
ಬೆಂಗಳೂರು: ಅಪಾರ್ಟ್ ಮೆಂಟ್ ಅಸೋಸಿಯೇಷನ್ ಖಜಾಂಜಿ ಪತ್ರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಸಿಡಿಮಿಡಿಗೊಂಡಿದ್ದಕ್ಕೆ ಆಕ್ಷೇಪ ತೋರಿ ನೀವು ಮಿನಿಸ್ಟರ್ ಹೊರತು ಮಾಸ್ಟರ್ ಅಲ್ಲ ಎಂದಿದ್ದ ಉದ್ಯಮಿ ಮೋಹನ್ ದಾಸ್ ಪೈಗೆ ಡಿಕೆಶಿ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಡಿಕೆಶಿ, ಮೋಹನ್ ದಾಸ್ ಪೈ ಹಿರಿಯರಿದ್ದಾರೆ, ಸಲಹೆ ಕೊಡುತ್ತಾರೆ. ಆದರೆ ನನಗೆ ಬೆದರಿಕೆ ಹಾಕೋಕೆ, ಎಚ್ಚರಿಕೆ ಕೊಡೋಕೆ ಆಗಲ್ಲ ಅಲ್ವಾ..? ನಾನಿರೋದೆ ಜನರಿಗೋಷ್ಕರ. ಅಪಾರ್ಟ್ ಮೆಂಟ್ ಜನರಿಗೆ ರಕ್ಷಣೆ ಮಾಡಬೇಕು ಎಂದು ಕಾನೂನು ಜಾರಿ ಮಾಡುತ್ತಿದ್ದೇವೆ. ಯಾರೋ ಒಬ್ಬ ಅಸೋಸಿಯೇಷನ್ ಅವನು ಬೆದರಿಕೆ ಹಾಕಿದ್ರೆ ಹೇಗೆ…? ನಾವು ಯಾರಿಗೋಷ್ಕರ ಕಾನೂನು ತರುತ್ತಿದ್ದೇವೆ..? ಯಾರದ್ದೋ ಒತ್ತಡಕ್ಕೆ ಮಣಿಯಲು ಆಗಲ್ಲ ಎಂದು ಪೈ ಮಾತಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ಸೋಷಿಯಲ್ ಮೀಡಿಯಾದಲ್ಲೂ ಡಿಕೆಶಿ ಮಾತಿಗೆ ಅನೇಕರು ಕಿಡಿಕಾರಿದ್ದರು. ಈ ಬಗ್ಗೆ ಮಾತನಾಡಿದ ಅವರು, ನಾನು ಹಳ್ಳಿಯವನಿದ್ದೇನೆ.. ಮುಂದೆ ನಮ್ರತೆಯಿಂದ ಕಲಿತುಕೊಳ್ಳೋನಾ ಬಿಡಿ ಎಂದಿದ್ದಾರೆ.
2 ದಿನದ ಹಿಂದೆ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಸಭೆಯಲ್ಲಿ ಅಪಾರ್ಟ್ ಮೆಂಟ್ ಅಸೋಷಿಯೇಷನ್ ಖಜಾಂಚಿ ಕಿರಣ್ ಹೆಬ್ಬಾರ್ ಪತ್ರ ನೋಡಿ ಮಾತನಾಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್, ನನ್ನನ್ನು ಹೆದರಿಸಲು ಬರಬೇಡಿ. ನಾನು ಯಾವನಿಗೂ ಹೆದರಲ್ಲ. ಕಿರಣ್ ಹೆಬ್ಬಾರ್ ಎನ್ನುವವರು ಪತ್ರ ಬರೆದಿದ್ದಾರೆ. ಕೆಲವರಿಗೆ ನಾನು ಯಾರು ಅನ್ನೋದೇ ಗೊತ್ತಿಲ್ಲ. ಆತ ಕಾಂಗ್ರೆಸ್ ಸರ್ಕಾರ ಕೆಲಸ ಮಾಡಿಲ್ಲ ಎಂದು ವಾರ್ನ್ ಮಾಡಿ ಪತ್ರ ಬರೆದಿದ್ದಾನೆ. ಬೇಸಿಕ್ ಕಾಮನ್ ಸೆನ್ಸ್ ಇಟ್ಕೊಂಡು ನನ್ನ ಹತ್ತಿರ ಡೀಲ್ ಮಾಡಬೇಕು. ನನಗೆ ವಾರ್ನ್ ಮಾಡೋದು,

ಎಚ್ಚರಿಕೆ ಕೊಡೋದು ನಡೆಯಲ್ಲ . ಪ್ರಧಾನಿ, ಹೋಂ ಮಿನಿಸ್ಟರ್ ಗೆ ಹೆದರದೇ ಜೈಲಿಗೆ ಹೋದವನು ನಾನು. ಇವನು ಯಾರು ಹೆಬ್ಬಾರ್ ಗೆ ಹೆದರುತ್ತೀನಾ..? ನಿಮ್ಮ ವಾರ್ನಿಂಗ್ ಗೆ ನಾವು ಹೆದರಲ್ಲ. ನಿಮಗೆ ಸರ್ವೀಸ್ ಗೆ ಮಾಡಿದ್ರೆ ನಾಲ್ಕು ವೋಟ್ ಬರುತ್ತೆ ಎಂದು ನಾವು ಕೆಲಸ ಮಾಡಿಲ್ಲವೇ. ನಿಮಗೆ ಕೊಟ್ಟಿರುವ ಮಾತು ಉಳಿಸಿಕೊಂಡಿಲ್ವಾ..? ಈ ಸರ್ಕಾರವನ್ನ ಹೆದರಿಸೋಕೆ ಬರಬೇಡಿ. ನಿಮ್ಮ ಸಮಸ್ಯೆ ಹೇಳಿಕೊಳ್ಳಿ, ನಿಮ್ಮ ಕೆಲಸ ಮಾಡಿಸಿಕೊಳ್ಳಿ. ಬಿಜೆಪಿಗೆ ಹೆಚ್ಚು ವೋಟು ಬೆಂಗಳೂರಿನಲ್ಲಿ ತಾನೇ ಕೊಟ್ಟಿದ್ದು ? ಭ್ರಮೆ ಬೇಡ.. ಬೆದರಿಕೆ ಹಾಕೋದು ನಮ್ಮ ಸರ್ಕಾರದ ವಿರುದ್ಧ ನಡೆಯಲ್ಲ . ನಾನು ನೇರ ದಿಟ್ಟವಾಗಿ ಮಾತಾನಾಡ್ತೀನಿ. ಬೇಜಾರ್ ಮಾಡಿಕೊಳ್ಳಬೇಡಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದರು










