ಕಾರ್ಯಕರ್ತರೊಬ್ಬರಿಗೆ ಡಿಕೆ ಶಿವಕುಮಾರ್ ಕಪಾಳಮೋಕ್ಷ ಮಾಡಿದ್ದ ಪ್ರಕರಣವನ್ನು ಇಟ್ಟುಕೊಂಡು ರಾಜ್ಯ ಬಿಜೆಪಿಯು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ವಿರುದ್ಧ ತೀವ್ರ ಟ್ವೀಟ್ ದಾಳಿ ನಡೆಸಿದೆ. ಡಿಕೆಶಿಯನ್ನು #ರೌಡಿಡಿಕೆಶಿ ಎಂದು ಕರೆಯುವ ಮೂಲಕ ಸರಣಿ ಟ್ವೀಟ್ ಮಾಡಿದೆ.

“ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ಗೆ ರೌಡಿ ಕೊತ್ವಾಲನೊಂದಿಗಿದ್ದ ಗತಕಾಲದ ನೆನಪು ಕಾಡಿತೇ? ಒಂದು ರಾಷ್ಟ್ರೀಯ ಪಕ್ಷದ ರಾಜ್ಯ ಅಧ್ಯಕ್ಷನಾಗಿದ್ದುಕೊಂಡು ಸಾರ್ವಜನಿಕವಾಗಿ ಒಬ್ಬ ವ್ಯಕ್ತಿಯ ಮೇಲೆ ಈ ರೀತಿ ಹಲ್ಲೆ ಮಾಡಿರುವುದು ಅಕ್ಷಮ್ಯ. ಸಾರ್ವಜನಿಕ ಜೀವನದಲ್ಲಿದ್ದುಕೊಂಡು ಒಬ್ಬ ವ್ಯಕ್ತಿಯ ಮೇಲೆ ಸಾರ್ವಜನಿಕವಾಗಿ, ಮಾಧ್ಯಮಗಳ ಎದುರು ಹಲ್ಲೆ ನಡೆಸುವುದು ಡಿಕೆಶಿ ಅವರ ಉಗ್ರ ಮನಸ್ಥಿತಿಯನ್ನು ತೋರಿಸುತ್ತಿದೆ. ಈ ಹಿಂದೆ ಸೆಲ್ಫಿ ತೆಗೆಯಲು ಬಂದ ಕಾರ್ಯಕರ್ತನ ಮೇಲೆ ಡಿಕೆಶಿ ಹಲ್ಲೆ ಮಾಡಿದ್ದರು. ಡಿಕೆಶಿಯವರೇ, ನೀವು ರಾಜಕಾರಣಿಯೋ ಅಥವಾ ರೌಡಿಯೋ!?” ಎಂದು ಬಿಜೆಪಿ ಪ್ರಶ್ನಿಸಿದೆ.
“ಕಾರ್ಯಕರ್ತ ಹತ್ತಿರ ಬಂದ ಎಂಬ ಕಾರಣಕ್ಕೆ ಸಾರ್ವಜನಿಕವಾಗಿ ಹಲ್ಲೆ ಮಾಡುವ ಡಿಕೆಶಿ ಅವರ ಬಳಿ ಜನಸಾಮಾನ್ಯರು ಹೋದರೆ ಗತಿಯೇನು ? ಕೆಪಿಸಿಸಿ ಅಧ್ಯಕ್ಷರೇ, ನೀವು ಹೊಡಿ, ಬಡಿ ರಾಜಕಾರಣದ ಬ್ರ್ಯಾಂಡ್ ಅಂಬಾಸಿಡರ್ ಆಗಲು ಹೊರಟಿದ್ದೀರಾ? ತಮ್ಮ ವರ್ತನೆಯನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು. ನೀವು ಕೊತ್ವಾಲನ ಶಿಷ್ಯ ಆಗಿರಬಹುದು, ಜೈಲಿಗೂ ಹೋಗಿ ಬಂದಿರಬಹುದು ಆದರೆ ಆ ರಾಕ್ಷಸಿ ಗುಣಗಳನ್ನು ಅಮಾಯಕರ ಮೇಲೆ ತೋರ್ಪಡಿಸಬೇಡಿ. ರಾಜ್ಯಾಧ್ಯಕ್ಷರ ನಡೆ ಇತರರಿಗೆ ಮಾದರಿಯಾಗಿರಲಿ, ಇದು ಬಸವಣ್ಣನ ನಾಡು ಎಂಬುದು ನೆನಪಿರಲಿ” ಎಂದು ಬಿಜೆಪಿ ಕೇಳಿದೆ.
ಇಂತಹದ್ದೇ ಹಲ್ಲೆ ಮಾಡುವ ಹಿಂದಿನ ಘಟನೆಗಳನ್ನು ನೆನಪಿಸಿರುವ ಬಿಜೆಪಿ ತನ್ನ ಟ್ವಿಟರ್ ಪೇಜ್ನಲ್ಲಿ “ಇದೆಲ್ಲ ರೌಡಿ ಲಕ್ಷಣ ಅಲ್ಲದೆ ಮತ್ತೇನು?” ಎಂದು ಕೇಳಿದೆ.
ಇದಕ್ಕೆ #ಬಿಜೆಪಿಗೂಂಡಾಪಡೆ ಎಂಬ ಹ್ಯಾಶ್ ಟ್ಯಾಗ್ ಮೂಲಕ ಪ್ರತ್ಯುತ್ತರ ನೀಡಿದ ಕಾಂಗ್ರೆಸ್ “ಸಾರ್ವಜನಿಕ ಬದುಕಿನಲ್ಲಿರುವವರಿಗೆ ಸಾರ್ವಜನಿಕ ಸ್ಥಳದಲ್ಲಿ ಕಿರಿಕಿರಿ ಉಂಟಾಗುವುದು ಸಹಜ. ತಮ್ಮದೇ ಡ್ರೈವರ್ ಮೇಲೆ ಮಾದ್ಯಮದವರೆದುರು ಹಲ್ಲೆ ನಡೆಸಿದ ಯಡಿಯೂರಪ್ಪ ಅವರು ಭೂಗತ ಪಾತಕಿ ದಾವೂದ್ ಇಬ್ರಾಹಿಂನಿಂದ ಟ್ರೈನಿಂಗ್ ತೆಗೆದುಕೊಂಡಿದ್ದರೇ? ಇದಕ್ಕೆ ಬಿಜೆಪಿ ಉತ್ತರಿಸಬೇಕು! ಬಿಜೆಪಿ ಹುಟ್ಟಿಕೊಂಡಿದ್ದೇ ಹಲ್ಲೆ, ಕೊಲೆ, ಗಲಭೆಗಳಿಂದ” ಎಂದು ಟ್ವೀಟ್ ಮೂಲಕ ತಿಳಿಸಿದೆ.
ಸರಣಿ ಟ್ವೀಟ್ ಮಾಡಿದ ಕಾಂಗ್ರೆಸ್ ʼಬಿಜೆಪಿ ಶಾಸಕ ಸಿದ್ದು ಸವದಿ ದಲಿತ ಮಹಿಳಾ ಜನಪ್ರತಿನಿಧಿಯನ್ನು ಸಾರ್ವಜನಿಕವಾಗಿ ಎಳೆದಾಡಿ ಹಲ್ಲೆ ನಡೆಸಿದ ಪರಿಣಾಮ ಆ ಮಹಿಳೆಗೆ ಗರ್ಭಪಾತವಾಗಿ ಒಂದು ಕೊಲೆಗೆ ಕಾರಣರಾಗಿದ್ದರು. ‘ಗೂಂಡಾಗಿರಿಯ ಪಾಠಶಾಲೆ’ ಆಗಿರುವ ಬಿಜೆಪಿ, ಇದು ಬಸವಣ್ಣನ ನಾಡು, ಇಲ್ಲಿ ನಿಮ್ಮ ದಾದಾಗಿರಿ ನಡೆಯದು ಎಂಬುದನ್ನ ಅರ್ಥ ಮಾಡಿಕೊಂಡರೆ ಒಳಿತುʼ ಎಂದು ಟಾಂಗ್ ನೀಡಿದೆ.
ಒಂದು ಕಡೆ ಬಿಜೆಪಿ ಡಿಕೆಶಿ ಹಲ್ಲೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದಿನ ವಿಡಿಯೋಗಳನ್ನು ಹಾಕುವ ಮೂಲಕ ಕಾಂಗ್ರೆಸನ್ನು ಬಿಜೆಪಿ ಕೆಣಕುತ್ತಿರಬೇಕಾದರೆ, ಇತ್ತ ಕಡೆ ಕಾಂಗ್ರೆಸ್ ಕೂಡ ಬಿಜೆಪಿ ನಾಯಕರು ಹಲ್ಲೆ ಮಾಡುವ ಹಳೇ ವಿಡಿಯೋಗಳನ್ನು ಹಾಕುವ ಮೂಲಕ ಬಿಜೆಪಿಗೆ ಟಾಂಗ್ ನೀಡುತ್ತಿದೆ.










