
ಬೆಂಗಳೂರು- ದೀಪಾವಳಿ ಹಬ್ಬದ ಹಿನ್ನೆಲೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಭ್ರಮ ಕಳೆಗಟ್ಟಿದೆ. ಬೆಳಗ್ಗೆಯಿಂದಲೇ ಬೆಂಗಳೂರಿಗರು ಮಾರುಕಟ್ಟೆಯಲ್ಲಿ ಹೂ, ಹಣ್ಣು ಖರೀದಿಯಲ್ಲಿ ನಿರತರಾಗಿದ್ದಾರೆ.
ಬೆಂಗಳೂರಿನ ಹೃದಯ ಭಾಗದಲ್ಲಿರುವ ಕೆ.ಆರ್.ಮಾರುಕಟ್ಟೆಯಲ್ಲಿ ಬೆಳಗ್ಗೆ 4ರಿಂದಲೇ ಖರೀದಿ ಭರಾಟೆ ಜೋರಾಗಿದೆ.. ಸಾವಿರಾರು ಜನರು ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾದ ಹೂ, ಹಣ್ಣು, ಖರೀದಿಗೆ ಮುಗಿಬಿದ್ದಿದ್ದಾರೆ. ಮಾರುಕಟ್ಟೆಯಲ್ಲಿ ಖರೀದಿಗೆ ಬಂದ ಜನರಿಗೆ ಒಂದು ಕಡೆ ಮಳೆ, ಮತ್ತೊಂದು ಕಡೆ ಬೆಲೆ ಏರಿಕೆ ಬಿಸಿ ಇದ್ದರೂ ಖರೀದಿ ಮಾಡುವ ಉತ್ಸಾಹ ಕಡಿಮೆಯಾಗಿಲ. ಇನ್ನು ಬೇರೆ ಬೇರೆ ಜಿಲ್ಲೆಗಳಲ್ಲಿ ಮಳೆ ಕೂಡ ಬರುತ್ತಿರುವುದರಿಂದ ಹೂ, ತರಕಾರಿ ಇಳುವರಿ ಕಡಿಮೆಯಾಗಿ ಬೆಲೆಯೂ ಹೆಚ್ಚಾಗಿದೆ.
ಹಬ್ಬದ ಕಾರಣ ಹೂವಿನ ದರ ಏರಿಕೆ ಕಂಡಿದ್ದು, ಪ್ರತಿ ಕೆ.ಜಿ. ಕನಕಾಂಬರ ದರ 1,600 ರೂ. ಮಲ್ಲಿಗೆ 1,500 ರೂ. ಚೆಂಡು, ಸೇವಂತಿಗೆ 200 ರೂ. ಗುಲಾಬಿ 240 ರೂ. ಮತ್ತು ಸುಗಂಧರಾಜ 120 ರೂ.ವರೆಗೂ ಇದೆ.
ಕೆ.ಆರ್.ಮಾರುಕಟ್ಟೆಗೆ ಇಂದಿನಿಂದಲೇ ಖರೀದಿಗೆ ಬಂದಿರುವ ಜನರಿಂದ ಮಾರುಕಟ್ಟೆ ಸುತ್ತಮುತ್ತ ಟ್ರಾಫಿಕ್ ಜಾಮ್ ಆಗಿದೆ. ಕೆ.ಆರ್.ಮಾರುಕಟ್ಟೆ ಫ್ಲೈ ಓವರ್ ಮೇಲೂ ಜನರು ತಮ್ಮ ವಾಹನಗಳನ್ನ ನಿಲ್ಲಿಸಿರುವುದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ. ಸ್ಥಳೀಯ ಸಂಚಾರ ಠಾಣಾ ಪೊಲೀಸರು ಟ್ರಾಫಿಕ್ ಜಾಮ್ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.

ಪ್ರಮುಖವಾಗಿ ದೀಪಾವಳಿಗೆ ದೀಪಗಳ ಖರೀದಿ ಹೆಚ್ಚಾಗಿದೆ.. ಮನೆ, ಕಚೇರಿಗಳಲ್ಲಿ ದೀಪಗಳನ್ನ ಬೆಳಗಿಸಿ ಸಂಭ್ರಮ ಪಡಲಿದ್ದಾರೆ. ಹೀಗಾಗಿ ದೀಪಗಳ ಬೆಲೆಯೂ ಕೊಂಚ ಹೆಚ್ಚಾಗಿದೆ. ಮಾರುಕಟ್ಟೆಗಳಲ್ಲಿ ವಿವಿಧ ಆಕಾರದ ದೀಪವೊಂದರ ಬೆಲೆ 5ರಿಂದ 200 ರೂ.ವರೆಗೂ ಇದೆ.

ಕೇವಲ ಕೆ.ಆರ್. ಮಾರುಕಟ್ಟೆ ಅಲ್ಲದೇ ಯಶವಂತಪುರ, ಬಸವನಗುಡಿ, ಮಲ್ಲೇಶ್ವರ ಮಾರುಕಟ್ಟೆ ಪ್ರದೇಶಗಳು ಜನರು ಖರೀದಿಗೆ ಮುಗಿಬಿದ್ದಿದ್ದಾರೆ. ಇನ್ನು ಹೂವು , ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವ ಚಿಕ್ಕ ಮಾರುಕಟ್ಟೆಗಳು ತಲೆಎತ್ತಿವೆ.
