ಉಪಗ್ರಹ ಆಧಾರಿತ ಇಂಟರ್ ನೆಟ್ ಸೇವೆ ಒದಗಿಸುವ ಎಲಾನ್ ಮಸ್ಕ್ ಸಾಹಸಕ್ಕೆ ಭಾರತ ಸರ್ಕಾರ ಕೆಂಪುಬಾವುಟ ತೋರಿಸಿದೆ. ಎಲಾನ್ ಮಸ್ಕ್ ಅವರ ಸ್ಪೆಸ್ಎಕ್ಸ್ ಕಂಪನಿಯ ಭಾಗವಾಗಿರುವ ಸ್ಟಾರ್ಲಿಂಕ್ ಇಂಟರ್ನೆಟ್ ಸರ್ವೀಸಸ್ ಒದಗಿಸುತ್ತಿರುವ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಯನ್ನು ಬಳಸಿಕೊಳ್ಳಬಾರದು ಎಂದು ಕೇಂದ್ರ ಸರ್ಕಾರವು ಗ್ರಾಹಕರಿಗೆ ಸೂಚಿಸಿದೆ.
ಇಂಟರ್ನೆಟ್ ಸೇವೆ ಒದಗಿಸುವ ಮುನ್ನ ಭಾರತ ಸರ್ಕಾರ ರೂಪಿಸಿರುವ ನೀತಿ ನಿಯಮಗಳ ಪಾಲನೆ ಮತ್ತು ಅನುಸರಣೆ ಸಂಬಂಧ ಎಲಾನ್ ಮಸ್ಕ್ ಅನುಮತಿಯನ್ನು ಪಡೆದಿಲ್ಲದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಯನ್ನು ಒದಗಿಸುವುದಕ್ಕೆ ಅನುಮತಿ ನೀಡಲಾಗಿಲ್ಲ. ಗ್ರಾಹಕರು ಸ್ಟಾರ್ಲಿಂಕ್ ಇಂಟರ್ನೆಟ್ ಸರ್ವೀಸಸ್ ಸೇವೆಯನ್ನು ಬಳಸಿಕೊಳ್ಳಬಾರದು ಎಂದು ಭಾರತ ಸರ್ಕಾರ ತಿಳಿಸಿದೆ.
ಭಾರತದಲ್ಲಿ ಇಂಟರ್ನೆಟ್ ಸೇವೆ ಒದಗಿಸಲು ಮೊದಲು ಸರ್ಕಾರ ರೂಪಿಸಿರುವ ನಿಯಮಾವಳಿಗಳನ್ನು ಪೂರ್ಣಪ್ರಮಾಣದಲ್ಲಿ ಪಾಲಿಸುವವರೆಗೂ ಇಂಟರ್ನೆಟ್ ಸೇವೆ ಒದಗಿಸಲು ಗ್ರಾಹಕರನ್ನು ನೊಂದಾಯಿಸಿಕೊಳ್ಳುವುದನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ದೂರಸಂಪರ್ಕ ಇಲಾಖೆ ಸೂಚಿಸಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಉಪಗ್ರಹ ಆಧಾರಿತ ಅತಿವೇಗದ ಇಂಟರ್ನೆಟ್ ಒದಗಿಸುವ ಭರವಸೆಯೊಂದಿಗೆ ಸ್ಪೆಸೆಕ್ಸ್ ಪೂರ್ಣಮರುಪಾವತಿ ಮಾಡುವ ಠೇವಣಿ 7,400 ರುಪಾಯಿಗಳಿಗೆ ಗ್ರಾಹಕರನ್ನು ನೊಂದಾಯಿಸಿಕೊಳ್ಳಲಾರಂಭಿಸಿದೆ.
ಸ್ಟಾರ್ಲಿಂಕ್ ಇಂಟರ್ನೆಟ್ ಸರ್ವೀಸಸ್ ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ಒದಗಿಸಲು ಅನುಮತಿ ಪರವಾನಗಿ ಪಡೆದಿಲ್ಲವಾದ್ದರಿಂದ ತಕ್ಷಣವೇ ಗ್ರಾಹಕರನ್ನು ನೊಂದಾಯಿಸಿಕೊಳ್ಳುವುದನ್ನು ಸ್ಥಗಿತಗೊಳಿಸಬೇಕು ಎಂದು ಸೂಚಿಸಿರುವುದಾಗಿ ಭಾರತ ಸರ್ಕಾರದ ದೂರಸಂಪರ್ಕ ಮತ್ತು ಸಂವಹನ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಎಲಾನ್ ಮಸ್ಕ್ ಅವರು ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ಒದಗಿಸುವುದಾಗಿ ಪ್ರಕಟಿಸಿದ್ದರು. ಸೆಪ್ಟೆಂಬರ್ನಲ್ಲಿ ಮಸ್ಕ್ ಕೊನೆಯ ಬಾರಿಗೆ ಸ್ಟಾರ್ಲಿಂಕ್ಗಾಗಿ ಭಾರತದ ಯೋಜನೆಗಳ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ್ದರು. ಟ್ವಿಟರ್ನಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದ ಎಲಾನ್ ಮಸ್ಕ್ ಕೇವಲ ನಿಯಂತ್ರಕರ ಅನುಮೋದನೆ ಪಡೆದುಕೊಳ್ಳುವುದ ಪ್ರಕ್ರಿಯೆಯಲ್ಲಿರುವುದಾಗಿ ತಿಳಿಸಿದ್ದರು.
ಆದರೆ, ಎಲಾನ್ ಮಸ್ಕ್ ತಾವು ಹೇಳಿದಂತೆ ಇಂಟರ್ನೆಟ್ ಸೇವೆ ಒದಗಿಸಲು ಇದುವರೆಗೆ ದೇಶದ ದೂರಸಂಪರ್ಕ ನಿಯಮಗಳನುಸಾರ ಅನುಮತಿಯನ್ನು ಪಡೆದುಕೊಂಡಿಲ್ಲ. ಈ ಕಾರಣಕ್ಕಾಗಿ ಸರ್ಕಾರವು ಗ್ರಾಹಕರು ಎಲಾನ್ ಮಸ್ಕ್ ಕಂಪನಿಯು ನೀಡುವ ಸೇವೆಯನ್ನು ಪಡೆಯದಿರುವಂತೆ ಸೂಚಿಸಿದೆ.
ಕಂಪನಿಯು ತನ್ನ ಭಾರತದ ಅಂಗಸಂಸ್ಥೆಯಾದ ಸ್ಟಾರ್ಲಿಂಕ್ ಸ್ಯಾಟಲೈಟ್ ಕಮ್ಯುನಿಕೇಷನ್ಸ್ ಪ್ರೈವೇಟ್ ಲಿಮಿಟೆಡ್ ಅನ್ನು ಯಶಸ್ವಿಯಾಗಿ ನೋಂದಾಯಿಸಿದೆ ಎಂದು ಕಳೆದ ತಿಂಗಳು ಲಿಂಕ್ಡ್ಇನ್ನಲ್ಲಿ ಪ್ರಕಟಿಸಿರುವುದಾಗಿ ಸ್ಟಾರ್ಲಿಂಕ್ ಇಂಡಿಯಾ ನಿರ್ದೇಶಕ ಸಂಜಯ್ ಭಾರ್ಗವ ಹೇಳಿದ್ದಾರೆ. “ಸ್ಪೇಸ್ಎಕ್ಸ್ ಈಗ ಭಾರತದಲ್ಲಿ ಶೇ100 ರಷ್ಟು ಒಡೆತನದ ಅಂಗಸಂಸ್ಥೆಯನ್ನು ಹೊಂದಿದೆ ಎಂದು ಹಂಚಿಕೊಳ್ಳಲು ಸಂತೋಷವಾಗಿದೆ.” ಎಂದು ಪ್ರಕಟಿಸಿದ್ದರು.
ಕಡಿಮೆ-ಸುಪ್ತ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸೇವೆಗಳನ್ನು ಒದಗಿಸಲು ಕಡಿಮೆ-ಭೂಮಿಯ ಕಕ್ಷೆಯ ನೆಟ್ವರ್ಕ್ನ ಭಾಗವಾಗಿ ಪ್ರಪಂಚದಾದ್ಯಂತ ಹೆಚ್ಚಿನ ಸಂಖ್ಯೆಯ ಕಂಪನಿಗಳು ಸಣ್ಣ ಉಪಗ್ರಹಗಳನ್ನು ಉಡಾವಣೆಮಾಡುತ್ತಿವೆ. ಭೂಮಂಡಲದ ಮೇಲೆ ಇಂಟರ್ನೆಟ್ ಮೂಲಸೌಕರ್ಯವು ತಲುಪಲು ಕಷ್ಟವಾಗುವ ದೂರದ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ನಿರ್ದಿಷ್ಟ ಗುರಿ ಈ ಕಂಪನಿಗಳದ್ದಾಗಿದೆ.