ರಾಜಕಾರಣಿಗಳು ಸಾರ್ವಜನಿಕವಾಗಿ ಅಳುತ್ತಿರುವುದು ಇದು ಮೊದಲ ಸಲವೇನಲ್ಲ. ಆದರೆ ಪ್ರಧಾನ ಮಂತ್ರಿಯ ಸ್ಥಾನದಲ್ಲಿ ಕುಳಿತು ಕಣ್ಣೀರಿಡುತ್ತಿರುವುದು ನರೇಂದ್ರ ಮೋದಿ ಅವರು ಮಾತ್ರ. ಎಚ್.ಡಿ. ದೇವೇಗೌಡರು ಮಾಜಿ ಆದಮೇಲೆ ಬಹಳಷ್ಟು ಬಾರಿ ಗದ್ಗದಿತರಾಗಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಇರುವವರು, ಅದರಲ್ಲೂ ರಾಜಕಾರಣಿಗಳು ಸಾರ್ವಜನಿಕವಾಗಿ ಕಣ್ಣೀರಿಡಬಾರದು. ಮುಖ್ಯಮಂತ್ರಿ ಹಾಗೂ ಪ್ರಧಾನಿ ಮಂತ್ರಿ ಸ್ಥಾನದಲ್ಲಿ ಇರುವವರಂತೂ ಶತಾಯಗತಾಯವಾಗಿ ಆ ಕೆಲಸ ಮಾಡಬಾರದು. ಇರಲಿ, ಕುಟುಂಬದ ಸದಸ್ಯರು, ಬಹಳ ಆತ್ಮೀಯರಾಗಿದ್ದವರು, ಬಹಳ ವರ್ಷ ಜೊತೆಗಿದ್ದವರು ಸಾವನ್ನಪ್ಪಿದಾಗ ಕಣ್ಣೀರಿಟ್ಟರೆ ಅದಕ್ಕೊಂದು ಅರ್ಥ ಇರುತ್ತದೆ.
ಸಾರ್ವಜನಿಕ ಜೀವನದಲ್ಲಿ ಇರುವವರು ಸಾರ್ವಜನಿಕವಾಗಿ ಅಳಬಾರದೇಕೆ ಎಂಬುದು ಭಾರೀ ತರ್ಕವೇನಲ್ಲ. ಬದಲಿಗೆ ಅವರು ಅಳುವ ಮೂಲಕ ಅಧೀರರಾದರೆ ಒಂದಿಡೀ ವ್ಯವಸ್ಥೆ ಅಥವಾ ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಸಾಮಾನ್ಯ ಸಂಗತಿ. ನಮ್ಮದು ಇನ್ನೂ ಕಲ್ಯಾಣ ಸಮಾಜವಾಗಿಲ್ಲ. ಸುಧಾರಿಸುವುದು ಸಾಕಷ್ಟಿದೆ. ಅದಕ್ಕಾಗಿ ದೇಶ ಮತ್ತು ರಾಜ್ಯಗಳನ್ನು ಮುನ್ನಡೆಸುವವರು ಸದಾ ಸ್ಫೂರ್ತಿ ತುಂಬುವ ಮಾತುಗಳನ್ನೇ ಆಡಬೇಕಿದೆ. ಜೊತೆಗೆ ಇದು ಹಲವು ಹುಳುಕುಗಳನ್ನು ಹೊಂದಿರುವ ಸಮಾಜ. ನೋವಿನಲ್ಲಿರುವವರ ಮೇಲೆ ದೌರ್ಜನ್ಯ ಎಸೆಗುವ ದುರಿತ ಸಮಾಜ. ಆದ್ದರಿಂದ ಸದಾ ಪ್ರೇರೇಪಿಸುವ ಮಾತನ್ನಾಡಬೇಕಿದೆ. ಆಳುವವರು ಅಳು ನುಂಗಿ ಧನಾತ್ಮಕವಾಗಿಯೇ ವರ್ತಿಸಬೇಕಾಗಿದೆ.
ಈಗ ಕಣ್ಣೀರು ಸುರಿಸುತ್ತಿರುವ ನರೇಂದ್ರ ಮೋದಿ ಇದೇ ಕರೋನಾವನ್ನು ಮೊದಲ ಬಾರಿ ಲಾಕ್ಡೌನ್ ಘೋಷಣೆ ಮಾಡುವಾಗ ಯುದ್ಧಕ್ಕೆ ಹೋಲಿಸಿದ್ದರು. ಆನಂತರವೂ ಹಲವು ಬಾರಿ ‘ಇದೊಂದು ಯುದ್ಧ’ ಎಂದೇ ಸಂಬೋಧಿಸಿದ್ದಾರೆ. ಯುದ್ಧೋಪಾದಿಯಲ್ಲಿ ಕೆಲಸ ಮಾಡುವಂತೆ ಕರೆಕೊಟ್ಟಿದ್ದಾರೆ. ಹೌದು, ಇದು ಯುದ್ಧ ಅಂತಾ ಆದರೆ ದಂಡನಾಯಕ ಯಾರು ಮೋದಿ ಅವರೇ…? ನೀವೇ ಅಲ್ಲವೇ? ಹಾಗಾದರೆ ಯುದ್ಧ ಮುನ್ನಡೆಸಬೇಕಾದ ನೀವೇ ಅಳುತ್ತಾ ಕೂತರೆ? ಈ ಪ್ರಶ್ನೆಗಳು ಸಹಜವಾಗಿ ಹುಟ್ಟುತ್ತವೆ.
ಭಾವನಾತ್ಮಕವಾಗಿ ಯುದ್ಧ ಗೆಲ್ಲಲು ಸಾಧ್ಯವಿಲ್ಲ ಎಂಬ ಕನಿಷ್ಠ ಜ್ಞಾನ ನಿಮಗೆ ಇರಬೇಕಿತ್ತು. ನೀವು ಹಿಂದೆ ಕೂಡ ಕರೋನಾ ಎಂಬ ಯುದ್ಧದಲ್ಲಿ ದಿಗ್ವಿಜಯ ಸಾಧಿಸಲು ಸೈನಿಕರಂತಹ ಜನರಿಗೆ ಕರೆಕೊಟ್ಟಿದ್ದು ಭಾವನಾತ್ಮಕವಾಗಿ. ತಟ್ಟೆ ಬಡಿಯಿರಿ, ಚಪ್ಪಾಳೆ ತಟ್ಟಿ ಅಂತಾ. ಇನ್ನೂ ನೀವು ಪ್ರತಿನಿಧಿಸುವ ಬಿಜೆಪಿ ಪಕ್ಷದ ಸಚಿವರು, ಶಾಸಕರು, ನಾಯಕರು ಮತ್ತು ಕಾರ್ಯಕರ್ತರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ಗೋಮಾತ್ರದಿಂದ ಕರೋನಾವನ್ನು ಗುಣಪಡಿಸಬಹುದು’ ಎಂಬ ಮೌಢ್ಯ ಭಿತ್ತಿದರು. ಆಗಲಾದರೂ ನೀವು ಅವರನ್ನು ಗದರಬೇಕಿತ್ತು. ನೀವು ಆ ಕೆಲಸವನ್ನೂ ಮಾಡದೆ ಪರೋಕ್ಷವಾಗಿ ಅವರ ಬೆಂಬಲಕ್ಕೆ ನಿಂತಿರಿ. ಹೀಗೆ ಅಡಿಗಡಿಗೆ ಜನರ ಭಾವನೆಯೊಂದಿಗೆ ಆಟ ಆಡಿದ್ದೀರಿ.
ಪರಿಣಾಮವಾಗಿ ಭಾರತ ಜಗತ್ತಿನ ಎದುರು ತಲೆ ತಗ್ಗಿಸಬೇಕಾಗಿದೆ ಮೋದಿ ಜೀ… ಒಂದೆಡೆ ಅವೈಜ್ಞಾನಿಕ ನಡೆಗಳನ್ನು ಅನುಸರಿಸುತ್ತಾ ಇನ್ನೊಂದೆಡೆ ಮಾಡಿಕೊಳ್ಳಬೇಕಾದ ತಯಾರಿಗಳನ್ನು ಮಾಡಿಕೊಳ್ಳದೆ ಎರಡನೇ ಅಲೆ ಕರೋನಾ ಭಾರತದ ಬಡವರ ಮೇಲೆ ಬಂದು ಅಪ್ಪಳಿಸಲು ಕಾರಣರಾಗಿದ್ದೀರಿ. ತಜ್ಞರು ಎರಡನೇ ಅಲೆಯ ಕರೋನಾ ಅಲೆ ಬರುತ್ತೆ ಎಂದು ಹೇಳಿದ್ದರು. ಅದು ಇಡೀ ಜಗತ್ತಿಗೆ ಗೊತ್ತಿರುವ ಸಂಗತಿಯಾಗಿತ್ತು. ಹೆಚ್ಚಿನ ಜನ ಸೋಂಕು ಪೀಡಿತರಾದರೆ ಅವರಿಗೆ ಬೆಡ್, ಐಸಿಯು ಬೆಡ್, ವೆಂಟಿಲೇಟರ್, ರೆಮ್ಡೆಸಿವಿರ್ ಕಡೆಯದಾಗಿ ಆಮ್ಲಜನಕ ಬೇಕಾಗುತ್ತದೆ ಎಂಬುದಾದರೂ ನಿಮ್ಮ ಸರ್ಕಾರಕ್ಕೆ ತಿಳಿದಿರಬೇಕಿತ್ತಲ್ಲವೇ? ಅದಕ್ಕೆ ಪೂರಕವಾಗಿ ತಯಾರಿ ನಡೆಸಿರಬೇಕಿತ್ತಲ್ಲವೇ?
ಕರೋನಾದಂತಹ ಸಾಂಕ್ರಾಮಿಕ ಕಾಯಿಲೆಯನ್ನು ವೈಜ್ಞಾನಿಕವಾಗಿ ಎದುರಿಸದೆ ಅದರಲ್ಲೂ ಜನರ ಭಾವನೆಗಳೊಂದಿಗೆ ಆಟವಾಡಿದ್ದು ಮೊದಲ ತಪ್ಪು. ಬಳಿಕ ಮುಂದಾಲೋಚನೆ ಮಾಡದೆ ಬೆಂಕಿ ಬಿದ್ದಾಗ ಭಾವಿ ತೋಡಲು ಮುಂದಾದದ್ದು ಇನ್ನೊಂದು ತಪ್ಪು. ಕರೋನಾ ಲಸಿಕೆ, ಆಮ್ಲಜನಕ ಮತ್ತು ರೆಮ್ಡೆಸಿವಿರ್ ವಿಷಯಗಳಲ್ಲಿ ಸೂಕ್ತ ಮಾನದಂಡ ರೂಪಿಸದೆ ರಾಜ್ಯ ರಾಜ್ಯಗಳ ನಡುವೆ ತಾರತಮ್ಯ ಎಸೆಗಿದ್ದು ಮತ್ತೊಂದು ತಪ್ಪು. ಕಡೆಗೀಗ ಕೈಲಾಗದವರ ರೀತಿ ಅಳುತ್ತಿರುವುದು ಮಗದೊಂದು ತಪ್ಪು. ಹೀಗೆ ನಿರಂತರವಾಗಿ ತಪ್ಪೆಸಗಿ ಈಗ ಅಳುತ್ತಿರುವ ಮೋದಿ ಜೀ ಹಿಂದೊಮ್ಮೆ ನಿಮ್ಮನ್ನು ನೀವೇ ’56 ಇಂಚಿನ ಎದೆಯ ಶೂರ’ ಎಂದು ಹೇಳಿಕೊಂಡಿದ್ದಿರಿ. ‘ನನಗೆ ಅಳುವುದರಲ್ಲಿ ಮತ್ತು ಅಳಿಸುವುದರಲ್ಲಿ ವಿಶ್ವಾಸ ಇಲ್ಲ’ ಎಂದು ಅಬ್ಬರಿಸಿದ್ದಿರಿ. ನಿಮ್ಮ ಮಾತುಗಳನ್ನಾದರೂ ಮರೆಯಬೇಡಿ. ಸಾರ್ವಜನಿಕವಾಗಿ ಅತ್ತು ನೋವಿನಲ್ಲಿರುವ ಜನರನ್ನು ಮತ್ತಷ್ಟು ಅಧೀರರನ್ನಾಗಿ ಮಾಡಬೇಡಿ. ನೀವು ‘ವಿಶ್ವಗುರು’ ಆಗದಿದ್ದರೆ ಭಾರತಕ್ಕೆ ಏನೇನು ನಷ್ಟವಾಗದು. ಕಡೆಯ ಪಕ್ಷ ಪ್ರಧಾನಿ ಕುರ್ಚಿಯ ಮೇಲೆ ಕೂತು ಅಳುವ ಮೂಲಕ ಭಾರತದ ಘನತೆಯನ್ನು ಮಣ್ಣುಪಾಲು ಮಾಡಬೇಡಿ.