ವೈದ್ಯೋ ನಾರಾಯಣೋ ಹರಿ: ಎನ್ನುವ ಮಾತು ಸುಮ್ಮನೆ ಹುಟ್ಟಿಕೊಂಡದ್ದಲ್ಲ. ಅದರ ಹಿಂದೆ ಅನೇಕ ವೈದ್ಯರ ಶ್ರಮ, ಶ್ರದ್ಧೆಯ ನೂರಾರು ಕಥೆಗಳಿವೆ. ಅದಕ್ಕೆ ಉದಾಹರಣೆ ನಮ್ಮ ಬೆಂಗಳೂರಿನ ಡಾ. ಸುನೀಲ್ ಕುಮಾರ್ ಹೆಬ್ಬಿ. 800 ಕ್ಕೂ ಹೆಚ್ಚು ವೈದ್ಯಕೀಯ ಶಿಬಿರಗಳನ್ನು ಆಯೋಜಿಸಿರುವ ಡಾ ಸುನಿಲ್ ಈವರೆಗೆ ಬೆಂಗಳೂರು ಮತ್ತು ಸುತ್ತಮುತ್ತಲಿನ 1,20,000 ಕ್ಕೂ ಹೆಚ್ಚು ಹೊರರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. 2018 ರಲ್ಲಿ ಭಾರತದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಂದ ಆರೋಗ್ಯ ಕ್ಷೇತ್ರದಲ್ಲಿ ತಮ್ಮ ಎನ್ಜಿಒ ಮಾಡಿದ ಅತ್ಯುತ್ತಮ ಕೆಲಸಕ್ಕಾಗಿ ಸ್ವೀಕರಿಸಿದ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಬಿಡುವಿಲ್ಲದ ಕೆಲಸ, ಕೈ ತುಂಬಾ ಸಂಬಳ ಪಡೆದುಕೊಂಡು ಇತರ ವೈದ್ಯರಂತೆಯೇ ಜೀವನ ಸಾಗಿಸುತ್ತಿದ್ದ ಸುನಿಲ್ ಅವರ ಬದುಕು ಮತ್ತು ಬದುಕಿನ ಉದ್ದೇಶ ಬದಲಾದದ್ದು 2010ರಲ್ಲಿ. ಹೊಸೂರು- ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಂದಿನಂತೆಯೇ ಪ್ರಯಾಣ ಕೈಗೊಂಡಿದ್ದ ಅವರು ಆ ದಿನ ಒಂದು ರಸ್ತೆ ಅಪಘಾತಕ್ಕೆ ಸಾಕ್ಷಿಯಾಗಬೇಕಾಗಿ ಬಂತು. ಯಾರೊಬ್ಬರೂ ಅಪಘಾತಕ್ಕೊಳಗಾದ ವ್ಯಕ್ತಿಗೆ ಸಹಾಯ ಮಾಡಲು ಮುಂದಾಗದೇ ಇದ್ದಾಗ ಸ್ವತಃ ವೈದ್ಯರು ಆ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಲು ನೆರವಾದರು. ಅಷ್ಟಕ್ಕೇ ಸುಮ್ಮನಾಗದೆ ಸಂತ್ರಸ್ತರಿಗೆ ಸರಿಯಾದ ಚಿಕಿತ್ಸೆ ದೊರಕಿದೆಯೇ ಇಲ್ಲವೇ ಎಂಬುವುದನ್ನು ಪರೀಕ್ಷಿಸಲು ಆಸ್ಪತ್ರೆಗೂ ಭೇಟಿ ನೀಡುತ್ತಿದ್ದರು.
