ಸುಪ್ರೀಂ ಕೋರ್ಟ್ ಆದೇಶದ ನಂತರ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ತರಾತುರಿಯಲ್ಲಿ ದೇವಸ್ಥಾನಗಳನ್ನು ನೆಲಸಮ ಮಾಡದಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನ್ಯಾಯಲಯದ ಆದೇಶದ ನಂತರ ರಾಜ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಲಾಗಿರುವ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಕೋರ್ಟ್ ಸೂಚಿಸಿದ ನಂತರ ಅಧಿಕಾರಿಗಳು ದೇವಸ್ಥಾನಗಳ ತೆರವಿಗೆ ಮುಂದಾಗಿದರು . ಆದರೆ ಅಧಿಕಾರಿಗಳು ತರಾತುರಿಯಲ್ಲಿ ನಿರ್ಧಾರವನ್ನ ತೆಗೆದುಕೊಳ್ಳಬಾರದೆಂದು ಮುಖ್ಯಮಂತ್ರಿ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶವನ್ನ ವಿವರವಾಗಿ ಅಧ್ಯಯನ ನಡೆಸಿ ಸಂಪುಟದಲ್ಲಿ ಚರ್ಚಿಸಿದ ನಂತರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಬೊಮ್ಮಾಯಿಯವರು ತಿಳಿಸಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ದೇವಸ್ಥಾನವನ್ನು ನೆಲಸಮಗೊಳಿಸಿದ್ದಕ್ಕಾಗಿ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ವಿರುದ್ಧ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಕೋರ್ಟ್ ಆದೇಶದ ನಂತರ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಲಾಗಿರುವ ಧಾರ್ಮಿಕ ಸ್ಥಳಗಳ ತೆರವಿಗೆ ಸಂಬಂಧಿಸಿದಂತೆ ಆಡಳಿತರೂಢ ಬಿಜೆಪಿ ಸರ್ಕಾರವು ವ್ಯಾಪಕ ಟೀಕೆಗೆ ಗುರಿಯಾಗಿದೆ.ರಾಜ್ಯಾದ್ಯಂತ ಜಿಲ್ಲಾಡಳಿತಗಳು ದೇವಸ್ಥಾನಗಳ ತೆರವಿಗೆ ಮುಂದಾಗಿರುವುದಕ್ಕೆ ಸ್ವಪಕ್ಷೀಯ ಶಾಸಕರು, ವಿರೋಧ ಪಕ್ಷದ ಸದಸ್ಯರು ಮತ್ತು ಹಿಂದು ಪರ ಸಂಘಟನೆಗಳಿಂದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗಿದೆ.
ಕರ್ನಾಟಕದ ಪ್ರಬಲ ಹಿಂದು ಸಂಘಟನೆ, ಹಿಂದೂ ಜಾಗರಣ ವೇದಿಕೆಯು ಮೈಸೂರು ಜಿಲ್ಲೆಯಲ್ಲಿರುವ 97 ಧಾರ್ಮಿಕ ಸ್ಥಳಗಳನ್ನು ಅದರಲ್ಲಿ 93 ಹಿಂದೂ ದೇವಾಲಯಗಳನ್ನು ತೆರವುಗೊಳಿಸಲು ಮುಂದಾಗಿರುವ ಜಿಲ್ಲಾಡಳಿತ ವಿರುದ್ಧ ಸರೆಪ್ಟೆಂಬರ್ 16ರಂದು ಬೃಹತ್ ಪ್ರತಿಭಟನೆಯನ್ನು ಆಯೋಜಿಸಿದೆ. ಪ್ರತಿಭಟನೆ ವೇಳೆ ಹಿಂದೂ ಜಾಗರಣ ವೇದಿಕೆ ದಕ್ಷಿಣ ಭಾರತದ ಉಸ್ತುವಾರಿ ಜಗದೀಶ್ ಕಾರಂತ್ ಮೈಸೂರಿಗೆ ಭೇಟಿ ನೀಡಲಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನಂಜನಗೂಡಿನಲ್ಲಿ ದೇವಸ್ಥಾನವನ್ನು ಕೆಡವುತ್ತಿರುವ ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಬಿಜೆಪಿ ಆಡಳಿತದಲ್ಲಿ ರಾಜ್ಯದಲ್ಲಿ ದೇವಸ್ಥಾನಗಳು ಸುರಕ್ಷಿತವಾಗಿಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಅಧಿಕಾರಿಗಳು ಬರೀ ಹಿಂದು ದೇವಸ್ಥಾನಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಮತ್ತು ದೇವಸ್ಥಾನಗಳ ಕಳಸವನ್ನು ಸ್ಥಳಾಂತರಿಸಲು ಅವರು ಸಮಯವನ್ನು ನೀಡುತ್ತಿಲ್ಲ ಸುಪ್ರೀಂ ಕೋರ್ಟ್ ಆದೇಶವನ್ನ ಅವರು ತಿರುಚಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಲ್ಲಿರುವುದು ಪರಿಶೀಲಿಸಿ ಎಂದು ಕೆಡವಿ ಎಂದಲ್ಲ ಇದನ್ನು ನಾವು ಸಹಿಸುವುದಿಲ್ಲ. ಅವರು ಅಕ್ರಮ ಮಸೀದಿಗಳು ಮತ್ತು ದರ್ಗಾಗಳನ್ನು ಮುಟ್ಟಲು ಧೈರ್ಯ ಮಾಡುತ್ತಾರೆಯೇ,ಎಂದು ಸಂಸದ ಪ್ರತಾಪ್ ಸಿಂಹ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.