ಹೊಸ ಅಧ್ಯಯನವೊಂದು ರಾತ್ರಿಯ ನಿದ್ರೆಯ ಸಮಯದ ಅರೆಸುಪ್ತಾವಸ್ಥೆ ಮತ್ತು ಹೃದಯ ಹಾಗೂ ರಕ್ತನಾಳಗಳ ಕಾಯಿಲೆಗಳಿಂದ ಸಾಯುವ ಅಪಾಯದ ನಡುವಿನ ಸ್ಪಷ್ಟ ಸಂಬಂಧವನ್ನು ತೋರಿಸಿದೆ. ವಿಶೇಷವಾಗಿ ಮಹಿಳೆಯರ ಆರೋಗ್ಯದ ಮೇಲೆ ಈ ಅರೆ ಸುಪ್ತಾವಸ್ಥೆ ಬೀರುವ ಪರಿಣಾಮಗಳ ಬಗ್ಗೆ ಈ ಅಧ್ಯಯನ ಬೆಳಕು ಚೆಲ್ಲಿದೆ. ಅಧ್ಯಯನದ ಆವಿಷ್ಕಾರಗಳನ್ನು ‘ಯುರೋಪಿಯನ್ ಹಾರ್ಟ್ ಜರ್ನಲ್’ನಲ್ಲಿ ಪ್ರಕಟಿಸಲಾಗಿದೆ.
8001 ಪುರುಷರು ಮತ್ತು ಮಹಿಳೆಯರನ್ನೊಳಗೊಂಡ ಈ ಅಧ್ಯಯನವು ಅರೆಸುಪ್ತಾವಸ್ಥೆಯನ್ನು ದೀರ್ಘಕಾಲದವರೆಗೆ ಅನುಭವಿಸುವ ವಯಸ್ಕ ಮಹಿಳೆಯರು ಹೆಚ್ಚಾಗಿ ಹೃದಯರಕ್ತನಾಳದ ಕಾಯಿಲೆಯಿಂದ ಸಾಯುವ ಅಪಾಯವನ್ನು ಎದುರಿಸುತ್ತಾರೆ ಎಂದಿದೆ. ಸ್ತ್ರೀಯರ ಜನಸಂಖ್ಯೆಗೆ ಹೋಲಿಸಿದರೆ ಎರಡು ಪಟ್ಟು ಹೆಚ್ಚು ಅಪಾಯಕಾರಿ ಇದು ಎಂದು ಅಧ್ಯಯನ ಅಭಿಪ್ರಾಯ ಪಟ್ಟಿದೆ.
ಪುರುಷರಲ್ಲಿ ಈ ಸಂಖ್ಯೆಯು ಇಷ್ಟು ಸ್ಪಷ್ಟವಾಗಿಲ್ಲ ಮತ್ತು ಪುರುಷ ಜನಸಂಖ್ಯೆಗೆ ಹೋಲಿಸಿದರೆ ಅವರ ಹೃದಯ ರಕ್ತನಾಳ ಕಾಯಿಲೆಯಿಂದ ಸಾಯುವ ಅಪಾಯವು ಕೇವಲ ಕಾಲು ಭಾಗದಷ್ಟು ಮಾತ್ರ ಎನ್ನುತ್ತದೆ.
ಅರೆ ಸುಪ್ತಾವಸ್ಥೆಯು ನಿದ್ರೆಯ ಒಂದು ಸಾಮಾನ್ಯ ಭಾಗ. ಇದು ಶಬ್ದ ಅಥವಾ ಉಸಿರಾಟದ ಅಡಚಣೆಯಂಥಹ ಅಪಾಯಕಾರಿ ಸಂದರ್ಭಗಳಿಗೆ ಪ್ರತಿಕ್ರಿಯಿಸುವ ದೇಹದ ಒಂದು ವಿಶಿಷ್ಟ ಸಾಮರ್ಥ್ಯವಾಗಿದೆ. ನೋಬಿ, ಅಂಗ ಚಲನೆಗಳು, ಆಘಾತ, ತಾಪಮಾನ ಮತ್ತು ಬೆಳಕಿನಂತಹ ಪ್ರಚೋದನೆಗಳಿಗೆ ದೇಹವು ಅರೆ ನಿದ್ರೆಯಲ್ಲಿ ಪ್ರತಿಕ್ರಿಯಿಸುವುದೂ ಇದೇ ಸಾಮರ್ಥ್ಯದ ಭಾಗವಾಗಿ.
ಈ ಹಿಂದಿನ ಸಂಶೋಧನೆಗಳು ನಿದ್ರೆಯ ಅವಧಿಯು ತುಂಬಾ ಚಿಕ್ಕದಾದಾಗ ಅಥವಾ ತುಂಬಾ ಉದ್ದವಾದಾಗ ಅದು ಹೃದಯರಕ್ತನಾಳ ಅಥವಾ ಇತರ ಕಾರಣಗಳಿಂದಾಗಿ ಸಾವಿನ ಅಪಾಯ ಹೆಚ್ಚು ಎಂದು ಸಾಬೀತು ಪಡಿಸಿದ್ದವು. ಹೀಗಿದ್ದೂ ರಾತ್ರಿ ನಿದ್ರೆಯ ಸಮಯದಲ್ಲಿನ ಪ್ರಚೋದನೆಗಳು (ಪ್ರಚೋದನೆಗಳ ಸಂಖ್ಯೆ ಮತ್ತು ಅವುಗಳ ಅವಧಿಯ ಸಂಯೋಜನೆ) ಮತ್ತು ಸಾವಿನ ಸಂಭವನೀಯತೆಯ ನಡುವೆ ಸಂಬಂಧವಿದೆಯೇ ಎಂಬುವುದು ಸ್ಪಷ್ಟವಾಗಿಲ್ಲ.
ಈ ಸಂಶೋಧನೆಗಳು ಕೇವಲ ಹಿರಿಯ ನಾಗರಿಕರನ್ನು ಮತ್ತು ಬಿಳಿಯರನ್ನು ಮಾತ್ರ ಒಳಗೊಂಡಿದೆ. ಆದುದರರಿಂದ ಇತರ ವರ್ಣ, ಸಮುದಾಯ ಮತ್ತು ಯುವ ಜನಾಂಗಕ್ಕೆ ಈ ಸಂಶೋಧನೆಯ ಫಲಿತಾಂಶಗಳನ್ನು ಅನ್ವಯಿಸಲಾಗದು. ಸಂಶೋಧಕರು ಧ್ಯಾನ, ಯೋಗ ಮತ್ತು ಇತರ ಸಂಗತಿಗಳು ನಿದ್ರೆಯ ಮತ್ತು ಆರೋಗ್ಯದ ಮೇಲೆ ಬೀರಬಹುದಾಗಿರುವ ಸಂಭಾವ್ಯ ಪ್ರಭಾವವನ್ನು ಅಭ್ಯಸಿಸಿಲ್ಲ.
ನಿದ್ರೆ ಮತ್ತು ಸಿವಿಡಿ (ಹೃದಯರಕ್ತನಾಳದ ಕಾಯಿಲೆ) ನಡುವಿನ ಸಂಬಂಧದ ಕುರಿತು ಅನೇಕ ಜ್ಞಾನ ಶಾಖೆಗಳನ್ನು ಮುಂಬರುವ ವರ್ಷಗಳಲ್ಲಿ ಅಧ್ಯಯನ ಮಾಡಬೇಕಾಗಿದ್ದರೂ, ಈ ಅಧ್ಯಯನವು ಹೃದಯದ ಉತ್ತಮ ಆರೋಗ್ಯಕ್ಕಾಗಿ ಗುಣಮಟ್ಟದ ನಿದ್ರೆಯ ಮಹತ್ವ ಎಷ್ಟಿದೆ ಎಂಬುವುದಕ್ಕೆ ಸಾಕ್ಷ್ಯ ಒದಗಿಸುತ್ತದೆ.