ಇತ್ತೀಚೆಗೆ ವಿರೋಧ ಪಕ್ಷದ ನಾಯಕ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್ ಭೇಟಿಗಾಗಿ ದೆಹಲಿಗೆ ತೆರಳಿದ್ದರು. ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿಯವರೇ ಖುದ್ದಾಗಿ ಸಿದ್ದರಾಮಯ್ಯರನ್ನ ದೆಹಲಿಗೆ ಕರೆಸಿಕೊಂಡಿದ್ದು ಇಡೀ ರಾಜ್ಯಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಮಹತ್ವದ ಬೆಳವಣಿಗೆಯೊಂದರಲ್ಲಿ ಸೋನಿಯಾ ಗಾಂಧಿ ದಿಢೀರ್ ಸಿದ್ದರಾಮಯ್ಯ ಅವರನ್ನು ಸೋನಿಯಾ ಕರೆದು ಮಾತಾಡಿದ್ದೇಕೆ ಎಂಬ ಚರ್ಚೆಗಳು ನಡೆದವು. ಸಿದ್ದರಾಮಯ್ಯ ಅವರೇನಾದ್ರೂ ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತಾರೆಯೇ ಎಂಬ ಗುಮಾನಿ ಹುಟ್ಟಿಕೊಂಡಿತ್ತು.
ದಿಢೀರ್ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾರಿಂದ ಬುಲಾವ್ ಬಂದಿತ್ತು. ಗೊಂದಲಗಳ ಗೂಡಂತಾಗಿರುವ ಕಾಂಗ್ರೆಸ್ಗೆ ಉತ್ತಮ ಸಾರಥಿಯ ಅವಶ್ಯಕತೆ ಇರುವ ಸಂದರ್ಭದಲ್ಲೇ ಸಿದ್ದರಾಮಯ್ಯರನ್ನು ಸೋನಿಯಾರಿಂದ ಆಹ್ವಾನ ಬಂದದ್ದು ಹಲವು ಅನುಮಾಗಳನ್ನು ಹುಟ್ಟಿಹಾಕಿತ್ತು. ಎಲ್ಲೋ ಒಂದು ಕಡೆ ಸಿದ್ದರಾಮಯ್ಯ ಅವರಿಗೆ ರಾಷ್ಟ್ರೀಯ ನಾಯಕತ್ವದ ಜವಾಬ್ದಾರಿ ಸಿಗುತ್ತೆ ಅನ್ನೋ ಮಾತುಗಳಿಗೆ ಮರುಜೀವ ಬಂದಿತ್ತು. ಆದರೆ, ರಾಷ್ಟ್ರ ರಾಜಕಾರಣದ ಮೇಲೆ ಒಲವಿಲ್ಲ ಎಂದು ಸ್ವತಃ ಸಿದ್ದರಾಮಯ್ಯರೇ ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ. ಅಧಿನಾಯಕಿಯ ಕರೆಗೆ ಓಗೊಟ್ಟು ಒಲ್ಲದ ಮನಸ್ಸಿನಿಂದಲೇ ದೆಹಲಿಗೆ ಸಿದ್ದು ಭೇಟಿ ನೀಡಿದ್ದಾರೆ.
ನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ ಎನ್ನುತ್ತಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಸದ್ಯ ದೆಹಲಿ ಪ್ರವಾಸ ಬೆಳೆಸಿದ್ದರು. ಸೋನಿಯಾಗಾಂಧಿ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸಿದ್ರಾಮಯ್ಯರನ್ನ ರಾಷ್ಟ್ರ ರಾಜಕೀಯಕ್ಕೆ ಸೆಳೆಯೋ ಮಾತುಗಳನ್ನಾಡಿದರು ಸೋನಿಯಾ ಎನ್ನಲಾಗಿದೆ.
2024ಕ್ಕೆ ಕಾಂಗ್ರೆಸ್ ಪಕ್ಷ ಸಂಘಟನೆಗೆ ಸಿದ್ರಾಮಯ್ಯರನ್ನ ಬಳಸಿಕೊಳ್ಳುವ ಚಿಂತನೆಯಲ್ಲಿ ಸೋನಿಯಾ ಇದ್ದಾರೆ ಎಂಬ ಮಾತುಗಳು ಕೇಳಿ ಬಂದವು. ಆದ್ರೆ ಸೋನಿಯಾ ಭೇಟಿ ಬಳಿಕ ಮಾತನಾಡಿದ ಸಿದ್ದರಾಮಯ್ಯ, ನಾವು ರಾಷ್ಟ್ರ ರಾಜಕೀಯ ಪ್ರವೇಶದ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ. ರಾಜ್ಯ ಉಪಚುನಾವಣೆ ಮತ್ತು ಬಿಜೆಪಿ ಕಟ್ಟಿಹಾಕಲು ಕೈಗೊಳ್ಳಬೇಕಾದ ತಂತ್ರಗಳ ಬಗ್ಗೆ ಮಾತ್ರ ಚರ್ಚಿಸಲಾಗಿದೆ ಎಂದಿದ್ದರು.
ಉತ್ತಮ ಭಾಷಣಕಾರ, ಮತ್ತು ರಾಜಕೀಯ ನಿಪುಣರಾದ ಸಿದ್ದರಾಮಯ್ಯರನ್ನು ರಾಷ್ಟ್ರೀಯ ಮುಖ್ಯವಾಹಿನಿಗೆ ಕರೆತರುವುದು. ರಾಷ್ಟ್ರರಾಜಕಾರಣದಲ್ಲಿ ಸಿದ್ದು ಜನಪ್ರಿಯತೆ ಬಳಸಿಕೊಳ್ಳುವುದು. 2024 ರ ಚುನಾವಣೆಗೆ ಈಗಿನಿಂದಲೆ ಸಿದ್ಧತೆ ಕೈಗೊಳ್ಳುವುದು. ಪಕ್ಷದ ಏಳಿಗೆಗೆ ಸಂಪೂರ್ಣ ರಾಷ್ಟ್ರ ರಾಜಕೀಯಕ್ಕೆ ಬರಲು ಸೂಚನೆ ನೀಡುವುದು ಹೈಕಮಾಂಡ್ ಲೆಕ್ಕಚಾರ ಆಗಿತ್ತು.
ಸಿದ್ದರಾಮಯ್ಯರಿಗೆ ಮಹತ್ವದ ಜವಾಬ್ದಾರಿ ನೀಡಿ, ರಾಷ್ಟ್ರ ಮಟ್ಟದಲ್ಲಿ ಬಳಸಿಕೊಳ್ಳಲು ಚಿಂತನೆ ನಡೆದಿದೆಯಾ ಅನ್ನೋದು ಸದ್ಯದ ಚರ್ಚೆ. ಸಿದ್ದು ಮೂಲಕ ಎದುರಾಳಿ ಬಿಜೆಪಿಯನ್ನು ಕಟ್ಟಿಹಾಕುವ ಚಿಂತನೆಯಲ್ಲಿ ಕಾಂಗ್ರೆಸ್ ಯೋಚಿಸುತ್ತಿದೆಯಾ ಅನ್ನೋ ಪ್ರಶ್ನೆಯೂ ಮೂಡಿದೆ. ಅಲ್ಲದೆ ಕರ್ನಾಟಕದಲ್ಲಿ ಡಿ.ಕೆ ಶಿವಕುಮಾರ್ ಹೆಗಲಿಗೆ ಪಕ್ಷ ಮುನ್ನಡೆಸೋ ಜವಾಬ್ದಾರಿ ನೀಡಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯೋ ಚಿಂತನೆಯಲ್ಲಿ ಹೈಕಮಾಂಡ್ ಇದೆ ಎನ್ನಲಾಗಿದೆ.
ಇನ್ನೊಂದೆಡೆ ಸಿದ್ದರಾಮಯ್ಯರನ್ನು ದೆಹಲಿಗೆ ಸಾಗ ಹಾಕಲು ವಿರೋಧಿ ಪಡೆಗಳಿಂದಲೇ ಭಾರೀ ಪ್ಲಾನ್ ಆಗಿತ್ತು ಎನ್ನಲಾಗಿದೆ. ಸಿದ್ದರಾಮಯ್ಯಗೆ ರಾಜ್ಯಕ್ಕಿಂತಲೂ ರಾಷ್ಟ್ರ ರಾಜಕಾರಣ ಉತ್ತಮ ಎಂಬ ಸಲಹೆಯನ್ನು ಹೈಕಮಾಂಡ್ಗೆ ನೀಡಲಾಗಿದೆ. ಆದರೆ, ನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ಇದರಿಂದ ಡಿ.ಕೆ ಶಿವಕುಮಾರ್ಗೆ ಭಾರೀ ಆಘಾತ ಆಗಿದೆ ಎನ್ನುತ್ತಿವೆ ಮೂಲಗಳು.
ರಾಜ್ಯ ರಾಜಕಾರಣದಲ್ಲಿ ಡಿ.ಕೆ ಶಿವಕುಮಾರ್ಗೆ ಸಿದ್ದರಾಮಯ್ಯ ಸ್ಪರ್ಧಿಯಾಗಿದ್ದಾರೆ. ಇವರನ್ನು ರಾಷ್ಟ್ರ ರಾಜಕಾರಣಕ್ಕೆ ಸಾಗ ಹಾಕಿದರೆ ರಾಜ್ಯದಲ್ಲಿ ಲೈನ್ ಕ್ಲಿಯರ್ ಆಗಲಿದೆ ಎಂಬ ಲೆಕ್ಕಾಚಾರ ಡಿ.ಕೆ ಶಿವಕುಮಾರ್ ಅವರದ್ದು. ಅದೇ ಕಾರಣದಿಂದಲೇ ಸೋನಿಯಾ ಗಾಂಧಿ ಅವರಿಂದ ಸಿದ್ದರಾಮಯ್ಯಗೆ ದೆಹಲಿಗೆ ಬರುವಂತೆ ಆಹ್ವಾನ ಸಿಕ್ಕಿತ್ತು ಎಂದು ಹೇಳಲಾಗುತ್ತಿದೆ.
ರಾಷ್ಟ್ರೀಯ ಕಾಂಗ್ರೆಸ್ ಮಟ್ಟದಲ್ಲಿ ಹಿರಿಯ ನಾಯಕರಿಂದ ಅಪಸ್ವರ ಶುರುವಾಗಿದೆ. ಹೀಗಾಗಿ ರಾಜ್ಯಮಟ್ಟದ ಪ್ರಭಾವಿಗಳನ್ನ ರಾಷ್ಟ್ರ ರಾಜಕಾರಣಕ್ಕೆ ಕರೆಸಿಕೊಳ್ಳಲು ಸೋನಿಯಾ ಗಾಂಧಿ ಮುಂದಾಗಿದ್ದರು. ಆದರೆ, ಸೋನಿಯಾ ಗಾಂಧಿಯವರ ಈ ಆಹ್ವಾನವನ್ನು ಸಿದ್ದರಾಮಯ್ಯ ನಯವಾಗಿಯೇ ತಿರಸ್ಕರಿಸಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ.