ಅತ್ತ ಕೋರ್ಟ್ ನಲ್ಲಿ ಬಿಬಿಎಂಪಿ ಚುನಾವಣೆ ಸಂಬಂಧ ಕೇಸ್ ನಡೆಯುತಿದ್ರೆ, ಇತ್ತ ಬಿಬಿಎಂಪಿ ಚುನಾವಣಾ ಪ್ರಕ್ರಿಯೆ ಮುಂದುವರೆದಿದೆ. ರಾಜ್ಯ ಚುನಾವಣಾ ಆಯೋಗ ಇಂದಿನಿಂದ ಅಧಿಕೃತವಾಗಿ ಪ್ರಕ್ರಿಯೆ ಶುರು ಮಾಡಿದೆ. ಹೌದು, ಬಿಬಿಎಂಪಿ ಚುನಾವಣೆಗೆ ಮತದಾರರ ಕರಡು ಪಟ್ಟಿ ಸಿದ್ಧಗೊಂಡಿದೆ. ರಾಜ್ಯ ಚುನಾವಣಾ ಆಯೋಗ ಇಂದು ಕರಡು ಪಟ್ಟಿಯನ್ನ ಪ್ರಕಟ ಮಾಡಿದ್ದು, ಸೆಪ್ಟೆಂಬರ್ 2 ರ ವರೆಗೂ ಆಕ್ಷೇಪಣೆ ಸಲ್ಲಿಸೋಕೆ ಅವಕಾಶ ನೀಡಿದೆ. ಅಂತಿಮವಾಗಿ ಸೆಪ್ಟೆಂಬರ್ 22 ರಂದು ಮತದಾರರ ಪಟ್ಟಿ ಅಂತಿಮವಾಗಲಿದೆ. ಸದ್ಯ ಪ್ರಕಟಗೊಂಡಿರೋ ಕರಡು ಪಟ್ಟಿ ಪ್ರಕಾರ ಬಿಬಿಎಂಪಿ ವ್ಯಾಪ್ತಿಯ 243 ವಾರ್ಡ್ ಗಳಲ್ಲಿ ಒಟ್ಟು 79,08,394 ಮತದಾರರಿದ್ದಾರೆ. ಇದ್ರಲ್ಲಿ 41,09,496 ಪುರುಷರು, 37,97,497 ಮಹಿಳೆಯರು ಹಾಗೂ 1,401 ತೃತೀಯ ಲಿಂಗಿಗಳಿದ್ದಾರೆ. ಅಂತಿಮ ಮತದಾರರ ಪಟ್ಟಿಯನ್ನ ಸಪ್ಟೆಂಬರ್ 22 ರಂದು ಬಿಡುಗಡೆ ಮಾಡಲು ಚುನಾವಣಾ ಆಯೋಗ ನಿರ್ಧರಿಸಿದೆ.
ಬಿಬಿಎಂಪಿ ವ್ಯಾಪ್ತಿಯ ಕರಡು ಮತದಾರರ ಪಟ್ಟಿ ಪ್ರಕಟ
ಬಿಬಿಎಂಪಿ ಚುನಾವಣೆ ನಡೆಸುವ ನಿಟ್ಟಿನಲ್ಲಿ ರಾಜ್ಯ ಚುನಾವಣಾ ಆಯೋಗ ಮತದಾರರ ಪಟ್ಟಿ ತಯಾರು ಮಾಡಲಾಗಿದೆ. ಇಂದು ಬಿಬಿಎಂಪಿ ಕರಡು ಮತದಾರರ ಪಟ್ಟಿಯನ್ನ ಬಿಬಿಎಂಪಿ ವೆಬ್ ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯಾ.? ಇಲ್ವಾ.? ಎಂಬುವುದರ ಬಗ್ಗೆ ಪರಿಶೀಲನೆ ಮಾಡಿಕೊಳ್ಳಬಹುದು. ಬದಲಾವಣೆ ಇದ್ದಲ್ಲಿ, ಹೆಸರು ಇಲ್ಲದೆ ಇದ್ದಲ್ಲಿ, ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. www.bbmp.gov.in ವೆಬ್ ಸೈಟ್ ಗೆ ಇಲ್ಲವೇ ಬಿಬಿಎಂಪಿ ಕಚೇರಿಗೆ ಆಗಮಿಸಿ ದೂರು ಸಲ್ಲಿಸಲು ಅವಕಾಶವಿದೆ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

ಬಿಬಿಎಂಪಿ ಚುನಾವಣೆಯ ಸಾಧಕ ಬಾಧಕಗಳೇನು ?
ಇನ್ನೆರಡು ತಿಂಗಳಿನಲ್ಲಿ ಬಿಬಿಎಂಪಿ ಚುನಾವಣೆ ನಡೆಸಲು ತಯಾರಿ ನಡೆದಿದೆ. 2022ರೊಳಗೆ ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಹೇಳಿದೆ. ಸುಪ್ರಿಂಕೋರ್ಟ್ ಸೂಚನೆ ಹಿನ್ನೆಲೆ ಬಿಬಿಎಂಪಿ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿದ್ದು, ಕೋರ್ಟ್ ಮೊರೆ ಹೋಗಿರುವುದು ಚುನಾವಣೆ ನಡೆಸಲು ಅಡ್ಡಿಯಾಗಲ್ಲ. ಸುಪ್ರಿಂ ಸೂಚನೆಯಿಂದಾಗಿ ಚುನಾವಣೆ ಪ್ರಕ್ರಿಯೆ ಶುರುವಾಗಿದೆ. ಹಾಗೊಂದು ವೇಳೆ ಕೋರ್ಟ್ ನಿಂದ ಸೂಚನೆ ಬಂದ್ರೆ ಮುಂದೆ ಅದನ್ನು ಪಾಲನೆ ಮಾಡಬೇಕಾಗುತ್ತದೆ.
2015 ರ ಬಿಬಿಎಂಪಿ ಚುನಾವಣೆಯಲ್ಲಿ 71 ಲಕ್ಷದ 22 ಸಾವಿರ ಮತದಾರರು ಇದ್ದರು. ಈ ಬಾರಿ ಏಳು ಲಕ್ಷ ಮತದಾರರು ಹೆಚ್ಚಳವಾಗಿದೆಯಷ್ಟೆ. ಬೆಂಗಳೂರು ಮತದಾನ ಪ್ರಮಾಣ ಕಡಿಮೆಯಿದೆ. ಇದನ್ನು ಹೆಚ್ಚಿಸಲು ಚುನಾವಣಾ ಅಯೋಗ ಪ್ಲಾನ್ ಮಾಡುತ್ತಿದೆ. ಒಟ್ಟಿನಲ್ಲಿ ಮೀಸಲಾತಿ, ಪುನರ್ ವಿಂಗಡಣೆ ಕುರಿತು ಕೋರ್ಟ್ ಲ್ಲಿ ಕೇಸ್ ನಡೆಯುತ್ತಿರುವ ಮಧ್ಯೆ ಚುನಾವಣಾ ಆಯೋಗ ಬಿಬಿಎಂಪಿ ಚುನಾವಣೆಗೆ ಸನ್ನದ್ದವಾಗ್ತಿದೆ.