ಮುಂಬರುವ ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಭಾರೀ ಕುತೂಹಲವನ್ನು ಕೆರಳಿಸಿದೆ. 431 ವಿಧಾನಸಭಾ ಸ್ಥಾನಗಳಿಗೆ ಏಳು ಹಂತದಲ್ಲಿ ಚುನಾವಣೆ ನಡೆಯಲಿದೆ. ಈ ಬಾರಿಯ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ ಹಾಗೂ ಎಸ್ಪಿ ಮೈತ್ರಿಪಕ್ಷಗಳ ನಡುವೆ ಭಾರೀ ಹಣಾಹಣಿ ಇರಲಿದೆಯೆಂದು ಅಂದಾಜಿಸಲಾಗಿದೆ. ಆದರೆ, ಮಾಜಿ ಮುಖ್ಯಮಂತ್ರಿ, ದಲಿತ ಮಹಾನಾಯಕಿ ಮಾಯಾವತಿಯವರ ಪಕ್ಷಕ್ಕೆ ಈ ಚುನಾವಣೆಯು ನಿರ್ಣಾಯಕವಾಗಲಿದೆ.
ಈಗಾಗಲೇ ನಡೆದಿರುವ ವಾಹಿನಿಗಳ ಸಮಿಕ್ಷೆ ವರದಿಗಳು ಮಾಯಾವತಿಯವರ ಬಹುಜನ ಸಮಾಜ ಪಕ್ಷವು (BSP) ಕೇವಲ ಮೂರು ಸೀಟುಗಳನ್ನು ಪಡೆಯಬಹುದು ಎಂದು ಊಹಿಸಿದೆ. ಇನ್ನು ಕೆಲವು ವರದಿಗಳು 7-15 ಸೀಟುಗಳಷ್ಟೇ ಪಡೆಯಬಹುದು ಎಂದು ಅಂದಾಜಿಸಿದೆ. ಸಮೀಕ್ಷೆಗಳ ವರದಿಯ ಆಧಾರದಲ್ಲಿ ಹೇಳುವುದಾದರೆ, ಉತ್ತರ ಪ್ರದೇಶದಾದ್ಯಂತ ಕೇವಲ 13% ವೋಟ್ ಶೇರ್ ಅಷ್ಟೇ ಬಿಎಸ್ಪಿ ಪಡೆಯುತ್ತದೆ.
ಒಟ್ಟಾರೆ, ಎಲ್ಲಾ ಸಮೀಕ್ಷೆಗಳ ವರದಿಗಳು ಬಿಎಸ್ಪಿ ಈ ಬಾರಿ ಕಳಪೆ ಪ್ರದರ್ಶನ ನೀಡುವುದಾಗಿ ಹೇಳಿಕೊಂಡಿದೆ. ಎಂದೂ 20% ಕ್ಕಿಂತ ಕಡಿಮೆ ಮತ ಹಂಚಿಕೆ ಪಡೆದುಕೊಳ್ಳದಿದ್ದ ಬಿಎಸ್ಪಿ ಈ ಬಾರಿ 13% ಮತ ಹಂಚಿಕೆ ಪಡೆಯಬಹುದು ಎಂದು ಹೇಳಿದ ಸಮೀಕ್ಷೆಗಳ ಆಧಾರದಲ್ಲಿ ರಾಜಕೀಯ ವಿಶ್ಲೇಷಕರು ಈ ಬಾರಿಯ ಚುನಾವಣೆ ಬಳಿಕ ಮಾಯಾವತಿಯವರ ಬಿಎಸ್ಪಿಯು ಸಂಪೂರ್ಣ ಮಕಾಡೆ ಮಲಗಿಬಿಡುತ್ತದೆ ಎಂದು ವಿಶ್ಲೇಷಿಸುತ್ತಿದ್ದಾರೆ.
ಉತ್ತರಪ್ರದೇಶದಲ್ಲಿ ನಾಲ್ಕು ಬಾರಿ ಅಧಿಕಾರ ಹಿಡಿದಿದ್ದ, 2007 ರಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರ ಪಡೆದಿದ್ದ, ಅದರಲ್ಲೂ 21% ದಲಿತರು ಇರುವ ರಾಜ್ಯದಲ್ಲಿ 20% ಮತ ಹಂಚಿಕೆಯನ್ನೂ ಬಿಎಸ್ಪಿ ಪಡೆಯುದಿಲ್ಲವೆಂಬ ವರದಿಗಳು ಮಾಯಾವತಿಯವರ ರಾಜಕೀಯ ಭವಿಷ್ಯದ ಬಗ್ಗೆ ಗಂಭೀರವಾದ ಪ್ರಶ್ನೆಗಳು ಏಳಲು ಕಾರಣವಾಗಿದೆ.

ಹಾಗಾಗಿ, ಬಿಎಸ್ಪಿಯು ಈ ಬಾರಿಯ ವಿಧಾನಸಭೆ ಚುನಾವಣೆಯನ್ನು ಗಂಭಿರವಾಗಿ ಪರಿಗಣಿಸಿಲ್ಲ ಎಂಬ ಮಾತುಗಳೂ ಕೇಳಿ ಬಂದಿದ್ದವು. ಆದರೆ, ಮಾಯಾವತಿ ಹಾಗೂ ಬಿಎಸ್ಪಿ ತಣ್ಣಗೆ ಮಾಡುತ್ತಿರುವ ಕೆಲಸಗಳನ್ನು ಗಮನಿಸಿದರೆ ಬಿಎಸ್ಪಿ ಬಿರುಸು ಪಡೆದುಕೊಂಡಿರುವುದು ನೋಡಬಹುದು.
ಇದುವರೆಗೂ ಡಿಜಿಟಲ್ ಡೊಮೈನ್ನಲ್ಲಿ ಅಷ್ಟಾಗಿ ಕೆಲಸ ಮಾಡದ ಬಿಎಸ್ಪಿ ಈ ಬಾರಿ ಡಿಜಿಟಲ್ ಮುಖಾಂತರವೂ ಮತದಾರರನ್ನು ಸೆಳೆಯುವ ಕೈಂಕರ್ಯದಲ್ಲಿ ಗಂಭೀರವಾಗಿ ತೊಡಗಿದೆ. ಚುನಾವಣಾ ಸಂಬಂಧಿತ ಬಹಿರಂಗ ರ್ಯಾಲಿಗಳು ಅಷ್ಟಾಗಿ ನಡೆಯದಿದ್ದರೂ, ಬಿಎಸ್ಪಿ ಐಟಿ ಸೆಲ್ಗೆ ಭರ್ಜರಿ ತಯಾರಿ ನಡೆಸಲಾಗಿದೆ. ಈ ಬಾರಿ ಪ್ರತಿ ಜಿಲ್ಲಾ ಮಟ್ಟದಲ್ಲೂ ಡಿಜಿಟಲ್ ವಾರ್ ರೂಮನ್ನು ನಿರ್ಮಿಸಲಾಗಿದ್ದು, ಅದು ಲಕ್ನೋದಲ್ಲಿರುವ ಬಿಎಸ್ಪಿ ಕೇಂದ್ರ ವಾರ್ ರೂಮ್ಗೆ ಸಂಯೋಜಿಸಲಾಗಿದೆ. ಅಂದರೆ, ಡಿಜಿಟಲ್ ಸ್ವರೂಪದಲ್ಲಿ ರಾಜಕೀಯ ಚಟುವಟಿಕೆಗಳ ಬಿರುಸಿಗೆ ಬಿಎಸ್ಪಿ ಮೈ ಚಳಿ ಬಿಟ್ಟು ತೆರೆದುಕೊಂಡಿದೆ.
ಇನ್ನು, ಮಾಯಾವತಿಯವರು ಇತ್ತೀಚೆಗೆ ಬ್ರಾಹ್ಮಣರ ಹಾಗೂ ಮೇಲ್ಜಾತಿಗಳ ಓಲೈಕೆಯಲ್ಲಿ ತೊಡಗಿದ್ದಾರೆ. ಇದೂ ಬಿಎಸ್ಪಿ ಕುಸಿತಕ್ಕೆ ಕಾರಣವಾಗಬಹುದು ಎಂಬ ಮಾತುಗಳಿಗೆ ವ್ಯತಿರಿಕ್ತವಾಗಿ ಮಾಯಾವತಿಯವರು ದಲಿತ್ ಅಸ್ಮಿತೆಯನ್ನು ಮುಂದಿಟ್ಟೇ ಈ ಬಾರಿ ಚುನಾವಣೆ ಎದುರಿಸಲಿದ್ದಾರೆ ಎನ್ನುವುದಕ್ಕೆ ತಾಜಾ ಸಾಕ್ಷಿಯೂ ದೊರೆತಿದೆ.
ಆಗ್ರಾದಲ್ಲಿ ಕಳೆದ ಬುಧವಾರ ನೀಡಿದ ಇತ್ತೀಚಿನ ಹೇಳಿಕೆಯನ್ನು ಗಮನಿಸಿದರೆ ಅದು ಸ್ಪಷ್ಟವಾಗುತ್ತದೆ. ಆಗ್ರಾದಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಬೆಹೆನ್-ಜಿ ʼಉತ್ತರ ಪ್ರದೇಶದ ದಲಿತ್ ರಾಜಧಾನಿʼ ಎಂದು ಕರೆದಿದ್ದಾರೆ. ಅದರಲ್ಲೂ, ಅವರು ಟಿಕೆಟ್ ಹಂಚಿಕೆಯನ್ನು ಗಮನಿಸಿದರೆ, ಚುನಾವಣೆ ಹಾಗೂ ಜಾತಿ ಸಮೀಕರಣದ ನಾಡಿ-ಮಿಡಿತವನ್ನು ಅವರು ಕಳೆದುಕೊಂಡಿಲ್ಲ ಎಂಬುದು ಸಾಬೀತಾಗುತ್ತಿದೆ. ಅದೂ ಅಲ್ಲದೆ, ಈ ಬಾರಿಯ ಸ್ಪರ್ಧೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಅದಕ್ಕೆ ಬೇಕಾದ ಎಲ್ಲಾ ತಯಾರಿಯು ನಡೆಯುತ್ತಿದೆ, ಹಾಗೂ ಅದರ ಫಲವನ್ನೂ ಉಣ್ಣಲಿದ್ದೇವೆ ಎಂದು ಪಕ್ಷದ ಮೂಲಗಳು ಬಲವಾಗಿ ನಂಬಿಕೆ ಇಟ್ಟಿದೆ.
ಆಗ್ರಾ-ಅಲಿಘರ್ ಪ್ರಾಂತ್ಯದಲ್ಲಿ ರಾಮ್ವೀರ್ ಉಪಾಧ್ಯಾಯ ಮತ್ತು ಜೈವೀರ್ ಸಿಂಗ್ ಗಳನ್ನಿಟ್ಟು ಬ್ರಾಹ್ಮಣ-ಠಾಕೂರ್-ದಲಿತ್ ಜನಾಂಗವನ್ನು ಒಟ್ಟಿಗೆ ಕೊಂಡೊಯ್ಯುವ ಪ್ರಯತ್ನವನ್ನು ಬಿಎಸ್ಪಿ ಮಾಡಿತ್ತಾದರೂ ಅನುಕೂಲಸ್ಥ ಜಾತಿಗಳ ಇಬ್ಬರೂ ನಾಯಕರುಗಳು ಬಿಜೆಪಿಯೊಂದಿಗೆ ಸೇರುವುದರೊಂದಿಗೆ ಬಿಎಸ್ಪಿಯ ಆ ಕಾರ್ಯತಂತ್ರಗಳನ್ನು ಬುಡಮೇಲುಗೊಳಿಸಿದ್ದರು.
ಅದಾಗ್ಯೂ, ಈ ಪ್ರಾಂತ್ಯದಲ್ಲಿ ಬಿಎಸ್ಪಿ ಹಿಡಿತ ಅಷ್ಟಾಗಿ ಕಳೆದುಕೊಂಡಿಲ್ಲ. ಉಪಧ್ಯಾಯ್ ಪ್ರಭಾವವನ್ನು ಕ್ಷೀಣಿಸಲು ಬಿಎಸ್ಪಿ ಹೊಸ ಮುಖದೊಂದಿಗೆ ಬರಲಿದೆ ಎನ್ನಲಾಗಿದೆ. ಇನ್ನು ಆಗ್ರಾ-ಮಥುರಾ ಪ್ರಾಂತ್ಯದಲ್ಲಿರುವ ಸಾಂಪ್ರಾದಾಯಿಕ ಬಿಎಸ್ಪಿ ಮತಗಳನ್ನು ಸೆಳೆಯಲು ಎಸ್ಪಿಗೂ ಕೂಡಾ ಸಾಧ್ಯವಾಗುತ್ತಿಲ್ಲ ಎಂದು ಆ ಭಾಗದ ಬಿಜೆಪಿ ಮೂಲಗಳು ಭಾವಿಸುತ್ತದೆ.
ಚುನಾವಣೆಯ ಪೂರ್ವದಲ್ಲಿ, ಬಿಎಸ್ಪಿ ರಾಜ್ಯಾದ್ಯಂತ ಸಭೆಗಳನ್ನು ನಡೆಸುವ ಮೂಲಕ ಬ್ರಾಹ್ಮಣರನ್ನು ಓಲೈಸುವಲ್ಲಿ ನಿರತವಾಗಿದೆ ಎಂದು ಅನಿಸಿದ್ದರೂ, ಟಿಕೆಟ್ ಹಂಚಿಕೆಯ ವಿಷಯಕ್ಕೆ ಬಂದಾಗ, ಬಿಎಸ್ಪಿ ಮುಸ್ಲಿಮರತ್ತ ಗಂಭೀರ ಗಮನ ಹರಿಸಿದೆ. 26% ಟಿಕೆಟ್ಗಳನ್ನು ಮುಸ್ಲಿಮ್ ಸಮುದಾಯದ ಅಭ್ಯರ್ಥಿಗಳಿಗೆ ನೀಡಿದೆ. ದಲಿತರು ಮತ್ತು ಹಿಂದುಳಿದ ವರ್ಗಗಳು (OBC ಗಳು) ಬಳಿಕ ನಂತರದ ಸ್ಥಾನ ಮುಸ್ಲಿಮರಿಗೆ ನೀಡಿದೆ.
ಅದರಲ್ಲೂ ಹಲವು ಮುಸ್ಲಿಂ ಪ್ರಭಾವಿ ನಾಯಕರು ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ಬಿಎಸ್ಪಿ ಸೇರಿಕೊಂಡು, ಟಿಕೆಟ್ ಪಡೆದುಕೊಂಡಿದ್ದಾರೆ. ಮಾಜಿ ಮಂತ್ರಿ ಸೈದುಝ್ಝಮಾನ್ ಪುತ್ರ, ಕಾಂಗ್ರೆಸ್ ಧುರೀಣ ಸಲ್ಮಾನ್ ಸಯೀದ್, ನೊಮಾನ್ ಮಸೂದ್ ಮೊದಲಾದವರು ತಮ್ಮ ಸ್ವಂತ ಪ್ರಭಾವದಿಂದಲೇ ಬಿಎಸ್ಪಿ ಖಾತೆಗೆ ಮುಸ್ಲಿಂ ಮತಗಳನ್ನು ಪೇರಿಸಬಲ್ಲವರು.
SP-RLD ಮೈತ್ರಿ ಕಡೆಗೆ ಮುಸ್ಲಿಂ ಸಮುದಾಯದ ಒಲವು ವಾಲಿದ್ದರೂ, ಬಿಜೆಪಿಯನ್ನು ಮುಸ್ಲಿಂ-ದಲಿತರು ಸೇರಿ ಸೋಲಿಸುವಂತಹ ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿ ಇದ್ದರೆ ಖಂಡಿತವಾಗಿಯೂ ಬಿಎಸ್ಪಿಯ ಮುಸ್ಲಿಂ ಅಭ್ಯರ್ಥಿಯ ಕೈ ಮುಸ್ಲಿಮರು ಹಿಡಿಯುತ್ತಾರೆ ಎಂದು ಹಿರಿಯ ಬಿಎಸ್ಪಿ ನಾಯಕರೊಬ್ಬರು ರಾಜಕೀಯ ಲೆಕ್ಕಾಚಾರಗಳನ್ನು ಹಂಚಿಕೊಂಡಿದ್ದಾರೆ.

