ವರ್ಗಾವಣೆಗೆ ಮುನ್ನಾ ದಿನವೇ ಅಕ್ರಮ ಭೂ ಪರಿವರ್ತನೆ, ಆರ್‌ಟಿಸಿ ರದ್ದು ಪಡಿಸಿ ಭೂ ಮಾಫಿಯಾಗೆ ಕೊಡಲಿ ಪೆಟ್ಟು ನೀಡಿದ ರೋಹಿಣಿ ಸಿಂಧೂರಿ

ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಹಾಗೂ ಶಾಸಕ ಸಾ.ರಾ.ಮಹೇಶ್ ನಡುವಿನ ತಿಕ್ಕಾಟ ಹೊಸದೇನಲ್ಲ. ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿಯಾಗಿ ಬಂದ ಆರಂಭದಿಂದಲೂ ಇವರಿಬ್ಬರ ನಡುವೆ ಜಟಾಪಟಿ ಶುರುವಾಗಿತ್ತು. ಕೊರೊನಾ ಸಂದರ್ಭದಲ್ಲೂ ಇವರ ವಾಕ್ ಸಮರ ನಡೆಯುತ್ತಲ್ಲೇ ಇತ್ತು. ಆದರೆ ದಿನ ಕಳೆದಂತೆ ಶಾಸಕರು ಹಾಗೂ ಐಎಎಸ್ ಅಧಿಕಾರಿ ನಡುವಿನ ಹಗ್ಗಜಗ್ಗಾಟಕ್ಕೆ ಭೂಮಾಫಿಯಾ ಕಾರಣ ಎಂಬ ಸಂಗತಿ ಬಹಿರಂಗಗೊಂಡಿತು. ನಂತರ ನಡೆದ ಎಲ್ಲಾ ಬೆಳವಣಿಗೆಗಳು ರೋಹಿಣಿ ಸಿಂಧೂರಿ ಅವರ ವರ್ಗಾವಣೆಗೂ ಕಾರಣವಾಯಿತು. ಆದರೆ, ರೋಹಿಣಿ ಸಿಂಧೂರಿ ವರ್ಗಾವಣೆಗೆ ಅವರ ಕಾರ್ಯವೈಖರಿ ಹಾಗೂ ಪಾಲಿಕೆ ಆಯುಕ್ತರಾಗಿದ್ದ ಶಿಲ್ಪಾನಾಗ್ ನಡುವಿನ ಆಂತರಿಕ ಕಿತ್ತಾಟ ಕಾರಣ ಎನ್ನಲಾಗಿತ್ತಾದರೂ, ಇದರ ಹಿಂದೆ ಭೂಮಾಫಿಯಾ ಕೈವಾಡ ಇದೆ ಎಂಬ ಮಾತುಗಳು ಕೇಳಿ ಬಂದಿತ್ತು. ಇದಕ್ಕೆ ಪೂರಕ ಎನ್ನುವಂತೆ ತಾವು ಭೂಒತ್ತುವರಿ ಮಾಡಿದ ಕುರಿತು ದಾಖಲೆ ನೀಡುವಂತೆ ಶಾಸಕ ಸಾ.ರಾ. ಮಹೇಶ್ ಅವರು ರೋಹಿಣಿ ಸಿಂಧೂರಿಗೆ ಸವಾಲು ಹಾಕಿದ್ದರು. ಶಾಸಕರ ಈ ಸವಾಲಿಗೆ ತಕ್ಕ ತಿರುಗೇಟು ನೀಡಿದ್ದ ರೋಹಿಣಿ, ಮೈಸೂರು ನಗರದ ಸುತ್ತಮುತ್ತಲ ಭೂ ಮಾಫಿಯ ಬಗ್ಗೆ ಖುದ್ದು ದಾಖಲೆ ಸಮೇತ ಮಾಹಿತಿ ಬಿಡುಗಡೆ ಮಾಡಿದ್ದಾರೆ. ಆ ಮೂಲಕ ಏಳೆಂಟು ತಿಂಗಳಿಂದ ಕ್ರಮ ಜರುಗಿಸದೇ ಏನು ಮಾಡುತ್ತಿದ್ದರು ಎಂದು ಟೀಕಿಸುತ್ತಿದ್ದವರಿಗೆ ತಿರುಗೇಟು ನೀಡಿದ್ದಾರೆ.

ಪ್ರಮುಖವಾಗಿ ಮೈಸೂರಿನ ಲಿಂಗಾಬುದಿ ಕೆರೆ ಅಂಗಳದಲ್ಲಿ 2 ಎಕರೆ ಜಾಗದಲ್ಲಿ ರೆಸಾರ್ಟ್ ಆರಂಭಿಸಲು ಉದ್ದೇಶಿಸಿದ್ದದ್ದು, ಕಸಬಾ ಹೋಬಳಿ ಲಿಂಗಾಬುದಿ ಗ್ರಾಮದಲ್ಲಿ 1.39 ಎಕರೆ ವಿಸ್ತೀರ್ಣದ ಜಮೀನನ್ನು ವಸತಿ ಉದ್ದೇಶಕ್ಕೆ ಭೂ ಪರಿವರ್ತನೆಯನ್ನು ತಪ್ಪು ಮಾಹಿತಿ ನೀಡಿದ ಕಾರಣ ಭೂ ಪರಿವರ್ತನೆ ರದ್ದು ಪಡಿಸಿರುವುದು ಹಾಗೂ ದಟ್ಟಗಳ್ಳಿ ಗ್ರಾಮದ ಸರ್ವೆ ನಂ 123 ರ ಗೋಮಾಳ ಜಮೀನಿಗೆ ಸಂಬಂಧಿಸಿದ ದೂರಿನ ಬಗ್ಗೆ ಸೂಕ್ತ ಕ್ರಮ ಜರುಗಿಸಲಾಗಿದೆ ಎಂಬ ಮಾಹಿತಿ ಸಹ ನೀಡಿದ್ದರು.  ಮತ್ತೊಂದೆಡೆ ಮೈಸೂರಿನ ದಟ್ಟಗಳ್ಳಿಯಲ್ಲಿನ ಸಾರಾ ಕಲ್ಯಾಣ ಮಂಟಪ ರಾಜಕಾಲುವೆ ಮೇಲೆ ನಿರ್ಮಾಣ ಮಾಡಿದೆ. ಈ ಬಗ್ಗೆ ಸಮೀಕ್ಷೆ ನಡೆಸಲಾಗುತ್ತದೆ ಎಂದು ವರ್ಗಾಯಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸ್ಪೋಟಕ ಮಾಹಿತಿ ನೀಡಿದ್ದರು.‌ ಕೆ.ಆರ್. ನಗರದ ಮಾನ್ಯ ಶಾಸಕರ ಕೆಲ ಅಕ್ರಮ ಭೂ ವ್ಯವಹಾರಗಳ ಮೇಲೆ ಕಾನೂನಾತ್ಮಕ ಕ್ರಮ ಜರುಗಿಸಲು ಮುಂದಾದೆ. ಆದ್ದರಿಂದಲೇ ನನ್ನ ವಿರುದ್ಧ ಷಡ್ಯಂತ್ರ ನಡೆಸಿ, ಸುಳ್ಳು ಆರೋಪ ಮಾಡತೊಡಗಿದರು. ನಾನು ಜಿಲ್ಲಾಧಿಕಾರಿಯಾಗಿ ಬಂದ ದಿನದಿಂದ ಮತ್ತು ಈಗ ನಾನು ವರ್ಗಾವಣೆಯಾದ ನಂತರವೂ ಶಾಸಕರಾದ ಮಹೇಶ್, ನನ್ನ ವಿರುದ್ಧ ನಿರಂತರವಾಗಿ ಸುಳ್ಳು ಆರೋಪ ಮಾಡುತ್ತಲೇ ಇದ್ದಾರೆ. ಕಾನೂನು ಬಾಹಿರ ಕೃತ್ಯಗಳ ಬಗ್ಗೆ ಕ್ರಮ ಕೈಗೊಳ್ಳದಂತೆ ಅಧಿಕಾರಿಗಳನ್ನು ಬೆದರಿಸುವುದು ಮತ್ತು ಹೆದರಿಸುವುದಕ್ಕೆ ಸುಳ್ಳು ಆರೋಪದ ತಂತ್ರ ಬಳಸುತ್ತಿದ್ದಾರೆ. ನನ್ನ ವಿರುದ್ಧ ಆರೋಪಗಳ ಸುರಿಮಳೆಯ ಹಿಂದಿನ ಉದ್ದೇಶವು ಇದೇ. ಆದರೆ ಅವರ ಈ ಯಾವುದೇ ಆರೋಪ, ಬೆದರಿಕೆಗಳಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. 

