
ಕೋಲಾರ: ರಾಜ್ಯ ಸರ್ಕಾರದಲ್ಲಿ ಅನುದಾನ ಕೊಟ್ಟು, ಯಾರಿಗೂ ಹೇಳ್ಬೇಡ ಅಂತಾ ಸಿಎಂ ಸಿದ್ದರಾಮಯ್ಯ ಹೇಳಿದ್ರು ಎಂದು ಶಾಸಕ ನಂಜೇಗೌಡ ಹೇಳಿದ್ದಾರೆ. ಮಾಸ್ತಿ ಗ್ರಾಮದಲ್ಲಿ ಮಾತನಾಡಿದ ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡ, ಸಿದ್ದರಾಮಯ್ಯ ಅವರ ಕೊಡುಗೆಯನ್ನು ಮೆಚ್ಚಿಕೊಂಡಿದ್ದಾರೆ.
ಕೋಲಾರ ಜಿಲ್ಲೆಯ ಮಾಲೂರು ನಗರದ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ 20 ಕೋಟಿ ರೂಪಾಯಿ ಹಣ ಮಂಜೂರು ಮಾಡಿದ್ದರು. ಮಾಸ್ತಿ ಗ್ರಾಮದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ವೇದಿಕೆಯಲ್ಲಿ ಭಾಷಣ ಮಾಡಿದ ಕೆ.ವೈ ನಂಜೇಗೌಡರು, ಮಾಲೂರು ತಾಲೂಕಿಗೆ ಕಳೆದ ಒಂದೂವರೆ ವರ್ಷದಲ್ಲಿ ₹2200 ಕೋಟಿ ಅನುದಾನ ಸಿಕ್ಕಿದೆ ಎಂದಿದ್ದಾರೆ.

ಮಾಲೂರು ನಗರದ ಬಸ್ ನಿಲ್ದಾಣ ನಿರ್ಮಾಣಕ್ಕೆ 20 ಕೋಟಿ ಅನುದಾನ ಮಂಜೂರಾಗಿದೆ. ಅನುದಾನ ಮಂಜೂರು ಮಾಡಿ, ಏಯ್ ಯಾರಿಗೂ ಹೇಳ್ಕೋಬೇಡ ಎಂದಿದ್ದರಂತೆ ಸಿಎಂ ಸಿದ್ದರಾಮಯ್ಯ. ನನಗೆ ನೀವು ಕೊಟ್ಟಿರೊ ಎಮ್.ಎಲ್.ಎ. ಗಿರಿಯೇ ಸಾಕು. ಹೊಟ್ಟೆ ಕಿಚ್ಚು ನಂಗಿಲ್ಲ, ಮಂತ್ರಿ ಆಗಿಲ್ಲ ಅನ್ನುವ ಕೊರಗಿಲ್ಲ ಎಂದಿದ್ದಾರೆ.
ಮಾಸ್ತಿ ಗ್ರಾಮದಲ್ಲಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಗ್ಯಾರಂಟಿ ಯೋಜನೆಯ ಕಂತಿನ ಹಣ ತಡವಾಗಲು ಬಿಜೆಪಿಯೇ ಕಾರಣ. ಕಳೆದ ಬಾರಿ ಬಿಜೆಪಿ ಸರ್ಕಾರ ನಡೆಸಿದಾಗ ₹80 ಸಾವಿರ ಕೋಟಿ ಸಾಲ ಇಟ್ಟೋಗಿದ್ರು. ಸಾರಿಗೆ ಇಲಾಖೆಯಲ್ಲಿ ₹5,900 ಕೋಟಿ ಸಾಲ ಮಾಡಿದ್ರು. ಬೊಮ್ಮಾಯಿ ಸರ್ಕಾರದಲ್ಲಿ ₹2.5 ಲಕ್ಷ ಕೋಟಿ ಸಾಲ ಮಾಡಿ ಹೋಗಿದ್ದಾರೆ ಎಂದು ಟೀಕಿಸಿದ್ದಾರೆ.

ಪ್ರತಿದಿನ ಶಕ್ತಿ ಯೋಜನೆ ಮೂಲಕ 60 ಲಕ್ಷ ಮಹಿಳೆಯರು ಪ್ರಯಾಣಿಸುತ್ತಾರೆ. ರಾಜ್ಯದಲ್ಲಿ ಇನ್ನು 3 ದಿನದಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ, 400 ಕೋಟಿಗೆ ಏರಿಕೆ ಆಗಲಿದೆ ಎಂದಿದ್ದಾರೆ. ಬಿಜೆಪಿ, ಜೆಡಿಎಸ್ ನಾಯಕರು ಹೊಟ್ಟೆ ಕಿಚ್ಚಿನಿಂದ ಗ್ಯಾರಂಟಿ ಯೋಜನೆ ಬಗ್ಗೆ ಟೀಕೆ ಮಾಡ್ತಿದ್ದಾರೆ ಎಂದು ಕೋಲಾರದ ಮಾಸ್ತಿ ಗ್ರಾಮದಲ್ಲಿ ಸಾರಿಗೆ ಸಚಿವರು ಬೇಸರ ಹೊರ ಹಾಕಿದ್ದಾರೆ.