
ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣಾ ಟಿಕೆಟ್ ಮಿಸ್ ಆಗಿದ್ರಿಂದ, ಬಿಜೆಪಿಗೆ ಸಡ್ಡು ಹೊಡೆದಿರುವ ಸಿ.ಪಿ ಯೋಗೇಶ್ವರ್, ಹುಬ್ಬಳ್ಳಿಗೆ ತೆರಳಿ, ವಿಧಾನ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಟಿಕೆಟ್‌ಗಾಗಿ ಬಾರಿ ಪೈಪೋಟಿ ನಡೆಸಿದ್ದ ಸಿ.ಪಿ ಯೋಗೇಶ್ವರ್, ಬಿಜೆಪಿಯಿಂದ ಟಿಕೆಟ್ ಸಿಗಲ್ಲ ಅನ್ನೋದು ಕನ್ಫರ್ಮ್ ಆಗುತ್ತಿದ್ದಂತೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಮುಂದಾಗಿದ್ದಾರೆ ಎನ್ನಲಾಗ್ತಿದೆ. ಹುಬ್ಬಳ್ಳಿಯ ಪಿಂಟೊ ರಸ್ತೆಯಲ್ಲಿರುವ ಹೊರಟ್ಟಿ ಮನೆಗೆ ಆಗಮಿಸಿ ರಾಜೀನಾಮೆ ಸಲ್ಲಿಸಿದ್ದಾರೆ. ಯೋಗೇಶ್ವರ್ ರಾಜೀನಾಮೆಯಿಂದ ಉಪಚುನಾವಣಾ ಕಣ ಕುತೂಹಲ ಮೂಡಿಸಿದೆ. ಕಾಂಗ್ರೆಸ್ ಸೇರುತ್ತಾರೋ ಅಥವಾ ಪಕ್ಷೇತರ ಅಭ್ಯರ್ಥಿಯಾಗುತ್ತಾರೋ ಅನ್ನೋ ಕುತೂಹಲ ಹೆಚ್ಚಾಗಿದೆ.
ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಲುವ ಮೂಲಕ ಬಿಜೆಪಿ ತೊರೆಯುವ ಮುನ್ಸೂಚನೆ ನೀಡಿರುವ ಸಿ ಪಿ ಯೋಗೇಶ್ವರ್‌ಗೆ ಗಾಳ ಹಾಕಲು ಕಾಂಗ್ರೆಸ್ ಮುಂದಾಗಿದೆ. ಸಿ.ಪಿ ಯೋಗೇಶ್ವರ್ ಅವರನ್ನು ಕಾಂಗ್ರೆಸ್‌ಗೆ ಕರೆ ತರುವ ಕಸರತ್ತು ಈಗಾಗಲೇ ಶುರುವಾಗಿದ್ದು, ಮಾಗಡಿ ಶಾಸಕ ಬಾಲಕೃಷ್ಣ ಹಾಗೂ ಮದ್ದೂರು ಶಾಸಕ ಕದಲೂರು ಉದಯ್ ಮೂಲಕ ಮಾತುಕತೆ ಮುಂದುವರಿದಿದೆ. ಯೋಗೇಶ್ವರ್ ಒಪ್ಪಿದರೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಚನ್ನಪಟ್ಟಣ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗಿದೆ. ಯೋಗೇಶ್ವರ್ ಕಾಂಗ್ರೆಸ್ ಸೇರಲು ಸಿಎಂ ಸಿದ್ದರಾಮಯ್ಯ ಹಾಗು ಡಿ.ಕೆ ಶಿವಕುಮಾರ್ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ. ಚನ್ನಪಟ್ಟಣ ಗೆಲುವಿಗಾಗಿ ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೂ ಬೆಂಬಲ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾಗಿದೆ.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಗರದಲ್ಲಿ ಈ ಬಗ್ಗೆ ಮಾತನಾಡಿರುವ ಡಿಸಿಎಂ ಡಿ.ಕೆ ಶಿವಕುಮಾರ್, ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸಂಪರ್ಕದಲ್ಲಿ ಇದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ನನ್ನ ಜೊತೆ ಯಾರೂ ಸಂಪರ್ಕದಲ್ಲಿ ಇಲ್ಲ, ಕುಮಾರಸ್ವಾಮಿಗೆ ಏನೇನೋ ಮಾಹಿತಿ ಬರುತ್ತಿರಬಹುದು. ಜಾತ್ಯತೀತ ಜನತಾ ದಳದವರು, ಬೇರೆ ಬೇರೆ ಪಾರ್ಟಿ ಸಂಪರ್ಕ ಇರಬಹುದು. ನನ್ನ ಜೊತೆಗೆ ಯೋಗೇಶ್ವರ್ ಸಂಪರ್ಕದಲ್ಲಿ ಇಲ್ಲ. ಬೈ ಎಲಕ್ಷನ್ ಗೆಲ್ಲಲು ಅಸೆಂಬ್ಲಿಗಿಂತ ಹೆಚ್ಚಿನ ಕಾನ್ಫಿಡೆನ್ಸ್‌ನಲ್ಲಿ ಇದ್ದಿವಿ ಎಂದಿದ್ದಾರೆ. ಆದರೆ ಚನ್ನಪಟ್ಟಣ ಗೆಲ್ಲಲು ಸುರೇಶ್ ಅಭ್ಯರ್ಥಿ ಮಾಡಲು ಮುಂದಾಗಿದ್ದ ಡಿ.ಕೆ ಶಿವಕುಮಾರ್, ಇದೀಗ ಯೋಗೇಶ್ವರ್ ಕಡೆಗೆ ಗಮನ ನೆಟ್ಟಿದ್ದಾರೆ ಎನ್ನಲಾಗ್ತಿದೆ.

ಚನ್ನಪಟ್ಟಣ ಟಿಕೆಟ್ ಸಿಗದಿದ್ದಕ್ಕೆ ಸಿಡಿದೆದ್ದ ಸೈನಿಕನನ್ನು ಸಮಾಧಾನ ಮಾಡಲು ಬಿಜೆಪಿ ಮುಂದಾಗಿಲ್ಲ. ಬಿಜೆಪಿ MLC ಸ್ಥಾನಕ್ಕೆ ಯೋಗೇಶ್ವರ್ ರಾಜೀನಾಮೆ ನೀಡಲು ಬಸವರಾಜ ಹೊರಟ್ಟಿ ನಿವಾಸಕ್ಕೆ ತೆರಳಿದರೂ ಯಾರೊಬ್ಬರೂ ಭೇಟಿ ಮಾಡುವ ಪ್ರಯತ್ನ ಮಾಡಿಲ್ಲ. ಅಂದರೆ ಯೋಗೇಶ್ವರ್ ಹೋದರೆ ಹೋಗಲಿ ಎನ್ನುವ ನಿರ್ಧಾರಕ್ಕೆ ಬಂದಿದ್ದು, ರಾಜೀನಾಮೆ ಬಳಿಕ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧೆ ಮಾಡ್ತೇನೆ ಎಂದಿದ್ದಾರೆ. ಕಾಂಗ್ರೆಸ್ ಪಕ್ಷದ ಮೂಲಕ ಚುನಾವಣೆ ಅಖಾಡಕ್ಕೆ ಇಳಿದರೆ ಸಾಕಷ್ಟು ಲಾಭ ಇದೆ ಅನ್ನೋದನ್ನು ಈಗಾಗಲೇ ಯೋಗೇಶ್ವರ್ ಅರಿತಿದ್ದು, ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ಹೊರ ಬೀಳಲಿದೆ ಅನ್ನೋದನ್ನು ಕಾದು ನೋಡ್ಬೇಕು.