~ ಡಾ. ಜೆ ಎಸ್ ಪಾಟೀಲ.
ಇತ್ತೀಚಿನ ದಿನಗಳಲ್ಲಿ ಕೆಲವು ಪುರೋಹಿತಶಾಹಿ ನಿಯಂತ್ರಿತ ಸಂಘಟನೆಗಳು ಮತ್ತು ಅವುಗಳ ಅಧೀನದಲ್ಲಿರುವ ರಾಜಕೀಯ ಪಕ್ಷವು ಈ ಕೆಳಗಿನ ಮಾತುಗಳು ನಿರಂತರವಾಗಿ ಹೇಳುತ್ತಿರುತ್ತವೆ:
೧. ಮುಸ್ಲಿಮರು ಮತ್ತು ಕ್ರೈಸ್ತರು ಒಗ್ಗಟ್ಟಾಗಿದ್ದಾರೆ. ಆದ್ದರಿಂದ ಹಿಂದೂಗಳಿಗೆ ಉಳಿಗಾಲವಿಲ್ಲ.
೨. ಮುಸ್ಲಿಮರು ಹೆಚ್ಚು ಮಕ್ಕಳು ಹಡೆಯುತ್ತಿದ್ದಾರೆ. ನಾಳೆ ಅವರ ಜನಸಂಖ್ಯೆ ಹೆಚ್ಚಾದರೆ ಹಿಂದೂಗಳಿಗೆ ಕಷ್ಟ.
೩. ಆದ್ದರಿಂದ ಹಿಂದೂ ಧರ್ಮ ತುಂಬಾ ಅಪಾಯದಲ್ಲಿದೆ.
ಮೇಲಿನ ಈ ಮೂರು ಸಂಗತಿಗಳು ಹೆಚ್ಚಾಗಿ ಚರ್ಚೆಯಾಗುವಂತೆ ನೋಡಿಕೊಳ್ಳುತ್ತಿರುವ ಪುರೋಹಿತಶಾಹಿಗಳು ಈ ದೇಶದ ನಿಜವಾದ ಸಮಸ್ಯೆಗಳಾದ ಅಸ್ಪೃಶ್ಯತೆˌ ಬಡತನˌ ನಿರುದ್ಯೋಗˌ ಅಸಮಾನತೆˌ ಅನಕ್ಷರತೆ ಮುಂತಾದವುಗಳನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ. ನಿಜವಾಗಿಯೂ ಈ ಮಾತುಗಳು ಸತ್ಯವೆ? ಈ ಸ್ವಯಂಘೋಷಿತ ದೇಶಭಕ್ತರು ಈ ಮಾತುಗಳನ್ನು ಹೇಳುತ್ತಿರುವುದೇಕೆ? ಇದರ ಹಿಂದಿನ ಹುನ್ನಾರವೇನೆಂಬುದನ್ನು ನಾವು ಅರಿತುಕೊಳ್ಳಬೇಕಾದ ಅಗತ್ಯವಿದೆ. ಒಂದು ಕ್ಷಣ ಈ ನಕಲಿ ದೇಶಭಕ್ತರು ಹೇಳುವ ಮಾತುಗಳನ್ನು ಸತ್ಯವೆಂದು ಒಪ್ಪಿಕೊಳ್ಳೋಣ ಹಾಗೂ ಇವರಿಗೆ ಒಂದಷ್ಟು ಪ್ರಶ್ನೆಗಳನ್ನು ಕೇಳೋಣ.
೧. ಮುಸ್ಲಿಮ್ ಮತ್ತು ಕ್ರೈಸ್ತರಲ್ಲಿ ಒಗ್ಗಟ್ಟಿದೆ ಆದರೆ ಹಿಂದೂಗಳಲ್ಲಿ ಒಗ್ಗಟ್ಟಿಲ್ಲ ಹಾಗಾಗಿ ಹಿಂದೂಗಳಿಗೆ ಉಳಿಗಾಲವಿಲ್ಲ:
ಹೌದುˌ ಮುಸ್ಲಿಮ್ ಮತ್ತು ಕ್ರೈಸ್ತರಲ್ಲಿ ಒಗ್ಗಟ್ಟಿರುವುದು ನಿಜˌ ಆದರೆ ಹಿಂದುಗಳಲ್ಲಿ ಆ ಒಗ್ಗಟ್ಟು ಯಾಕಿಲ್ಲ? ಈ ದೇಶದಲ್ಲಿ ಮುಸ್ಲಿಮರು ಮತ್ತು ಕ್ರೈಸ್ತರು ಒಗ್ಗಟ್ಟಾಗಿದ್ದಾರೆಂದರೆ ಅವರಿಗೆ ಬಹುಸಂಖ್ಯಾತ ಹಿಂದೂಗಳ ಭಯ ಇದೆ ಎಂದರ್ಥ. ಯಾವಾಗಲೂ ಅಲ್ಪಸಂಖ್ಯಾತರು ಬಹುಸಂಖ್ಯಾತರ ಭಯವಿರುವುದರಿಂದಲೇ ಒಗ್ಗಟ್ಟಾಗಿರುತ್ತಾರೆ. ಹೋಗಲಿ ಬಿಡಿˌ ಮುಸ್ಲಿಮರು ಮತ್ತು ಕ್ರೈಸ್ತರು ಯಾವರೀತಿಯಲ್ಲಿ ಒಗ್ಗಟ್ಟಾಗಿರುವರೊ ಹಿಂದೂಗಳೂ ಕೂಡ ಅದೇ ರೀತಿಯಲ್ಲಿ ಒಗ್ಗಟ್ಟಿನಿಂದ ಇರಲು ಸಾಧ್ಯವಿಲ್ಲವೆ ಎನ್ನುವ ಪ್ರಶ್ನೆ ನಮ್ಮನ್ನು ಕಾಡುವುದು ಸಹಜ. ಹಾಗೆ ಹಿಂದೂಗಳಲ್ಲಿ ಒಗ್ಗಟ್ಟು ಇರದಿರುವುದ್ದಕ್ಕೆ ಕಾರಣಗಳೇನು ಎನ್ನುವುದನ್ನು ಅರಿತುಕೊಳ್ಳೋಣ.
ಮುಸ್ಲಿಮ್ ಮತ್ತು ಕ್ರೈಸ್ತರಂತೆ ಈ ದೇಶದಲ್ಲಿ ಹಿಂದೂಗಳು ಕೂಡ ಒಗ್ಗಟ್ಟಿನಿಂದ ಇರಲು ಸಾಧ್ಯವಿದೆ. ಆದರೆ ಅದಕ್ಕೆ ಮುಖ್ಯ ಅಡಚಣೆ ಎಂದರೆ ಹಿಂದೂ ಧರ್ಮದೊಳಗಿರುವ ಸಾವಿರಾರು ಜಾತಿಗಳು ಮತ್ತು ಆ ವ್ಯವಸ್ಥೆಯನ್ನು ನಿರಂತರವಾಗಿ ಜೀವಂತವಾಗಿಡಲು ಪ್ರಯತ್ನಿಸುವ ಸಾಂಪ್ರದಾಯವಾದಿಗಳು. ಹಿಂದೂ ಧರ್ಮದೊಳಗಿನ ಜಾತಿ ವ್ಯವಸ್ಥೆ ˌ ಜಾತಿ ಜಾತಿಗಳ ನಡುವಿನ ಅಘಾದವಾದ ಕಂದಕ ಹಾಗು ಹಿಂದೂ ಧರ್ಮದ ಮೇಲಿನ ಬ್ರಾಹ್ಮಣರ ಯಜಮಾನಿಕೆ ಅಳಿದುಹೋಗಿ ಭಾರತೀಯ ಎಲ್ಲಾ ಜಾತಿಯ ಹಿಂದೂಗಳು ಸನಾತನ ವೈದಿಕ ಬ್ರಾಹ್ಮಣರು ಎಂದು ಈ ನಕಲಿ ದೇಶಭಕ್ತರು ಘೋಷಿಸಿದರೆ ಮಾತ್ರ ಎಲ್ಲಾ ಹಿಂದೂಗಳು ಒಗ್ಗಟ್ಟಿನಿಂದ ಇರಲು ಸಾಧ್ಯ. ಎಲ್ಲಿಯ ವರೆಗೆ ಹಿಂದೂ ಧರ್ಮದಲ್ಲಿ ಅನೇಕ ಜಾತಿಗಳಿದ್ದು ಆ ಎಲ್ಲ ಜಾತಿಗಳನ್ನು ವೈದಿಕರು ನಿಯಂತ್ರಿಸುತ್ತಿರುತ್ತಾರೊ ಅಲ್ಲಿಯ ವರೆಗೆ ಹಿಂದೂ ಧರ್ಮದೊಳಗೆ ಒಗ್ಗಟ್ಟು ಅಸಾಧ್ಯ ಎನ್ನುವ ಮಾತು ನಾವು ಮನಗಾಣಬೇಕಿದೆ. ಹಿಂದೂ ಧರ್ಮದ ಯಜಮಾನರಂತೆ ವರ್ತಿಸುವ ವೈದಿಕರು ಮೇಲಿನ ಸಲಹೆಗಳನ್ನು ಒಪ್ಪಿಕೊಂಡುˌ ಹಿಂದೂಗಳೆಲ್ಲರನ್ನು ವೈದಿಕ ಬ್ರಾಹ್ಮಣರೆಂದು ಘೋಷಿಸಿ ಸಮಸ್ತ ಹಿಂದೂಗಳಲ್ಲಿ ಒಗ್ಗಟ್ಟು ಮೂಡಿಸಲು ಮುಂದಡಿ ಇಡಬಲ್ಲರೆ?
೨. ಮುಸ್ಲಿಮರು ಹೆಚ್ಚು ಮಕ್ಕಳನ್ನು ಹಡೆಯುತ್ತಿದ್ದಾರೆ. ನಾಳೆ ಅವರ ಜನಸಂಖ್ಯೆ ಹೆಚ್ಚಾದರೆ ಹಿಂದೂಗಳಿಗೆ ಕಷ್ಟ.
ಮುಸ್ಲಿಮರು ಹೆಚ್ಚು ಮಕ್ಕಳು ಹೆರುತ್ತಾರೆ ಎನ್ನುವುದು ಸಾಂಪ್ರದಾಯವಾದಿಗಳ ಮತ್ತೊಂದು ಸಾಮಾನ್ಯ ಆರೋಪ. ಬನ್ನಿ ಈ ಆರೋಪದ ಕುರಿತು ಒಂದಷ್ಟು ಸತ್ಯ ಸಂಗತಿಗಳನ್ನು ತಿಳಿದುಕೊಳ್ಳೋಣ. ಮುಸ್ಲಿಮರಲ್ಲಿನ ಅಜ್ಞಾನˌ ಅನಕ್ಷರತೆ ಮತ್ತು ಧಾರ್ಮಿಕ ಮೂಲಭೂತವಾದ ಅವರು ಹೆಚ್ಚು ಮಕ್ಕಳು ಹೆರುವುದಕ್ಕೆ ಕಾರಣವಾದ ಅಂಶ. ಈ ಅಧುನಿಕ ಕಾಲಘಟ್ಟದಲ್ಲಿ ಮುಸ್ಲಿಮ್ ಸಮುದಾಯದಲ್ಲೂ ಜನರು ಆದಷ್ಟು ಸುಶಿಕ್ಷಿತರಾಗುತ್ತಿರುವುದರಿಂದ ಹೆಚ್ಚಿಗೆ ಮಕ್ಕಳು ಹೆರುವುದು ಕ್ರಮೇಣ ಕಡಿಮೆಯಾಗುತ್ತಿದೆ. ಆದರೆ ಈ ಬಗೆಯ ಅಜ್ಞಾನˌ ಅನಕ್ಷರತೆ ಗ್ರಾಮೀಣ ಭಾಗದ ಹಿಂದೂಗಳಲ್ಲೂ ಮನೆಮಾಡಿರುವುದರಿಂದ ಹಿಂದೂಗಳೂ ಕೂಡ ಮುಸ್ಲಿಮರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಹೆರುತ್ತಾರೆ. ಈ ಸಂಗತಿ ನಾನು ಒಬ್ಬ ಗ್ರಾಮೀಣ ಭಾಗದಲ್ಲಿ ಹುಟ್ಟಿದವನಾಗಿ ಚನ್ನಾಗಿ ಬಲ್ಲೆ. ಅದಕ್ಕೆ ಯಾರಾದರೂ ಸವಾಲು ಹಾಕುವುದಾದರೆ ಅಂತವರನ್ನು ಕರೆದುಕೊಂಡು ಹೋಗಿ ಇಂತಹ ಜೀವಂತ ಉದಾಹರಣೆಗಳನ್ನು ತೋರಿಸಬಲ್ಲೆ. ದೇಶದ ಹಿತದೃಷ್ಟಿಯಿಂದ ಮತ್ತು ವೈಯಕ್ತಿಕ ಕುಟುಂಬದ ಹಿತದೃಷ್ಟಿಯಿಂದ ಈ ದೇಶದ ಪ್ರತಿಯೊಬ್ಬ ಪ್ರಜೆಯೂ ಚಿಕ್ಕ ಹಾಗು ಚೊಕ್ಕ ಕುಟುಂಬ ಹೊಂದುವುದು ಅತ್ಯಗತ್ಯವಾಗಿದೆ.
೩. ಹಿಂದೂ ಧರ್ಮ ಅಪಾಯದಲ್ಲಿದೆ:
ಮೊದಲನೇಯದಾಗಿ ನಮ್ಮ ದೇಶದ ಸರ್ವೊಚ್ಛ ನ್ಯಾಯಾಲಯದ ತೀರ್ಪಿನ ಪ್ರಕಾರ ಹಿಂದೂ ಒಂದು ಧರ್ಮ ಅಲ್ಲವೆ ಅಲ್ಲ. ಅದು ಒಂದು ಜೀವನ ಪದ್ದತಿ. ಹಿಂದೂ ಶಬ್ಧವನ್ನು ಭೌಗೋಳಿಕ ಹಾಗು ಜೀವನ ವಿಧಾನದ ಹಿನ್ನೆಲೆಯಲ್ಲಿ ಅರ್ಥೈಸಬೇಕೆ ಹೊರತು ಧರ್ಮವಾಚಕ ನೆಲೆಗಟ್ಟಿನಲ್ಲಲ್ಲ. ಈ ದೇಶದಲ್ಲಿ ನೆಲೆಸಿರುವ ವಿವಿಧ ಧರ್ಮಕ್ಕೆ ಸೇರಿರುವ ಎಲ್ಲ ಜನರೂ ಹಿಂದೂಗಳೆ. ಅದಾಗ್ಯೂ ˌ ಹಿಂದೂ ಒಂದು ಧರ್ಮ ಎನ್ನುವ ಮೂಲಭೂತವಾದಿಗಳ ವಿತಂಡವಾದವನ್ನು ಕೆಲ ಕ್ಷಣ ಒಪ್ಪಿಕೊಳ್ಳೋಣ. ಹಿಂದೂ ಎಂದು ತಪ್ಪಾಗಿ ಕರೆಯಲ್ಪಡುತ್ತಿರುವುದು ಸನಾತನ ಬ್ರಾಹ್ಮಣ ಮತ. ಭಾರತವನ್ನು ಸುಮಾರು ಆರು ಶತಮಾನಕ್ಕೂ ಹೆಚ್ಚು ಕಾಲ ಮುಸ್ಲಿಮರೇ ಆಳ್ವಿಕೆ ನಡಿಸಿದ್ದಾರೆ. ಅಕ್ಬರನ ಆಸ್ತಾನದ ಬೀರಬಲ್ಲನಿಂದ ಹಿಡಿದು ಟಿಪ್ಪು ಸುಲ್ತಾನನ ಆಸ್ತಾನದ ಪೂರ್ಣಯ್ಯನ ವರೆಗೆ ಆ ಎಲ್ಲ ಮುಸಲ್ಮಾನ ಆಳರಸರ ಆಸ್ತಾನದಲ್ಲಿ ಆಪ್ತ ಸಲಹೆಗಾಗರಾಗಿˌ ಹಾಗು ದಿವಾನರಾಗಿ ಕಾರ್ಯ ಮಾಡಿದವರು ಇದೇ ನಕಲಿ ದೇಶಭಕ್ತರ ತಾತˌ ಮುತ್ತಾತ ಮತ್ತು ಪೂರ್ವಜರು ಎನ್ನುವುದು ಅಷ್ಟೆ ಸತ್ಯ. ಸಾವಿರಾರು ವರ್ಷಗಳ ಮುಸ್ಲಿಮರಾದಿಯಾಗಿ ಎಲ್ಲ ಪರಕೀಯ ಆಳರಸದ ಆಡಳಿತದಲ್ಲಿ ಹಿಂದೂ ಎಂದು ತಪ್ಪಾಗಿ ಕರೆಯಲ್ಪಡುವ ಬ್ರಾಹ್ಮಣ ಧರ್ಮ ಸುರಕ್ಷಿತವಾಗಿ ಉಳಿದು ಬಂದಿದೆ. ಪ್ರತಿಯೊಬ್ಬ ಮುಸ್ಲಿಮ್ ರಾಜರು ಬ್ರಾಹ್ಮಣರ ಮಠˌ ದೇಗುಲಗಳಿಗೆ ಧನˌ ಧಾನ್ಯˌ ಕನಕˌ ಚಿನ್ನ ˌ ಭೂಮಿಗಳನ್ನು ಧಾರಾಳವಾಗಿ ಉಂಬಳಿ ನೀಡಿದ ಐತಿಹಾಸಿಕ ದೃಷ್ಟಾಂತಗಳು ನಾವು ನೋಡಬಹುದು.
ಆದರೆ ೧೯೨೫ ರಲ್ಲಿ ಸ್ವಾತಂತ್ರ ಚಳುವಳಿ ತೀವ್ರಗೊಂಡು ಇನ್ನೇನು ದೇಶ ಸ್ವಾತಂತ್ರಗೊಂಡು ಸಂವಿಧಾನ ಹೊಂದಿದ ಜಾತ್ಯಾತೀತ ರಾಷ್ಟ್ರವಾಗುತ್ತದೆ ಎನ್ನುವ ವಾತಾವರಣ ನಿರ್ಮಾಣಗೊಳ್ಳುತ್ತಿದ್ದ ಸಂದರ್ಭದಲ್ಲಿ ಹಿಂದೂ ಧರ್ಮಕ್ಕೆ ಅಪಾಯ ಆಗುತ್ತಿದೆ ಎಂದು ಸಾಂಪ್ರದಾಯವಾದಿಗಳು ಊಳಿಡಲು ಆರಂಭಿಸಿದರು. ೧೯೯೦ ರ ನಂತರ ಈ ಕೂಗಿಗೆ ರಾಜಕೀಯ ಮಹತ್ವಾಕಾಂಕ್ಷೆ ಸೇರಿಕೊಂಡು ಹಿಂದೂ ಯುವಕರ ಮಿದುಳಿಗೆ ಧರ್ಮದ ವಿಷ ಬೆರೆಸುವ ಕಾರ್ಯ ಆರಂಭಗೊಂಡಿತು. ಆರು ಶತಮಾನ ಮುಸ್ಲಿಮರ ಆಳ್ವಿಕೆಯಲ್ಲಿ ಸುರಕ್ಷಿತವಾಗಿದ್ದ ಹಿಂದೂ ಧರ್ಮ ಈಗೇಕೆ ಒಮ್ಮಿಂದೊಮ್ಮೆಲೆ ಅಪಾಯಕ್ಕೆ ಸಿಲುಕಿತು? ಈ ಪ್ರಶ್ನೆಗೆ ಮೂಲಭೂತವಾದಿಗಳು ವಿತಂಡವಾದದ ಸಮರ್ಥನೆಯನ್ನು ನೀಡಬಲ್ಲರು. ಆದರೆ ಹಿಂದೂ ಧರ್ಮ ಹಿಂದೆಂದೂ ಅಪಾಯಕ್ಕೆ ಸಿಲುಕಿರಲಿಲ್ಲ ಹಾಗು ಮುಂದೆಯೂ ಅದು ಯಾವುದೇ ಬಗೆಯ ಅಪಾಯಕ್ಕೆ ಸಿಲುಕುವುದಿಲ್ಲ ಎನ್ನುವ ಭರವಸೆ ನನಗಿದೆ.
