ಪ್ರಕರಣ 1:
ಮೊನ್ನೆ ಶನಿವಾರ,ಮೇ 1. ಅಂದು ದಿಲ್ಲಿಯ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾದ ಬಾತ್ರಾ ಆಸ್ಪತ್ರೆಯಲ್ಲಿ ಸುಮಾರು ಒಂದು ಗಂಟೆ ೨೦ ನಿಮಿಷಗಳ ಕಾಲ ಪೂರೈಸಲಾಗುತ್ತಿದ್ದ ಆಮ್ಲಜನಕ ಖಾಲಿಯಾಗಿ ರೋಗಿಗಳ ಸ್ಥಿತಿಯಲ್ಲಿ ಅಲ್ಲೋಲ ಕಲ್ಲೋಲವಾಯಿತು.
ಆಗ ಆ ಆಸ್ಪತ್ರೆಯಲ್ಲಿ 302 ಮಂದಿ ಕೊರೋನಾ ರೋಗಿಗಳಿದ್ದರು. ಅವರಲ್ಲಿ ಎಲ್ಲರಿಗೂ ಆಮ್ಲಜನಕ ಬೇಕಿರಲಿಲ್ಲ ನಿಜ. ಆದರೆ ಬೇಕಾದವರಿಗೆ ಸಿಗದ ಪರಿಣಾಮ ತುರ್ತು ಅಗತ್ಯವಿದ್ದ 12 ರೋಗಿಗಳು ಆಮ್ಲಜನಕಕ್ಕಾಗಿ ಪರದಾಡುತ್ತ ಪ್ರಾಣ ಬಿಟ್ಟರು. ಹಾಗೆ ಜೀವ ಕಳೆದುಕೊಂಡವರ ಪಟ್ಟಿಯನ್ನು ಬಾತ್ರಾ ಆಸ್ಪತ್ರೆ ಸಿದ್ಧಪಡಿಸಿದಾಗ, ಅದರಲ್ಲಿದ್ದ 10 ನೇ ಹೆಸರು ಡಾ.ಆರ್.ಕೆ. ಹಿಮ್ತಾನಿ!
62 ವರ್ಷದ ಡಾ.ಆರ್.ಕೆ. ಹಿಮ್ತಾನಿ ಎಂಬ ಈ ಹಿರಿಯ ವೈದ್ಯ, ಬಾತ್ರಾ ಆಸ್ಪತ್ರೆಯ ಗ್ಯಾಸ್ಟ್ರೋಇಂಟೆರಿಟಿಸ್ ವಿಭಾಗ ಶುರುವಾದಾಗಿನಿಂದಲೂ ಅಲ್ಲಿನ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದವರು! ಡಾಕ್ಟರಿಕೆಯಲ್ಲಿ 44 ವರ್ಷಗಳ ಸಮೃದ್ಧ ಅನುಭವ ಅವರಿಗಿತ್ತು. ಕೊರೋನಾ ಕಾಟ ಆರಂಭವಾದರೂ ಅವರು ವೈದ್ಯ ಸೇವೆಯನ್ನು ನಿಲ್ಲಿಸಿರಲಿಲ್ಲ. ತಮ್ಮ ರೋಗಿಗಳಿಗೆ ಅವರು ವೃತ್ತಿಪರವಾಗಿ ಯಾವಾಗಲೂ ಲಭ್ಯವಿರುತ್ತಿದ್ದರು. ಈ ನಡುವೆ ಅವರೂ ಅವರ ಪತ್ನಿಯೂ ಕೋವಿಡ್ 19 ರಿಂದ ಸೋಂಕಿತರಾಗಿ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಅವರನ್ನು ಅದೇ ಆಸ್ಪತ್ರೆಯ ಐಸಿಯುಗೆ ಭರ್ತಿ ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಉಸಿರಾಟದಲ್ಲಿ ತೊಂದರೆ ಉಂಟಾಗಿದ್ದರಿಂದ ಅವರಿಗೆ ಕೃತಕವಾಗಿ ಆಮ್ಲಜನಕ ಪೂರೈಸಲಾಗುತ್ತಿತ್ತು. ಅದು ಖಾಲಿಯಾಗಿ ಬೇರೆ ಸಿಲಿಂಡರ್ ಗಳು ಸಕಾಲದಲ್ಲಿ ಸಿಗದ ಕಾರಣ ಅವರ ಉಸಿರು ನಿಂತಿತ್ತು!
ಸದಾ ನಗುಮೊಗದಿಂದ ಇರುತ್ತಿದ್ದ ಡಾ.ಆರ್.ಕೆ. ಹಿಮ್ತಾನಿ ಅವರು ಇನ್ನಿಲ್ಲ ಎಂದರೆ ನಂಬಲಾಗುತ್ತಿಲ್ಲ ಎಂದು ಅವರ ಸಾವಿನ ಆಘಾತಕ್ಕೆ ಒಳಗಾಗಿರುವ ಅವರ ಸಹೋದ್ಯೋಗಿಗಳು, ಮಿತ್ರರು ಈಗಲೂ ಕಂಬನಿ ಮಿಡಿಯುತ್ತಿದ್ದಾರೆ!
ಪ್ರಕರಣ 2:
“ಪ್ರಾಯಶಃ ಇದು ನನ್ನ ಕೊನೆಯ ಗುಡ್ ಮಾರ್ನಿಂಗ್, ಈ ವೇದಿಕೆಯಲ್ಲಿ ನಾನು ನಿಮ್ಮನ್ನು ಕೊನೆಯ ಸಲ ಭೇಟಿಯಾಗುತ್ತಿದ್ದೇನೆ ಅನ್ನಿಸುತ್ತಿದೆ. ಎಲ್ಲರೂ ಜಾಗ್ರತೆ ವಹಿಸಿ. ದೇಹ ಸಾಯುತ್ತದೆಯೇ ಹೊರತು ಆತ್ಮವಲ್ಲ. ಆತ್ಮ ಅವಿನಾಶಿ..”. ಇದು ಡಾ. ಮನೀಶಾ ಜಾದವ್ ಎಂಬ ಹಿರಿಯ ವೈದ್ಯಾಧಿಕಾರಿ ಕಳೆದ ಭಾನುವಾರ ತಮ್ಮ ಫೇಸ್ ಬುಕ್ ಪುಟಗಳಲ್ಲಿ ಬರೆದ ಕೊನೆಯ ಸಾಲುಗಳು. ಕೋವಿಡ್ ನಿಂದ ಬಳಲುತ್ತಿದ್ದ ಡಾ,ಮನೀಶಾ ಅವರು ಮರುದಿನ, ಅಂದರೆ ಸೋಮವಾರವೇ ಇಹಲೋಕ ತ್ಯಜಿಸಿದರು.
ಸೆವ್ರಿ ಟಿಬಿ ಆಸ್ಪತ್ರೆಯಲ್ಲಿ ಡಾಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ೫೧ ವರ್ಷದ ಡಾ. ಮನೀಶಾ ಜಾದವ್, ತಮ್ಮ ವೈದ್ಯಕೀಯ ಹಾಗೂ ಆಡಳಿತಾತ್ಮಕ ಸೇವೆಗಳೆರಡನ್ನೂ ಅದ್ಭುತವಾಗಿ ನಿರ್ವಹಿಸುವ ಕಾರಣಕ್ಕೆ ಜನಪ್ರಿಯರಾಗಿದ್ದರು. ಕೋವಿಡ್ ಸೋಂಕು ತಗಲಿದ ಮೇಲೆ ಪ್ರಾಣ ಕಳೆದುಕೊಂಡು ಮಹಾರಾಷ್ಟ್ರದ ಮೊದಲ ಸರಕಾರಿ ವೈದ್ಯರಾಗಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿತ್ತು.
ಪ್ರಕರಣ 3:
ಮದುವೆಯಾಗಿ 47 ವರ್ಷಗಳಿಂದ ಒಂದು ರಾತ್ರಿ ಕೂಡ ಬೇರೆ ಬೇರೆಯಾಗಿ ಬದುಕಿರದ ಡಾ.ದೇವಿಂದರ್ ಗರ್ಗ್ ಹಾಗೂ ಡಾ.ಲೀಲಾ ದಂಪತಿಯನ್ನು ಕೋವಿಡ್ 19 ಶಾಶ್ವತವಾಗಿ ಬರ‍್ಪಡಿಸಿ ಕೆಲ ದಿನಗಳ ಅಂತರದಲ್ಲೇ ಯಮಲೋಕಕ್ಕೆ ಒಯ್ದಿದೆ. ಅವರಿಬ್ಬರೂ 73 ವರ್ಷ ವಯಸ್ಸಾಗಿತ್ತು!
“ಅವರಿಬ್ಬರೂ ಕಳೆದ ಮಾರ್ಚ್ ೯ರಂದು ತಮ್ಮ 47 ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು” ಎಂದು ವಿವರಿಸುವಾಗ ಅವರ ಪುತ್ರ ಅಮಿತ್ ಅವರ ಕಣ್ಣುಗಳಲ್ಲಿ ಅಶ್ರುಧಾರೆಯಿತ್ತು. “ಹಲವು ಡಿಸ್ಪೆನ್ಸರಿಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾಗ ಕೋವಿಡ್ ವೈರಸ್ ಸದ್ದಿಲ್ಲದೆ ಅವರೊಳಗೆ ಸೇರಿರಬಹುದು. ಅದು ತಮ್ಮ ಮನೆಯ ಡಿಸ್ಪೆನ್ಸರಿಯಲ್ಲಿ ಮಾತ್ರ ಚಿಕಿತ್ಸೆ ನೀಡುತ್ತಿದ್ದ ಅಮ್ಮನಿಗೂ ಹರಡಿರಬಹುದು. ಅಪ್ಪ ಚೇತರಿಸಿಕೊಳ್ಳುತ್ತಿದ್ದರು. ಆದರೆ ಅಮ್ಮ ಮೇ 15ರಂದು ಸಾವನ್ನಪ್ಪಿದ ಮೇಲೆ ಆ ಶಾಕ್ ನಿಂದ ಚೇತರಿಸಿಕೊಳ್ಳದ ಅಪ್ಪ ಮೇ 25ರಂದು ಅವರ ದಾರಿಯನ್ನೇ ಹಿಡಿದರು. ನಾನೀಗ ಅವರ ಪ್ರೀತಿಯನ್ನು ಕಳೆದುಕೊಂಡು ತಬ್ಬಲಿಯಂತಾಗಿದ್ದೇನೆ” ಎಂದು ಹೇಳುವ ತಮ್ಮದೇ ಸ್ವಂತ ಐಟಿ ಕಂಪನಿ ಹೊಂದಿರುವ 36 ವರ್ಷದ ಅಮಿತ್, “ದಯವಿಟ್ಟು ಎಲ್ಲರೂ ಜಾಗ್ರತೆ ವಹಿಸಿ. ನಮ್ಮ ಮನೆಯ ಆಧಾರ ಸ್ತಂಭಗಳನ್ನೇ ಕಳೆದುಕೊಂಡಿದ್ದೇವೆ. ಇಂಥ ಪರಿಸ್ಥಿತಿ ಇನ್ಯಾರಿಗೂ ಬರದಿರಲಿ” ಎಂದು ಕಣ್ಣೀರು ಒರೆಸುತ್ತಾರೆ.
ಪ್ರಕರಣ 4:
‘ಸಾಂಕ್ರಾಮಿಕ ಕಾಯಿಲೆಗಳ ಕ್ಷೇತ್ರದ ದೈತ್ಯ’ ಎಂದೇ ಅಮೆರಿಕದಲ್ಲಿ ಖ್ಯಾತರಾಗಿದ್ದ ನ್ಯೂಜರ‍್ಸಿ ಮೆಡಿಕಲ್ ಸ್ಕೂಲ್ ಪ್ರೊಫೆಸರ್ ಕೂಡ ಆಗಿದ್ದ ಹಿರಿಯ ವೈದ್ಯ ಡಾ. ರಾಜೇಂದ್ರ ಕಪಿಲಾ (81) ಅವರು ತಮ್ಮ ಕುಟುಂಬದವರ ಆರೈಕೆಗಾಗಿ ಇತ್ತೀಚೆಗೆ ಭಾರತಕ್ಕೆ ಕಿರು ಪ್ರವಾಸ ಮಾಡಿದ್ದರು. ಆದರೆ ಕೋವಿಡ್ 19 ಸೋಂಕು ತಗುಲಿ ಮೂರು ವಾರಗಳಲ್ಲಿ ಅವರು ಅದರ ವಿರುದ್ಧದ ಹೋರಾಟದಲ್ಲಿ ಕೈಸೋತು ಭಾರತದ ನೆಲದಲ್ಲೇ ಮೃತಪಟ್ಟಿದ್ದಾರೆ. ದೇಶ ಕೋವಿಡ್ ಸೋಂಕಿನಿಂದ ಕಂಗೆಟ್ಟಿರುವ ನಡುವೆಯೇ ತಮ್ಮವರ ನೆರವಿಗೆಂದು ಬಂದ ಅವರು ತಮ್ಮ ಅಮರಿಕದ ರಿಟನ್ ಟಿಕೆಟ್ ಬಿಟ್ಟು ಯಮಲೋಕಕ್ಕೆ ಪಯಣ ಬೆಳೆಸಿದ್ದು ನಿಜಕ್ಕೂ ದುರಂತ.
ಪ್ರಕರಣ ೫:
ಹೊಸ ದಿಲ್ಲಿಯ ಡಾ. ಡಿಂಪಲ್ ಅರೋರಾ ಚಾವ್ಲಾ (34) ಅವರು ಕಳೆದ ತಿಂಗಳು ಕೊರೋನಾಗೆ ಬಲಿಯಾದಾಗ ಏಳು ತಿಂಗಳ ಗರ್ಭಿಣಿಯಾಗಿದ್ದರು. ಅವರು ಏಪ್ರಿಲ್ 17 ರಂದು ತಮ್ಮ ಕೊನೆಯ ಕ್ಷಣಗಳಲ್ಲಿ ಮಾಡಿದ್ದ 20 ಸೆಕೆಂಡ್ ಗಳ ವಿಡಿಯೋ ಸಂದೇಶದಲ್ಲಿ, “ದಯವಿಟ್ಟು ಯಾರೂ ಕೊರೋನಾವನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಇದು ಬಹಳ ಬಹಳ ಕೆಟ್ಟ ರೋಗ ಲಕ್ಷಣಗಳಿಂದ ಕೂಡಿದೆ. ನಾನೀಗ ಮಾತನಾಡಲೂ ಕೂಡ ಸಮರ್ಥಳಾಗಿಲ್ಲ. ಆದರೆ ಎಲ್ಲರೂ ಜಾಗ್ರತೆ ವಹಿಸಿ ಎಂದು ಹೇಳಲು ಕೊನೆಯ ಸಂದೇಶ ನಿಮಗೆಲ್ಲ ಕೊಡುತ್ತಿದ್ದೇನೆ” ಎಂದು ಹೇಳಿದ್ದರು. ಈ ವಿಡಿಯೋ ವೈರಲ್ ಆಗಿತ್ತು.
ಮಂಗಳೂರಿನ ದೇರಳಕಟ್ಟೆ ಕಣಚೂರು ಆಸ್ಪತ್ರೆಯಲ್ಲಿ ಎರಡು ವರ್ಷಗಳ ಕಾಲ ವೈದ್ಯೆಯಾಗಿ ಸೇವೆ ಸಲ್ಲಿಸಿದ್ದ ಕೇರಳ ಮೂಲದ ವೈದ್ಯೆ ಡಾ.ಮಹಾ ಬಷೀರ್ (27) ಅವರು ಮಂಗಳೂರಿನ ಇಂಡಿಯಾನಾ ಆಸ್ಪತ್ರೆಯಲ್ಲಿ ಏ.೨೮ರಂದು ಕೊರೋನಾದಿಂದ ಮೃತಪಟ್ಟರು. ಅವರು ಕೊರೋನಾದಿಂದ ಮೃತಪಟ್ಟಾಗ 6 ತಿಂಗಳ ಗರ್ಭಿಣಿಯಾಗಿದ್ದರು. ಅವರಿಗೆ 8 ತಿಂಗಳ ಹಿಂದಷ್ಟೇ ಮದುವೆಯಾಗಿತ್ತು.
ತೆಲಂಗಾಣದ ಗಜ್ವೆಲ್ ಜಿಲ್ಲೆಯಲ್ಲಿ ಸರಕಾರಿ ವೈದ್ಯೆಯಾಗಿ ನೂರಾರು ಕೊರೋನಾ ಸೋಂಕಿತರ ಚಿಕಿತ್ಸೆ ಮಾಡಿದ್ದ ಡಾ.ಫರ್ಹಾ ನೀಲೊಫರ್ (31) ಅವರು ಮಗುವಿಗೆ ಜನ್ಮ ನೀಡಿದ ಒಂದು ವಾರದಲ್ಲೇ ಕೋವಿಡ್ ಗೆ ಬಲಿಯಾಗಿದ್ದಾರೆ.
ಕೋವಿಡ್ ಎರಡನೇ ಅಲೆಗೆ 594 ವೈದ್ಯರು ಬಲಿ:
ಕೋವಿಡ್ 19 ಎರಡನೇ ಅಲೆಯಲ್ಲಿ ಆ ವೈರಸ್ ಕಾರಣದಿಂದ ಡಾ.ಆರ್.ಕೆ. ಹಿಮ್ತಾನಿ, ಡಾ.ವಿವೇಕ್ ರಾಯ್, ಡಾ. ಮನೀಶಾ ಜಾದವ್, ಡಾ. ರಾಜೇಂದ್ರ ಕಪಿಲಾ, ಡಾ. ಡಿಂಪಲ್ ಅರೋರಾ ಚಾವ್ಲಾ, ಡಾ.ಫರ್ಹಾ ನೀಲೊಫರ್, ಡಾ.ಮಹಾ ಬಷೀರ್, ಡಾ.ದೇವಿಂದರ್ ಹಾಗೂ ಡಾ.ಲೀಲಾ ಅವರಂಥ ನೂರಾರು ನಿಷ್ಠಾವಂತ ವೈದ್ಯರನ್ನು ದೇಶವು ಕಳೆದುಕೊಂಡಿದೆ.
“ಕೋವಿಡ್ ಎರಡನೇ ಅಲೆಗೆ ಈವರೆಗೆ ಒಟ್ಟು 594 ವೈದ್ಯರನ್ನು ಈವರೆಗೆ ನಾವು ಕಳೆದುಕೊಂಡಿದ್ದೇವೆ” ಎಂದು ಇಂಡಿಯನ್ ಮೆಡಿಕಲ್ ಅಸೋಯೇಷನ್ (ಐಎಂಎ) ಅಂಕಿ ಅಂಶಗಳು ಹೇಳುತ್ತವೆ. ಈವರೆಗೆ ಅತಿ ಹೆಚ್ಚು ವೈದ್ಯರನ್ನು ಕಳೆದುಕೊಂಡ ರಾಜ್ಯಗಳಲ್ಲಿ ದಿಲ್ಲಿ, ಬಿಹಾರ, ಉತ್ತರ ಪ್ರದೇಶ ಹಾಗೂ ರಾಜಸ್ಥಾನಗಳು ಅಗ್ರಸ್ಥಾನದಲ್ಲಿವೆ.
ದಿಲ್ಲಿಯಲ್ಲಿ 107, ಬಿಹಾರದಲ್ಲಿ 96, ಉತ್ತರ ಪ್ರದೇಶದಲ್ಲಿ 97, ರಾಜಸ್ಥಾನದಲ್ಲಿ 43, ಜಾರ್ಖಂಡ್ ನಲ್ಲಿ 39, ಆಂಧ್ರಪ್ರದೇಶದಲ್ಲಿ 32, ತೆಲಂಗಾಣದಲ್ಲಿ 32, ಗುಜರಾತ್ ನಲ್ಲಿ 31, ಪಶ್ಚಿಮಬಂಗಾಳದಲ್ಲಿ 25, ಒಡಿಶಾದಲ್ಲಿ 22, ತಮಿಳುನಾಡಿನಲ್ಲಿ 21, ಹಾಗೂ ಮಹಾರಾಷ್ಟ್ರದಲ್ಲಿ 17, ವೈದ್ಯರು ಕೋವಿಡ್ ಎರಡನೇ ಅಲೆಯಲ್ಲಿ ಕೊರೋನಾ ಸಾಂಕ್ರಾಮಿಕದಿಂದ ಮೃತಪಟ್ಟಿದ್ದಾರೆ. ಐಎಂಎ ಬಳಿ ವೈದ್ಯರ ಬಗ್ಗೆ ಮಾತ್ರ ಖಚಿತ ಮಾಹಿತಿ ಇದೆ. ರ‍್ಸ್ ಸೇರಿದಂತೆ ವೈದ್ಯ ಸಿಬ್ಬಂದಿಗಳ ಅಂಕಿ ಅಂಶಗಳು ಇನ್ನೂ ಸರಿಯಾಗಿ ಸಿಗಬೇಕಿದೆಯಷ್ಟೇ.
ರ‍್ನಾಟಕದಲ್ಲಿ 8, ಕೇರಳದಲ್ಲಿ 5 ಗೋವಾದಲ್ಲಿ 2 ಸೇರಿದಂತೆ ಉಳಿದ ರಾಜ್ಯಗಳಲ್ಲಿ ಮೃತಪಟ್ಟ ವೈದ್ಯರ ಸಂಖ್ಯೆ ಎರಡಂಕಿ ದಾಟಿಲ್ಲ ಎನ್ನುವುದು ನೆಮ್ಮದಿಯ ಸಂಗತಿಯಾದರೂ ಕೋವಿಡ್ ವೈರಸ್ ವಿರುದ್ದ ದೇಶದ ಲಕ್ಷಾಂತರ ವೈದ್ಯರು ಹೋರಾಟ ಮಾಡಿದ್ದಾರೆ ಎನ್ನುವುದೂ ಅಷ್ಟೇ ಕಟು ಸತ್ಯ.
ವೈದ್ಯರ ಮೇಲೆ ಮೃತರ ಸಂಬಂಧಿಕರ ದಾಳಿ:
ಅಸ್ಸಾಂನ ಹೊಜೈ ಜಿಲ್ಲೆಯ ಕೋವಿಡ್ ಕೇರ್ ಸೆಂಟರ್ ವೊಂದರಲ್ಲಿ ಡಾ.ಸಿಯೂಜ್ ಕುಮಾರ್ ಸೇನಾಪತಿ ಎಂಬ ವೈದ್ಯರ ಮೇಲೆ ಮಂಗಳವಾರ ನಡೆದ ಪೈಶಾಚಿಕ ಹಲ್ಲೆಯ ಪ್ರಕರಣ ಇದೀಗ ಭಾರಿ ರ‍್ಚೆಗೆ ಕಾರಣವಾಗಿದೆ. ಅಲ್ಲಿನ ಮುಖ್ಯಮಂತ್ರಿ, ಐಎಂಎನ ಅಸ್ಸಾಂ ರಾಜ್ಯ ವಿಭಾಗದವರೂ ಈ ಘಟನೆಯನ್ನು ಖಂಡಿಸಿದ್ದಾರೆ. ತೀರಾ ಗಂಭೀರ ಸ್ಥಿತಿಯಲ್ಲಿದ್ದ ಕೋವಿಡ್ ಸೋಂಕಿತ ರೋಗಿಯನ್ನು ತಕ್ಷಣವೇ ದಾಖಲಿಸಿಕೊಂಡು ಚಿಕಿತ್ಸೆ ನೀಡಿದರೂ ಆತ ಬದುಕುಳಿಯಲಿಲ್ಲ. ಸಾವಿನ ಸುದ್ದಿ ತಿಳಿಯುತ್ತಲೇ ಆತನ ಸಂಬಂಧಿಕರು, ಸ್ನೇಹಿತರ ಗುಂಪು ಅಲ್ಲಿಗೆ ಧಾವಿಸಿ ವೈದ್ಯರ ಮೇಲೆಯೇ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ. ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೊಜೈ ಜಿಲ್ಲಾ ಎಸ್.ಪಿ. ಬರುನ್ ಪರ‍್ಕ್ಯಸ್ಥ ಹೇಳಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೊರೋನಾ ವಿರುದ್ಧ ಹೋರಾಡುತ್ತಿರುವ ದೇಶದ ವೈದ್ಯರ ಮನೋಬಲ ಕುಗ್ಗಿಸುವಂತಿದೆ.
ಇಂಥದ್ದೇ ಪ್ರಕರಣ ಬೆಂಗಳೂರಿನ ಡಾ.ಬಿ.ಆರ್. ಅಂಬೇಡ್ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಳೆದ ತಿಂಗಳು ನಡೆದಿತ್ತು. ತಾವು ದಾಖಲಿಸಿದ್ದ ರೋಗಿ ಮೃತನಾಗಿದ್ದಕ್ಕೆ ಆಕ್ರೋಶಗೊಂಡ ರೋಗಿಯ ಸಂಬಂಧಿಕರು ವೈದ್ಯರು, ನರ್ಸ್ ಗಳು, ರ‍್ಸಿಂಗ್ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದರು.
ಕೋವಿಡ್ 19 ಪಿಡುಗು ಆರಂಭವಾದಾಗಿನಿಂದಲೂ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ರೋಗಿಯ ಪ್ರಾಣ ಕಾಪಾಡಲು ಪಡಿಪಾಟಲು ಪಡುತ್ತಿರುವ ವೈದ್ಯರ ಮೇಲೆ ರೋಗಿಗಳ ಕಡೆಯವರು ಹಲ್ಲೆ ನಡೆಸಿರುವ ಪ್ರಕರಣಗಳು ವರದಿಯಾಗುತ್ತಿವೆ. ತಮ್ಮ ಸಂಬಂಧಿಕರು, ಆಪ್ತರು, ಬಂಧುಬಳಗದವರನ್ನು ಕೋವಿಡ್ ೧೯ ಚಿಕಿತ್ಸೆಗೆ ಕರೆತಂದವರು ಕೆಲವೊಮ್ಮೆ ತಾಳ್ಮೆ ಕಳೆದುಕೊಂಡು ವೈದ್ಯರ ಮೇಲೆ ಕೆಂಡ ಕಾರುತ್ತಾರೆ. ಇರುವ ವ್ಯವಸ್ಥೆಯಲ್ಲಿ ತಮ್ಮಿಂದ ಸಾಧ್ಯವಾಗಿರುವ ಎಲ್ಲವನ್ನೂ ಮಾಡಿದ ಮೇಲೂ ದುರದೃಷ್ಟವಶಾತ್ ರೋಗಿ ಕೆಲವೊಮ್ಮೆ ಕೋವಿಡ್ ಗೆ ಬಲಿಯಾಗಿಬಿಡುತ್ತಾನೆ. ಆಗ ಆತನ ಬಂಧುಗಳ ಕೋಪ ವೈದ್ಯರ ಮೇಲೆ ತಿರುಗುತ್ತದೆ. ಅವರನ್ನೇ ತಮ್ಮ ಶತ್ರು ಎಂಬಂತೆ ಪರಿಗಣಿಸಿ ಹಲ್ಲೆಗೆ ಯತ್ನಿಸಿಬಿಡುತ್ತಾರೆ. ತಮ್ಮ ಹೆತ್ತವರು, ಪತ್ನಿ ಹಾಗೂ ಮಕ್ಕಳಿಂದ ದೂರವಿದ್ದು, ರೋಗಿಗಳ ಸೇವೆಗಾಗಿ ಅಪಾರ ತ್ಯಾಗ ಮಾಡುವ ವೈದ್ಯರು, ರ‍್ಸ್ ಗಳ, ಆರೋಗ್ಯ ಸಿಬ್ಬಂದಿಗಳ ಮೇಲೆ ದಾಳಿ ಮಾಡಿದರೆ ಅವರ ಮನಸ್ಸಿನ ಸ್ಥಿತಿ ಏನಾಗಬೇಡ? ತಾವು ವರ್ಷಗಟ್ಟಲೆ ಮಾಡಿದ ತ್ಯಾಗಕ್ಕೆ ಸಿಕ್ಕ ಬೆಲೆ ಇದೇ ಏನು ಎಂದು ಅವರು ನಿರಾಶೆಗೊಳಗಾದರೆ ಗತಿ ಏನು? ಇನ್ನುಳಿದ ರೋಗಿಗಳ ಪ್ರಾಣ ಕಾಪಾಡುವವರು ಯಾರು? ಎಂಬ ಪ್ರಶ್ನೆಗಳನ್ನು ಹಲ್ಲೆ ಮಾಡುವ ಮುನ್ನ ರೋಗಿಗಳ ಬಂಧುಗಳು ಕೇಳಿಕೊಳ್ಳಬೇಕಿದೆ.
ಆತ್ಮಹತ್ಯೆ ಮಾಡಿಕೊಂಡಿದ್ದ ವೈದ್ಯ:
ಕೊರೋನಾ ಸೋಂಕಿತರಾಗಿ ಮೃತರಾಗುವ ವೈದ್ಯರದ್ದು ಒಂದು ಕತೆಯಾದರೆ, ಕೊರೋನಾ ಸೋಂಕಿತರ ಪ್ರಾಣ ಕಾಪಾಡಲು ಸಾಧ್ಯವಾಗದಿದ್ದಾಗ ಮಾನಸಿಕ ಒತ್ತಡಕ್ಕೆ ಒಳಗಾಗುವ ವೈದ್ಯರದ್ದು ಇನ್ನೊಂದು ಕತೆ.
ದಿಲ್ಲಿಯ ಸಾಕೇತ್ ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಿಂದ ಕೋವಿಡ್ ರೋಗಿಗಳ ಸೇವೆಯಲ್ಲಿ ನಿರತರಾಗಿದ್ದ ನಗುಮೊಗದ ಯುವ ವೈದ್ಯ ಡಾ.ವಿವೇಕ್ ರಾಯ್ ಕಳೆದ ತಿಂಗಳು ಆತ್ಮಹತ್ಯೆ ಮಾಡಿಕೊಂಡಿದ್ದರು.
35 ವರ್ಷದ ಅವರು ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಸಾವುಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ರೋಗಿಗಳ ಆರೈಕೆ ಮಾಡುತ್ತಿದ್ದರು. ದಿನಕ್ಕೆ ಏಳರಿಂದ ಎಂಟು ರೋಗಿಗಳನ್ನು ನೋಡಿಕೊಳ್ಳುತ್ತಿದ್ದರೂ ಅವರಲ್ಲಿ ಅನೇಕರು ಸಾವನ್ನಪ್ಪುತ್ತಿರುವುದನ್ನು ಕಂಡಾಗ ಅವರ ಮನಸ್ಸು ಅಲ್ಲೋಲ ಕಲ್ಲೋಲವಾಗುತ್ತಿತ್ತು. ಎಲ್ಲ ರೋಗಿಗಳನ್ನು ಬದುಕಿಸಲಾಗುತ್ತಿಲ್ಲವಲ್ಲ ಎಂಬ ಅಸಹಾಯಕತೆ ಅವರನ್ನು ಕಾಡುತ್ತಿತ್ತು. ಇದರಿಂದ ಅವರಿಗೆ ಖಿನ್ನತೆ ಉಂಟಾಗಿತ್ತು. ಬಹುಶಃ ಅದೇ ನೋವಲ್ಲಿ ಅವರು ತಮ್ಮ ಎರಡು ತಿಂಗಳ ಗರ್ಭಿಣಿ ಪತ್ನಿಯ ಸಹಿತ ಈ ಜಗತ್ತನ್ನೇ ಬಿಟ್ಟು ಹೋಗುವ ನರ‍್ಧಾರಕ್ಕೆ ಬಂದುಬಿಟ್ಟರೇನೋ ಎಂದು ಐಎಂಎ ಮಾಜಿ ಅಧ್ಯಕ್ಷ ಪ್ರೊ.ಡಾ.ರವಿ ವಾಂಖೇಡ್ಕರ್ ಹೇಳಿದ್ದಾರೆ.
“ಕೊರೋನಾದಿಂದ ಸಾವು ಬದುಕಿನ ನಡುವೆ ಹೊಯ್ದಾಡುತ್ತಿದ್ದ ನೂರಾರು ರೋಗಿಗಳ ಪ್ರಾಣ ಕಾಪಾಡಿದ್ದ ಡಾ.ವಿವೇಕ್ ರಾಯ್, ಚೀಟಿ ಬರೆದಿಟ್ಟು ತಾನೇ ಸಾವಿನ ಕದ ತಟ್ಟಿದ್ದು ದೊಡ್ಡ ದುರಂತ. ಇದು ಕೋವಿಡ್ ಬಿಕ್ಕಟ್ಟಿನ ಪರಿಸ್ಥಿತಿ ನರ‍್ವಹಿಸುವಾಗ ಉಂಟಾಗುವ ವಿಪರೀತ ಭಾವನಾತ್ಮಕ ಒತ್ತಡದ ಬಗ್ಗೆ ಬೆಳಕು ಚೆಲ್ಲುತ್ತದೆ. ಯುವ ವೈದ್ಯನ ಈ ಸಾವು, ಮೂಲಭೂತ ಆರೋಗ್ಯಸೇವೆ ಸೌಲಭ್ಯಗಳ ಕೊರತೆಯಿಂದ ಉಂಟಾದ ಅಸಹಾಯಕತೆಯನ್ನು ಸೃಷ್ಟಿಸಿದ ಈ “ವ್ಯವಸ್ಥೆ” ಯಿಂದ ಆಗಿರುವ ಒಂದು ರೀತಿಯ ಕೊಲೆ. ಕೆಟ್ಟ ವಿಜ್ಞಾನ, ಕೆಟ್ಟ ರಾಜಕಾರಣ ಹಾಗೂ ಕೆಟ್ಟ ಆಡಳಿತ” ಎಂದು ಪ್ರೊ.ಡಾ.ರವಿ ವಾಂಖೇಡ್ಕರ್ ಟ್ವೀಟ್ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇಂಥ ಒತ್ತಡದಲ್ಲೂ ಕೊರೋನಾ ರೋಗಿಗಳ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೊಂದು ಕೃತಜ್ಞತಾಪೂರ್ವಕ ನಮಸ್ಕಾರ ಹೇಳಲೇ ಬೇಕು. ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಮಾಡುತ್ತಾ, ತಾವೂ ಸೋಂಕಿತರಾಗಿ ಸಾವನ್ನಪ್ಪಿದ ವೈದ್ಯರಿಗೊಂದು ನಮನ ಸಲ್ಲಿಸಲೇ ಬೇಕು. ಮಾನವೀಯತೆ ಇರುವವರು ಮುಖ್ಯವಾಗಿ ಮಾಡಬೇಕಾದ ಕೆಲಸವಿದು.