ಮೂಲ : ನಂದಿನಿ ಸುಂದರ್ ದ ಹಿಂದೂ 5-7-2021
ಅನುವಾದ : ನಾ ದಿವಾಕರ
2005ರಲ್ಲಿ ಮಾವೋವಾದಿಗಳ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಅಂದಿನ ಕೇಂದ್ರ ಯುಪಿಎ ಸರ್ಕಾರ ಮತ್ತು ಛತ್ತಿಸ್ಘಡ ಸರ್ಕಾರ ರೂಪಿಸಿದ್ದ ಸಲ್ವಾ ಜುಡುಂ ಎಂಬ ಶಾಂತಿರಕ್ಷಕ ಪಡೆಗಳು ಅಸಾಂವಿಧಾನಿಕ ಎಂದು ನಿರ್ಧರಿಸಿ, ನ್ಯಾಯಮೂರ್ತಿ ಬಿ ಸುದರ್ಶನರೆಡ್ಡಿ ಮತ್ತು ನ್ಯಾ ಎಸ್ ಎಸ್ ನಿಜ್ಜರ್ ಅವರ ಸುಪ್ರೀಂಕೋರ್ಟ್ ಪೀಠ, ಈ ಸಲ್ವಾಜುಡುಂ ಪಡೆಗಳನ್ನು ನಿಷೇಧಿಸುವಂತೆ 2011ರಲ್ಲಿ ಚಾರಿತ್ರಿಕ ತೀರ್ಪು ನೀಡಿತ್ತು. ಶರಣಾಗತರಾದ ಮಾವೋವಾದಿಗಳನ್ನು ಮತ್ತು ಯಾವುದೇ ತರಬೇತಿ ಇಲ್ಲದ ಗ್ರಾಮೀಣ ಯುವಕರನ್ನು ವಿಶೇಷ ಪೊಲೀಸ್ ಅಧಿಕಾರಿಗಳೆಂದು (ಎಸ್ಪಿಒ) ನೇಮಿಸಿ, ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆಗೆ ಬಳಸಿಕೊಳ್ಳುವುದು ಅಸಾಂವಿಧಾನಿಕ ಕ್ರಮ ಎಂದು ಈ ತೀರ್ಪಿನಲ್ಲಿ ಹೇಳಲಾಗಿತ್ತು. ಆ ವೇಳೆಗಾಗಲೇ ನೇಮಕಗೊಂಡಿದ್ದ ಎಸ್ಪಿಓಗಳನ್ನು ಸಂಚಾರ ನಿರ್ವಹಣೆ ಅಥವಾ ಇನ್ನಿತರ ಸುರಕ್ಷಿತ ಹುದ್ದೆಗಳಲ್ಲಿ ತೊಡಗಿಸುವಂತೆ ಸರ್ವೋಚ್ಚ ನ್ಯಾಯಾಲಯ ಆದೇಶಿಸಿತ್ತು. ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣರಾಗಿದ್ದ ಭದ್ರತಾ ಸಿಬ್ಬಂದಿಯ ವಿರುದ್ಧ ಮೊಕದ್ದಮೆ ದಾಖಲಿಸುವುದು, ಈ ಸಂದರ್ಭದಲ್ಲಿ ಹಿಂಸೆಗೀಡಾಗಿದ್ದ ಗ್ರಾಮೀಣ ಜನತೆಗೆ ಪುನರ್ವಸತಿ ಸೌಲಭ್ಯ ಒದಗಿಸುವುದು ಇವೇ ಮುಂತಾದ ವಿಚಾರಗಳನ್ನು ಈ ತೀರ್ಪಿನಲ್ಲಿ ಪರಿಗಣಿಸಲಾಗಿರಲಿಲ್ಲ. ಈ ಕುರಿತು ವಿಸ್ತಾರ ವರದಿಯನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಲಾಗಿತ್ತು.
ಈ ತೀರ್ಪು ಹೊರಬಿದ್ದು 10 ವರ್ಷಗಳು ಕಳೆದಿದ್ದರೂ ಈವರೆಗೂ ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸಿಲ್ಲ. ರಾಜ್ಯ ಸರ್ಕಾರ ಎಸ್ಪಿಓಗಳ ಪುನರ್ ನಾಮಕರಣ ಮಾಡಿದ್ದು ಜಿಲ್ಲಾ ಮೀಸಲು ಭದ್ರತಾ ಸಿಬ್ಬಂದಿ (ಡಿ ಆರ್ ಜಿ) ಎಂದು ನೇಮಿಸಲಾಗಿದೆ. ಈ ಡಿ ಆರ್ ಜಿ ಸಿಬ್ಬಂದಿಯೊಡನೆ ನಡೆಸಿದ ಮಾತುಕತೆಗಳಿಂದ ಲಭ್ಯವಾಗುವ ಮಾಹಿತಿ ಎಂದರೆ, ಇವರಲ್ಲಿ ಬಹುತೇಕ ಮಂದಿ ಶರಣಾಗತರಾದ ಮಾವೋವಾದಿಗಳೇ ಆಗಿದ್ದು, ಪೊಲೀಸ್ ಇಲಾಖೆಗೆ ಸೇರ್ಪಡೆಯಾದ ಕೂಡಲೇ ಇವರ ಕೈಗೆ ಸ್ವಯಂಚಾಲಿತ ಶಸ್ತ್ರಗಳನ್ನು ನೀಡಲಾಗಿತ್ತು. ಕೆಲವರಿಗೆ ಒಂದರಿಂದ ಮೂರು ತಿಂಗಳ ಅವಧಿಯ ತರಬೇತಿ ನೀಡಲಾಗಿದ್ದರೆ ಇನ್ನು ಅನೇಕರಿಗೆ ಯಾವುದೇ ತರಬೇತಿ ನೀಡಲಾಗಿಲ್ಲ. ತಮ್ಮದೇ ಗ್ರಾಮಗಳ ಮೇಲೆ ಆಕ್ರಮಣ ಮಾಡುತ್ತಿದ್ದ ಈ ಸಿಬ್ಬಂದಿ ಯಾವುದೇ ಕಾರ್ಯಾಚರಣೆಯಲ್ಲಿ ಹೆಚ್ಚಿನ ಪ್ರಮಾಣದ ಸಾವುನೋವು ಅನುಭವಿಸುತ್ತಿದ್ದುದೂ ಹೌದು. ಆದರೆ ಇತರ ಪೊಲೀಸ್ ಸಿಬ್ಬಂದಿಗಿಂತಲೂ ಕಡಿಮೆ ವೇತನವನ್ನು ಇವರಿಗೆ ನೀಡಲಾಗುತ್ತಿತ್ತು. ಮೂಲತಃ ಈ ಕಾರಣಗಳಿಂದಾಗಿಯೇ ಸುಪ್ರೀಂಕೋರ್ಟ್ ಸಲ್ವಾಜುಡುಂ ನಿಷೇಧಿಸುವಂತೆ ಆದೇಶ ನೀಡಿತ್ತು. 2012ರಲ್ಲಿ ಸಲ್ಲಿಸಲಾದ ನ್ಯಾಯಾಂಗ ನಿಂದನೆಯ ಅರ್ಜಿ ಇನ್ನೂ ವಿಚಾರಣೆಗೊಳಪಡಬೇಕಿದೆ. 2018ರ ಡಿಸೆಂಬರ್ನಲ್ಲಿ ನ್ಯಾ. ಮದನ್ ಲೋಕುರ್ ಮತ್ತು ನ್ಯಾ. ದೀಪಕ್ ಗುಪ್ತಾ ನ್ಯಾಯಪೀಠದ ಮುಂದೆ ಇದರ ಅಂತಿಮ ವಿಚಾರಣೆ ಆರಂಭವಾದರೂ ಕೆಲವೇ ದಿನಗಳ ನಂತರ ಇಬ್ಬರೂ ನ್ಯಾಯಾಧೀಶರು ನಿವೃತ್ತರಾಗಿದ್ದರಿಂದ ಮೊಕದ್ದಮೆ ಸ್ಥಗಿತಗೊಂಡಿದೆ.
ಹೊಸ ಸಂಘರ್ಷಗಳು
ಆ ನಂತರದಲ್ಲಿ ಹಲವು ಬೆಳವಣಿಗೆಗಳು ಸಂಭವಿಸಿವೆ. 2005 ರಿಂದ 2007ರ ನಡುವೆ ಸಲ್ವಾ ಜುಡುಂ ಸಕ್ರಿಯವಾಗಿದ್ದ ಅವಧಿಯಲ್ಲಿ ಗ್ರಾಮಸ್ಥರನ್ನು ಬಲವಂತವಾಗಿ ಸರ್ಕಾರದ ಶಿಬಿರಗಳಲ್ಲಿ ಕೂಡಿಹಾಕಲಾಗಿತ್ತು. ಶಿಬಿರಕ್ಕೆ ಬರಲು ನಿರಾಕರಿಸಿದಲ್ಲಿ ಅವರ ಗ್ರಾಮಗಳನ್ನೇ ಸುಟ್ಟುಹಾಕಲಾಗಿತ್ತು. ನೂರಾರು ಗ್ರಾಮಸ್ಥರ ಹತ್ಯೆಯಾಗಿತ್ತು. ಆದರೆ ಈ ಸಾವುಗಳನ್ನು ಎನ್ಕೌಂಟರ್ ಎಂದೂ ಸಹ ದಾಖಲಿಸಲಾಗಿಲ್ಲ. ಅನೇಕ ಗ್ರಾಮಸ್ಥರು ನೆರೆ ರಾಜ್ಯಗಳಿಗೆ ವಲಸೆ ಹೋದರೆ, ಉಳಿದವರು ಪಕ್ಕದ ಅರಣ್ಯಗಳಲ್ಲಿ ನೆಲೆಸಿದರು. ಯಾವುದೇ ಶಸ್ತ್ರಾಸ್ತ್ರಗಳನ್ನು ಹೊಂದಿರದ, ಮಾವೋವಾದಿಗಳ ಬಗ್ಗೆ ಅನುಕಂಪವುಳ್ಳ ಸಂಘದ ಅನೇಕ ಸದಸ್ಯರನ್ನು ಬಂಧಿಸಲಾಗಿತ್ತು. ಅನೇಕರಿಗೆ ಎಸ್ಪಿಓ ಆಗಿ ನೇಮಕಗೊಳ್ಳಲು ಬಲಾತ್ಕಾರ ಹೇರಲಾಗಿತ್ತು.
ಇಂದು ಸಲ್ವಾಜುಡುಂ ಶಿಬಿರಗಳು ಖಾಲಿಯಾಗಿವೆ. ಮಾಜಿ ಎಸ್ಪಿಓಗಳು ಮತ್ತು ಅವರ ಕುಟುಂಬಗಳು ತಮ್ಮ ಮನೆಗಳಲ್ಲಿ ನೆಲೆಸಿವೆ. ಶಿಬಿರಕ್ಕೆ ಹೋಗಿದ್ದ ಗ್ರಾಮಸ್ಥರು ಮತ್ತು ನಿರಾಕರಿಸಿ ಅರಣ್ಯಕ್ಕೆ ತೆರಳಿದ್ದ ಗ್ರಾಮಸ್ಥರು ಈಗ ಒಂದಾಗಿ ಬಾಳುತ್ತಿದ್ದಾರೆ. ಜನರು ತಮ್ಮ ಗ್ರಾಮಗಳಿಗೆ ಹಿಂದಿರುಗಿ, ವ್ಯವಸಾಯದಲ್ಲಿ ತೊಡಗಿದ್ದಾರೆ. ಒಂದು ಹೊಸ ಪೀಳಿಗೆಯೇ ಉಗಮಿಸಿದ್ದು, ಸಿಲ್ಗರ್ ನಲ್ಲಿರುವ ಸಿಆರ್ ಪಿ ಎಫ್ ಶಿಬಿರದ ವಿರುದ್ಧ ಹೊಸ ಸಂಘರ್ಷಗಳು ಆರಂಭವಾಗಿವೆ. ಇಡೀ ಪ್ರದೇಶದಲ್ಲಿ ಎಲ್ಲ ಗ್ರಾಮಗಳಲ್ಲೂ ಜನರು ಶಾಲೆ ಮತ್ತು ಆರೋಗ್ಯ ಕೇಂದ್ರಗಳಿಗಾಗಿ ಹೋರಾಡುತ್ತಿದ್ದಾರೆ. ಆದರೆ ಇದಕ್ಕೆ ಪ್ರತಿಫಲವಾಗಿ ಗ್ರಾಮಗಳು ಪಡೆಯುತ್ತಿರುವುದು ಸಿಆರ್ ಪಿ ಎಫ್ ಯೋಧರ ಶಿಬಿರಗಳನ್ನು. ಐದು ಕಿಲೋಮೀಟರ್ ಗೆ ಒಂದು ಶಿಬಿರವನ್ನು ಸ್ಥಾಪಿಸಲಾಗಿದ್ದು, ಒಮ್ಮೆ ಅರಣ್ಯಗಳಿಂದ ತುಂಬಿದ್ದ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣದ ಕಾರ್ಯ ಸಾಗಿದೆ. 2007ರ ನಂತರ ಜಾರಿಗೊಳಿಸಲ್ಪಟ್ಟ ಸುಪ್ರೀಂಕೋರ್ಟ್ನ ಏಕೈಕ ಆದೇಶ ಎಂದರೆ ಶಾಲಾ ಕಟ್ಟಡಗಳಿಂದ ಭದ್ರತಾ ಸಿಬ್ಬಂದಿ ನಿರ್ಗಮಿಸಿರುವುದು. ಏಕೆಂದರೆ, ಭದ್ರತಾ ಪಡೆಗಳು ಸಾರ್ವಜನಿಕ ಭೂಮಿಯನ್ನು, ಖಾಸಗಿ ಭೂಮಿಯನ್ನು ಆಕ್ರಮಿಸಿದ್ದು, ಈ ಶಿಥಿಲ ಕಟ್ಟಡಗಳು ಸಿಆರ್ ಪಿ ಎಫ್ ಗೆ ಯಾವುದೇ ರೀತಿಯಲ್ಲಿ ಉಪಯುಕ್ತವಾಗಿಲ್ಲ.
ನ್ಯಾಯ ಪಡೆಯಲು ಗ್ರಾಮಸ್ಥರು ಎಲ್ಲ ಸಾಧನಗಳನ್ನೂ ಬಳಸಿ ವಿಫಲರಾಗಿದ್ದಾರೆ. 2011ರಲ್ಲಿ ಭದ್ರತಾ ಪಡೆಗಳ ಆಕ್ರಮಣದಿಂದ ಬೆಂಕಿಗೆ ಆಹುತಿಯಾಗಿದ್ದ ತಾಡಮೆಲ್ಟಾ, ತಿಮಾಪುರಂ ಮತ್ತು ಮೊರ್ಪಲ್ಲಿಯ ಗ್ರಾಮಸ್ಥರು ಸಿಬಿಐ ಮುಂದೆ ಸಾಕ್ಷಿ ಹೇಳಲು ನೂರಾರು ಕಿಲೋಮೀಟರ್ ಪ್ರಯಾಣ ನಡೆಸಿದ್ದಾರೆ. ಗ್ರಾಮಸ್ಥರ ನೋವಿಗೆ ಸ್ಪಂದಿಸಿದ ಸಿಬಿಐ ಕೆಲವು ಎಸ್ಪಿಓಗಳ ವಿರುದ್ಧ ಚಾರ್ಜ್ಷೀಟ್ ಸಲ್ಲಿಸಿದೆ. ವಕೀಲೆ ಸುಧಾ ಭರದ್ವಾಜ್ ಸಲ್ಲಿಸಿದ ಅರ್ಜಿಯೊಂದನ್ನು ಆಧರಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಕೊಂಡಸಾವ್ಲಿ ಗ್ರಾಮದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿರುವುದನ್ನು ಗುರುತಿಸಿ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿರುವುದು ಒಂದು ಅಪರೂಪದ ಸಂಗತಿ. 2012ರ ಜೂನ್ ತಿಂಗಳಲ್ಲಿ ಒಂದು ರಾತ್ರಿ ಸರ್ಕೆಗುಡಾ ಗ್ರಾಮದಲ್ಲಿ 17 ಅಮಾಯಕರನ್ನು ಗುಂಡಿಟ್ಟು ಕೊಲ್ಲಲಾಗಿತ್ತು. ಹತ್ಯೆಗೊಳಗಾದವರ ಪೈಕಿ ಮಕ್ಕಳೂ ಇದ್ದರು. ಈ ಗ್ರಾಮಸ್ಥರು ಧೈರ್ಯದಿಂದ ನ್ಯಾಯಾಂಗ ತನಿಖಾ ಆಯೋಗದ ಮುಂದೆ ಸಾಕ್ಷಿ ಹೇಳಿದ್ದರು. ಸ್ವತಂತ್ರ ತನಿಖೆಗಳ ಮೂಲಕ ರಾಜ್ಯ ಸರ್ಕಾರ ಮತ್ತು ಭದ್ರತಾಪಡೆಗಳನ್ನು ತಪ್ಪಿತಸ್ಥರೆಂದು ಹೇಳಲಾಗಿದ್ದರೂ, ಈ ಯಾವುದೇ ಪ್ರಕರಣಗಳಲ್ಲೂ ತಪ್ಪಿತಸ್ಥರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿಲ್ಲ.
ಸಾರ್ವಜನಿಕ ಹಿತಕ್ಕಾಗಿ ಗ್ರಾಮಸ್ಥರ ಪರ ಸುಪ್ರೀಂಕೋರ್ಟ್ನಲ್ಲಿ ವಾದ ಮಂಡಿಸಿದ ವಕೀಲರಾದ ಟಿ ಆರ್ ಅಧ್ಯಾರುಜಿನ ಮತ್ತು ಅಶೋಕ್ ದೇಸಾಯಿ ಈಗ ಬದುಕಿಲ್ಲ. ನ್ಯಾಯಮೂರ್ತಿ ನಿಜ್ಜರ್ ಸಹ ಮೃತರಾಗಿದ್ದಾರೆ. ವಕೀಲೆ ಸುಧಾ ಭರದ್ವಾಜ್ 2018ರಿಂದಲೂ ವಿವಾದಾಸ್ಪದ ಆರೋಪಗಳ ಮೇಲೆ ಬಂಧನಕ್ಕೊಳಗಾಗಿ ಜೈಲಿನಲ್ಲಿದ್ದಾರೆ. ಇನ್ನುಳಿದ ನಾನು ಮತ್ತು ನನ್ನ ಐವರು ಸಂಗಾತಿಗಳ ಮೇಲೆ ಸುಳ್ಳು ಕೊಲೆ ಮೊಕದ್ದಮೆಯನ್ನು ಹೂಡಲಾಗಿದ್ದು ಆರೋಪಮುಕ್ತರಾಗಿ ಬಂದಿದ್ದೇವೆ. ಅಪರೂಪದ ಸಂಗತಿ ಎಂದರೆ ನಮಗೆ ಮಾನಸಿಕ ಕಿರುಕುಳ ಅನುಭವಿಸಿದ್ದಕ್ಕಾಗಿ, ರಾಷ್ಟ್ರಿಯ ಮಾನವ ಹಕ್ಕು ಆಯೋಗ ಪರಿಹಾರವನ್ನೂ ಕೊಡಿಸಿದೆ. ಸಿಪಿಐನ ಕಾರ್ಯಕರ್ತರಾಗಿದ್ದ ಪೊಡಿಯಮ್ ಪಾಂಡಾ ತಾಡಮೇಟ್ಲಾ ಗ್ರಾಮಸ್ಥರಿಗೆ ಬೆಂಬಲ ಸೂಚಿಸಿದ್ದರಿಂದ ಅವರನ್ನು ಬಂಧಿಸಲಾಗಿದೆ. ಸಾಕಷ್ಟು ಚಿತ್ರಹಿಂಸೆಗೊಳಗಾದ ನಂತರ ಪಾಂಡಾ ಈಗ ಪೊಲೀಸರ ಮಾಹಿತಿದಾರರಾಗಿದ್ದಾರೆ. ಪಾಂಡಾ ಅವರ ಚಿಂತಗುಫಾ ಗ್ರಾಮದ ಸಮಸ್ತ ಜನತೆ ಮತ್ತು ನೆರೆ ಗ್ರಾಮದ ಜನತೆಯೂ ಪಾಂಡಾ ಮತ್ತು ಅವರ ಪತ್ನಿ, ಮಾಜಿ ಸರಪಂಚ್, ಅವರು ಹಿಂದಿರುಗಬೇಕೆಂದು ಬಯಸುತ್ತಿದ್ದರೂ, ಮಾವೋವಾದಿಗಳು ಇವರ ಕುಟುಂಬವನ್ನು ಗ್ರಾಮಕ್ಕೆ ಮರಳಲು ಅವಕಾಶ ನೀಡುತ್ತಿಲ್ಲ.
ಈಡೇರದ ಭರವಸೆಗಳು
2014ರಲ್ಲಿ ಹತ್ತು ವರ್ಷದ ಕಾಂಗ್ರೆಸ್ ಆಡಳಿತವನ್ನು ಕೊನೆಗೊಳಿಸಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿತ್ತು. 2018ರಲ್ಲಿ ಛತ್ತಿಸ್ಘಡದಲ್ಲಿ 15 ವರ್ಷಗಳ ನಂತರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಕಾಂಗ್ರೆಸ್ ಮತ್ತು ಬಿಜೆಪಿ ಜಂಟಿಯಾಗಿ ರೂಪಿಸಿದ್ದ ಹಿಂಸಾತ್ಮಕ ಚಳುವಳಿಯ ರೂವಾರಿ, ಆದಿವಾಸಿಗಳ ಪ್ರತಿನಿಧಿ ಮಹೇಂದ್ರ ಕರ್ಮಾ 2013ರಲ್ಲಿ ಮಾವೋವಾದಿಗಿಂದ ಹತ್ಯೆಗೀಡಾಗಿದ್ದರು. ಈಗ ದಿಮ್ರಪಾಲ್ನಲ್ಲಿರುವ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ಬಸ್ತಾರ್ನ ಐಜಿಪಿ, ಎಸ್ ಆರ್ ಪಿ ಕಲ್ಲೂರಿಯ ವಿರುದ್ಧ ಮಾನವ ಹಕ್ಕು ಉಲ್ಲಂಘನೆಯ ಆರೋಪಗಳು ಹೇರಳವಾಗಿವೆ. ತಾಡಮೇಟ್ಲಾ ಗ್ರಾಮವನ್ನು ಸುಟ್ಟುಹಾಕಿದ ಘಟನೆಯಲ್ಲಿ ಕಲ್ಲೂರಿಯನ್ನು ಆರೋಪಿ ಎಂದು ಆಂತರಿಕ ತನಿಖೆಯಲ್ಲಿ ದಾಖಲಿಸಲಾಗಿದ್ದರೂ, ಈಗ ಬಸ್ತಾರ್ನಿಂದ ವರ್ಗಾವಣೆಯಾಗಿರುವ ಈ ಅಧಿಕಾರಿಯ ವಿರುದ್ಧ ಯಾವುದೇ ಮೊಕದ್ದಮೆ ದಾಖಲಿಸಲಾಗಿಲ್ಲ.
2018ರ ಚುನಾವಣೆಗಳ ಸಂದರ್ಭದಲ್ಲಿ, ಶಂಕಿತ ಮಾವೋವಾದಿಗಳೆಂದು ಪೊಲೀಸರಿಂದ ಬಂಧನಕ್ಕೊಳಗಾಗಿರುವ, ದೀರ್ಘಕಾಲದ ಸೆರೆವಾಸ ಅನುಭವಿಸಿ ನಂತರ ಬಿಡುಗಡೆಯಾಗಿರುವ ಸಾವಿರಾರು ಅಮಾಯಕ ಗ್ರಾಮಸ್ಥರಿಗೆ ನ್ಯಾಯ ದೊರಕಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕಾಂಗ್ರೆಸ್ ಪಕ್ಷ ಭರವಸೆ ನೀಡಿತ್ತು. ತಮ್ಮ ಕುಟುಂಬದವರನ್ನು ಭೇಟಿ ಮಾಡುವುದಕ್ಕೂ ಶಕ್ತಿಯಿಲ್ಲದೆ, ವಕೀಲರಿಗೆ ನೀಡಲು ಹಣವೂ ಇಲ್ಲದೆ ಪರದಾಡುತ್ತಿರುವ ಈ ಅಮಾಯಕ ಜನರಿಗೆ ಕೆಲವು ಮಾನವ ಹಕ್ಕು ಸಂಘಟನೆಗಳು ನೆರವಿಗೆ ಧಾವಿಸಿವೆ. ಅಸಂಖ್ಯಾತ ಜನರನ್ನು ಬಂಧಿಸಲಾಗಿದೆ. ಆದಾಗ್ಯೂ, ಕೋವಿದ್ 19 ಸಾಂಕ್ರಾ,ಮಿಕದ ಸಂದರ್ಭದಲ್ಲೂ ಸಹ, ಈ ಬಂಧಿತರನ್ನು ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಇನ್ನೂ ಹೆಚ್ಚಿನ ಭದ್ರತಾ ಶಿಬಿರಗಳನ್ನು ಸ್ಥಾಪಿಸುವಲ್ಲಿ, ಹೆಚ್ಚು ಜನರನ್ನು ಬಂಧಿಸುವಲ್ಲಿ ಸರ್ಕಾರ ಹೆಚ್ಚಿನ ಬದ್ಧತೆ ತೋರಿದೆ.
ಮಾವೋವಾದಿಗಳು ಮತ್ತು ಯೋಧರ ನಡುವಿನ ಗುಂಡಿನ ಕಾಳಗ ಸುದ್ದಿ ಮಾಡುತ್ತಲೇ ಇರುತ್ತದೆ. ಆದರೆ ನ್ಯಾಯವ್ಯವಸ್ಥೆಯಿಂದ ಹೊರಗೆ ನಡೆಯುವ ಗ್ರಾಮಸ್ಥರ ಮತ್ತು ಮಾವೋವಾದಿಗಳ ಹತ್ಯೆಗಳು, ಶಂಕಿತ ಪೊಲೀಸ್ ಮಾಹಿತಿದಾರರು ಮಾವೋವಾದಿಗಳಿಂದ ಹತ್ಯೆಗೊಳಗಾಗುವುದು ಇವೆಲ್ಲವೂ ಸದ್ದಿಲ್ಲದೆ ನಡೆಯುತ್ತಲೇ ಇದ್ದು, ಸಾರ್ವಜನಿಕ ಸುದ್ದಿಯಾಗುತ್ತಲೇ ಇಲ್ಲ. ಒಂದು ಅಂದಾಜಿನ ಪ್ರಕಾರ 2015 ರಿಂದ 2021ರ ಅವಧಿಯಲ್ಲಿ 187 ಜನರು ನಕಲಿ ಎನ್ಕೌಂಟರ್ ಗೆ ಬಲಿಯಾಗಿದ್ದಾರೆ ಎನ್ನಲಾಗಿದೆ. ಪತ್ರಕರ್ತರಿಗೆ ಭದ್ರತೆ ನೀಡುವುದಾಗಿ ಕಾಂಗ್ರೆಸ್ ಪಕ್ಷ ನೀಡಿದ್ದ ಭರವಸೆಯೂ ಹುಸಿಯಾಗಿದೆ. ಛತ್ತಿಸ್ಘಡ್ ಉಳಿಸಿ ಆಂದೋಲನ ಮತ್ತು ಸಿಪಿಐ ಪಕ್ಷದ ಸದಸ್ಯರು ಸಿಲ್ಗರ್ ಮತ್ತು ಸರ್ಕೆಗುಡಾ ಗ್ರಾಮಗಳನ್ನು ತಲುಪುವುದೂ ಸಹ ಕಷ್ಟವಾಗುತ್ತಿದೆ. ಇದು ಬಿಜೆಪಿಯ ತಂತ್ರಗಾರಿಕೆ ಇನ್ನೂ ಮುಂದುವರೆಯುತ್ತಿರುವುದರ ಸಂಕೇತವಾಗಿ ಕಾಣುತ್ತದೆ. ಸರ್ಕೆಗುಡಾ ಹತ್ಯಾಕಾಂಡದಲ್ಲಿ ಮಡಿದವರಿಗೆ ವಾರ್ಷಿಕೋತ್ಸವದಂದು ಶ್ರದ್ಧಾಂಜಲಿ ಸಲ್ಲಿಸಲು ಕೋವಿದ್ 19 ನೆಪದಲ್ಲಿ ಅನುಮತಿ ನಿರಾಕರಿಸಿದ ಜಿಲ್ಲಾಡಳಿತ, ಮರುದಿನವೇ ಕಾಂಗ್ರೆಸ್ ಶಾಸಕ ಕವಾಸಿ ಲಕ್ಮಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾವಿರಾರು ಜನರು ನೆರೆಯಲು ಅವಕಾಶ ನೀಡಿದೆ.
ಎರಡೂ ಬಣಗಳು ಶಾಂತಿ ಮಾತುಕತೆಗಳ ಬಗ್ಗೆ ಗಂಭೀರ ಕ್ರಮ ಕೈಗೊಳ್ಳದೆ ಹೋದರೆ ಇನ್ನೂ ಹತ್ತು ವರ್ಷಗಳ ಕಾಲ ಇದೇ ಪರಿಸ್ಥಿತಿ ಮುಂದುವರೆಯುತ್ತದೆ. ಆ ವೇಳೆಗೆ ಸುಪ್ರೀಂಕೋರ್ಟ್ನ ಚಾರಿತ್ರಿಕ ತೀರ್ಪು ತನ್ನ ಅರ್ಥವನ್ನೇ ಕಳೆದುಕೊಂಡಿರುತ್ತದೆ. ಕಾನೂನುಬದ್ಧ ಆಡಳಿತ ಅಥವಾ ನ್ಯಾಯದ ಪರಿಕಲ್ಪನೆಗೆ ಈ ಭರತ ಭೂಮಿಯಲ್ಲಿ ಸ್ಥಾನ ಇದೆಯೇ ಎಂದು ಯೋಚಿಸಬೇಕಿದೆ.
(ನಂದಿನಿ ಸುಂದರ್, ಸಮಾಜಶಾಸ್ತ್ರ ಪ್ರೊಫೆಸರ್, ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್, ಸಲ್ವಾ ಜುಡುಂ ಮೊಕದ್ದಮೆಯ ಅರ್ಜಿದಾರರಲ್ಲಿ ಒಬ್ಬರು).