕೆ ಶುರು ಮಾಡಿದ್ದಾರೆ. ಬೀದರ್‌ನಲ್ಲಿ ಪ್ರಬುದ್ಧರ ಜೊತೆಗೆ ಸಂವಾದ ನಡೆಸಿದ್ದಾರೆ. ಖಾಸಗಿ ಹೊಟೇಲ್‌ನಲ್ಲಿ ಕೀ ವೋಟರ್ಸ್ ಜೊತೆ ಸಭೆ ನಡೆಸಿದ್ದು, ಜಿಲ್ಲೆಯ ವ್ಯಾಪಾರಿಗಳು, ಸಮುದಾಯದ ಮುಖಂಡರು, ಕೇಂದ್ರ ಸಚಿವ ಭಗವಂತ ಖುಬಾ, ಬಿಜೆಪಿ ಉತ್ತರ ಕ್ಷೇತ್ರದ ಅಭ್ಯರ್ಥಿ ಈಶ್ವರ ಸಿಂಗ್ ಠಾಕೂರ್ ಭಾಗಿಯಾಗಿದ್ದರು. ಪ್ರಚಾರ ಹಾಗು ಎದುರಾಳಿ ಅಭ್ಯರ್ಥಿ ಮಣಿಸಲು ಬೇಕಿರುವ ತಂತ್ರಗಾರಿಕೆಗಳ ಬಗ್ಗೆ ಚರ್ಚೆ ನಡೆಸಲಾಯ್ತು.

ಅಮಿತ್ ಷಾಗೆ ಮೊದಲೇ ಎದುರಾಯ್ತು ಅಪಶಕುನ..!
ಕೇಂದ್ರ ಗೃಹ ಸಚಿವ ಅಮಿತ್ ಷಾ ಕೂಡ ರಾಜ್ಯ ಪ್ರವಾಸ ಶುರುಮಾಡಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ವಿಜಯಪುರದಲ್ಲಿ ರೋಡ್ ಶೋ ಹಮ್ಮಿಕೊಂಡಿದ್ದರು. ದೇವನಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡಲು ಯೋಜಿಸಿದ್ದರು. ಆದರೆ ದೇವನಹಳ್ಳಿ ಸುತ್ತಮುತ್ತ ಭಾರೀ ಮಳೆಯಾದ ಕಾರಣ ರೋಡ್ ಶೋ ರದ್ದು ಮಾಡಲಾಗಿದೆ. ಕಾಂಗ್ರೆಸ್ ಹಿರಿಯ ನಾಯಕ ಕೆ.ಹೆಚ್ ಮುನಿಯಪ್ಪ ಕ್ಷೇತ್ರದಲ್ಲಿ ಸಂಚಲನ ಶುರು ಮಾಡುವ ಅಮಿತ್ ಷಾ ಯೋಜನೆಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ರಾಜ್ಯ ಬಿಜೆಪಿ ನಾಯಕರ ಜೊತೆಗೆ ಅಮಿತ್ ಷಾ ಸಭೆ ನಡೆಸಲಿದ್ದು, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳ ವಿರುದ್ಧ ಪ್ರಚಾರ ಮಾಡುವುದು ಹೇಗೆ..? ಯಾವ ಯಾವ ಅಭ್ಯರ್ಥಿಗಳನ್ನು ಹೇಗೆ ನಿಯಂತ್ರಣ ಮಾಡಬೇಕು..? ಕಾಂಗ್ರೆಸ್ ನಾಗಾಲೋಟಕ್ಕೆ ನಿಯಂತ್ರಣ ಹಾಕುವುದು ಹೇಗೆ..? ಎನ್ನುವ ಲೆಕ್ಕಾಚಾರವನ್ನು ಅಮಿತ್ ಷಾ ಸೂಚಿಸಲಿದ್ದಾರೆ. ಇಂದು ರಾತ್ರಿ ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ವಾಸ್ತವ್ಯ ಹೂಡಲಿದ್ದು, ನಾಳೆ ಬೆಳಗ್ಗೆ ಮತ್ತೆ ಸಭೆ ನಡೆಸಿದ ಬಳಿಕ ದೆಹಲಿಗೆ ವಾಪಸ್ ಆಗಲಿದ್ದಾರೆ.

ಬಂಡಾಯ ಶಮನಕ್ಕೆ ಅಮಿತ್ ಷಾ ಕೊಡ್ತಾರಾ ಮದ್ದು..!
