ಹಳೆ ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಸ್ ಗಳನ್ನು ಹಿಂಪಡೆಯಲು ರಾಜ್ಯ ಕಾಂಗ್ರೆಸ್ ಸರ್ಕಾರ ನಿರ್ಧಾರ ಮಾಡಿರುವ ಬೆನ್ನಲ್ಲೇ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದ ಈ ನಿರ್ಧಾರದ ವಿರುದ್ಧ ತೀವ್ರ ಕಿಡಿಕಾರಿದ್ದವು. ಕಾಂಗ್ರೆಸ್ ದೇಶ ವಿರೋಧಿ ಶಕ್ತಿಗಳನ್ನು ಪೋಷಿಸುತ್ತಿದೆ, ಈ ಹಂತಕ್ಕೆ ಒಲೈಕೆ ರಾಜಕಾರಣ ತಲುಪಬಾರದು ಎಂದು ವಾಗ್ದಾಳಿ ನಡೆಸಿದ್ದವು.
ಆದ್ರೆ ಈ ನಡೆಯನ್ನು ಸಮರ್ಥಿಸಿಕೊಂಡಿದ್ದ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರ ಈಗ ಮತ್ತೊಂದು ಹೆಜ್ಜೆ ಮುಂದೆ ಇಟ್ಟಂತಿದೆ. ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಸರ್ಕಾರದ ಮುಂದೆ ಪ್ರಸ್ತಾವನೆ ಇಟ್ಟುದ್ದು, ಡಿಜೆ ಹಳ್ಳಿ – ಕೆಜಿ ಹಳ್ಳಿ ಗಲಭೆ ಪ್ರಕರಣಗಳ ಕೇಸ್ ಗಳನ್ನೂ ಹಿಂಪಡೆಯುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಇಡೀ ರಾಜ್ಯ ಮಾತ್ರವಾದಲ್ಲೇ, ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾದ ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆಯ ಆರೋಪಿಗಳನ್ನು ಹಿಂಪಡೆಯುವ ಈ ಪ್ರಸ್ತಾವನೆ ರಾಜ್ಯ ರಾಜಕಾರಣದಲ್ಲಿ ಕಿಚ್ಚು ಹಚ್ಚುವ ಎಲ್ಲಾ ಸಾಧ್ಯತೆಗಳಿದ್ದು, ಒಂದ್ವೇಳೆ ಸರ್ಕಾರ ಈ ಬಗ್ಗೆ ಯೋಚಿಸಲು ಮುಂದಾದ್ರು ಕೂಡ, ಬಿಜೆಪಿ ಕಾಂಗ್ರೆಸ್ ವಿರುದ್ಧ ಮುಗಿಬೀಳೋದು ಶತಸಿದ್ಧ. ಈಗಾಗಲೇ ರಾಜ್ಯ ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣದ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗುತ್ತಿದ್ದು, ಸರ್ಕಾರದ ಮುಂದಿನ ನಡೆ ಕಾದು ನೋಡಬೇಕಿದೆ.