ಮೀರಾಪುರ್ ಕ್ಷೇತ್ರವನ್ನು ಉದಾಹರಣೆಯಾಗಿ ನೀಡಿರುವ ಅವರು, ಬಿಜೆಪಿ ಮತ್ತು ಆರ್ಎಲ್ಡಿ ಆ ಕ್ಷೇತ್ರದಿಂದ ಗುರ್ಜಾರ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರೆ, ಬಿಎಸ್ಪಿ ಮಹಮ್ಮದ್ ಶಾಲಿಮ್ ಅವರನ್ನು ಕಣಕ್ಕಿಳಿಸಿದೆ. ಇಂತಹದ್ದೇ ಉದಾಹರಣೆ ಘಾಜಿಯಾಬಾದ್ ಲೋನಿ ಕ್ಷೇತ್ರದಲ್ಲೂ ಇದೆ ಎಂದು ಅವರು ಹೇಳಿದ್ದಾರೆ.
ಒಟ್ಟಾರೆ, ಸೀಟು ಹಂಚಿಕೆ ಪ್ರಕ್ರಿಯೆಗಳನ್ನು ಗಮನಿಸುವಾಗ ಮಾಯಾವತಿ ಚುನಾವಣೆ ಹಾಗೂ ಅದಕ್ಕೆ ತಳುಕು ಹಾಕಿಕೊಂಡಿರುವ ಜಾತಿ ಲೆಕ್ಕಾಚಾರವನ್ನು ಚೆನ್ನಾಗಿ ಬಲ್ಲವರಿದ್ದಾರೆ. ಅಭ್ಯರ್ಥಿಗಳನ್ನು ಘೋಷಿಸಲು ಕೊನೆ ಕ್ಷಣದವರೆಗೂ ಕಾದ ಮಾಯಾವತಿ ಅಳೆದು ತೂಗಿಯೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ.
ಅದೂ ಅಲ್ಲದೆ, ಬಿಎಸ್ಪಿಯ ಕಾರ್ಯಕರ್ತರು ತಳ ಮಟ್ಟದಿಂದಲೇ ಪಕ್ಷದ ಪರವಾಗಿ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಈ ಬಾರಿ, ಮಾಯಾವತಿಯವರು ದೊಡ್ಡ ರ್ಯಾಲಿಗಳು ಮತ್ತು ಮಾಧ್ಯಮಗಳ ಮೂಲಕ ಆಕ್ರಮಣಕಾರಿ ಪ್ರಚಾರ ಮಾಡಲು ಅಸಮರ್ಥರಾಗಿರುವುದು ಬಿಎಸ್ಪಿಗೆ ಭಾರೀ ಹೊಡೆತ ನೀಡಬಹುದೆಂದು ಹೇಳಲಾಗಿತ್ತು. ಮಾಯಾವತಿಯವರ ಈ ಅನುಪಸ್ಥಿತಿ ಕಾರಣಕ್ಕೇ ಮಾಧ್ಯಮಗಳು ಮತ್ತು ರಾಜಕೀಯ ವಿಶ್ಲೇಷಕರು 2022 ರ ಚುನಾವಣೆಯನ್ನು ಬಿಜೆಪಿ ಮತ್ತು ಎಸ್ಪಿ ನಡುವಿನ ಹಣಾಹಣಿ ಎಂದು ವಿಶ್ಲೇಷಿಸಲು ಕಾರಣವಾಗಿತ್ತು. ಹಾಗಂತ, ಏನೇ ಆದರೂ ಬಿಎಸ್ಪಿಯು ಮುಖ್ಯ ಸ್ಪರ್ಧೆಯ ಭಾಗವಾಗುತ್ತದೆ ಎಂದಲ್ಲ. ಆದರೆ, ಬಿಎಸ್ಪಿ ತೀರಾ ಕಳಪೆ ಪ್ರದರ್ಶನ ನೀಡುವುದರಿಂದ ಹೊರತಾಗಬಹುದು ಎಂದು ವಿಶ್ವಾಸ ಬರಿಸುವಂತೆ ಬಿಎಸ್ಪಿ ಕಾರ್ಯಕರ್ತರ ಕೆಲಸ ನಡೆಯುತ್ತಿದೆ.
ಬಿಎಸ್ಪಿ ಕಾರ್ಯಕರ್ತರು ಹಲವು ತಿಂಗಳುಗಳಿಂದ ಯುಪಿಯಲ್ಲಿ ಮೌನವಾಗಿ ಕೆಲಸ ಮಾಡುತ್ತಿದ್ದಾರೆ. ಬಿಎಸ್ಪಿಯ ರಾಜಕೀಯ ಸಂಸ್ಕೃತಿಯು ಎಂದಿಗೂ ‘ದೊಡ್ಡ ರ್ಯಾಲಿ’ಕೇಂದ್ರಿತವಾಗಿಲ್ಲ. ಮೊದಲಿನಿಂದಲೂ ಕಾರ್ಯಕರ್ತರು ಮತ್ತು ಮುಖಂಡರು ದಲಿತರು ಮತ್ತು ಬಹುಜನರ ನಡುವೆ ಮನೆ ಮನೆಗೆ ಪ್ರಚಾರ ಹಾಗೂ ಸಣ್ಣ ಸಭೆಗಳನ್ನು ಆಯೋಜಿಸುತ್ತಲೇ ಬಂದಿದ್ದಾರೆ. ಆದ್ದರಿಂದ, ಮಾಯಾವತಿ ಅವರ ಬೃಹತ್ ರ್ಯಾಲಿಗಳ ಅನುಪಸ್ಥಿತಿಯು ಬಿಎಸ್ಪಿಯು ಜಡಗೊಂಡಿದೆ ಎನ್ನಲು ಸಾಧ್ಯವಿಲ್ಲ.
ಬಿಎಸ್ಪಿ ಕಾರ್ಯಕರ್ತರು ‘ಭೈಚಾರ ಸಮಿತಿ’ಗಳ ಮೂಲಕ ಇತರ ಸಮುದಾಯಗಳ ನಡುವೆ ಕೆಲಸ ಮಾಡುತ್ತಲೇ ಬಂದಿದ್ದಾರೆ. ಭೈಚಾರ ಸಮಿತಿಗಳು ಕುರ್ಮಿ, ಮೌರ್ಯ, ರಾಜಬ್ಬರ್ ಜಾತಿಗಳು ಹಾಗೂ ಒಬಿಸಿ ಪ್ರತಿನಿಧಿಗಳು, ಬ್ರಾಹ್ಮಣರು ಮತ್ತು ದಲಿತರು ಎಲ್ಲರನ್ನೂ ಒಳಗೊಂಡಿದೆ.
ಇನ್ನೊಂದು, ಮಾಯಾವತಿಯವರು ತಮ್ಮ ಬೆಂಬಲಿಗರಿಗೆ ಹುರಿದುಂಬಿಸಲು ಹೆಚ್ಚಿನ ಶ್ರಮ ಪಡಬೇಕಾಗಿಲ್ಲ, ಅವರನ್ನು ಸಜ್ಜುಗೊಳಿಸಲು ಮಾಯಾವತಿಗೆ ಕೆಲವು ಸಾಲುಗಳು ಸಾಕು. ಮಾಯಾವತಿ ಇತ್ತೀಚೆಗೆ ಕಾನ್ಷಿರಾಮ್ ಅವರ ಜನ್ಮದಿನದಂದು ಸಾರ್ವಜನಿಕವಾಗಿ ಕಾಣಿಸಿಕೊಂಡು, “ಕಾನ್ಶಿರಾಂ ಅವರ ಕನಸುಗಳನ್ನು ನನಸು ಮಾಡಿ ಬಿಎಸ್ಪಿ ಗೆಲುವಿಗೆ ಶ್ರಮಿಸಿ” ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಕಾನ್ಶಿರಾಮ್ ಪ್ರಭಾವದಿಂದಾಗಿ ಈ ಮಾತುಗಳೇ ಪಕ್ಷದ ಕಾರ್ಯಕರ್ತರಿಗೆ ಇನ್ನಷ್ಟು ಉತ್ತೇಜನ ನೀಡಿ, ಕೆಲಸ ಮಾಡುವಂತೆ ಮಾಡಿದೆ. ಈ ಲೆಕ್ಕಾಚಾರಗಳನ್ನೆಲ್ಲಾ ಗಮನಿಸಿದರೆ ಬೆಹೆನ್-ಜಿ ಈ ಚುನಾವಣೆಯೊಂದಿಗೆ ಮಕಾಡೆ ಮಲಗುತ್ತಾರೆ ಎಂಬ ವಿಶ್ಲೇಷಣೆಗಳು ಸುಳ್ಳಾಗುವ ಸಾಧ್ಯತೆ ನಿಚ್ಚಳವಾಗಿದೆ.
 
			
 
                                 
                                 
                                