ನನ್ನ ವರ್ಗಾವಣೆ ನಂತರವೂ ಅವರು ನನ್ನ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಆ ಮೂಲಕ ಸಾರ್ವಜನಿಕ ವಲಯದಲ್ಲಿ ನನಗೆ ಮಸಿ ಬಳಿಯುವುದು ಉದ್ದೇಶ. ಅದ್ದರಿಂದಲೇ ನಾನು ಅನಿವಾರ್ಯವಾಗಿ ಈ ಸ್ಪಷ್ಟನೆ ನೀಡಬೇಕಾಯಿತು. ನಗರದಲ್ಲಿನ ಕೆಲ ಭೂ ಅಕ್ರಮಗಳ ದಾಖಲೆಗಳನ್ನು ಪರಿಶೀಲಿಸಿ ಅದರ ಮಾಹಿತಿ ಪಡೆದು ವಿಚಾರಣೆ ನಡೆಸಲಾಯಿತು. ಮೇಲ್ನೋಟಕ್ಕೆ ಇಲ್ಲಿ ಅಕ್ರಮ ನಡೆದಿರುವುದು ಕಂಡು ಬಂದಿದೆ. ಆದ್ದರಿಂದ ಈ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿ ತಾರ್ಕಿಕ ತೀರ್ಮಾನಕ್ಕೆ ತೆಗೆದುಕೊಳ್ಳಬೇಕು. ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಹ, ಮೈಸೂರಿನ ಭೂ ಮಾಫಿಯ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯ ಮಾಡಿರುವುದನ್ನು ರೋಹಿಣಿ ಸಿಂಧೂರಿ ಇದೇ ವೇಳೆ ಉಲ್ಲೇಖಿಸಿದರು. ಮೈಸೂರು ನಗರ ಪಾಲಿಕೆ ಆಯುಕ್ತೆಯಾಗಿದ್ದ ಶಿಲ್ಪನಾಗ್, ರಾಜಕಾರಣಿಗಳ ಜತೆಗೆ ಕೈಜೋಡಿಸಿ ನನ್ನ ವಿರುದ್ಧ ಷಡ್ಯಂತ್ರ ನಡೆಸಿದರು. ನನ್ನನ್ನು ಇಲ್ಲಿಂದ ಎತ್ತಂಗಡಿ ಮಾಡಿಸುವುದೇ ಅವರ ರಾಜೀನಾಮೆ ನಾಟಕದ ಹಿಂದಿನ ಉದ್ದೇಶವಾಗಿತ್ತು ಎಂದು ರೋಹಿಣಿ ಸಿಂಧೂರಿ ಅಭಿಪ್ರಾಯಪಟ್ಟಿದ್ದರು.‌

ತಮ್ಮ ರಾಜೀನಾಮೆಗೆ ಭೂಮಾಫಿಯಾ ಕಾರಣ ಎಂಬ ರೋಹಿಣಿ ಸಿಂಧೂರಿ ದಾಖಲೆ ನೀಡಿದ ಬೆನ್ನಲ್ಲೇ ಇದೇ ವಿಷಯಕ್ಕೆ ಸಂಬಂಧಿಸಿದ ಆಡಿಯೋ ಕ್ಲಿಪ್ ಒಂದು ಬಿಡುಗಡೆಗೊಂಡಿದೆ. ಪತ್ರಿಕೆಯೊಂದರ ಸಂಪಾದಕರೊಂದಿಗೆ ಈ ಬಗ್ಗೆ ಮುಕ್ತವಾಗಿ ಮಾಹಿತಿ ನೀಡಿರುವ ರೋಹಿಣಿ ಸಿಂಧೂರಿ, ಮೈಸೂರಿನಲ್ಲಿ ನಡೆದಿರುವ ಭೂಒತ್ತುವರಿಗೆ ಶಾಸಕ ಸಾ.