ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಬಳಿಕ ತೀವ್ರ ಚರ್ಚೆಗೆ ಬಂದ ಸಿಡಿ, ಬ್ಲಾಕ್ಮೇಲ್ ರಾಜಕಾರಣದ ಕುರಿತಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಸಿ.ಡಿ ತೋರಿಸಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಬೆದರಿಸಿ, ಕೆಲವರು ಮಂತ್ರಿ ಹುದ್ದೆ ಪಡೆದಿದ್ದಾರೆ ಎಂದು ಬಿಜೆಪಿ ಶಾಸಕರೇ ಆರೋಪಿಸುತ್ತಿದ್ದಾರೆ. ಬ್ಲಾಕ್‌ಮೇಲ್ ಮಾಡಿದವರು ಯಾರೇ ಆಗಿರಲಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಧೈರ್ಯ ಮುಖ್ಯಮಂತ್ರಿಗಳಿಗಿದೆಯೇ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುಟುಂಬ ರಾಜಕಾರಣದ ಬಗ್ಗೆ ಬಿಜೆಪಿ ನಾಯಕರಿಗೆ ತಡವಾಗಿ ಜ್ಞಾನೋದಯವಾಗಿದೆ. ಯಡಿಯೂರಪ್ಪ ನಾಮಕಾವಸ್ತೆ ಮುಖ್ಯಮಂತ್ರಿ, ನಿಜವಾದ ಅಧಿಕಾರ ಚಲಾಯಿಸುತ್ತಿರುವುದು ಅವರ ಮಗ ಎಂದು ನಾನು ಬಹಳ ಹಿಂದೆಯೇ ಹೇಳಿದ್ದೆ. ಕೆಲವರಿಗೆ ಈಗೀಗ ಸತ್ಯ ಗೊತ್ತಾಗ್ತಿದೆ ಎಂದು ಅವರು ಹೇಳಿದ್ದಾರೆ.
ಯಡಿಯೂರಪ್ಪ ಅವರ ಕುರ್ಚಿ ಗಟ್ಟಿಯಾಗಿದ್ದರೆ ಸಂಪುಟ ವಿಸ್ತರಣೆಗಾಗಿ ಹೈಕಮಾಂಡ್ ಬಳಿ ಗೋಗರೆಯುವ, ಕೈಕಾಲು ಹಿಡಿಯುವ ಅಗತ್ಯವಿರುತ್ತಿರಲಿಲ್ಲ. ಕೆಲವರಿಗೆ ಮಂತ್ರಿ ಸ್ಥಾನ ಕೊಡಲು ಕಾನೂನಿನ ತೊಡಕಿದೆ ಅಂತ ಗೊತ್ತಿದ್ರೂ ಸುಳ್ಳು ವಾಗ್ದಾನ ನೀಡಿ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಹಾಗಾಗಿ ಬಿಜೆಪಿ ಸೇರಿದ ಕೆಲವರು ಬಾಯಿ ಬಡ್ಕೊತಿರೋದು ಎಂದು ಪರೋಕ್ಷವಾಗಿ ಎ ಎಚ್ ವಿಶ್ವನಾಥ್ ಅವರಿಗೆ ಟಾಂಗ್ ನೀಡಿದ್ದಾರೆ.
ಎ ಎಚ್ ವಿಶ್ವನಾಥ್ ಕೂಡಾ ಸಚಿವ ಸ್ಥಾನ ಸಿಗದಿರುವುದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಟೀಕಿಸಿದ್ದರು, ಆ ವೇಳೆ ಮಾತು ತಪ್ಪಿದ ನಾಯಕ ಎಂದು ಸಿದ್ದರಾಮಯ್ಯರ ಮೇಲೂ ಆರೋಪ ಹೊರಿಸಿದ್ದರು.