ರಾಷ್ಟ್ರಪತಿ ಚುನಾವಣೆಯ ಫಲಿತಾಂಶ ಹೊರಬೀಳುವ ಮುನ್ನವೇ ಎನ್ ಡಿಎ ಅಭ್ಯರ್ಥಿ ದ್ರೌಪದಿ ಮರ್ಮು ಅವರ ಗೆಲುವಿಗಾಗಿ ತವರಿನಲ್ಲಿ ಲಡ್ಡು ಹಂಚುವ ಮೂಲಕ ಸಂಭ್ರಮಾಚರಣೆಗೆ ಸಿದ್ಧತೆ ಆರಂಭಗೊಂಡಿದೆ.
ಒಡಿಶಾದ ರಾಜಧಾನಿ ಭುವನೇಶ್ವರದಿಂದ 250 ಕಿ.ಮೀ. ದೂರದ ಉಪೇರ್ ಬೆಡಾ ಗ್ರಾಮದಲ್ಲಿ ಜನರು ಸಂಭ್ರಮಾಚರಣೆಯ ಮೂಡ್ ನಲ್ಲಿದ್ದು, ಎಲ್ಲೆಡೆ ಸಿಹಿ ವಿತರಿಸಿ ಸಂಭ್ರಮಿಸಲು ಸಿದ್ಧತೆ ನಡೆದಿದೆ.
ಒಡಿಶಾದ ಅತ್ಯಂತ ಕುಗ್ರಾಮದಲ್ಲಿ ಬುಡಕಟ್ಟು ಜನಾಂಗದಲ್ಲಿ ಹುಟ್ಟಿದ ದ್ರೌಪದಿ ಮರ್ಮು ಇಂದು ದೇಶದ ಅತೀ ಉನ್ನತ ಹುದ್ದೆಯಾದ ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿದ್ದು, ಸಂಜೆ ಫಲಿತಾಂಶ ಹೊರಬೀಳಲಿದೆ.
ಈಗಾಗಲೇ ಕೆಲವು ಪ್ರತಿಪಕ್ಷಗಳು ಕೂಡ ಬೆಂಬಲ ವ್ಯಕ್ತಪಡಿಸಿದ್ದರಿಂದ ಮರ್ಮು ಅವರ ಗೆಲುವು ನಿಶ್ಚಿತ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಜಯ ಸಾಧಿಸಿದರೆ ರಾಷ್ಟ್ರಪತಿ ಹುದ್ದೆ ಅಲಂಕರಿಸಿದ ಎರಡನೇ ಹಾಗೂ ಬುಡಕಟ್ಟು ಜನಾಂಗದ ಮೊದಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಲಿದ್ದಾರೆ. ಅಲ್ಲದೇ ಅತ್ಯಂತ ಕಿರಿಯ ರಾಷ್ಟ್ರಪತಿ ಎಂಬ ದಾಖಲೆಯನ್ನೂ ಬರೆಯಲಿದ್ದಾರೆ.