ರಾ. ಮಹೇಶ್ ಹಾಗೂ ಮುಡಾ ಅಧ್ಯಕ್ಷ ಎಚ್.ವಿ. ರಾಜೀವ್ ಶಾಮೀಲಾಗಿದ್ದಾರೆ. ಈ ಸಂಬಂಧ ತಾವು ಎಲ್ಲಾ ದಾಖಲೆಗಳ ಪರಶೀಲನೆ ನಡೆಸಿ ಕ್ರಮಕ್ಕೆ ಮುಂದಾಗಿದ್ದು, ಅಷ್ಟರಲ್ಲಿ ಎದುರಾದ ಕೊರೊನಾ ಎರಡನೇ ಅಲೆಯ ಹೊಡೆತದಿಂದ ಇದು ವಿಳಂಬವಾಯಿತು. ಆದರೆ ಇದೇ ಸಮಯವನ್ನು ಬಳಸಿಕೊಂಡ ಇವರಿಬ್ಬರು ನನ್ನನ್ನು ವರ್ಗಾವಣೆ ಮಾಡಿಸುವ ಪ್ರಯತ್ನಕ್ಕೆ ಕೈಹಾಕಿದರು ಎಂದು ಗಂಭೀರ ಆರೋಪ ಮಾಡಿದ್ದಾರೆ. 

ಮೈಸೂರಿನ ದಟ್ಟಗಳ್ಳಿಯಲ್ಲಿನ ಸಾ.ರಾ. ಕಲ್ಯಾಣ ಮಂಟಪ, ರಾಜಕಾಲುವೆ ಮೇಲೆ ನಿರ್ಮಾಣ ಮಾಡಿದೆ ಎಂಬ ರೋಹಿಣಿ‌ ಸಿಂಧೂರಿ ಅವರ ಆರೋಪವನ್ನು ಪ್ರಶ್ನಿಸಿ ಶಾಸಕ ಸಾ.ರಾ.ಮಹೇಶ್ ಇಂದಿನಿಂದ ಏಕಾಂಗಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಧರಣಿ ನಡೆಸಲು ತೀರ್ಮಾನಿಸಿರುವ ಅವರು, ರೋಹಿಣಿ ಸಿಂಧೂರಿ ಅವರು ಮಾಡಿರುವ ಆರೋಪದಂತೆ ಸಾರಾ ಚೌಲ್ಟ್ರಿ ರಾಜಕಾಲುವೆ ಮೇಲೆ ನಿರ್ಮಾಣವಾಗಿದ್ದರೆ ಅದನ್ನು ಸರ್ಕಾರದ ವಶಕ್ಕೆ ಪಡೆದುಕೊಳ್ಳಲಿ. ಈ ಆರೋಪ ಸತ್ಯವಾದರೆ ನಾನು ರಾಜಕೀಯ ಜೀವನದಿಂದಲೇ ನಿವೃತ್ತಿ ಘೋಷಿಸುತ್ತೇನೆ ಎಂದು ಸವಾಲು ಹಾಕಿರುವ ಅವರು, ಒಂದೊಮ್ಮೆ ಅವರ ಆರೋಪ ಸುಳ್ಳಾದರೆ ಅವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಒಟ್ಟಾರೆ ರೋಹಿಣಿ ಸಿಂಧೂರಿ ಹಾಗೂ ಸಾ.ರಾ. ಮಹೇಶ್ ನಡುವಿನ ಭೂ ಸಮರ, ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದ್ದು ಇದು ಎಲ್ಲಿಗೆ ಬಂತು ನಿಲ್ಲುತ್ತೇ ಅನ್ನೋದನ್ನ ಕಾದು ನೋಡಬೇಕಿದೆ.   

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...