ಇದಾಗಿ ಒಂದು ದಿನದ ನಂತರ ಸಂತ್ರಸ್ತನ ತಾಯಿ ಅವರಿಗೆ ಕರೆ ಮಾಡಿ ಊಟಕ್ಕೆ ಆಹ್ವಾನಿಸಿದರು. ಅವರ ಆಹ್ವಾನವನ್ನು ನಿರಾಕರಿಸಲಾಗದೆ ಅವರ ಮನೆಗೆ ಭೇಟಿಕೊಟ್ಟ ವೈದ್ಯರ ಮುಂದೆ ಕೈ ಮುಗಿದು ಕಣ್ಣೀರು ಸುರಿಸುತ್ತಾ ನಿಂತ ಆ ತಾಯಿ ಅವರಿಗೆ ಧನ್ಯವಾದ ಹೇಳಿದರು. ಇದು ಅವರ ಬದುಕನ್ನೇ ಬದಲಾಯಿಸಿತು.
ಇದು ಅವರು ತಮ್ಮ ಜೀವನದ ಬಗ್ಗೆ ರೂಪಿಸಿದ್ದ ಎಲ್ಲಾ ಯೋಜನೆಗಳನ್ನು ಮರುಚಿಂತನೆ ಮಾಡಲು ಪ್ರೇರೇಪಿಸಿತು. ಅಂತಿಮವಾಗಿ 2011 ರಲ್ಲಿ ಅವರು ಬಿಜಿಎಸ್ ಗ್ಲೋಬಲ್ ಹಾಸ್ಪಿಟಲ್ಸ್ನಲ್ಲಿನ ಕೆಲಸವನ್ನು ತೊರೆದು ‘ಮಾತೃ ಸಿರಿ ಫೌಂಡೇಶನ್’ ಎಂಬ ಸರ್ಕಾರೇತರ ಸಂಸ್ಥೆಯನ್ನು ಸ್ಥಾಪಿಸಿ ಕೈಲಾಗದವರಿಗೆ ಸಹಾಯ ಮಾಡಲು ನಿರ್ಧರಿಸಿದರು.
ತಮ್ಮ ಈ ಕಠಿಣ ನಿರ್ಧಾರದ ಬಗ್ಗೆ ಮಾತಾಡುವ ಡಾ. ಸುನಿಲ್ “ಬಿಜಾಪುರ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಪಡೆಯುವುದು ಮತ್ತು ಉತ್ತಮ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಪಡೆಯುವುದು ನನ್ನ ಮಾತ್ರವಲ್ಲದೆ ನನ್ನ ಇಡೀ ಕುಟುಂಬದ ಕನಸಾಗಿತ್ತು” ಎನ್ನುತ್ತಾರೆ. ತನ್ನ ಕುಟುಂಬವು ತನಗೆ ಶಿಕ್ಷಣ ನೀಡಲು ಪಟ್ಟ ಹೋರಾಟದ ಬಗ್ಗೆ ಮಾತನಾಡುತ್ತಾ, “ನನ್ನ ವೈದ್ಯಕೀಯ ಪದವಿಯನ್ನು ಪೂರ್ಣಗೊಳಿಸಲು ನನ್ನ ಕುಟುಂಬ ಸಾಲವನ್ನು ತೆಗೆದುಕೊಳ್ಳಬೇಕಾಯಿತು. ಹಾಗಾಗಿ ಸ್ವಾಭಾವಿಕವಾಗಿ ನನಗೆ ಒಳ್ಳೆಯ ಸಂಬಳದ ಕೆಲಸ ಸಿಕ್ಕಾಗ ನಮ್ಮ ಕಷ್ಟಗಳೆಲ್ಲ ಮುಗಿದಂತೆ ಅನಿಸಿತು” ಎನ್ನುತ್ತಾರೆ.
ಹಾಗಾಗಿಯೇ 2010ರಲ್ಲಿ ನಡೆದ ಘಟನೆ ಅವರ ಯೋಚನೆಗಳಲ್ಲಿ ಬದಲಾವಣೆಗಳನ್ನು ತಂದರೂ ಕುಟುಂಬದ ಸ್ಥಿತಿ ಅವರು ಹೊಂದಿದ್ದ ಉದ್ಯೋಗವನ್ನು ತಕ್ಷಣವೇ ತೊರೆಯಲು ಬಿಡಲಿಲ್ಲ. ಹೀಗಾಗಿ ಕೆಲಸ ಮಾಡುತ್ತಲೇ ವಾರಾಂತ್ಯ ಹಾಗೂ ಬಿಡುವಿನ ವೇಳೆಯಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ರೋಗಿಗಳಿಗೆ ಸಹಾಯ ಮಾಡಲು ನಿರ್ಧರಿಸಿದರು ಮತ್ತು ತಮ್ಮ ಸ್ವಂತ ಕಿಸೆಯಿಂದ ಹಣಹಾಕಿ ವೈದ್ಯಕೀಯ ಶಿಬಿರಗಳನ್ನು ನಡೆಸಲು ಪ್ರಾರಂಭಿಸಿದರು.
ತನಗೆ ವಾರಾಂತ್ಯಗಳು ಮಾತ್ರ ಉಳಿದಿವೆ ಎಂದು ಚೆನ್ನಾಗಿ ತಿಳಿದಿದ್ದ ಡಾ ಸುನಿಲ್, ಎಷ್ಟು ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಧ್ಯವೋ ಅಷ್ಟು ರೋಗಿಗಳಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ತಮ್ಮ ಕಾರನ್ನು ಸಂಪೂರ್ಣ ಸುಸಜ್ಜಿತ ಮೊಬೈಲ್ ಕ್ಲಿನಿಕ್ ಆಗಿ ಪರಿವರ್ತಿಸಲು ನಿರ್ಧರಿಸಿದರು. “ಇದರಿಂದಾಗಿ ಯಾವುದೇ ಮೂಲ ಸೌಕರ್ಯಗಳ ಅಗತ್ಯವಿಲ್ಲದೇ ತಾನು ಯಾವುದೇ ಸ್ಥಳಕ್ಕೆ ಹೋಗಿ ರೋಗಿಗಳನ್ನು ನೋಡಲು ಸಾಧ್ಯವಾಯಿತು” ಎನ್ನುತ್ತಾರೆ ಸುನಿಲ್.
2011 ರಲ್ಲಿ ಅವರು ಆಸ್ಪತ್ರೆಯಲ್ಲಿ ತಮ್ಮ ಕೆಲಸವನ್ನು ತೊರೆದ ನಂತರ ಅವರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಿ ರೋಗಿಗಳಿಗೆ ಚಿಕಿತ್ಸೆ ನೀಡಿದರು. “ಸಮಾಲೋಚನೆಗೆ ಬರುವ ಹೆಚ್ಚಿನವರು ಶುಲ್ಕವನ್ನು ಭರಿಸಲಾಗದಿದ್ದರೂ ನಾನು ಅವರನ್ನು ನನ್ನ ರೋಗಿಗಳಾಗಿಯೇ ಪರಿಗಣಿಸುತ್ತೇನೆ. ನನ್ನ ಶುಲ್ಕವನ್ನು ಭರಿಸಬಹುದೆಂದು ಹೇಳುವ ರೋಗಿಗಳಿಗೆ ಮಾತ್ರ ನಾನು ಶುಲ್ಕ ವಿಧಿಸುತ್ತೇನೆ. ನನ್ನ ಕೆಲಸದ ಬಗ್ಗೆ ಓದಿದ ಸ್ನೇಹಿತರು ಮತ್ತು ಇತರರು ಈ ಉದ್ದೇಶಕ್ಕೆ ದೇಣಿಗೆ ನೀಡುವ ಹಣದಿಂದ ನಾನು ಇಲ್ಲಿಯವರೆಗೆ ಬದುಕುತ್ತಿದ್ದೇನೆ” ಎನ್ನುತ್ತಾರೆ.
ಡಾ ಸುನಿಲ್ ಒಂದು ದಶಕದಿಂದ ತಮ್ಮ ಮೊಬೈಲ್ ಕ್ಲಿನಿಕ್ ಅನ್ನು ನಡೆಸುತ್ತಿದ್ದರೂ ಸಹ, COVID-19 ನಿಜವಾದ ಗೇಮ್ ಚೇಂಜರ್ ಆಗಿದೆ ಮತ್ತು ಅವರು ಎಂದಿಗೂ ಇಷ್ಟು ದೀರ್ಘವಾಗಿ ಕಾರ್ಯನಿರತರಾಗಿರಲಿಲ್ಲ ಎನ್ನುವ ಅವರು “ಮೊದಲ ಅಲೆಯ ಆರಂಭದಲ್ಲಿ ನಮಗೆ ಏನು ಮಾಡಬೇಕೆಂದು ತಿಳಿದಿರಲಿಲ್ಲ ಮತ್ತು ವೈದ್ಯಕೀಯ ಕ್ಷೇತ್ರದ ಮೇಲೆ ಅದರ ಭಾರ ಅಗಾಧವಾಗಿತ್ತು. COVID-19 ಪೀಕ್ ತಿಂಗಳುಗಳಲ್ಲಿ ನನ್ನ ಫೋನ್ ತಡೆರಹಿತವಾಗಿ ರಿಂಗಣಿಸುತ್ತಿತ್ತು ಮತ್ತು ನನಗೆ ಅಥವಾ ಬೇರೆ ವೈದ್ಯರಿಗೂ ಯಾವುದಕ್ಕೂ ಸಮಯವಿರಲಿಲ್ಲ” ಎಂದು ಹೇಳಿರುವುದಾಗಿ ‘ದಿ ಬೆಟರ್ ಇಂಡಿಯಾ’ ವರದಿ ಮಾಡಿದೆ.
2021 ರಲ್ಲಿ, ಡಾ ಸುನಿಲ್ ತನ್ನ ಸಹೋದರನನ್ನು COVID-19 ನಿಂದ ಕಳೆದುಕೊಂಡಿದ್ದರು. ಆ ಸಮಯದಲ್ಲಿ ಮೊಬೈಲ್ ಕ್ಲಿನಿಕ್ ಅನ್ನು ನಿಲ್ಲಿಸುವಂತೆ ಕುಟುಂಬದಿಂದ ಸಾಕಷ್ಟು ಒತ್ತಡ ಎದುರಿಸಿದ್ದರು. ಆದರೆ, ಅವರು “ನಾನು ಸ್ವೀಕರಿಸುತ್ತಿದ್ದ ಸಂಕಟದ ಫೋನ್ ಕರೆಗಳು ನನ್ನನ್ನು ಸ್ವಿಚ್ ಆಫ್ ಮಾಡಲು ಮತ್ತು ಮನೆಯಲ್ಲಿ ಕುಳಿತುಕೊಳ್ಳಲು ಅನುಮತಿಸಲಿಲ್ಲ, ಅದು ನನ್ನ ಕರ್ತವ್ಯವಾಗಿತ್ತು ಮತ್ತು ನನ್ನ ಅಗತ್ಯವಿರುವ ಜನರಿಗೆ ಬೆನ್ನು ತಿರುಗಿಸುವುದು ಸಾಧ್ಯವಿರಲಿಲ್ಲ” ಎನ್ನುತ್ತಾರೆ. “ಕೋವಿಡ್ನ ಮೂರನೇ ಅಲೆಯು ಪ್ರವರ್ಧಮಾನಕ್ಕೆ ಬರುತ್ತಿರುವ ಈ ಹೊತ್ತಲ್ಲಿ ಅತಿಯಾಗಿ ಹರಡುತ್ತಿದೆ. ನಮಗೆ ಹಣ, ಔಷಧಿ ಮತ್ತು ಮಾನವಶಕ್ತಿಯ ಅವಶ್ಯಕತೆಯಿದೆ. ಆದ್ದರಿಂದ ದಯವಿಟ್ಟು ಬಂದು ಸ್ವಯಂಸೇವಕರಾಗಿ” ಎಂದು ಮನವಿ ಮಾಡಿಕೊಳ್ಳುತ್ತಾರೆ.