ಹಾಗೊಂದು ವೇಳೆ ಹಿಂದೂ ಧರ್ಮ ಅಪಾಯಕ್ಕೆ ಸಿಲುಕುವುದೇ ನಿಜವಾಗಿದ್ದಲ್ಲಿ ಅದು ಯಾರಿಂದ ಎನ್ನುವ ಸಂಗತಿಯನ್ನು ನಾವು ಅರಿತುಕೊಳ್ಳಬೇಕಿದೆ. ಹಿಂದೂ ಧರ್ಮದಲ್ಲಿ ಮೇಲುˌ ಕೀಳುˌ ಗಂಡುˌ ಹೆಣ್ಣು ˌ ಬಡವˌ ಬಲ್ಲಿದ ಹೀಗೆ ಅನೇಕ ಬಗೆಯ ತಾರತಮ್ಯಗಳನ್ನು ಮಾಡಿದವರುˌ ದೇವರು ಮತ್ತು ಧರ್ಮದ ಹೆಸರಿನಲ್ಲಿ ಇಲ್ಲಿನ ಮುಗ್ಧ ಜನರ ತಲೆಯಲ್ಲಿ ಮೌಢ್ಯವನ್ನು ಬಿತ್ತಿದವರುˌ ಬಿತ್ತುತ್ತಿರುವವರು ಮತ್ತು ಮುಂದೆ ಬಿತ್ತಲಿರುವವರಿಂದ ಮಾತ್ರ ಹಿಂದೂ ಧರ್ಮಕ್ಕೆ ಬಹುದೊಡ್ಡ ಅಪಾಯ ಇದೆಯೇ ಹೊರತು ಮತ್ತೊಬ್ಬರಿಂದಲ್ಲ ಎನ್ನುವ ಸತ್ಯ ನಾವು ಅರಿತುಕೊಳ್ಳಬೇಕಿದೆ.
ಹೋಗಲಿˌ ಹಿಂದೂ ಧರ್ಮ ಅಪಾಯಕ್ಕೆ ಸಿಲುಕಿದೆ ಎಂದು ಕೆಲವು ಕ್ಷಣ ಒಪ್ಪಿಕೊಳ್ಳೋಣ. ಅದನ್ನು ರಕ್ಷಿಸಲು ನಮ್ಮಲ್ಲಿ ಅಪಾರವಾದ ಶಕ್ತಿ ˌ ಮತ್ತು ಅನೇಕ ಬಗೆಯ ಕುಟಿಲೋಪಾಯಗಳು ಇವೆ. ಹಾಗಾದರೆ ನಮಗಿರುವ ಆ ಶಕ್ತಿ ಮತ್ತು ಕುಟಿಲೋಪಾಯಗಳಾದರೂ ಯಾವುವು ಎಂದು ನೋಡೋಣ:
🔸 ಅತ್ಯಂತ ಚಿಕ್ಕ ಮಗುವಿದ್ದಾಗಲೇ ಉರಿಯುವ ನಕ್ಷತ್ರ ಗೋಳವಾದ ಆ ಸೂರ್ಯನನ್ನೇ ನುಂಗಲು ಪ್ರಯತ್ನಿಸಿದˌ ಬೆಟ್ಟ ಗುಡ್ಡಗಳು ಅಲೆದು ಸಂಜೀವಿನಿ ಸಸ್ಯವಿರುವ ಪರ್ವತವನ್ನೆ ಹೊತ್ತು ತಂದˌ ಮತ್ತು ಲಂಕೆಗೆ ಸಮುದ್ರೋಲಂಘನ ಮಾಡಿˌ ಸಮುದ್ರಕ್ಕೆ ಸೇತುವೆ ಕಟ್ಟಿ ˌ ಲಂಕೆಯನ್ನು ದಹಿಸಿದ ಹನುಮಂತನ ಆಸೀಮ ಬಲ ಹಿಂದೂಗಳಿಗಿರುವಾಗ ನಾವೇಕೆ ಹೆದರಬೇಕು?
🔸 ಬಿಟ್ಟ ಬಾಣದಿಂದ ಹುಸಿಯಿಲ್ಲದೆ ವೈರಿಗಳನ್ನು ಸರ್ವನಾಶ ಮಾಡಬಲ್ಲ ˌ ಅಖಿಲಾಂಡಕೋಟಿ ಬ್ರಹ್ಮಾಂಡ ರಕ್ಷಕ ಶ್ರೀಮನ್ನಾರಾಯಣನ ಅವತಾರವಾದ ಶ್ರೀರಾಮನ ಅಪ್ರತಿಮ ಬಲ ಹಿಂದೂಗಳೊಂದಿಗೆ ಇರುವಾಗ ನಾವೇಕೆ ಹೆದರಬೇಕು?
🔸 ಮಗುವಿದ್ದಾಗಲೇ ತನ್ನ ಚಿಕ್ಕ ಬಾಯಲ್ಲಿ ಬ್ರಹ್ಮಾಂಡವನ್ನು ತೋರಿಸಿದˌ ರಾಕ್ಷಸಿ ಪೊತನಿಯನ್ನು ಮತ್ತು ಸೋದರಮಾವ ಕಂಸನನ್ನು ಸಂಹರಿಸಿದˌ ಕೈಯಲ್ಲಿ ಚಕ್ರ ಹಿಡಿದುˌ ಧರ್ಮ ಅಪಾಯದಲ್ಲಿರುವಾಗೆಲ್ಲ ಯದಾ ಯದಾ ಹಿಃ ಧರ್ಮಸ್ಯ… ಸಂಭಾವಾಮಿ ಯುಗೆ ಯುಗೆ… ಎಂದು ಮತ್ತೆ ಹುಟ್ಟಿ ಬರುತ್ತೇನೆನ್ನುವ ಸಂಪೂರ್ಣ ಭರವಸೆ ನೀಡಿರುವ ಶ್ರೀಕೃಷ್ಣನ ತಂತ್ರ ಬಲ ನಮ್ಮೊಂದಿಗಿರುವಾಗ ನಾವೇಕೆ ಹೆದರಬೇಕು?
🔸 ವಿದ್ಯೆ ಬುದ್ದಿಯ ದೇವತೆˌ ಸರ್ವ ವಿಘ್ನಗಳ ನಿವಾರಕನಾದ ಗಣಪತಿ ನಮ್ಮೊಂದಿಗಿರುವಾಗ ಹಿಂದೂಗಳಾದ ನಾವೇಕೆ ಹೆದರಬೇಕು?
🔸 ವಜ್ರಾಯುಧವನ್ನು ಸದಾ ಕೈಯಲ್ಲಿ ಹಿಡಿದುಕೊಂಡು ಐರಾವತದ ಮೇಲೆ ಸಂಚರಿಸುವ ದೇವೇಂದ್ರನ ಶಕ್ತಿ ಮತ್ತು ಸದಾ ಅಂತರಿಕ್ಷದಲ್ಲಿ ಸಂಚರಿಸುತ್ತ ಅಲ್ಲಿಂದಿಗೆˌ ಇಲ್ಲಿಂದಲ್ಲಿಗೆ ಸುದ್ದಿ ಮುಟ್ಟಿಸುವ ಸಂಪರ್ಕ ಮತ್ತು ಸಂವಹನದ ಕೊಂಡಿಯಂತಿರುವ ನಾರದ ಮುನಿ ನಮ್ಮೊಂದಿಗಿರುವಾಗ ನಾವೇಕೆ ಹೆದರಬೇಕು?
🔸ಇದರ ಜೊತೆಗೆ ತೆತ್ತೀಸು ಕೋಟಿ ದೇವತೆಗಳುˌ ಅಷ್ಟ ದಿಕ್ಪಾಲಕರುˌ ದುರ್ಗೆ ˌ ಚಾಮುಂಡಿ ಮುಂತಾದ ದುಷ್ಟ ಸಂಹಾರಿ ಶಕ್ತಿ ದೇವತೆಗಳುˌ ಏನನ್ನು ಬೇಕಾದರೂ ಸೃಷ್ಟಿಸುವ ಅದುನಿಕ ಸಾಯಿ ಬಾಬಾಗಳುˌ
ಅದೆಲ್ಲಕ್ಕೂ ಮೀರಿˌ ಚಂಡಿಕಾ ಯಾಗˌ ಶತೃಸಂಹಾರದಂತ ಹಲವಾರು ಯಾಗˌ ಹೋಮˌ ಹವನಗಳ ಶಕ್ತಿ ನಮಗಿರುವಾಗ ನಾವು ಯಕಕ್ಷಿತ
ಮುಸ್ಲಿಮ್ ಮತ್ತು ಕ್ರೈಸ್ತರ ಒಗ್ಗಟ್ಟಿಗೆ ಹೆದರುವುದು ಬಾಲೀಸ ನಡೆಯಲ್ಲವೆ. ನಮ್ಮ ತೆತ್ತೀಸು ಕೋಟಿ ದೇವತೆಗಳ ಸಂಖ್ಯೆ ಮತ್ತು ಅವುಗಳ ಅಪರಿಮಿತ ಶಕ್ತಿಗಿಂತ ಈ ದೇಶದ ಅಲ್ಪಸಂಖ್ಯಾತರ ಸಂಖ್ಯೆ ಮತ್ತು ಶಕ್ತಿ ಎರಡೂ ನಗಣ್ಯವಾಗಿರುವಾಗ ನಾವೆಲ್ಲರೂ ನಮ್ಮ ದೇಶದ ಮಿಲ್ಟ್ರಿ ವ್ಯವಸ್ಥೆಯನ್ನು ವಿಸರ್ಜಿಸಿಯೂ ಕೂಡ ಧೈರ್ಯದಿಂದ ಇರಬಹುದು! ಹಿಂದೂ ಧರ್ಮ ಅಪಾಯದಲ್ಲಿದೆ ಎಂದು ಹಿಂಬದಿಯಲ್ಲಿ ಯಾವುದೊ ಸುರಕ್ಷಿತ ಸ್ಥಳದಲ್ಲಿ ಕುಳಿತುಕೊಂಡು ಹಲಬುತ್ತ ಈ ದೇಶದ ಬಡ ಶೂದ್ರರ ಮಕ್ಕಳನ್ನು ಅಪಾಯಕ್ಕೆ ದೂಡುತ್ತಿರುವ ಸಾಂಪ್ರದಾಯವಾದಿಗಳ ಕುಟಿಲ ಹುನ್ನಾರಕ್ಕೆ ನಾವು ಬಲಿಯಾಗದಿರೋಣ. ಇದೆ ನಾವು ಹಿಂದೂ ಧರ್ಮ ರಕ್ಷಣೆಗೆ ಇಡುವ ಮೊದಲ ಹೆಜ್ಜೆ ಎಂದು ಭಾವಿಸೋಣ.
~ಡಾ. ಜೆ ಎಸ್ ಪಾಟೀಲ.