
ಬೆಂಗಳೂರು: ಗಾರ್ಡನ್ ಸಿಟಿ ಖ್ಯಾತಿಯ ಬೆಂಗಳೂರಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ದಾರಿಯಲ್ಲಕ ಸಿಕ್ಕಸಿಕ್ಕವರ ಮೇಲೆ ಬೀದಿ ನಾಯಿಗಳು ದಾಳಿ ಮಾಡುವ ಘಟನೆ ಆಗಾಗ ವರದಿಯಾಗ್ತಿವೆ. ಸದ್ಯ ಬೆಂಗಳೂರಿನ ಬೀದಿ ನಾಯಿಯಿಂದ ವಿದೇಶಿ ಉದ್ಯಮಿಯೊಬ್ಬರು ಆಸ್ಪತ್ರೆ ಸೇರುವಂತಾಗಿದೆ.

ಬೆಂಗಳೂರಿನಲ್ಲಿ ಜಾಗಿಂಗ್ ಮಾಡುತ್ತಿದ್ದ ವೇಳೆ ಯುನೈಟೆಡ್ ಕಿಂಗ್ಡಮ್ ಮೂಲದ ಉದ್ಯಮಿ, ಗೇಮ್ ಡಿಸೈನರ್ ಒಲಿವರ್ ಜಾನ್ಸ್ ಎಂಬುವರಿಗೆ ನಾಯಿ ಕಚ್ಚಿದೆ ಎಂಬ ಸುದ್ದಿ ಹರಿದಾಡ್ತಿದೆ. ಈ ಬಗ್ಗೆ ಸ್ವತಃ ಜಾನ್ಸ್ X ನಲ್ಲಿ ವಿಚಾರ ಹಂಚಿಕೊಂಡಿದ್ದು, ” ಸಾಮಾನ್ಯವಾಗಿ ನಾನು ಹಳೇ ಏರ್‌ಪೋರ್ಟ್ ಟರ್ಮಿನಲ್ ಪ್ರವೇಶ ದ್ವಾರದ ಬಳಿ ಓಡುತ್ತೇನೆ. ಈ ವೇಳೆ ನಾಯಿಗಳ ಗುಂಪಿನಿಂದ ಬಂದ ನಾಯಿಯೊಂದು ನನಗೆ ಕಚ್ಚಿದೆ. ಕೂಡಲೇ ಸ್ಥಳೀಯರು ನನ್ನನ್ನು ಗಮನಿಸಿ ಬೈಕ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ದರು. ನಾಯಿ ಕಡಿತಕ್ಕೆ ಸಂಬಂಧಿಸಿದ ಇಂಜೆಕ್ಷನ್ ಪಡೆದಿದ್ದೇನೆ. ಆ ನಾಯಿಗಳ ಗುಂಪಿಂದ ನನ್ನ ಪತ್ನಿ ಸ್ವಲ್ಪದರಲ್ಲೇ ಪಾರಾದಳು ಎಂದು ಘಟನೆಯ ಬಗ್ಗೆ ವಿವರಿಸಿದ್ದಾರೆ

ಘಟನೆಯ ವಿವರದ ಜೊತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋವನ್ನು ಜಾನ್ಸ್ ಹಂಚಿಕೊಂಡಿದ್ದಾರೆ.ಇನ್ನು ಜಾನ್ಸ್ ನಾನು ಬೀದಿನಾಯಿಗಳನ್ನು ಪ್ರೀತಿಸುತ್ತೇನೆ. ವಿಶೇಷವಾಗಿ ಬೆಂಗಳೂರಿನಲ್ಲಿ ಓಡುವಾಗ ಎಂದು ಬರೆದುಕೊಂಡಿದ್ದಾರೆ.
ವಿದೇಶಿ ಪ್ರಜೆಯ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ನಾಂದಿ ಹಾಡಿದೆ.
ಇನ್ನು ಜಾನ್ಸ್ ಬೆಂಗಳೂರಲ್ಲಿ 100 ಮಿಲಿಯನ್ ಡಾಲರ್ ಮೌಲ್ಯದ ಸ್ಟಾರ್ಟಪ್‌ಗಳನ್ನು ಸ್ಥಾಪಿಸಿದ್ದಾರೆ ಎಂದು ಹೇಳಲಾಗ್ತಿದೆ.
ಸದ್ಯ ಜಾನ್ಸ್ ಟ್ವೀಟ್ ಗೆ ಸಾವಿರಾರು ಜನರು ಪ್ರತಿಕ್ರಿಯೆ ನೀಡಿದ್ದು, ನೂರಾರು ಕಮೆಂಟ್‌ಗಳು ಬಂದಿವೆ. ಅದರಲ್ಲಿ ಕೆಲವರು ನೀವು ನಿಮ್ಮ ದೇಶಕ್ಕೆ ಮರಳಬಾರದೇಕೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಜಾನ್ಸ್, ನಾನು ಭಾರತ ಬಿಡುವುದಿಲ್ಲ. ಏಕೆಂದರೆ ಏನಾದರೂ ಮಾಡಬೇಕು ಎಂದು ನಂಬಿಕೊಂಡಿದ್ದೇನೆ. ಆ ಮಾರ್ಗದಲ್ಲೇ ನಡೆಯಲು ಬಯಸುತ್ತೇನೆ. ಅದರಲ್ಲಿ ನಾಯಿ ಕಡಿತವೂ ಸೇರಿರಬಹುದು. 300 ಡಾಲರ್ ಇಟ್ಟುಕೊಂಡು ಈ ಹೊಸ ದೇಶಕ್ಕೆ ಬಂದು ಪಾರಿವಾಳಗಳ ಗೂಡಿನೊಂದಿಗೆ ವಾಸವಿದ್ದು ಇಂದು 100 ಮಿಲಿಯನ್ ಡಾಲರ್‌ಗೂ ಹೆಚ್ಚು ಮೌಲ್ಯವಿರುವ ಎರಡು ಸ್ಟಾರ್ಟಪ್‌ಗಳನ್ನು ಸ್ಥಾಪಿಸಿದ್ದೇನೆ. ನಾನು ಈ ರೀತಿ ಬೆಳೆಯುವುದನ್ನು ದೂರದಿಂದ ನನ್ನ ಪಾಲಕರು ನೋಡುತ್ತಿದ್ದಾರೆ ಎಂದು ಜಾನ್ಸ್ ಕಾಮೆಂಟ್ ಮಾಡಿದ್ದವರಿಗೆ ಉತ್ತರಿಸಿದ್ದಾರೆ.