ಬಿಜೆಪಿಯಲ್ಲಿ ಟಿಕೆಟ್ ಸಿಗದೆ ಸಾಕಷ್ಟು ಕ್ಷೇತ್ರಗಳಲ್ಲಿ ಬಂಡಾಯದ ಬಿರುಗಾಳಿ ಎದ್ದಿದ್ದು ಅಮಿತ್ ಷಾ ಮದ್ದು ಕೊಡುವ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಟಿಕೆಟ್ ವಂಚಿತರು ಬಂಡಾಯವಾಗಿ ಸ್ಪರ್ಧೆ ಮಾಡಿರುವುದು ಹಾಗು ಈಗಾಗಲೇ ಟಿಕೆಟ್ ಸಿಗದ ಕಾರಣಕ್ಕೆ ಪಕ್ಷ ತೊರೆದವರನ್ನು ಮನವೊಲಿಸಿ ಮತ್ತೆ ಪಕ್ಷಕ್ಕೆ ಸೆಳೆಯುವುದು ಹೇಗೆ..? ಅವರಿಗೆ ಏನೆಲ್ಲಾ ಭರವಸೆಯನ್ನು ಕೊಡಬೇಕು ಒಂದು ವೇಳೆ ಮನವೊಲಿಕೆಗೆ ಬಗ್ಗದಿದ್ದರೆ ಏನು ಮಾಡಬೇಕು ಅನ್ನೋ ಬಗ್ಗೆಯೂ ಚರ್ಚೆ ನಡೆಸಲಾಗುತ್ತದೆ. ಇದರ ಜೊತೆಗೆ ಕನಕಪುರ ಹಾಗು ಮೈಸೂರಿನ ವರುಣಾ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಪಡೆ ಹೇಗಿದೆ. ಕಾಂಗ್ರೆಸ್‌ನ ಡಿ.ಕೆ ಶಿವಕುಮಾರ್ ಹಾಗು ಸಿದ್ದರಾಮಯ್ಯ ಅವರನ್ನು ಕಟ್ಟಿ ಹಾಕಲು ಇರುವ ಮಾರ್ಗಗಳು ಏನು..? ಸಿದ್ದರಾಮಯ್ಯ ಒಬ್ಬರನ್ನು ಕಟ್ಟಿ ಹಾಕಿದರೆ ಬಿಜೆಪಿಗೆ ಆಗುವ ಲಾಭಗಳು ಏನೇನು ಎನ್ನುವ ಬಗ್ಗೆ ಅಮಿತ್ ಷಾ ನಾಯಕರಿಗೆ ಮನವರಿಕೆ ಮಾಡಿಕೊಡಲಿದ್ದಾರೆ ಎನ್ನಲಾಗಿದೆ.
ಸವದಿ ಹಾಗು ಶೆಟ್ಟರ್ ವಿರುದ್ಧ ರಣತಂತ್ರಕ್ಕೆ ತಯಾರಿ..
ಈಗಾಗಲೇ BJP ಇಂದ ಬಂಡಾಯ ಎದ್ದು ಕಾಂಗ್ರೆಸ್ ಸೇರ್ಪಡೆ ಆಗಿರುವ ಜಗದೀಶ್ ಶೆಟ್ಟರ್ ಹಾಗು ಲಕ್ಷ್ಮಣ ಸವದಿಯಿಂದ ಬಿಜೆಪಿಗೆ ಲಿಂಗಾಯತ ಸಮುದಾಯ ತಿರಿಗಿ ಬೀಳುವ ಸಾಧ್ಯತೆಯಿದೆ. ಇದೇ ಕಾರಣಕ್ಕೆ ಲಿಂಗಾಯತ ಸಮುದಾಯದ ಸಭೆ ಮಾಡಲಾಗಿದ್ದು, ಅಮಿತ್ ಷಾ ಜೊತೆಗೆ ಚರ್ಚೆ ನಡೆಸಿದ ಬಳಿಕ ಡ್ಯಾಮೇಜ್ ಕಂಟ್ರೋಲ್ ಮಾಡುವ ಸಂಬಂಧ ಯೋಜನೆಗಳನ್ನು ರೂಪಿಸಲಿದ್ದಾರೆ. ಈಗಾಗಲೇ ಮಾಜಿ ಸಿಎಂ ಕುಮಾರಸ್ವಾಮಿ ಬ್ರಾಹ್ಮಣ ಸಿಎಂ ಲೆಕ್ಕಾಚಾರದ ಬಗ್ಗೆ ನೀಡಿರುವ ಹೇಳಿಕೆ ಹಾಗು ಇತ್ತೀಚಿಗೆ ಬಿಜೆಪಿಯಲ್ಲಿ ನಡೆದಿರುವ ಬೆಳವಣಿಗೆಯಿಂದ ಲಿಂಗಾಯತ ಸಮುದಾಯ ಮುನಿಸಿಕೊಂಡ ಅನುಭವ ಆಗ್ತಿದ್ದು, ಒಂದು ವೇಳೆ ಲಿಂಗಾಯತ ಶಾಸಕರೇ ಸಿಎಂ ಆಗಲಿದ್ದಾರೆ ಎನ್ನುವ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದರೆ ಬಿಜೆಪಿಗೆ ಲಾಭ ಆಗುತ್ತಾ..? ಲಿಂಗಾಯತರೇ ಮುಖ್ಯಮಂತ್ರಿ ಎಂದಾಗ ಲಿಂಗಾಯತ ವೀರಶೈವ ಸಮುದಾಯದ ಮೇಲೆ ಪರಿಣಾಮ ಹೇಗಿರುತ್ತೆ ಅನ್ನೋ ಬಗ್ಗೆಯೂ ಚರ್ಚೆ ಮಾಡಲಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಲಿಂಗಾಯತರ ಶೇಕಡವಾರು ಮತಗಳು ಬಿಜೆಪಿಗೆ ಕಡಿಮೆ ಆಗುವುದನ್ನು ತಡೆಯುವ ಬಗ್ಗೆಯೂ ಮಹತ್ವದ ಚರ್ಚೆ ನಡೆಸಲಾಗುತ್ತದೆ ಎಂದಿದ್ದಾರೆ.
ಕೃಷ್ಣಮಣಿ










