ವಿಧಾನ ಪರಿಷತ್ತಿನ ವಿಪಕ್ಷ ನಾಯಕನ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಸಿಎಂ ಇಬ್ರಾಹಿಂ ಅವರು ಪ್ರತಿದಿನವೂ ಕಾಂಗ್ರೆಸ್ ಪಕ್ಷದ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಈಗ ಅವರು ಮಾಜಿ ಸಿಎಂ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರಿನಲ್ಲಿ ಹೊಸ ರಾಜಕೀಯ ದಾಳವೊಂದನ್ನು ಉರುಳಿಸಿದ್ದಾರೆ. ಪ್ರೇಮಿಗಳ ದಿನದಂದು (ಫೆ.೧೪) ನಾವು ಯಾರ ಮೇಲೆ (ಯಾವ ಪಕ್ಷದ ಮೇಲೆ) ಪ್ರೀತಿ ಇದೆ ಎಂಬುದನ್ನು ರಾಜ್ಯಕ್ಕೆ ತಿಳಿಸುವುದಾಗಿ ಹೇಳಿದ್ದಾರೆ.
ಮೈಸೂರಿನಲ್ಲಿ ಅವರಾಡಿದ ಮಾತುಗಳನ್ನು ಗ್ರಹಿಸಿದಾಗ ಅವರು ಪ್ರೇಮಿಗಳ ದಿನ ಅಂತ ತಮಾಷೆಯಾಗಿಯೇ ಹೇಳಿದ್ದರೂ, ಅವರು ಪ್ರಸ್ತಾಪಿಸಿದ ಸಂಗತಿಗಳು ಮಾತ್ರ ಬಹಳ ಗಂಭೀರವಾಗಿವೆ. ಅವರ ನಡೆ ಕರ್ನಾಟಕ ರಾಜಕಾರಣದಲ್ಲಿ ಹೊಸ ಮಜಲೊಂದನ್ನು ಹುಟ್ಟು ಹಾಕುತ್ತಾ ಎನ್ನುವ ಪ್ರಶ್ನೆಗಳನ್ನು ಈಗ ಮೂಡಿಸಿದೆ.
ಕಾಂಗ್ರೆಸ್ ಪಕ್ಷದ ವಿರುದ್ಧ, ಅದರಲ್ಲೂ ಮುಖ್ಯವಾಗಿ ಸಿದ್ದರಾಮಯ್ಯ ಅವರ ನಾಯಕತ್ವ ವಿರುದ್ಧ ನೇರವಾಗಿಯೇ ತೊಡೆತಟ್ಟಿದಂತೆ ಅವರ ಸದ್ಯದ ನಡೆ ಕಾಣುತ್ತಿದೆ. “ನಾವು ಹಿನ್ನೆಲೆ ಗಾಯಕರಾಗಿ ಸಿದ್ದರಾಮಯ್ಯ ಅವರನ್ನು ಹಿರೋ ಮಾಡಿದ್ವಿ. ಆದ್ರೆ ಇದೇ ಸಿದ್ದರಾಮಯ್ಯ ನಮ್ಮ ಕುತ್ತಿಗೆ ಕೊಯ್ಯುತ್ತಲೇ ಬಂದಿದ್ದಾರೆ,” ಎಂದು ಆಳದ ಅಸಮಾಧಾನವನ್ನು ತೋರ್ಪಡಿಸಿದ್ದಾರೆ.
“ಸಾಬರ ನಾಯಕರು ಹಾಗೂ ಸಮುದಾಯದ ಮತಗಳು ಬಿಜೆಪಿಗೆ ಹೋಗುವುದಿಲ್ಲ ಎನ್ನುವ ಭಾವನೆಯನ್ನು ಕಾಂಗ್ರೆಸ್ ನಿರ್ಮಾಣ ಮಾಡಿಕೊಂಡಿದೆ. ಅಲ್ಪಸಂಖ್ಯಾತ ಸಮಾಜ ಎನ್ನುವ ನಿರ್ಲಕ್ಷ್ಯವನ್ನು ಕಾಂಗ್ರೆಸ್ ಬೆಳೆಸಿಕೊಂಡಿದೆ. ರಾಜ್ಯದಲ್ಲಿ ಶೇ. 20 ರಷ್ಟು ದಲಿತರಿದ್ದಾರೆ. ನಾವು ಶೇ.21 ರಷ್ಟಿದ್ದೇವೆ. ಕಾಂಗ್ರೆಸ್ಸಿನಲ್ಲಿ ದಲಿತರಿಗೆ ಇರುವ ಬೆಲೆ ನಮಗಿಲ್ಲ,” ಎಂದು ನೇರವಾಗಿಯೇ ಹೇಳಿದ್ದಾರೆ.
ನಮಗಾದ ಅನ್ಯಾಯ ಸರಿಯಾಗಬೇಕು. ತನ್ವೀರ್ ಸೇಠ್ ವಿರೋಧ ಪಕ್ಷದ ನಾಯಕರಾಗಬೇಕು ಹಾಗೂ ಯು ಟಿ ಖಾದರ್ ಕೆಪಿಸಿಸಿ ಅಧ್ಯಕ್ಷರಾಗಬೇಕು. ಈ ಬಗ್ಗೆ ನಮ್ಮ ಆಗ್ರಹವನ್ನು ತಿಳಿಸಿದರೆ ಕಾಂಗ್ರೆಸ್ ನಾಯಕರು ಸಿಟ್ಟಾಗುತ್ತಾರೆ. ಕಾಂಗ್ರೆಸ್ ನಲ್ಲಿ ನಿರ್ಧರಿತ ರಾಜಕಾರಣ ನಡೆಯುತ್ತಿದೆ. ಕಾಂಗ್ರೆಸ್ ನಾಯಕರು ಹೇಳಿದ ಹಾಗೆ ಕೇಳಿಕೊಂಡು ಇರಬೇಕು ಎಂಬುದು ಕಾಂಗ್ರೆಸ್ ಸಂಸ್ಕೃತಿ. ಯಾರೋ ಹೇಳಿದ ಹಾಗೆ ಕೇಳುವ ವ್ಯಕ್ತಿತ್ವ ನನ್ನದಲ್ಲ. ನಾನು ಪಕ್ಕಾ ಟಿಪ್ಪು ಸುಲ್ತಾನ್ ಭೂಮಿಯಲ್ಲಿ ಜನಿಸಿರುವೆ. ನನ್ನ ಸಮುದಾಯವನ್ನು ಒಗ್ಗೂಡಿಸಿಕೊಂಡು, ರಾಜ್ಯದಲ್ಲಿ ನಮ್ಮ ಮುಂದಿನ ಹೆಜ್ಜೆಗಳೇನು ಎಂಬುದನ್ನು ಇದೇ 14 ರಂದು ಸ್ಪಷ್ಟಪಡಿಸುವೆ ಎಂದಿದ್ದಾರೆ.
ಹೊಸ ಪಕ್ಷ ಕಟ್ಟುವುದಿಲ್ಲ ; ಸಜ್ಜನರ ಸತ್ಯ ರಂಗ ಕಟ್ಟುತ್ತೇವೆ!
ಸಿಎಂ ಇಬ್ರಾಹಿಂ ಅವರು ಹೊಸ ಪಕ್ಷ ಕಟ್ಟುವ ಯೋಚನೆ ಇಲ್ಲ ಎಂಬುದನ್ನು ತಾವೇ ಸ್ಪಷ್ಟ ಪಡಿಸಿದ್ದಾರೆ. ತಮ್ಮ ಮುಂದೆ ಮಮತಾ ಬ್ಯಾನರ್ಜಿ ಅವರ (ಟಿಎಂಸಿ), ಅಖಿಲೇಶ್ ಯಾದವ್ ಅವರ (ಎಸ್ಪಿ) ಹಾಗೂ ದೇವೆಗೌಡರ (ಜೆಡಿಎಸ್) ಪಕ್ಷಗಳ ಆಯ್ಕೆ ಇದೆ ಎಂಬ ಪ್ರಸ್ತಾಪ ಮಾಡಿದ್ದಾರೆ.
ಒಂದು ವೇಳೆ ಸಿಎಂ ಇಬ್ರಾಹಿಂ ಅವರು ಜೆಡಿಎಸ್ ಸೇರಿದರೆ ಕಾಂಗ್ರೆಸ್ ಗೆ ಭಾರೀ ಪ್ರಮಾಣದಲ್ಲಿ ಡ್ಯಾಮೇಜ್ ಆಗುತ್ತದೆ ಎನ್ನಲಾಗದು. ಆದರೆ, ಅದೇ ಅವರು ಮಮತಾ ಬ್ಯಾನರ್ಜಿ ಅವರನ್ನಾಗಲಿ ಅಥವಾ ಅಖಿಲೇಶ್ ಯಾದವ್ ಅವರನ್ನಾಗಲಿ ಕೈಹಿಡದಲ್ಲಿ ಕಾಂಗ್ರೆಸ್ಸಿಗೆ ಸ್ವಲ್ಪ ಪ್ರಮಾಣದಲ್ಲಾದರೂ ನಷ್ಟವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ!
ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯ ಶೇ. 21 ರಷ್ಟಿದೆ. ಕರ್ನಾಟಕ ರಾಜಕಾರಣದಲ್ಲಿ ಜೆಡಿಎಸ್ ಪಕ್ಷವು ಈ ಅಲ್ಪಸಂಖ್ಯಾತ ಮತಗಳು ಅಧಿಕವಾಗಿರುವ ಕ್ಷೇತ್ರಗಳಲ್ಲಿ ಹೇಗೆಲ್ಲಾ ಆಟವಾಡುತ್ತ, ಕಾಂಗ್ರೆಸ್ಸಿಗೆ ಮಗ್ಗಲು ಮುಳ್ಳಾಗಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಕೆಲವು ಕ್ಷೇತ್ರಗಳಲ್ಲಿ ಜೆಡಿಎಸ್ ಆಟದ ಫಲವನ್ನು ಬಿಜೆಪಿ ಉಣ್ಣುತ್ತಿದೆ. ವಾಸ್ತವ ಹೀಗರಬೇಕಾದರೆ ಇಬ್ರಾಹಿಂ ಅವರು ಟಿಎಂಸಿ ಅಥವಾ ಎಸ್ಪಿ ಕೈಹಿಡದಲ್ಲಿ ಜೆಡಿಎಸ್ ಆಡಿದ ಆಟವನ್ನೇ ಇವರು ಮುಂದುವರೆಸಿ, ಕಾಂಗ್ರೆಸ್ಸಿಗೆ ಮತ್ತೊಂದು ರೀತಿಯಲ್ಲಿ ಮಗ್ಗಲು ಮುಳ್ಳಾಗಿ ಕಾಡುವ ಸಂಭವವೇ ಹೆಚ್ಚಿದೆ! ಈ ಅಪಾಯವನ್ನು ಕಾಂಗ್ರೆಸ್ ಈಗಲೇ ಗುರುತಿಸದಿದ್ದಲ್ಲಿ ಮುಂದೊಂದು ದಿನ ಪಶ್ಚಾತಾಪ ಪಡುವ ಪರಿಸ್ಥಿತಿ ಆ ಪಕ್ಷಕ್ಕೆ ಒದಗಿ ಬಂದರೂ ಬರಬಹುದು.
ಸಿದ್ದರಾಮಯ್ಯ ಅವರದ್ದು ʼಅಹಿಂದʼ, ವಾದ್ರೆ ನಮ್ಮದು ʼಅಲಿಂಗೊʼ!
ಸಿದ್ದರಾಮಯ್ಯ ಅವರದ್ದು ʼಅಹಿಂದʼ ವಾದ್ರೆ, ನಮ್ಮದು ʼಅಲಿಂಗೊʼ ಎಂದು ಇಬ್ರಾಹಿಂ ಹೇಳಿದ್ದಾರೆ. ಸಿದ್ದರಾಮಯ್ಯ ಅವರು ʼಅಹಿಂದ ಮೂಲಕ ರಾಜಕಾರಣ ಮಾಡಿದ್ದಾರೆ. ನಾವು ʼಅಲಿಂಗೊʼ ಮೂಲಕ ರಾಜಕಾರಣ ಮಾಡುತ್ತೇವೆ ಎಂದು ಸವಾಲು ಹಾಕಿದ್ದಾರೆ. (ʼಅಲಿಂಗೊʼ ದ ಅರ್ಥವನ್ನು ಅವರೇ ವಿವರಿಸಿರುವಂತೆ ʼಅಲ್ಪಸಂಖ್ಯಾತರು, ಲಿಂಗಾಯತರು ಹಾಗೂ ಒಕ್ಕಲಿಗರು ಸೇರಿದಂತೆ ದಲಿತರನ್ನು ಒಳಗೊಂಡು ರಾಜಕಾರಣ ಮಾಡುವುದು)
“ಲಿಂಗಾಯತ ಸ್ವಾಮೀಜಿಗಳ ಹತ್ತಿರ ಹಾಗೂ ಪಂಚಮಸಾಲಿ ಪೀಠಾಧ್ಯಕ್ಷರ ಹತ್ತಿರ ಈ ಬಗ್ಗೆ ಚರ್ಚಿಸಿರುವೆ. ಅವರೆಲ್ಲರೂ ಸಾಥ್ ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಹೋರಾಟವನ್ನು ಮೈಸೂರಿನಿಂದಲೇ ಆರಂಭಿಸಿದ್ದೇನೆ. ಹಳೆ ತಳಿಗಳ ಬೀಜ ಸಂಗ್ರಹಿಸುತ್ತಿದ್ದು, ಜೆ.