ನೋಯ್ಡಾ: ದೀಪಾ ದೇವಿ ತನ್ನ ಐದು ವರ್ಷದ ಮಗನಿಗೆ ಮಾವಿನಕಾಯಿ ಶೇಕ್ ಮಾಡಬೇಕೆಂದು ಬಯಸಿದ್ದಳು. ಆದರೆ ಪಾಕವಿಧಾನದ ಭಾಗವಾಗಿ ಬಳಸಲು ಉದ್ದೇಶಿಸಲಾದ ಬ್ಲಿಂಕಿಟ್‌ನಿಂದ ಆರ್ಡರ್ ಮಾಡಿದ ಅಮುಲ್ ವೆನಿಲ್ಲಾ ಮ್ಯಾಜಿಕ್ ಐಸ್ ಕ್ರೀಂನ ಟಬ್ ಅನ್ನು ತೆರೆದಾಗ ಆಕೆಗೆ ಆಶ್ಚರ್ಯ ಜತೆಗೇ ಭಯವೂ ಉಂಟಾಗಿತ್ತು. ಸಂತೋಷಕರವಾದ ಮಾವಿನಕಾಯಿ ಶೇಕ್ ಅನ್ನು ಆನಂದಿಸುವ ಆಕೆಯ ಯೋಚನೆ ಐಸ್ ಕ್ರೀಮ್ ಒಳಗೆ ಇದ್ದ ಶತಪದಿಯನ್ನು ನೋಡುತ್ತಲೇ ಮಾಯವಾಯಿತು.
ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್ 12 ರಲ್ಲಿ ಈ ಘಟನೆ ನಡೆದಿದ್ದು ಐಸ್ ಕ್ರೀಂನ ಟಬ್ ಮುಚ್ಚಳವನ್ನು ಎತ್ತಿದ ತಕ್ಷಣ ದೀಪಾದೇವಿಗೆಗೆ ಡಬ್ಬಿಯ ಮೇಲ್ಭಾಗದಲ್ಲಿಯೇ ಸತ್ತ ಶತಪದಿ ಸಿಕ್ಕಿತ್ತು. ದೀಪಾ ಆ ಐಸ್ ಕ್ರೀಮ್ ಅನ್ನು ಬಳಸದೇ ಟಬ್ ಅನ್ನು ವೀಡಿಯೋ ಮಾಡಿ ಸಾಮಾಜಿಕ ತಾಣಗಳಲ್ಲಿ ಶೇರ್ ಮಾಡಿದ್ದಾರೆ. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಆಹಾರ ಸುರಕ್ಷತೆ ಮಾನದಂಡಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಶ್ರೀಮತಿ ದೀಪಾ ತಕ್ಷಣವೇ ಬ್ಲಿಂಕಿಟ್‌ಗೆ ದೂರು ಸಲ್ಲಿಸಿದರು ಮತ್ತು ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಐಸ್ ಕ್ರೀಮ್‌ನ ₹ 195 ವೆಚ್ಚವನ್ನು ಮರುಪಾವತಿಸಿತು. ಹೆಚ್ಚಿನ ತನಿಖೆಗಾಗಿ ಅವರು ವಿಷಯವನ್ನು ಅಮುಲ್‌ಗೆ ತಿಳಿಸಿದ್ದೇವೆ ಎಂದು ಬ್ಲಿಂಕಿಟ್ ಆಕೆಗೆ ಭರವಸೆ ನೀಡಿದೆ.
ಈ ಘಟನೆ ಮೊದಲಿನದೇನಲ್ಲ ಎರಡು ದಿನಗಳ ಹಿಂದೆ, ಮುಂಬೈನ ಡಾ ಓರ್ಲೆಮ್ ಬ್ರಾಂಡನ್ ಸೆರಾವೊ ಅವರು ತಮ್ಮ ಐಸ್ ಕ್ರೀಮ್ ಕೋನ್ ಅನ್ನು ಕಚ್ಚಿದಾಗ ಇನ್ನಷ್ಟು ಭಯಾನಕ ಆಶ್ಚರ್ಯವನ್ನು ಅನುಭವಿಸಿದರು, ಏಕೆಂದರೆ ಅದರಲ್ಲಿ ಮಾನವ ಬೆರಳು ಪತ್ತೆ ಆಗಿತ್ತು.
“ನಾನು ಆನ್‌ಲೈನ್ ನಲ್ಲಿ ಮೂರು ಕೋನ್ ಐಸ್ ಕ್ರೀಮ್‌ಗಳನ್ನು ಆರ್ಡರ್ ಮಾಡಿದ್ದೆ. ಅವುಗಳಲ್ಲಿ ಒಂದು ಯುಮ್ಮೋ ಬ್ರಾಂಡ್‌ನ ಬಟರ್‌ಸ್ಕಾಚ್ ಐಸ್‌ಕ್ರೀಮ್. ಅರ್ಧದಷ್ಟು ತಿಂದ ನಂತರ ನನ್ನ ಬಾಯಿಯಲ್ಲಿ ಗಟ್ಟಿಯಾದ ತುಣುಕಿನ ಅನುಭವವಾಯಿತು. ಅದು ನಟ್ ಅಥವಾ ಚಾಕೊಲೇಟ್ ಪೀಸ್ ಎಂದು ನಾನು ಭಾವಿಸಿದೆ. ಮತ್ತು ಅದು ಏನೆಂದು ಪರೀಕ್ಷಿಸಲು ಉಗುಳಿದೆ” ಎಂದು ಡಾ ಸೆರಾವೊ ಹೇಳಿದರು.
“ನಾನು ವೈದ್ಯನಾಗಿದ್ದೇನೆ ಆದ್ದರಿಂದ ದೇಹದ ಭಾಗಗಳು ಹೇಗೆ ಇರುತ್ತವೆ ಎಂದು ನನಗೆ ತಿಳಿದಿದೆ. ನಾನು ಅದನ್ನು ಎಚ್ಚರಿಕೆಯಿಂದ ಪರೀಕ್ಷಿಸಿದಾಗ, ಅದರ ಅಡಿಯಲ್ಲಿ ಉಗುರುಗಳು ಮತ್ತು ಬೆರಳಚ್ಚು ಗುರುತುಗಳನ್ನು ನಾನು ಗಮನಿಸಿದೆ. ಅದು ಹೆಬ್ಬೆರಳನ್ನು ಹೋಲುತ್ತದೆ. ನಾನು ಆಘಾತಕ್ಕೊಳಗಾಗಿದ್ದೇನೆ” ಎಂದು ಅವರು ಹೇಳಿದರು.