ಚಾಮುಂಡಿ ಬೆಟ್ಟದಲ್ಲಿ ಮುಸ್ಲಿಂ ಅಂಗಡಿ ತೆರವಿಗೆ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್, ಚಾಮುಂಡಿ, ಮೈಲಾರ ಲಿಂಗೇಶ್ವರ, ಮಾದೇಶ್ವರ ಬೆಟ್ಟ ಯಾವುದೇ ಆಗಿರಲಿ ಮುಸ್ಲಿಂ ಸಮುದಾಯದವರು ವ್ಯಾಪಾರ ಮಾಡುವುದನ್ನ ತಡೆಯೋದು ಸರಿಯಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಈ ಕುರಿತು ಮೈಸೂರಿನ ಸುದ್ದೀಗಾರರೊಂದಿಗೆ ಮಾತಾಡಿದ ಅವರು, ನಮ್ಮ ಹೆಣ್ಣು ಮಕ್ಕಳಿಗೆ ಬೇಕಾದ ಬಳೆ, ಕುಂಕುಮವನ್ನ ಮುಸ್ಲಿಮರು ಮಾರುತ್ತಾರೆ. ಹೀಗಿರುವಾಗ ದೇವಾಲಯದ ಸುತ್ತಮುತಾ ಮುಸ್ಲಿಂರು ವ್ಯಾಪಾರ ಮಾಡಬಾರದು ಅಂದರೆ ಹೇಗೆ ?
ಮೈಸೂರಿನ ದೇವರಾಜ ಮಾರ್ಕೆಟ್ ಗೆ ಹೋಗಿ ನೋಡಲಿ, ಅಲ್ಲಿ ಮುಸ್ಲಿಂ ಸಮುದಾಯದವರೇ ಹೆಚ್ಚಾಗಿ ವ್ಯಾಪಾರ ಮಾಡುತ್ತಾರೆ. ಹೂ, ಹಣ್ಣು, ಅರಿಶಿನ, ಕುಂಕುಮ, ಬಳೆ ಮಾರುತ್ತಾರೆ. ಅವರ ಬಂಡವಾಳವೇ ಐನೂರೋ ಸಾವಿರ ಇರುತ್ತದೆ. ಹೀಗಿರುವಾಗ ಅಂತಹವರ ಹೊಟ್ಟೆಗೆ ಹೊಡೆಯಬಾರದು. ಹಿಂದೂ- ಮುಸ್ಲಿಂರು ಸಾಮರಸ್ಯದಿಂದ ಬದುಕುತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೂ ಪಕ್ಷಗಳು ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿವೆ ಎಂದು ಹೇಳಿದ್ದಾರೆ.