ಎಚ್.ಪಾಟೀಲ್ ಅವರ ಮಗ ಹಾಗೂ ವಿರೇಂದ್ರ ಪಾಟೀಲ್ ಅವರ ಮಗ ಈ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ಶ್ರೀನಿವಾಸ ಪ್ರಸಾದ್ ಹಾಗೂ ಎಚ್ ವಿಶ್ವನಾಥ್ ಅವರೊಂದಿಗೆ ಸಂಪರ್ಕದಲ್ಲಿರುವೆ. ಎಲ್ಲರನ್ನು ಒಗ್ಗೂಡಿಸಿಕೊಂಡು ಕರ್ನಾಟಕದಲ್ಲಿ ʼಸಜ್ಜನರ ಸತ್ಯ ರಂಗʼ ಕಟ್ಟುತ್ತೇವೆ. ಈ ಒಂದು ಹೋರಾಟ ದೇಶಕ್ಕೆ ಕರ್ನಾಟಕ ಹೊಸ ರಾಜಕಾರಣವನ್ನು ಮತ್ತೊಮ್ಮೆ ಪರಿಚಯಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
1995 ರಲ್ಲಿ ನನಗೆ ಕಾಂಗ್ರೆಸ್ ಅನ್ಯಾಯ ಮಾಡಿತ್ತು. ವೀರಪ್ಪ ಮೊಯ್ಲಿ ಅವರು ರಾಜ್ಯಸಭಾ ಸ್ಥಾನವನ್ನು ತಪ್ಪಿಸಿದ್ದರು. ನಂತರ ಏನಾಯಿತು? 1995 ರಲ್ಲಿ ಆದ ಗತಿ 2023 ರಲ್ಲಿ ಕಾಂಗ್ರೆಸ್ಸಿಗೆ ಆಗುತ್ತದೆ. ಇದರ ಪರಿಣಾಮವನ್ನು ಸಿದ್ದರಾಮಯ್ಯ ಕೂಡ ಅನುಭವಿಸಲಿದ್ದಾರೆ. ನಮ್ಮ ಸ್ನೇಹಕ್ಕೆ ಸಿದ್ದರಾಮಯ್ಯ ಅವರು ಬೆಲೆ ಕೊಡುವುದಾಗಿದ್ದರೆ, ನನಗೆ ವಿರೋಧ ಪಕ್ಷದ ಸ್ಥಾನ ತಪ್ಪಿದಾಗಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಮುಂದೆಯೂ ನನಗಾದ ಸ್ಥಿತಿ ಅವರಿಗೂ ಬರುತ್ತದೆ ಎಂದು ನುಡಿದಿದ್ದಾರೆ.
ಒಟ್ಟಾರೆಯಾಗಿ ಸಿಎಂ ಇಬ್ರಾಹಿಂ ಕಾಂಗ್ರೆಸ್ ವಿರುದ್ಧ ದ್ವೇಷರಾಜಕಾರಣಕ್ಕೆ ಮುಂದಾಗಿದ್ದಾರಾ? ಅಥವಾ ತಮಗಾದ ಅನ್ಯಾಯಕ್ಕೆ ಕಾಂಗ್ರೆಸ್ಸಿಕೆ ತಕ್ಕ ಪಾಠ ಕಲಿಸುವ ಉದ್ದೇಶವಷ್ಟೇ ಅವರ ಆಳದಲ್ಲಿದೆಯಾ? ಅಥವಾ ನಿಜಕ್ಕೂ ಹೊಸ ರಾಜಕಾರಣಕ್ಕೆ ಕೈ ಹಾಕಿ, ತಮ್ಮ ಅಸ್ತಿತ್ವವನ್ನು ಮತ್ತಷ್ಟು ಹೆಚ್ಚಿಸಿಕೊಂಡು ಪರ್ಯಾಯ ಶಕ್ತಿಯಾಗಿ ಹೊರಹೊಮ್ಮುತ್ತಾರಾ? ಇವೆಲ್ಲ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕಿದೆ.