ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಅಳೆದು-ತೂಗಿ ಪ್ರದೇಶವಾರು ಹಾಗೂ ಸಮುದಾಯವಾರು ಖಾತೆಗಳನ್ನ ಹಂಚಿಕೆ ಮಾಡಿದ್ದಾರೆ. ಆದ್ರೆ ಹಲವು ಹಿರಿಯ ನಾಯಕರನ್ನ ಸಂಪುಟದಿಂದ ಕೈ ಬಿಟ್ಟಿದ್ದಾರೆ. ಇದ್ರಿಂದ ಖಾತೆ ವಂಚಿತರು ಅಸಮಾಧಾನದ ಕಟ್ಟೆಯೊಡೆದಿದೆ. ರಾಜ್ಯ ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯದ ಹೊಗೆ ಹೊತ್ತಿ ಉರಿಯುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಈ ವಿಷಯದಲ್ಲಿ ಯಾರೂ ಕೂಡ ಬಹಿರಂವಾಗಿ ಹೇಳಿಕೆ ನೀಡಲು ಧೈರ್ಯ ಮಾಡಿಲ್ಲ.
ಬಿಜೆಪಿಗೆ ಗುಡ್ ಬೈ ಹೇಳಿದ್ದ ಶೆಟ್ಟರ್ ಮತ್ತು ಸವದಿಗೆ ಸಚಿವ ಸ್ಥಾನ ಇಲ್ಲ..!


ಬಿಜೆಪಿ ವಿರುದ್ಧ ಬಂಡಾಯದ ಬಾವುಟ ಹಾರಿಸಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಇಬ್ಬರಿಗೂ ಸಂಪುಟ ಸ್ಥಾನ ಸಿಕ್ಕಿಲ್ಲ. ಸವದಿ ಅವರಿಗೆ ನಂತರದ ಹಂತಗಳಲ್ಲಿ ಕ್ಯಾಬಿನೆಟ್ ಹುದ್ದೆಗಳ ಹಂಚಿಕೆಯ ಭರವಸೆ ನೀಡಲಾಗಿದ್ದು, ಜಗದೀಶ್ ಶೆಟ್ಟರ್ ಅವರಿಗೆ ಎಂಎಲ್ಸಿ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಹಿರಿಯ ನಾಯಕ ರುದ್ರಪ್ಪ ಲಮಾಣಿ ಅವರನ್ನೂ ಸಂಪುಟಕ್ಕೆ ಸೇರಿಸಿಕೊಂಡಿಲ್ಲ. ಬಂಜಾರ ಸಮುದಾಯದ ಮುಖಂಡ ರುದ್ರಪ್ಪ ಲಮಾಣಿ ಹೆಸರು ನಿನ್ನೆ ರಾತ್ರಿಯವರೆಗೂ ಪಟ್ಟಿಯಲ್ಲಿತ್ತು, ಆದರೆ ಇಂದು ಅವರ ಹೆಸರು ಪಟ್ಟಿಯಲ್ಲಿ ಇಲ್ಲ. ಶೇ,75 ರಷ್ಟು ಜನರು ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ನಮ್ಮ ಸಮುದಾಯದಿಂದ ಕನಿಷ್ಠ ಒಬ್ಬ ನಾಯಕನಾದರೂ ಇರಬೇಕು ಎಂದು ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಂಎಲ್‌ಸಿ ಮತ್ತು ಪರಿಷತ್ತಿನ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಬಿ.ಕೆ.ಹರಿಪ್ರಸಾದ್ ರಾಜೀನಾಮೆ ನೀಡಲು ಚಿಂತನೆ..!
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುಟುಂಬದ ನಿಷ್ಠಾವಂತ ವ್ಯಕ್ತಿ ಬಿ.ಕೆ.ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ಕೈ ತಪ್ಪಿರುವುದಕ್ಕೆ ಎಂಎಲ್‌ಸಿ ಮತ್ತು ಪರಿಷತ್ತಿನ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಲು ಚಿಂತನೆ ನಡೆಸಿದ್ದಾರೆ. ಅದರ ಜೊತೆಗೆ ಹಿರಿಯ ಕಾಂಗ್ರೆಸ್ ಮುಖಂಡ ಆರ್.ವಿ.ದೇಶಪಾಂಡೆ ಅವರನ್ನು ಸಂಪುಟದಿಂದ ಹೊರಹಾಕಲಾಗಿದೆ, ಇವರು ವಿಧಾನಸಭಾಧ್ಯಕ್ಷ ಸ್ಥಾನವನ್ನು ಸ್ವೀಕರಿಸಲು ನಿರಾಕರಿಸಿದ್ದರು. ಅತ್ಯಧಿಕ ಸಂಪನ್ಮೂಲ ಹೊಂದಿರುವ ಆರ್.ವಿ.ದೇಶಪಾಂಡೆ ಕಷ್ಟದ ಸಮಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಹಾಯ ಮಾಡಲಿಲ್ಲ ಎಂದು ರಾಜ್ಯ ಕಾಂಗ್ರೆಸ್ ಘಟಕವು ಆರೋಪಿಸಿದೆ. ಇನ್ನು ಜೆಡಿಎಸ್ ವಿರುದ್ಧ ಬಂಡಾಯದ ಬಾವುಟ ಹಾರಿಸಿ ಕಾಂಗ್ರೆಸ್ ಸೇರಿದ್ದ ಅರಿಸೀಕೆರೆ ಶಾಸಕ ಶಿವಲಿಂಗೇಗೌಡ ಅವರಿಗೂ ಸಚಿವ ಸ್ಥಾನ ದೊರೆತಿಲ್ಲ. ಮತ್ತೊಬ್ಬ ಹಿರಿಯ ರಾಜಕಾರಣಿ ಹಾಗೂ ಶಿರಾ ಶಾಸಕ ಟಿ.ಬಿ.ಜಯಚಂದ್ರ, ಧಾರವಾಡ ಗ್ರಾಮಾಂತರ ಕ್ಷೇತ್ರಕ್ಕೆ ಬಾರದೆ ಗೆದ್ದಿರುವ ವಿನಯ್ ಕುಲಕರ್ಣಿ ಅವರೂ ಅತೃಪ್ತರಾಗಿದ್ದಾರೆ. ವಿನಯ್ ಕುಲಕರ್ಣಿ ಬಿಜೆಪಿ ಕಾರ್ಯಕರ್ತನ ಕೊಲೆ ಪ್ರಕರಣದ ಆರೋಪಿಯಾಗಿದ್ದು, ಈತ ಸಿಎಂ ಸಿದ್ದರಾಮಯ್ಯನವರ ನೀಲಿ ಕಣ್ಣಿನ ಹುಡುಗ ಎಂದೇ ಬಿಂಬಿತರಾಗಿದ್ದಾರೆ.

ಇನ್ನು ಖಾತೆ ವಂಚಿತರ ಅಸಮಾಧನ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಸಚಿವ ಸಂಪುಟ ವಿಸ್ತರಣೆಯಿಂದ ಅಸಮಧಾನವಿದೆ ಎಂದು ಯಾರಾದರೂ ನಾಯಕರು ತಮ್ಮೊಂದಿಗೆ ವೈಯಕ್ತಿಕವಾಗಿ ಮಾತನಾಡಿದ್ದಾರೆಯೇ? ಅಂತಹ ಯಾವುದೇ ಬೆಳವಣಿಗೆಗಳು ನಡೆಯುತ್ತಿಲ್ಲ ಎಂದು ಹೇಳುವ ಮೂಲಕ ನಾವು ಹೇಳಿದ್ದ ಫೈನಲ್ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ.