ಕೊಟ್ಟಾಯಂ: ಗೂಗಲ್ ಮ್ಯಾಪ್ ನ್ನೇ ಇತ್ತೀಚೆಗೆ ಜನ ಹೆಚ್ಚಾಗಿ ನಂಬಿಕೊಂಡಿದ್ದಾರೆ. ಪ್ರತಿಯೊಬ್ಬರು ಗೂಗಲ್ ಮ್ಯಾಪ್ ಸಹಾಯದಿಂದಲೇ ಗಮ್ಯ ತಲುಪುತ್ತಿದ್ದಾರೆ. ಆದರೆ, ಹೀಗೆ ಗೂಗಲ್ ಮ್ಯಾಪ್ ನಂಬಿಕೊಂಡಿದ್ದ ಪ್ರವಾಸಿಗರು ಹಳ್ಳಕ್ಕೆ ಬಿದ್ದಿರುವ ಘಟನೆ ನಡೆದಿದೆ.
ಗೂಗಲ್ ಮ್ಯಾಪ್ ನಂಬಿ ಚಾಲನೆ ಮಾಡುತ್ತಿದ್ದ ಕಾರು, ಹಳ್ಳದೊಳಗೆ ಇಳಿದಿದೆ. ಪರಿಣಾಮ ಕಾರು ಸಂಪೂರ್ಣವಾಗಿ ಮುಳುಗಿ ಹೋಗಿದ್ದು, ಸ್ಥಳೀಯ ನಿವಾಸಿಗಳ ಸಹಾಯದಿಂದ ಕಾರಿನಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿದ್ದ ನಾಲ್ವರು ಮಹಿಳೆಯರು ಅಲಪ್ಪುಳ ಮಾರ್ಗದತ್ತ ಸಂಚರಿಸುತ್ತಿದ್ದರು ಎನ್ನಲಾಗಿದೆ.
ಶುಕ್ರವಾರ ರಾತ್ರಿ ಇವರೆಲ್ಲ ಪ್ರಯಾಣ ಬೆಳೆಸಿದ್ದರು. ವ್ಯಾಪಕ ಮಳೆಯಿಂದಾಗಿ ಹಳ್ಳ ಸಂಪೂರ್ಣ ತುಂಬಿ ಹರಿಯುತ್ತಿತ್ತು. ಈ ಪ್ರದೇಶದ ಕುರಿತು ಮಾಹಿತಿ ಇಲ್ಲದ ಹಿನ್ನೆಲೆಯಲ್ಲಿ ಅವರೆಲ್ಲ ಗೂಗಲ್ ಮ್ಯಾಪ್ ಮೂಲಕ ಸಂಚರಿಸುತ್ತಿದ್ದರು. ಪರಿಣಾಮ ಕಾರು ನೇರವಾಗಿ ತುಂಬಿ ಹರಿಯುತ್ತಿದ್ದ ಹಳ್ಳದೊಳಗೆ ಮುಳುಗಿದೆ. ಮುಳಗುತ್ತಿದ್ದ ಪ್ರವಾಸಿಗರ ಕೂಗು ಕೇಳುತ್ತಿದ್ದಂತೆ ಸ್ಥಳೀಯರು ಧಾವಿಸಿ ರಕ್ಷಿಸಿದ್ದಾರೆ.