
ಬೆಳಗಾವಿ : ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ವಿಚಾರ ಅಧಿವೇಶದನದ ಸಮಯದಲ್ಲಿಯೂ ನಿಲ್ಲುವಂತೆ ಕಾಣುತ್ತಿಲ್ಲ. ಈಗಾಗಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಇಬ್ಬರೂ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿದ್ದಾರೆ. ಎರಡು ಸುತ್ತಿನ ಮೀಟಿಂಗ್ ಮೂಲಕ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ, ನಾವಿಬ್ರೂ ಬ್ರದರ್ಸ್ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಎಂದಿದ್ದರು. ಅಲ್ಲದೆ ನಾವು ಭೇಟಿಯಾಗಿ ಅಧಿವೇಶನದಲ್ಲಿ ಪಕ್ಷದ ಹಾಗೂ ಸರ್ಕಾರಗಳ ಮುಂದಿನ ನಡೆಯ ಬಗ್ಗೆ ಚರ್ಚಿಸಿದ್ದೇವೆ ಎಂದು ಹೇಳಿದ್ದರು.

ಬೆಂಗಳೂರಿನಲ್ಲಿ ನಡೆಯುತ್ತಿದ್ದ ಪಟ್ಟದ ಆಟಕ್ಕೆ ತೆರೆ ಬಿದ್ದಂತೆ ಕಂಡು ಬಂದಿತ್ತು. ಇಡೀ ರಾಜ್ಯ ಸರ್ಕಾರವೇ ಬೆಳಗಾವಿಯಲ್ಲಿದೆ. ಈ ಹೊತ್ತಿನಲ್ಲಿಯೇ ಸಿದ್ದರಾಮಯ್ಯ ಪುತ್ರ ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಡಿಕೆ ಬಣವನ್ನು ಕೆರಳಿಸುವ ಕೆಲಸ ಮಾಡಿದ್ದಾರೆ. ಕಳೆದ ನಾಲ್ಕು ದಿನಗಳಲ್ಲಿ 3 ಬಾರಿ ನಾಯಕತ್ವದ ಬದಲಾವಣೆಯ ಬಗ್ಗೆ ಸರಣಿ ಹೇಳಿಕೆಗಳನ್ನು ನೀಡಿದ್ದರು. ನಾಯಕತ್ವ ಬದಲಾವಣೆಯ ಬಗ್ಗೆ ಹೈಕಮಾಂಡ್ ತೀರ್ಮಾನಿಸಿಲ್ಲ, ಸಿದ್ದರಾಮಯ್ಯನವ್ರೇ ಪೂರ್ಣಾವಧಿ ಮುಂದುವರೆಯುತ್ತಾರೆ ಎಂದಿದ್ದರು. ಇದಾದ ಬಳಿಕ ತಕ್ಷಣ ಡಿಕೆಶಿ ಆಪ್ತ ಶಾಸಕ, ಸಚಿವರ ಡಿನ್ನರ್ ಮೀಟಿಂಗ್ ನಡೆಸಿ ಮುಂದಿನ ಹೆಜ್ಜೆಯ ಬಗ್ಗೆ ಚರ್ಚಿಸಿದ್ದಾರೆ.

ಇನ್ನೂ ಬೆಳಗಾವಿಯ ಉದ್ಯಮಿಯೊಬ್ಬರ ಎಸ್ಟೇಟ್‌ನಲ್ಲಿ ಖುದ್ದು ಡಿಸಿಎಂ ಸಹೋದರ ಮಾಜಿ ಸಂಸದ ಡಿಕೆ ಸುರೇಶ್ ಇಡೀ ಡಿನ್ನರ್ ಸಭೆಯನ್ನು ಆಯೋಜಿಸಿದ್ದರು. ಅದರಲ್ಲಿ ಯತೀಂದ್ರ ಹೇಳಿಕೆಗಳು, ಹೈಕಮಾಂಡ್ ಮುಂದೆ ತಮ್ಮ ಬೇಡಿಕೆ ಮಂಡನೆಯ ಬಗ್ಗೆ ಸಮಾಲೋಷನೆಯಾಗಿದೆ. ಇದಾದ ಬಳಿಕವೇ ಡಿಕೆ ಬಣ ಈಗ ವೈಲೆಂಟ್ ಆಗಿದ್ದು ಅಧಿವೇಶನದ ಬಳಿಕವೇ ಡಿಕೆ ಸಿಎಂ ಎಂಬ ಸ್ಫೋಟಕ ಹೇಳಿಕೆ ಹೊರಬಿದ್ದಿದೆ.
ಸಂಕ್ರಾಂತಿ ಅಲ್ಲ, ಅಧಿವೇಶನ ಮುಗಿದ ಕೂಡಲೇ ಡಿ. ಕೆ. ಶಿವಕುಮಾರ್ ಸಿಎಂ ಆಗ್ತಾರೆ. ನನ್ನ ಹಣೆಯಲ್ಲಿ ಬರೆದಿದ್ದಕ್ಕೆ ನಾನು ಎಂಎಲ್ಎ ಆಗಿಲ್ಲವೇ?. ಹಾಗೆಯೇ ಡಿ. ಕೆ. ಶಿವಕುಮಾರ್ ಅವರ ಹಣೆಯಲ್ಲಿ ಬರೆದಿದೆ. ಅವರು ಸಿಎಂ ಆಗುತ್ತಾರೆ. ನಿನ್ನೆ ನಾವು 55 ಜನ ಶಾಸಕರು ಊಟಕ್ಕೆ ಸೇರಿದ್ದೆವು. ಊಟ ಮಾಡಿದ್ದೇವೆ ಅಷ್ಟೇ. ನಮಗೆ ಡಿ. ಕೆ. ಶಿವಕುಮಾರ್ ಸಿಎಂ ಆಗಬೇಕು, ಆಗುತ್ತಾರೆ ಎನ್ನುವ ಮೂಲಕ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಸಂಚಲನ ಮೂಡಿಸಿದ್ದಾರೆ.

ಡಿ. ಕೆ. ಶಿವಕುಮಾರ್ ಕಷ್ಟ ಪಟ್ಟಿದ್ದಾರೆ ಅದಕ್ಕೆ ಫಲ ಸಿಗುತ್ತದೆ. ಆದಷ್ಟು ಬೇಗ ಈಡೇರುತ್ತದೆ. ಅಧಿವೇಶನ ಮುಗಿದ ಬಳಿಕ ಆದಷ್ಟು ಬೇಗ ಆಗಿಯೇ ಆಗುತ್ತದೆ. ಇಲ್ಲಿ ನಂಬರ್ ಮುಖ್ಯ ಅಲ್ಲ, ಹೈಕಮಾಂಡ್ನ ನಿರ್ದೇಶನ ಮುಖ್ಯವಾಗಿದೆ. ಹೈಕಮಾಂಡ್ ಎಲ್ಲವನ್ನೂ ತೀರ್ಮಾನಿಸುತ್ತದೆ. ಹೈಕಮಾಂಡ್ ಹೇಳಿದರೆ ಯಾರು ಯಾಕೆ ಕೇಳಲ್ಲ?. ಎಲ್ಲರೂ ಆದೇಶ ಪಾಲನೇ ಮಾಡಲೇಬೇಕು. ಯಾರ್ಯಾರಿಗೆ ಯಾವ್ಯವಾ ಕನಸುಗಳು ಬೀಳುತ್ತವೆ ಎಂದು ಯತೀಂದ್ರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

50 ರಿಂದ 60 ಜನರು ಡಿನ್ನರ್ಗೆ ಕೂಡಿದ್ರು. ಆದರೆ, ಅಲ್ಲಿ ರಾಜಕೀಯ ಚರ್ಚೆ ಆಗಿಲ್ಲ. ಡಿ. ಕೆ. ಶಿವಕುಮಾರ್ ಕರೆದರೆ ಎಲ್ಲ 224 ಜನ ಶಾಸಕರೂ ಊಟಕ್ಕೆ ಬರ್ತಾರೆ. ಇದರಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಎಂಬುದು ಏನಿಲ್ಲ. ವಿಶ್ವಾಸ, ಪ್ರೀತಿ, ಒಂದು ಬಾಂಧವ್ಯವಿರುತ್ತದೆ. ಎಲ್ಲರೂ ಡಿಕೆಶಿಗೆ ಆತ್ಮೀಯರೇ, ಎಲ್ಲರೂ ಸ್ನೇಹಿತರೇ. ಅವರವರ ಪಕ್ಷದಲ್ಲಿ ಗುರುತಿಸಿಕೊಳ್ತಾರೆ. ಕಾಂಗ್ರೆಸ್ ಪಕ್ಷ ಶಿಸ್ತಿನ ಪಕ್ಷವಾಗಿದೆ. ಹೈಕಮಾಂಡ್ ನಮಗೆ ಅಂತಿಮವಾಗಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಡಿಕೆಶಿ ಪರ ಬ್ಯಾಟ್ ಬೀಸಿದ್ದಾರೆ.










