ರಾಜ್ಯವಾಪಿ ಜಾತಿಗಣತಿ ನಡೆಸಲು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಂದಾಗಿದ್ದಾರೆ. ಈ ಕಾರಣಕ್ಕಾಗಿ ಜೂನ್ 1ನೇ ತಾರೀಕು ಸರ್ವಪಕ್ಷ ಸದಸ್ಯರ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಹಿಂದಿನಿಂದಲೂ ಬಿಹಾರದಲ್ಲಿ ಜಾತಿಗಣತಿಯನ್ನು ವಿರೋಧಿಸುತ್ತಲೇ ಬಂದಿರುವ ಬಿಜೆಪಿಯೂ ಈ ಸಭೆಯಲ್ಲಿ ಭಾಗವಹಿಸಲಿದೆ ಎಂದು ವರದಿಯಾಗಿದೆ.
ಮೇ 27ರಂದು ಸರ್ವಪಕ್ಷ ಸದಸ್ಯರ ಸಭೆ ನಡೆಸಲು ತೀರ್ಮಾನಿಸಲಾಗಿತ್ತಾದರೂ, ಇದಕ್ಕೆ ಬಿಜೆಪಿ ಸಮ್ಮತಿಸಿರಲಿಲ್ಲ. ಮಂಗಳವಾರ ನಡೆದ ಬೆಳವಣಿಗೆಯಲ್ಲಿ ಬಿಜೆಪಿಯು ಸಭೆಗೆ ಹಾಜರಾಗಲು ಸಮ್ಮತಿಸಿದೆ ಎಂದು ಬಿಹಾರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ವಿಜಯ್ ಕುಮಾರ್ ಚೌಧರಿ ಹೇಳಿದ್ದಾರೆ.
ರಾಷ್ಟ್ರೀಯ ಜನತಾ ದಳ ಸೇರಿದಂತೆ ಬಿಹಾರದ ಬಹುತೇಕ ಪಕ್ಷಗಳು ಜಾತಿಗಣತಿ ನಡೆಸಲು ಸರ್ಕಾರವನ್ನು ಆಗ್ರಹಿಸಿದ್ದವು. ಆದರೆ, ಬಿಜೆಪಿ ಮಾತ್ರ ಈ ನಿರ್ಧಾರದಿಂದ ಅಸಮಾಧಾನಗೊಂಡಿತ್ತು. ಕಳೆದ ವರ್ಷ ಇದೇ ವಿಚಾರವಾಗಿ ನಿತೀಶ್ ಕುಮಾರ್ ನೇತೃತ್ವದ ಸರ್ವ ಪಕ್ಷ ಆಯೋಗವು ಪ್ರಧಾನಿ ಮೋದಿಯವರನ್ನೂ ಭೇಟಿಯಾಗಿತ್ತು.
ಜಾತಿಗಣತಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತದೆ ಎಂದು ಕೇಂದ್ರ ಸರ್ಕಾರ ತನ್ನ ನಿರ್ಧಾರದಲ್ಲಿ ತಿಳಿಸಿತ್ತು. ಆದರೆ, ಜಾತಿಗಣತಿಯಿಂದ ನಿರ್ಲಕ್ಷ್ಯಕ್ಕೆ ಒಳಗಾದ ಸಮುದಾಯಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಬಹುದು ಎಂದು ವಿಪಕ್ಷಗಳು ವಾದ ಮಂಡಿಸಿದ್ದವು.
ಬಿಜೆಪಿಯ ಹಿಂದುತ್ವ ರಾಜಕಾರಣಕ್ಕೆ ಕೊಡಲಿ ಏಟು?
ಧರ್ಮಾಧರಿತ ರಾಜಕಾರಣದಿಂದಲೇ ಅಧಿಕಾರದ ಗದ್ದುಗೆ ಹಿಡಿಯುವ ಬಿಜೆಪಿಗೆ ಜಾತಿಗಣತಿ ಮಗ್ಗುಲ ಮುಳ್ಳಾಗಿದೆ. ಜನರು ಜಾತಿ ಆಧಾರದಲ್ಲಿ ಒಗ್ಗಟ್ಟಾದರೆ, ಬಿಜೆಪಿಯ ಮತ ಬ್ಯಾಂಕ್ ಛಿದ್ರವಾಗಲಿದೆ. ಈಗಾಗಲೇ ದೇಶದಲ್ಲಿ ಆಳವಾಗಿ ಬೇರೂರಿರುವ ಧರ್ಮಾಧರಿತ ರಾಜಕಾರಣದ ಸಮೀಕರಣಗಳನ್ನು ಬಿಜೆಪಿ ಮತ್ತೆ ಜಾತಿಗಳಿಗೆ ಅನುಗುಣವಾಗಿ ನಡೆಸಬೇಕಾದ ಅನಿವಾರ್ಯತೆ ಒದಗಿ ಬರುತ್ತದೆ.
