2023 ವಿಧಾನಸಭಾ ಚುನಾವಣೆಗೆ ಇನ್ನೂ ಎರಡು ವರ್ಷಗಳ ಮಾತ್ರ ಬಾಕಿ ಇವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿರುವುದು, ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗದ ಸರಿಯಾಗಿ ಪರಿಹಾರ ನೀಡದಿರುವುದು, ಮೂರು ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ತಂದಿರುವುದು, ಕರ್ನಾಟಕ ಜಿಎಸ್ಟಿ ಪಾಲು ಬಿಡುಗಡೆ ಮಾಡದಿರುವುದು ಮುಂದಿನ ವಿಧಾನಸಭಾ ಚುನಾವಣೆ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ. ಬಿ.ಎಸ್ ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದ ಮೇಲಂತೂ ಬಿಜೆಪಿಗೆ ಗೆಲ್ಲುವ ಅವಕಾಶಗಳು ಕಡಿಮೆ ಆಗಿವೆ. ಹೀಗಾಗಿ ರಾಜ್ಯದಲ್ಲಿ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಅವಕಾಶಗಳು ಇವೆ.
ಒಂದೆಡೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಗೆಲ್ಲುವ ಅವಕಾಶ ಇದ್ದರೂ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮುಂದಿನ ಸಿಎಂ ಯಾರು ಎಂಬ ವಿಚಾರಕ್ಕೆ ಮುಸುಕಿನ ಗುದ್ದಾಟ ನಡೆಸಿದ್ದರು. ಹೋದಲ್ಲಿ ಬಂದಲ್ಲಿ ತಮ್ಮ ಬೆಂಬಲಿಗರಿಗೆ ವಿಧಾನಸಭಾ ಚುನಾವಣೆಗೆ ಮುನ್ನವೇ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡುತ್ತಿದ್ದರು. ಈ ವಿಚಾರಕ್ಕೆ ಹಿರಿಯ ಕಾಂಗ್ರೆಸ್ಸಿಗ ಮತ್ತು ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯಗೆ ಕ್ಲಾಸ್ ತೆಗೆದುಕೊಂಡಿದ್ದರು.
ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಹೆಸರು ಉಲ್ಲೇಖಿಸಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಚುನಾವಣೆಗೆ ಮುನ್ನವೇ ಘೋಷಿಸಬೇಡಿ. ಇದು ಪಕ್ಷದಲ್ಲಿ ಬಂಡಾಯಕ್ಕೆ ಕಾರಣವಾಗುತ್ತದೆ. ಇನ್ನು ವಿಧಾನಸಭಾ ಚುನಾವಣೆಗೆ 2 ವರ್ಷಗಳು ಇವೆ. ಎಲ್ಲರೂ ಡಿಸೈಡ್ ಮಾಡಿ ಟಿಕೆಟ್ ಘೋಷಣೆ ಮಾಡಬೇಕು ಎಂದು ಖರ್ಗೆ ಕಿವಿಮಾತು ಹೇಳಿದ್ದರು.

ಹೀಗಿರುವಾಗಲೇ ಸಾರ್ವತ್ರಿಕ ವಿಧಾನಸಭೆ ಚುನಾವಣೆಗೆ ಎರಡು ವರ್ಷ ಬಾಕಿ ಇರುವಾಗಲೇ ಅಭ್ಯರ್ಥಿಗಳ ಘೋಷಣೆ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಹೋದರ ಸಂಸದ ಡಿ.ಕೆ ಸುರೇಶ್ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಇಕ್ಬಾಲ್ ಹುಸೇನ್, ಮಾಗಡಿ ವಿಧಾನಸಭಾ ಕ್ಷೇತ್ರಕ್ಕೆ ಹೆಚ್.ಸಿ ಬಾಲಕೃಷ್ಣ ಎಂದು ಡಿ.ಕೆ ಸುರೇಶ್ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ ಮಾಡಿದ್ದಾರೆ. ಚುನಾವಣೆಗೆ ಮುನ್ನವೇ ಹೇಗೆ ಡಿ.ಕೆ ಸುರೇಶ್ ಅಭ್ಯರ್ಥಿಗಳ ಘೋಷಣೆ ಮಾಡಿದ್ರು ಎಂದು ಕಾಂಗ್ರೆಸ್ ಪಡಸಾಲೆಯಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.
ಹಿರಿಯ ನಾಯಕ ಮುಲ್ಲಿಕಾರ್ಜುನ್ ಖರ್ಗೆ ನಿರ್ದೇಶನ ಉಲ್ಲಂಘಿಸಿದ ಡಿ.ಕೆ.ಸುರೇಶ್ ನಡೆಗೆ ಕೈಪಾಳೆಯ ಕೆಂಡ ಕಾರುತ್ತಿದೆ. ಹೋದಲ್ಲಿ ಬಂದಲ್ಲಿ ಅಭ್ಯರ್ಥಿಗಳ ಘೋಷಣೆ ಮಾಡಬೇಡಿ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಎಲ್ಲರಿಗೂ ಸೂಚಿಸಿದ್ದರು. ಈ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಬದಲಿಗೆ ಡಿ.ಕೆ ಸುರೇಶ್ ಈಗ ಅಭ್ಯರ್ಥಿಗಳ ಘೋಷಣೆ ಕಾಯಕ ಮುಂದುವರಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಅಸಮಾಧಾನ ಹೊರಹಾಕಿದ್ದಾರೆ.

ಇನ್ನು. ಡಿ.ಕೆ ಶಿವಕುಮಾರ್ ಈಗ ಡಿ.ಕೆ ಸುರೇಶ್ ವಿರುದ್ಧ ಗರಂ ಆಗಿದ್ದಾರೆ. ಹಿರಿಯ ನಾಯಕರ ಆದೇಶವನ್ನು ಹೇಗೆ ಉಲ್ಲಂಘನೆ ಮಾಡಿದೆ ಎಂದು ಪ್ರಶ್ನಿಸಿದ್ದಾರೆ. ಇನ್ನೊಮ್ಮೆ ಯಾರನ್ನು ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಿಸಬೇಡ ಎಂದು ಕಿವಿಮಾತು ಹೇಳಿದ್ದಾರೆ.
ಈ ಹಿಂದೆಯೇ ಅಭ್ಯರ್ಥಿಗಳ ಬಹಿರಂಗ ಘೋಷಣೆಗೆ ಖರ್ಗೆ ಬ್ರೇಕ್ ಹಾಕಿಸಿದ್ದರು. ಆದರೆ, ಅಣ್ಣನ ಬದಲು ಈಗ ತಮ್ಮ ಡಿ.ಕೆ ಸುರೇಶ್ ಅಭ್ಯರ್ಥಿ ಘೋಷಣೆಯ ಕಾಯಕ ಆರಂಭಿಸಿದ್ದಾರೆ ಎಂದು ಚರ್ಚೆಯಾಗುತ್ತಿದೆ. ನಿನ್ನ ನಡೆಗೆ ಕೈ ಪಾಳೆಯದಲ್ಲೇ ಅಸಮಾಧಾನ ಶುರುವಾಗಿದೆ ಎಂದು ಡಿ.ಕೆ ಶಿವಕುಮಾರ್ ತಮ್ಮನ ಮುಂದೆ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಡಿ.ಕೆ ಸುರೇಶ್ಗೆ ಬುದ್ದಿ ಹೇಳಿದ್ದಾರಂತೆ. ಇನ್ನು, ಡಿ.ಕೆ ಸುರೇಶ್ ಈ ವಿಚಾರವನ್ನು ಎಷ್ಟು ಸೀರಿಯಸ್ಸಾಗಿ ಪರಿಗಣಿಸಿದ್ದಾರೋ ಏನೋ ಎಂಬ ಚರ್ಚೆಯೂ ಜೋರಾಗಿದೆ.