ಬಿಹಾರದ ಜಾತಿಗಣತಿಯ ಪರಿಣಾಮ ಕೇವಲ ಒಂದು ರಾಜ್ಯದ ಮಟ್ಟಿಗೆ ಸೀಮಿತವಾಗಿರುವುದಿಲ್ಲ. ಬದಲಾಗಿ ಸಂಪೂರ್ಣ ಉತ್ತರ ಭಾರತದ ಚಿತ್ರಣವನ್ನು ಬದಲಾಯಿಸುವ ಶಕ್ತಿ ಹೊಂದಿದೆ. ಉತ್ತರ ಭಾರತದ ಹಿಂದುಳಿದ ವರ್ಗಗಳಲ್ಲಿ ಈಗಾಗಲೇ ಬಿಜೆಪಿ ಉತ್ತಮ ಹೆಸರನ್ನು ಪಡೆದಿದೆ. ಹಿಂದುತ್ವದ ಹೆಸರಿನಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದ ಜಾತಿ, ಉಪಜಾತಿಗಳಿಗೆ ನ್ಯಾಯ ಒದಗಿಸಬೇಕಾದ ಪ್ರಶ್ನೆಯೇ ಇಲ್ಲವಾಗಿಸಿದೆ. ಮೇಲ್ಜಾತಿಗಳಲ್ಲಿ ಬಿಜೆಪಿಯ ಹಿಡಿತ ಪ್ರಬಲವಾಗಿದ್ದರೂ, ಹಿಂದುಳಿದ ವರ್ಗಗಳ ಮತಗಳು ನಿರ್ಣಾಯಕ. ಈಗ ಜಾತಿಗಣತಿಯಿಂದಾಗಿ ಹಿಂದುತ್ವ ಎಂಬ ವಿಚಾರವನ್ನು ಮತದಾರರು ತರೆಮರೆ ಇದರಿಂದ ಬಿಜೆಪಿಗೆ ಹೆಚ್ಚಿನ ನಷ್ಟವಾಗಲಿದೆ.
ಕರ್ನಾಟಕದಲ್ಲಿಯೂ ಜಾತಿಗಣತಿ ಏನಾಯ್ತು?
ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವಿದ್ದಾಗ, ಕರ್ನಾಟಕದಲ್ಲಿಯೂ ಜಾತಿಗಣತಿ ನಡೆದಿತ್ತು. ಆದರೆ, ಅದರ ವರದಿ ಇನ್ನೂ ಬಹಿರಂಗವಾಗಿಲ್ಲ. ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಿದ್ದರೂ ಅದನ್ನು ಬಹಿರಂಗಪಡಿಸುವ ಗೋಜಿಗೆ ಹೋಗಲಿಲ್ಲ. ಬರೋಬ್ಬರಿ 169 ಕೋಟಿ ಖರ್ಚು ಮಾಡಿ ನಡೆಸಿದಂತಹ ಜಾತಿಗಣತಿಯ ವರದಿ ವಿಧಾನಸೌಧದಲ್ಲಿ ಗೆದ್ದಲುಗಳಿಗೆ ಆಹಾರವಾಗುತ್ತಿದೆ.
ಜಾತಿಗಣತಿಯ ಆಧಾರದ ಮೇಲೆ ಎಸ್ ಟಿ ಸಮುದಾಯದ ಮೀಸಲಾತಿಯನ್ನು 7.5%ಕ್ಕೆ ಏರಿಸುವಂತೆ ಆಗ್ರಹಿಸಿ ನಿರಂತರ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಆದರೆ, ಈ ಕುರಿತಾಗಿ ಸರ್ಕಾರ ಎಳ್ಳಷ್ಟೂ ಆಸಕ್ತಿ ತೋರಿಸುತ್ತಿಲ್ಲ.
ಈಗ ಬಿಹಾರವೂ ಇಂತಹುದೇ ಒಂದು ಪರಿಸ್ಥಿತಿಯನ್ನು ಎದುರು ನೋಡುತ್ತಿದ್ದು, ಹಿಂದುಳಿದ ಮತ್ತು ಅತಿ ಹಿಂದುಳಿದ ಜಾತಿಗಳಿಗೆ ನ್ಯಾಯ ಒದಗಿಸುವ ಸಲುವಾಗಿ ನಡೆಸುವ ಜಾತಿಗಣತಿ ಕೇವಲ ರಾಜಕೀಯ ದಾಳವಾಗಿ ಉಳಿಯಬಾರದು. ಬದಲಾಗಿ, ಇದರ ವರದಿಯು ಸಾರ್ವಜನಿಕವಾಗಿ ಲಭ್ಯವಾಗಬೇಕು. ಸರ್ಕಾರದ ಯೋಜನೆಗಳು ಎಲ್ಲಾ ಜಾತಿ ಸಮುದಾಯಗಳಿಗೆ ಸರಿಸಮಾನಾಗಿ ಲಭಿಸಲು ಈ ಗಣತಿ ಸಹಕಾರಿಯಾಗಬೇಕು. ಬದಲಾಗಿ, ಕೇವಲ ರಾಜಕೀಯ ಮೇಲಾಟಕ್ಕೆ ಹಾಗೂ ಚುನಾವಣೆಗಳ ಸಂದರ್ಭದಲ್ಲಿ ಜಾತಿಯಾಧರಿತ ರಾಜಕಾರಣಕ್ಕಾಗಿ ಗಣತಿಯು ಮೀಸಲಾದರೆ, ಅದು ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿ ಮಾತ್ರ ಉಳಿಯಲಿದೆ.